Dr Rajkumar: ವರನಟ ಡಾ ರಾಜ್‌ಕುಮಾರ್ 19ನೇ ಪುಣ್ಯಸ್ಮರಣೆ; ಅಭಿಮಾನಿಗಳೇ ದೇವರು ಎಂದ ಅಣ್ಣಾವ್ರ ನೆನಪು
ಕನ್ನಡ ಸುದ್ದಿ  /  ಮನರಂಜನೆ  /  Dr Rajkumar: ವರನಟ ಡಾ ರಾಜ್‌ಕುಮಾರ್ 19ನೇ ಪುಣ್ಯಸ್ಮರಣೆ; ಅಭಿಮಾನಿಗಳೇ ದೇವರು ಎಂದ ಅಣ್ಣಾವ್ರ ನೆನಪು

Dr Rajkumar: ವರನಟ ಡಾ ರಾಜ್‌ಕುಮಾರ್ 19ನೇ ಪುಣ್ಯಸ್ಮರಣೆ; ಅಭಿಮಾನಿಗಳೇ ದೇವರು ಎಂದ ಅಣ್ಣಾವ್ರ ನೆನಪು

Dr Rajkumar Death Anniversary: ಇಂದು ಕನ್ನಡದ ವರನಟ ಡಾ. ರಾಜ್‌ಕುಮಾರ್ ಪುಣ್ಯಸ್ಮರಣೆ. ಅಭಿಮಾನಿಗಳೇ ದೇವರು ಎಂದ ರಾಜ್‌ಕುಮಾರ್ ನಮ್ಮನ್ನು ಅಗಲಿ ಇಂದಿಗೆ 19 ವರ್ಷಗಳಾಗಿವೆ. ಆದರೆ ಡಾ. ರಾಜ್‌ ಅವರ ನೆನಪು ಮಾತ್ರ ಎಂದೆಂದಿಗೂ ಅಜರಾಮರ.

ವರನಟ ಡಾ ರಾಜ್‌ಕುಮಾರ್ 19ನೇ ಪುಣ್ಯಸ್ಮರಣೆ; ಅಭಿಮಾನಿಗಳೇ ದೇವರು ಎಂದ ಅಣ್ಣಾವ್ರ ನೆನಪು
ವರನಟ ಡಾ ರಾಜ್‌ಕುಮಾರ್ 19ನೇ ಪುಣ್ಯಸ್ಮರಣೆ; ಅಭಿಮಾನಿಗಳೇ ದೇವರು ಎಂದ ಅಣ್ಣಾವ್ರ ನೆನಪು

Dr Rajkumar Death Anniversary: ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗ ಕಂಡ ಮೇರು ವ್ಯಕ್ತಿತ್ವ ಡಾ. ರಾಜ್‌ಕುಮಾರ್ ಅವರದ್ದು. ಅಭಿಮಾನಿಗಳ ಆರಾಧ್ಯ ದೈವ ಡಾ. ರಾಜ್ ಎಂದೆಂದಿಗೂ ಕನ್ನಡ ಸಿನಿ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದವರು. ಇವರು ನಮ್ಮನ್ನು ಅಗಲಿ ಇಂದಿಗೆ (ಏಪ್ರಿಲ್ 12) 19 ವರ್ಷಗಳು ಕಳೆದಿವೆ. ರಾಜ್‌ಕುಮಾರ್ ಪುಣ್ಯಸ್ಮರಣೆಯ ದಿನವಾದ ಇಂದು ಅಭಿಮಾನಿಗಳು, ಕುಟುಂಬದವರು, ಆಪ್ತರು ಹಾಗೂ ಅಪಾರ ಅಭಿಮಾನಿಗಳು ಅವರನ್ನು ಸ್ಮರಿಸುತ್ತಿದ್ದಾರೆ.

ಕೇವಲ ನಟನೆಯ ಮೂಲಕ ಮಾತ್ರವಲ್ಲ, ತಮ್ಮ ವ್ಯಕ್ತಿತ್ವದ ಮೂಲಕವೂ ಜನರಿಗೆ ಹತ್ತಿರವಾದವರು ಡಾ ರಾಜ್‌ಕುಮಾರ್‌. ಅಭಿಮಾನಿಗಳನ್ನೇ ದೇವರೆಂದು ಕರೆದು, ಹಾಗೆಯೇ ನಡೆದುಕೊಳ್ಳುತ್ತಿದ್ದ ಅವರು ಕರ್ನಾಟಕ ಮಾತ್ರವಲ್ಲದೇ ಭಾರತದಾದ್ಯಂತ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದರು. ಜನರು, ಸಮಾಜಕ್ಕಾಗಿ ಮಿಡಿಯುತ್ತಿದ್ದ ಡಾ. ರಾಜ್ ಅವರ ಪುಣ್ಯಸ್ಮರಣೆಯ ಸಲುವಾಗಿ ಪ್ರತಿ ವರ್ಷ ಅವರ ಅಭಿಮಾನಿಗಳು ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಈ ವರ್ಷ ಕೂಡ ಇಂದು ಇಂತಹ ಕಾರ್ಯಕ್ರಮಗಳು ನಡೆಯಲಿವೆ.

ವರನಟ, ನಟಸಾರ್ವಭೌಮ, ಕನ್ನಡ ಕಂಠೀರವ, ಗಾನಗಂಧರ್ವ, ಯೋಗಕಲಾರತ್ನ ಹೀಗೆ ಹಲವು ಬಿರುದುಗಳನ್ನು ಹೊಂದಿರುವ ಅಣ್ಣಾವ್ರು ಕೇವಲ ನಟ ಮಾತ್ರವಲ್ಲ ಉತ್ತಮ ಗಾಯಕರು ಹೌದು. ಯೋಗ ಪಟು ಕೂಡ ಆಗಿದ್ದರು.

ತಮ್ಮ 76ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದ ರಾಜ್‌ಕುಮಾರ್ ಗೌರವ ಡಾಕ್ಟರೇಟ್‌, ಪದ್ಮಭೂಷಣ, ಕರ್ನಾಟಕ ರತ್ನ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ನಾಡೋಜ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡವರು. 5 ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದ ಇವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1942ರಲ್ಲಿ ‘ಭಕ್ತ ಪ್ರಹ್ಲಾದ‘ ಚಿತ್ರದ ಮೂಲಕ ಬಾಲನಟನಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡುವ ಇವರು 2000ನೇ ಇಸವಿವರೆಗೆ ನಿರಂತರವಾಗಿ ಸಿನಿಮಾಗಳನ್ನು ಮಾಡಿ ಜನರನ್ನು ರಂಜಿಸಿದ್ದಾರೆ. ಇವರ ಕೊನೆಯ ಚಿತ್ರ ‘ಶಬ್ದವೇದಿ‘ 2000ನೇ ಇಸವಿಯಲ್ಲಿ ಬಿಡುಗಡೆಯಾಗಿತ್ತು. ರಾಜಕುಮಾರ್‌ ನಟನೆಯ ಬಹುತೇಕ ಚಿತ್ರಗಳು ಚಿತ್ರಮಂದಿರದಲ್ಲಿ 100 ದಿನಗಳನ್ನು ಪೂರೈಸಿದ್ದವು.

ಡಾ. ರಾಜ್‌ 300 ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಅಲ್ಲದೇ 400ಕ್ಕೂ ಹೆಚ್ಚು ಭಕ್ತಿಗೀತೆಗಳನ್ನು ಹಾಡಿದ್ದಾರೆ. 1956ರಲ್ಲಿ ಬಿಡುಗಡೆಯಾದ ‘ಓಹಿಲೇಶ್ವರ‘ ಚಿತ್ರದ ‘ಓಂ ನಮಃ ಶಿವಾಯ‘ ರಾಜ್‌ಕುಮಾರ್ ಹಾಡಿದ ಮೊದಲ ಚಿತ್ರಗೀತೆ. ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾದಲ್ಲೂ ನಟಿಸಿದ್ದರು ಡಾ. ರಾಜ್‌. ‘ಕಾಳಹಸ್ತಿ ಮಹಾತ್ಯಂ‘ ಎನ್ನುವ ತೆಲುಗು ಚಿತ್ರಕ್ಕೆ ಬಣ್ಣ ಹಚ್ಚಿದ್ದರು ಡಾ ರಾಜ್. ಈ ಸಿನಿಮಾ 1954ರಲ್ಲಿ ಬಿಡುಗಡೆಯಾಗಿದ್ದು, ಇದು ಬೇಡರ ಕಣ್ಣಪ್ಪ ಸಿನಿಮಾದ ರಿಮೇಕ್ ಆಗಿದೆ. ಇವರ ಹಲವು ಸಿನಿಮಾಗಳು ತಮಿಳು, ತೆಲುಗು, ಹಿಂದಿ ಹಾಗೂ ಬೆಂಗಾಲಿ ಭಾಷೆಗಳಿಗೆ ರಿಮೇಕ್ ಆಗಿದೆ. ವರದಿಗಳ ಪ್ರಕಾರ ರಾಜ್‌ಕುಮಾರ್ ಅವರ 30ಕ್ಕೂ ಹೆಚ್ಚು ಸಿನಿಮಾಗಳು ಬೇರೆ ಭಾಷೆಗಳಿಗೆ ರಿಮೇಕ್ ಆಗಿದ್ದು, ಇದರಿಂದ ಡಾ. ರಾಜ್‌ಕುಮಾರ್ ಭಾರತದಾದ್ಯಂತ ಅಭಿಮಾನಿಗಳನ್ನು ಪಡೆಯಲು ಸಾಧ್ಯವಾಯ್ತು. ಯಾವುದೇ ಪಾತ್ರಕ್ಕಾದರೂ ಸರಿ ಜೀವ ತುಂಬುವ ರಾಜ್‌ ಅಭಿನಯಕ್ಕೆ ಸಾಟಿಯಿಲ್ಲ. ಇವರು ನಮ್ಮ ಸಿನಿ ಕರಿಯರ್ ಹಲವು ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಪಾತ್ರಗಳಿಗೆ ಪರಕಾಶ ಪ್ರವೇಶ ಮಾಡುವುದನ್ನು ಡಾ. ರಾಜ್‌ಕುಮಾರ್ ಅವರನ್ನು ನೋಡಿ ಕಲಿಯಬೇಕಿತ್ತು. ‍ನಟನೆ, ಗಾಯನದ ಮೂಲಕ ಇವರು ಹಾಡು ಹಾಗೂ ಚಿತ್ರಗಳು ಇಂದಿಗೂ ಕನ್ನಡಿಗರನ್ನು ರಂಜಿಸುತ್ತಿವೆ.

ಡಾ. ರಾಜ್‌ಕುಮಾರ್ ಹಿನ್ನೆಲೆ

ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಇವರ ಮೂಲ ಹೆಸರು. ಗಾಜನೂರಿನಲ್ಲಿ 1929 ಏಪ್ರಿಲ್ 24 ರಂದು ಜನಿಸುತ್ತಾರೆ ವರನಟ. ಇವರ ಪೋಷಕರು ರಂಗಭೂಮಿ ಕಲಾವಿದರಾಗಿದ್ದರು. ಇವರು ಗುಬ್ಬಿ ವೀರಣ್ಣ ನಾಟಕ ಕಂಪನಿ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸುತ್ತಾರೆ. 1953ರಲ್ಲಿ ರಾಜ್‌ಕುಮಾರ್ ತಮ್ಮ ಸಹೋದರ ಸಂಬಂಧಿ ಪಾರ್ವತಮ್ಮ ಅವರನ್ನು ಮದುವೆಯಾಗುತ್ತಾರೆ. ಈ ದಂಪತಿಗೆ 5 ಮಂದಿ ಮಕ್ಕಳು. ಡಾ. ಶಿವರಾಜ್‌ಕುಮಾರ್, ರಾಘವೇಂದ್ರ ರಾಜಕುಮಾರ್‌, ಪುನೀತ್ ರಾಜ್‌ಕುಮಾರ್, ಲಕ್ಷ್ಮೀ ಹಾಗೂ ಪೂರ್ಣಿಮಾ.

2000 ಇಸವಿ ಜುಲೈ 30 ರಂದು ಕಾಡುಗಳ್ಳ ವೀರಪ್ಪನ್ ಡಾ. ರಾಜ್‌ಕುಮಾರ್ ಅವರನ್ನು ಗಾಜನೂರಿನ ಮನೆಯಿಂದ ಅಪಹರಣ ಮಾಡುತ್ತಾನೆ. 108 ದಿನಗಳ ಕಾಲ ಅಣ್ಣಾವ್ರು ವೀರಪ್ಪನ್ ಸೆರೆಯಲ್ಲಿದ್ದು. ನಂತರ 2000ರ ನವೆಂಬರ್ 15 ರಂದು ಅವರನ್ನು ಬಿಡುಗಡೆ ಮಾಡಲಾಯಿತು. 2006ರ ಏಪ್ರಿಲ್ 12 ರಂದು ಡಾ. ರಾಜ್‌ಕುಮಾರ್ ಇಹಲೋಕ ತ್ಯಜಿಸುತ್ತಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner