ಕಾಯಿಲೆ ಏನು ಎಂದು ಗೊತ್ತೇ ಇಲ್ಲದೆ ನಾನ್ಹೇಗೆ ಚಿಕಿತ್ಸೆ ಪಡೆಯಲಿ? ನಟ ದಿಲೀಪ್‍ ರಾಜ್‍ ಪ್ರಶ್ನೆ
ಕನ್ನಡ ಸುದ್ದಿ  /  ಮನರಂಜನೆ  /  ಕಾಯಿಲೆ ಏನು ಎಂದು ಗೊತ್ತೇ ಇಲ್ಲದೆ ನಾನ್ಹೇಗೆ ಚಿಕಿತ್ಸೆ ಪಡೆಯಲಿ? ನಟ ದಿಲೀಪ್‍ ರಾಜ್‍ ಪ್ರಶ್ನೆ

ಕಾಯಿಲೆ ಏನು ಎಂದು ಗೊತ್ತೇ ಇಲ್ಲದೆ ನಾನ್ಹೇಗೆ ಚಿಕಿತ್ಸೆ ಪಡೆಯಲಿ? ನಟ ದಿಲೀಪ್‍ ರಾಜ್‍ ಪ್ರಶ್ನೆ

20 ವರ್ಷಗಳ ಹಿಂದೆ ‘ಬಾಯ್‍ಫ್ರೆಂಡ್‍’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡ ದಿಲೀಪ್‍ ರಾಜ್‌, ಈ 20 ವರ್ಷಗಳಲ್ಲಿ 30 ಚಿತ್ರಗಳಲ್ಲಿ ನಟಿಸಿರಬಹುದು ಅಷ್ಟೇ. ತಮ್ಮ ಅಭಿನಯದ ಬಗ್ಗೆ ಮೆಚ್ಚುಗೆ ಪಡೆದಿರುವ, ಪ್ರತಿಭಾವಂತನೆಂದು ಗುರುತಿಸಿಕೊಂಡಿರುವ ದಿಲೀಪ್‍, ಯಾಕೆ ಹೆಚ್ಚು ಚಿತ್ರಗಳನ್ನು ಮಾಡುವುದಿಲ್ಲ. ಹೀಗಿದೆ ಅವರ ಉತ್ತರ.

ಕಾಯಿಲೆ ಏನು ಎಂದು ಗೊತ್ತಿಲ್ಲದೆ ಚಿಕಿತ್ಸೆ ಹೇಗೆ ಪಡೆಯಲಿ? ನಟ ದಿಲೀಪ್‍ ರಾಜ್‍ ಪ್ರಶ್ನೆ
ಕಾಯಿಲೆ ಏನು ಎಂದು ಗೊತ್ತಿಲ್ಲದೆ ಚಿಕಿತ್ಸೆ ಹೇಗೆ ಪಡೆಯಲಿ? ನಟ ದಿಲೀಪ್‍ ರಾಜ್‍ ಪ್ರಶ್ನೆ

Nimma Vasthugalige Neeve Javaabdaararu: ಸುಮಾರು ಎರಡು ವರ್ಷಗಳೇ ಆಗಿತ್ತು ದಿಲೀಪ್‍ ರಾಜ್‍ ಅಭಿನಯದ ‘ಆರ್ಕೆಸ್ಟ್ರಾ ಮೈಸೂರು’ ಚಿತ್ರ ಬಿಡುಗಡೆಯಾಗಿ. ಈ ಎರಡು ವರ್ಷಗಳಲ್ಲಿ ಅವರ ಅಭಿನಯದ ಯಾವೊಂದು ಚಿತ್ರ ಬಿಡುಗಡೆಯಾಗಿಲ್ಲ. ಶುಕ್ರವಾರ (ಜನವರಿ 10), ದಿಲೀಪ್‍ ಅಭಿನಯದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.

ಇದರ ಮಧ್ಯೆಯೇ ಒಂದು ಪ್ರಶ್ನೆ ಸಹ ಬರುತ್ತದೆ. 20 ವರ್ಷಗಳ ಹಿಂದೆ ‘ಬಾಯ್‍ಫ್ರೆಂಡ್‍’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡ ದಿಲೀಪ್‍, ಈ 20 ವರ್ಷಗಳಲ್ಲಿ 30 ಚಿತ್ರಗಳಲ್ಲಿ ನಟಿಸಿರಬಹುದು ಅಷ್ಟೇ. ತಮ್ಮ ಅಭಿನಯದ ಬಗ್ಗೆ ಮೆಚ್ಚುಗೆ ಪಡೆದಿರುವ, ಪ್ರತಿಭಾವಂತನೆಂದು ಗುರುತಿಸಿಕೊಂಡಿರುವ ದಿಲೀಪ್‍, ಯಾಕೆ ಹೆಚ್ಚು ಚಿತ್ರಗಳನ್ನು ಮಾಡುವುದಿಲ್ಲ ಎಂಬ ಪ್ರಶ್ನೆ ಬರುತ್ತದೆ.

‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರದ ಪ್ರಚಾರಕ್ಕಾಗಿ ಇತ್ತೀಚೆಗೆ PRK ಆಡಿಯೋಗಾಗಿ ನಡೆಸಿದ ವಿಶೇಷ ಸಂದರ್ಶನದಲ್ಲಿ ದಿಲೀಪ್‍ ರಾಜ್‍ ಹಲವು ವಿಷಯಗಳನ್ನು ಮಾತನಾಡಿದ್ದಾರೆ. ತಾವ್ಯಾಕೆ ಹೆಚ್ಚು ಚಿತ್ರಗಳಲ್ಲಿ ನಟಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.

ಮೊದಲು ಖಾಯಿಲೆ ಗೊತ್ತಾಗಬೇಕು..

ಈ ಕುರಿತು ಮಾತನಾಡಿರುವ ಅವರು, ‘ಬೇರೆಬೇರೆ ನಟರುಗಳನ್ನು ನೋಡಿದಾಗ, ನಾನು ಈ ತರಹದ ಪ್ರಯೋಗಗಳನ್ನೇ ಮಾಡಲಿಲ್ಲವಲ್ಲ ಎಂದನಿಸುತ್ತದೆ. ಆದರೆ, ಮಾಡುವುದಕ್ಕೆ ಸೂಕ್ತವಾದ ವೇದಿಕೆಗಳು ಸಿಗುತ್ತಿಲ್ಲ. ಯಾಕೆ ನನಗೆ ಅವಕಾಶಗಳು ಸಿಗುತ್ತಿಲ್ಲ ಎಂಬ ಕಾರಣ ಗೊತ್ತಿಲ್ಲ. ಕಾರಣ ಗೊತ್ತಾದರೆ, ನನ್ನನ್ನು ನಾನು ತಿದ್ದುಕೊಳ್ಳಬಹುದು. ಕಾಯಿಲೆ ಏನು ಎಂದು ಗೊತ್ತಾಗದೆ ಹೇಗೆ ಚಿಕಿತ್ಸೆ ಪಡೆಯುವುದು? ಮೊದಲು ಖಾಯಿಲೆ ಗೊತ್ತಾಗಬೇಕು’ ಎಂದಿದ್ದಾರೆ.

‘ಎಷ್ಟೋ ಸರಿ ಯಾವುದೋ ಒಂದು ಪಾತ್ರವನ್ನು ನೋಡಿದಾಗ, ನಾನು ಇವರಿಗಿಂತ ಚೆನ್ನಾಗಿ ಮಾಡಹುದು ಎಂದನಿಸುವುದು ಇದೆ. ಚೆನ್ನಾಗಿ ಮಾಡಿದವರನ್ನು ನೋಡಿದಾಗ ಇವೆಲ್ಲಾ ನನಗೆ ಸಿಗುತ್ತಿಲ್ಲ ಎಂಬ ಅಸೂಯೆಯೂ ಆಗುತ್ತದೆ. ಜೊತೆಗೆ ಭಯ ಆಗುವುದೂ ಉಂಟು. ನಾನು ನಟ ಎನ್ನುವುದನ್ನೇ ಮರೆತುಬಿಡುತ್ತೀನಾ ಎಂದು ಭಯವಾಗುವುದೂ ಉಂಟು. ಆದರೆ, ಈಗ ಇವೆಲ್ಲವೂ ಅಭ್ಯಾಸವಾಗಿ ಹೋಗಿದೆ’ ಎನ್ನುತ್ತಾರೆ ದಿಲೀಪ್‍.

ಇಂದಷ್ಟು ಪ್ರಶ್ನೆಗಳಿಗೆ ಉತ್ತರಗಳೇ ಇಲ್ಲ

ತಮ್ಮನ್ನು ಯಾಕೆ ಯಾರೂ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಗೊತ್ತಾಗುತ್ತಿಲ್ಲ ಎನ್ನುವ ಅವರು, ‘ನಾನು ‘ಯೂ ಟರ್ನ್’ ಮಾಡುವಾಗ, ‘ನೀವ್ಯಾಕೆ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ?’ ಎಂದು ಪವನ್‍ ಕೇಳಿದರು. ‘ನಾನ್ಯಾವತ್ತೂ ನಟನೆ ಮಾಡುವುದಿಲ್ಲ ಎಂದು ಹೇಳಿಲ್ಲ’ ಎಂದೆ. ‘ಎಷ್ಟು ಚೆನ್ನಾಗಿ ನಟಿಸುತ್ತೀರಾ? ಅದ್ಯಾಕೆ ನಿಮ್ಮನ್ನು ಯಾರೂ ಬಳಸಿಕೊಳ್ಳುವುದಿಲ್ಲ’ ಎಂದು ಕೇಳಿದರು. ‘ನನಗೆ ಗೊತ್ತಿಲ್ಲ’ ಎಂದೆ. ಇದೇ ತರಹ ಪ್ರತಿಯೊಬ್ಬ ನಿರ್ದೇಶಕರು ಹೇಳುತ್ತಾರೆ. ಆದರೆ, ಅವರ ಮುಂದಿನ ಸಿನಿಮಾಗಳಲ್ಲಿ ನಾನು ಇರುವುದಿಲ್ಲ. ಅದಕ್ಕೆ ಕಾರಣ ಅವರಿಗೂ ಗೊತ್ತಿಲ್ಲದಿರಬಹುದು. ನನ್ನನ್ನು ಮರೆತುಬಿಡುತ್ತಾರಾ? ಅಥವಾ ಪಾತ್ರಕ್ಕೆ ನಾನು ಹೊಂದುವುದಿಲ್ಲವಾ? ಎಂಬುದು ನನಗೆ ಗೊತ್ತಿಲ್ಲ. ಅಂತಿಮವಾಗಿ, ಅದು ಅವರ ನಿರ್ಧಾರ. ನಾನು ಅವರನ್ನು ಪ್ರಶ್ನೆ ಮಾಡುವುದುಕ್ಕೆ ಸಾಧ್ಯವಿಲ್ಲ’ ಎನ್ನುತ್ತಾರೆ.

ಯಾರ ಬಳಿಯೂ ನಾನು ಕೆಲಸ ಕೇಳಲ್ಲ..

ಇದೆಲ್ಲವೂ ಅಭ್ಯಾಸವಾಗಿ ಹೋಗಿದೆ ಎನ್ನುವ ದಿಲೀಪ್, ‘ನನಗೆ ಈ ಬಗ್ಗೆ ಬೇಸರವಿಲ್ಲ. ಯಾರ ಬಳಿ ಹೋಗಿ ನಾನು ಕೆಲಸ ಕೇಳುವುದಿಲ್ಲ. ಹಾಗಂತ ನಾನು ಪರಿಚಯಿಸಿಕೊಳ್ಳುವ ಅವಶ್ಯಕತೆಯೂ ಇಲ್ಲ. ನನ್ನ ಬಗ್ಗೆ ಗೊತ್ತಿರುತ್ತದೆ. ನನ್ನನ್ನು ನೋಡಿರುತ್ತಾರೆ. ತಮಿಳಿನಲ್ಲಿ ಹೋಗಿ ಕೆಲಸ ಕೇಳಬೇಕಾದರೆ, ನಾನು ಕೇಳುತ್ತೇನೆ. ಏಕೆಂದರೆ, ಅಲ್ಲಿ ಯಾರಿಗೂ ನನಗೆ ಗೊತ್ತಿಲ್ಲ. ತೆಲುಗಿನಲ್ಲಿ ಬೇಕಾದರೆ ನಾನು ಹೊಸಬ, ಅವಕಾಶ ಕೊಡಿ ಎಂದು ಕೇಳುತ್ತೇನೆ. ಇಲ್ಲಿ ಕೇಳುವುದರಲ್ಲಿ ಅರ್ಥವೇ ಇಲ್ಲ. ನಾನು ಹೋಗಿ ಕೇಳೋದಕ್ಕಿಂತ ಮೊದಲು ಅವರು ಚೆನ್ನಾಗಿದ್ದೀರಾ? ಎಂದರೆ ಇನ್ನೇನು ಮಾತನಾಡುವುದಕ್ಕೆ ಸಾಧ್ಯ?’ ಎಂಬುದು ಅವರ ಪ್ರಶ್ನೆ.

ವರದಿ: ಚೇತನ್‌ ನಾಡಿಗೇರ್

Whats_app_banner