ಪರ ವಿರೋಧಗಳ ನಡುವೆ ಸ್ಯಾಂಡಲ್‌ವುಡ್‌ನಲ್ಲಿ ರಚನೆಯಾಯ್ತು ಪೋಶ್ ಕಮಿಟಿ: ಕಾಸ್ಟಿಂಗ್ ಕೌಚ್‌ಗೆ ಬೀಳುತ್ತಾ ಬ್ರೇಕ್?
ಮಹಿಳಾ ಆಯೋಗದ ಒತ್ತಾಯದ ಮೇರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಪೋಶ್ (POSH-Prevention of Sexual Harassment) ಕಮಿಟಿಯನ್ನು ರಚನೆ ಮಾಡಿದೆ. ರಾಜ್ಯದಲ್ಲಿ ಮಿ ಟೂ, ಕಾಸ್ಟಿಂಗ್ ಕೌಚ್ ಪ್ರಕರಣಗಳು ಸದ್ದು ಮಾಡಿದ ಹಿನ್ನೆಲೆ ಎಲ್ಲದಕ್ಕೂ ಕಡಿವಾಣ ಹಾಕಲು 7 ಸದಸ್ಯರಿರುವ ಆಂತರಿಕ ಕಮಿಟಿಯನ್ನು ರಚಿಸಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಕೆಲವು ವರ್ಷಗಳ ಹಿಂದೆ ಮಿ ಟೂ ಪ್ರಕರಣ ಭಾರೀ ಸದ್ದು ಮಾಡಿತ್ತು. ಒಬ್ಬರು ತಮಗಾದ ಅನ್ಯಾಯದ ವಿರುದ್ಧ ದನಿ ಎತ್ತುತ್ತಿದ್ದಂತೆ ನಟಿಯರು ಒಬ್ಬೊಬ್ಬರಾಗೇ ತಮಗೆ ಆದ ಅನುಭವವನ್ನು ಬಿಚ್ಚಿಟ್ಟರು. ಚಿತ್ರರಂಗದಲ್ಲಿ ಯಾರ್ಯಾರು ತಮ್ಮನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ವಿವರಿಸಿದ್ದರು. ಸ್ಟಾರ್ ನಟಿಯೊಬ್ಬರು , ಬಹುಭಾಷಾ ನಟರೊಬ್ಬರ ವಿರುದ್ಧ ಆರೋಪ ಮಾಡಿದ್ದರು. ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು.
ಕಮಿಟಿ ಸ್ಥಾಪನೆಗೆ ಒತ್ತಾಯಿಸಿದ್ದ ಮಹಿಳಾ ಆಯೋಗ
ಇದೀಗ ಇಂತಹ ಎಲ್ಲಾ ಸಮಸ್ಯೆಗಳಿಗೆ ಕಡಿವಾಣ ಹಾಕಲು ಸ್ಯಾಂಡಲ್‌ವುಡ್‌ನಲ್ಲಿ ಪೋಶ್ ಕಮಿಟಿ ರಚನೆ ಆಗಿದೆ. ಚಿತ್ರರಂಗದಲ್ಲಿ ಮಿ ಟೂ, ಕಾಸ್ಟಿಂಗ್ ಕೌಚ್‌ನಂಥ ಸಮಸ್ಯೆಗಳು ಆರಂಭವಾಗುತ್ತಿದ್ದಂತೆ ಪೋಶ್ (POSH-Prevention of Sexual Harassment) ಕಮಿಟಿ ಸ್ಥಾಪನೆಗೆ ಬಹಳ ಒತ್ತಾಯ ಕೇಳಿ ಬಂದಿತ್ತು. ಕನ್ನಡ ಚಿತ್ರರಂಗದಲ್ಲಿ ಪೋಶ್ ಕಮಿಟಿ ರಚನೆ ಮಾಡುವಂತೆ ಮಹಿಳಾ ಆಯೋಗ ಸೂಚನೆ ನೀಡಿತ್ತು. ಡೆಡ್‌ಲೈನ್ ಮುಗಿದರೂ ಕಮಿಟಿ ರಚನೆಯಾಗದ ಹಿನ್ನೆಲೆ ವಾಣಿಜ್ಯ ಮಂಡಳಿ ವಿರುದ್ದ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗದಿಂದ ಜಿಲ್ಲಾಧಿಕಾರಿಗೆ ಸೂಚನೆ ನೀಡಿಲಾಗಿತ್ತು.
ಕಲಾವಿದೆಯರ ಭದ್ರತೆಯ ಹಿತದೃಷ್ಟಿಯಿಂದ, ಸ್ಯಾಂಡಲ್‌ವುಡ್‌ನಲ್ಲಿ ಲೈಂಗಿಕ ಕಿರುಕುಳದ ದೂರುಗಳನ್ನು ಪರಿಶೀಲಿಸಲು ಕೇರಳದ ನ್ಯಾಯಮೂರ್ತಿ ಹೇಮಾ ಸಮಿತಿಯ ಮಾದರಿಯಲ್ಲಿ ಸಮಿತಿಯನ್ನು ರಚಿಸಬೇಕು ಎಂದು ಸೂಚಿಸಲಾಗಿತ್ತು. ಈ ವಿಚಾರವಾಗಿ ಸಾಕಷ್ಟು ಚರ್ಚೆ ನಡೆದಿತ್ತು. ಕೊನೆಗೂ ಪರ ವಿರೋಧಗಳ ನಡುವೆಯೂ 7 ಸದಸ್ಯರಿರುವ ಪೋಶ್ ಆಂತರಿಕ ಕಮಿಟಿ ರಚನೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು, ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರ ಸೂಚನೆಯ ಮೇರೆಗೆ ಈ ಕಮಿಟಿಯನ್ನು ರಚಿಸಲಾಗಿದೆ.
7 ಸದಸ್ಯರನ್ನು ಒಳಗೊಂಡ ಪೋಶ್ ಕಮಿಟಿ
10 ಅಥವಾ ಅದಕ್ಕಿಂದ ಹೆಚ್ಚು ಮಹಿಳೆಯರನ್ನು ಹೊಂದಿರುವ ಕೆಲಸದ ಸ್ಥಳದಲ್ಲಿ ಪೋಶ್ ಕಮಿಟಿ ಇರಬೇಕು. ಆ ಕಮಿಟಿಗೆ ಹಿರಿಯ ನಟಿ ಅಧ್ಯಕ್ಷತೆ ವಹಿಸಬೇಕು, ಕಮಿಟಿಯಲ್ಲಿ ಅರ್ಧದಷ್ಟು ಮಹಿಳಾ ಸದಸ್ಯರು ಇರಬೇಕು ಎನ್ನುವುದು ಸೇರಿದಂತೆ ವಿವಿಧ ನಿಯಮ ಇದೆ. ಆದರೆ ಸ್ಯಾಂಡಲ್‌ವುಡ್‌ನಲ್ಲಿ ಇದುವರೆಗೂ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಮಿಟಿ ಇಲ್ಲವಾಗಿತ್ತು. ಈಗ ರಚನೆಯಾಗಿರುವ ಕಮಿಟಿಯಲ್ಲಿ ಎಂ ನರಸಿಂಹಲು (ಅಧ್ಯಕ್ಷರು), ಎಂಎನ್ ಕುಮಾರ್, ಸಾರಾ ಗೋವಿಂದು, ಎನ್‌ಎಂ ಸುರೇಶ್, ಬಿಎಲ್ ನಾಗರಾಜ್, ಅನ್ನಪೂರ್ಣ, ಅನಿತಾರಾಣಿ ಸೇರಿದಂತೆ 7 ಸದಸ್ಯರಿದ್ದಾರೆ.
ಇನ್ನಾದರೂ ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ನಂಥಹ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆಯಾ? ಕಲಾವಿದೆಯರಿಗೆ ರಕ್ಷಣೆ ದೊರೆಯಲಿದೆಯೇ ಕಾದು ನೋಡಬೇಕು.
