ಮೂರನೇ ಬಾರಿಗೆ ಛೂ ಮಂತರ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ, ಜನವರಿ 10ಕ್ಕೆ ತೆರೆ ಮೇಲೆ ರಂಜಿಸಲು ಬರ್ತಿದ್ದಾರೆ ಶರಣ್
ಶರಣ್ ಅಭಿನಯದ ‘ಛೂ ಮಂತರ್’ ಚಿತ್ರವು ಕಳೆದ ವರ್ಷ ಎರಡು ಬಾರಿ ಘೋಷಣೆಯಾಗಿ, ಕೊನೆಗೆ ಮುಂದಕ್ಕೆ ಹೋಗಿತ್ತು. ಇದೀಗ ಮೂರನೇ ಬಾರಿ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಅದರ ಪ್ರಕಾರ, ಶರಣ್ ಅಭಿನಯದ ‘ಛೂ ಮಂತರ್’, ಜನವರಿ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
![ಛೂ ಮಂತರ್ ಸಿನಿಮಾ ಬಿಡುಗಡೆ ಛೂ ಮಂತರ್ ಸಿನಿಮಾ ಬಿಡುಗಡೆ](https://images.hindustantimes.com/kannada/img/2024/12/10/550x309/Choomantar_1733797977950_1733797981671.png)
ಈ ಬಾರಿ ಏನೇ ಆದರೂ, ಚಿತ್ರತಂಡವು ಚಿತ್ರವನ್ನು ಬಿಡುಗಡೆ ಮಾಡಿಯೇ ಬಿಡಬೇಕು ಎಂಬ ತೀರ್ಮಾನಕ್ಕೆ ಬಂದ ಹಾಗಿದೆ. ಅದೇ ಕಾರಣಕ್ಕೆ ಚಿತ್ರದ ಟೀಸರ್ ಬಿಡುಗಡೆ ಮಾಡುವುದರ ಜೊತೆಗೆ ಹೊಸ ಬಿಡುಗಡೆಯ ದಿನಾಂಕವನ್ನೂ ಘೋಷಿಸಲಾಗಿದೆ. ಅದರ ಪ್ರಕಾರ, ಶರಣ್ ಅಭಿನಯದ ‘ಛೂ ಮಂತರ್’, ಜನವರಿ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಶರಣ್ ಇತ್ತೀಚಿನ ದಿನಗಳಲ್ಲಿ ಯಾವೊಂದೂ ಹೊಸ ಚಿತ್ರವನ್ನು ಒಪ್ಪಿಕೊಂಡ ಸುದ್ದಿ ಇಲ್ಲ. ಆದರೆ, ಅವರ ಹಳೆಯ ಚಿತ್ರಗಳೇ ಪದೇಪದೇ ಸುದ್ದಿ ಮಾಡುತ್ತಿವೆ. ಅದರಲ್ಲೂ ‘ಛೂ ಮಂತರ್’ ಚಿತ್ರವು ಕಳೆದ ವರ್ಷ ಎರಡು ಬಾರಿ ಘೋಷಣೆಯಾಗಿ, ಕೊನೆಗೆ ಮುಂದಕ್ಕೆ ಹೋಗಿತ್ತು.
ಮೊದಲು ‘ಛೂ ಮಂತರ್’ ಚಿತ್ರವು ಏಪ್ರಿಲ್ 5ರಂದು ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ, ಅದಕ್ಕೂ ಮೊದಲೇ ‘ಅವತಾರ ಪುರುಷ 2’ ಚಿತ್ರವು ಮಾರ್ಚ್ 22ರಂದು ಬಿಡುಗಡೆ ಎಂದು ಘೋಷಿಸಲಾಗಿತ್ತು. ಒಬ್ಬ ನಟನ ಎರಡು ಚಿತ್ರಗಳು, ಎರಡು ವಾರಗಳ ಅಂತರದಲ್ಲಿ ಬಿಡುಗಡೆಯಾಗುತ್ತಿರುವ ಕುರಿತು ಸಾಕಷ್ಟು ಚರ್ಚೆ ಸಹ ಆಗಿತ್ತು.
ಕೊನೆಗೆ ಏನೋ ಆಗಿ, ‘ಛೂ ಮಂತರ್’ ಬಿಡುಗಡೆ ಆಗಬೇಕಿದ್ದ ದಿನವಾದ ಏಪ್ರಿಲ್ 10ರಂದು ‘ಅವತಾರ್ ಪುರುಷ 2’ ಬಿಡುಗಡೆಯಾಯಿತು. ಇನ್ನು, ‘ಛೂ ಮಂತರ್’ ಚಿತ್ರವು ಮೇ 10ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ಬ್ಯುಸಿನೆಸ್ ಆಗಿಲ್ಲ, ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಮಾರಾಟವಾಗದೇ ಇದ್ದರಿಂದ, ರಿಸ್ಕ್ ಬೇಡ ಎಂಬ ಕಾರಣಕ್ಕೆ ಅಂದುಕೊಂಡ ದಿನದಂದು ಚಿತ್ರ ಬಿಡುಡೆಯಾಗಲೇ ಇಲ್ಲ ಎಂಬ ಗುಸುಗುಸು ಚಿತ್ರರಂಗದ ವಲಯದಲ್ಲಿ ಕೇಳಿಬಂದಿತ್ತು.
ಹೀಗೆ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟಿದ್ದ ಚಿತ್ರವು ಇದೀಗ ಕೊನೆಗೂ ಜನವರಿ 10ರಂದು ಬಿಡುಗಡೆಯಾಗುತ್ತಿದೆ. ಈಗಲೂ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳು ಮಾರಾಟ ಮಾಡುವ ಪ್ರಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಎಷ್ಟು ದಿನ ಹೀಗೇ ಕಾಯುವುದು, ‘ಭೀಮ’ ಮತ್ತು ‘ಕೃಷ್ಣಂ ಪ್ರಣಯ ಸಖಿ’ ಹಕ್ಕುಗಳನ್ನು ಮಾರುವುದಕ್ಕಿಂತ ಮುನ್ನ ಧೈರ್ಯದಿಂದ ಚಿತ್ರವನ್ನು ಬಿಡುಗಡೆ ಮಾಡಿದಂತೆ, ‘ಛೂ ಮಂತರ್’ ಚಿತ್ರವನ್ನು ಮೊದಲು ಚಿತ್ರಮಂದಿರಗಳಲ್ಲಿ ನೇರವಾಗಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ ಎಂದು ಸುದ್ದಿ ಇದೆ.
‘ಛೂ ಮಂತರ್’ ಒಂದು ಹಾರರ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಒಂದು ಸಣ್ಣ ಗ್ಯಾಪ್‍ನ ನಂತರ ಶರಣ್ ಮತ್ತು ಚಿಕ್ಕಣ್ಣ ಜೊತೆಯಾಗಿ ನಟಿಸಿದ್ದಾರೆ. ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದು, ‘ಕರ್ವ’ ಖ್ಯಾತಿಯ ನವನೀತ್ ನಿರ್ದೇಶನ ಮಾಡಿದ್ದಾರೆ.
‘ಛೂ ಮಂತರ್’ ಚಿತ್ರದಲ್ಲಿ ಶರಣ್ ಜೊತೆಗೆ ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಚಿಕ್ಕಣ್ಣ, ಪ್ರಭು ಮುಂಡ್ಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಮತ್ತು ಅನೂಪ್ ಕಾಟ್ಟುಕಾರನ್ ಅವರ ಛಾಯಾಗ್ರಹಣವಿದೆ. ಖ್ಯಾತ ಧ್ವನಿಗ್ರಾಹಕ ರೆಸೂಲ್ ಪೂಕ್ಕೂಟ್ಟಿ ಚಿತ್ರದ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.
ಬರಹ: ಚೇತನ್ ನಾಡಿಗೇರ್
![Whats_app_banner Whats_app_banner](https://kannada.hindustantimes.com/static-content/1y/wBanner.png)