ನಿರಂಜನ್‌ ಸುಧೀಂದ್ರ ಅಭಿನಯದ ಸ್ಪಾರ್ಕ್‌ ಚಿತ್ರಕ್ಕೆ ನೆನಪಿರಲಿ ಪ್ರೇಮ್‌ ಎಂಟ್ರಿ, ವಿಶೇಷ ಪಾತ್ರದಲ್ಲಿ ನಟನೆ
ಕನ್ನಡ ಸುದ್ದಿ  /  ಮನರಂಜನೆ  /  ನಿರಂಜನ್‌ ಸುಧೀಂದ್ರ ಅಭಿನಯದ ಸ್ಪಾರ್ಕ್‌ ಚಿತ್ರಕ್ಕೆ ನೆನಪಿರಲಿ ಪ್ರೇಮ್‌ ಎಂಟ್ರಿ, ವಿಶೇಷ ಪಾತ್ರದಲ್ಲಿ ನಟನೆ

ನಿರಂಜನ್‌ ಸುಧೀಂದ್ರ ಅಭಿನಯದ ಸ್ಪಾರ್ಕ್‌ ಚಿತ್ರಕ್ಕೆ ನೆನಪಿರಲಿ ಪ್ರೇಮ್‌ ಎಂಟ್ರಿ, ವಿಶೇಷ ಪಾತ್ರದಲ್ಲಿ ನಟನೆ

ರಿಯಲ್ ಸ್ಟಾರ್‌ ಉಪೇಂದ್ರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಅಭಿನಯದ ಸ್ಪಾರ್ಕ್‌ ಚಿತ್ರಕ್ಕೆ ನೆನಪಿರಲಿ ಪ್ರೇಮ್‌ ಎಂಟ್ರಿ ಕೊಟ್ಟಿದ್ದಾರೆ. ಇವರು ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರಂತೆ. (ಬರಹ: ಚೇತನ್ ನಾಡಿಗೇರ್‌)

ನಿರಂಜನ್‌ ಸುಧೀಂದ್ರ ಅಭಿನಯದ ಸ್ಪಾರ್ಕ್‌ ಚಿತ್ರಕ್ಕೆ ನೆನಪಿರಲಿ ಪ್ರೇಮ್‌ ಎಂಟ್ರಿ
ನಿರಂಜನ್‌ ಸುಧೀಂದ್ರ ಅಭಿನಯದ ಸ್ಪಾರ್ಕ್‌ ಚಿತ್ರಕ್ಕೆ ನೆನಪಿರಲಿ ಪ್ರೇಮ್‌ ಎಂಟ್ರಿ

ಕಳೆದ ವರ್ಷ ಪ್ರೇಮ್‍ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಚಿತ್ರದ ಮುಹೂರ್ತವಾಗಿತ್ತು. ಈ ಚಿತ್ರದಲ್ಲಿ ಅವರು ಪುನಃ ಖಡಕ್‍ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇತ್ತು. ಈ ಚಿತ್ರ ಇದೀಗ ಯಾವ ಹಂತದಲ್ಲಿದೆಯೋ ಗೊತ್ತಿಲ್ಲ. ಇದೀಗ ಪ್ರೇಮ್‍ ಇನ್ನೊಂದು ಹೊಸ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಪ್ರೇಮ್‍ ಇಂದು (ಏಪ್ರಿಲ್‍ 18) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿರುವ ಸುದ್ದಿ ಬಂದಿದೆ. ಪಾತ್ರಗಳ ಆಯ್ಕೆಯಲ್ಲಿ ಸಖತ್‍ ಚ್ಯೂಸಿಯಾಗಿರುವ ಪ್ರೇಮ್‍, ಇದೀಗ ಹೊಸ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಪೇಂದ್ರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಅಭಿನಯದ ‘ಸ್ಪಾರ್ಕ್’ ಎಂಬ ಚಿತ್ರ ಎರಡು ತಿಂಗಳುಗಳ ಹಿಂದೆ ಪ್ರಾರಂಭವಾಗಿತ್ತು. ಈಗ ಈ ಚಿತ್ರದಲ್ಲಿ ಪ್ರೇಮ್‍ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

ಯಾವ ಪಾತ್ರದಲ್ಲಿ ಪ್ರೇಮ ನಟನೆ 

‘ಸ್ಪಾರ್ಕ್‌’ ಚಿತ್ರದಲ್ಲಿ ನಿರಂಜನ್‌ ಹೀರೋ ಆದರೆ, ಪ್ರೇಮ್‍ ಪಾತ್ರವೇನು? ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆ ಬರಬಹುದು. ಪ್ರೇಮ್‍ ಈ ಚಿತ್ರದಲ್ಲಿ ಒಂದು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಮಹಾಂತೇಶ್ ಹಂದ್ರಾಳ್, ಪ್ರೇಮ್‍ ಅವರಿಗೆಂದೇ ವಿಶೇಷ ಪಾತ್ರವನ್ನು ಡಿಸೈನ್ ಮಾಡಿದ್ದಾರಂತೆ. ಹಿಂದೆಂದೂ ಕಾಣದ ಲುಕ್‍ನಲ್ಲಿ ಪ್ರೇಮ್‌ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಇಷ್ಟು ವರ್ಷದ ಪಯಣದ ಅನುಭವಗಳನ್ನು ಇಟ್ಟುಕೊಂಡು ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಎಲ್ಲರ ಪಾತ್ರಗಳನ್ನು ವಿಶೇಷವಾಗಿ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ ‘ಜೇಮ್ಸ್’, ‘ಭರಾಟೆ’, ‘ಕನಕ’ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮಹಾಂತೇಶ್‍, ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಚಿತ್ರದಲ್ಲಿ ನಿರಂಜನ್ ಸುಧೀಂದ್ರ ಪತ್ರಕರ್ತನಾಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ರಚನಾ ಇಂದರ್ ಅಭಿನಯಿಸುತ್ತಿದ್ದಾರೆ.

ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಸ್ಪಾರ್ಕ್‌’ ಚಿತ್ರವನ್ನು ಡಾ. ಗರಿಮಾ ಅವಿನಾಶ್ ವಸಿಷ್ಠ ನಿರ್ಮಿಸುತ್ತಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ‌ ಈ ಚಿತ್ರಕ್ಕಿದ್ದು, ಚಿತ್ರೀಕರಣ ಭರದಿಂದ ಸಾಗಿದೆ.

ಇದಲ್ಲದೆ ನಟಿ-ಬರಹಗಾರ್ತಿ ಹಾಗೂ ‘ಕನ್ನಡತಿ’ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್‍ ನಿರ್ದೇಶನದ ಹೊಸ ಚಿತ್ರದಲ್ಲೂ ಪ್ರೇಮ್‍ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸುದ್ದಿ ಇದೆ. ಹಂಪಿ ಪಿಕ್ಚರ್ಸ್ ಲಾಂಛನದಲ್ಲಿ ಜಡೇಶ ಕೆ. ಹಂಪಿ, ರಾಮಕೃಷ್ಣ ಹಾಗೂ ಡಾ.ಆನಂದಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜಿಸುತ್ತಿದ್ದು, ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಅನಾವರಣ ಶುಕ್ರವಾರ ಸಂಜೆ ನಡೆಯಲಿದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.