The Rise of Ashoka: ಹಳೇ ಮೈಸೂರು ಭಾಗದ ವರ್ತಕರು ಮತ್ತು ಕಾರ್ಮಿಕರ ನಡುವಿನ ಸಂಘರ್ಷದ ಕಥೆಯೇ ದಿ ರೈಸ್ ಆಫ್ ಅಶೋಕ
1970ರಲ್ಲಿ ಹಳೆಯ ಮೈಸೂರಿನಲ್ಲಿ ನಡೆದ ಮತ್ತು ಹೆಚ್ಚು ಬೆಳಕಿಗೆ ಬರದ ಒಂದು ನೈಜ ಘಟನೆಯನ್ನು ಆಧರಿಸಿ ದಿ ರೈಸ್ ಆಫ್ ಅಶೋಕ ಸಿನಿಮಾದ ಕಥೆ ಬರೆದಿದ್ದಾರೆ ಕಥೆಗಾರ ಟಿ.ಕೆ. ದಯಾನಂದ್. ವರ್ತಕರು ಮತ್ತು ಕಾರ್ಮಿಕರ ನಡುವಿನ ಸಂಘರ್ಷದ ಕುರಿತಾದ ಈ ಚಿತ್ರದ ಕಥೆ ಎರಡು ಕಾಲಘಟ್ಟದಲ್ಲಿ ನಡೆಯುತ್ತದಂತೆ.
The Rise of Ashoka: ಸತೀಶ್ ನೀನಾಸಂ ಅಭಿನಯದ ‘ಅಶೋಕ ಬ್ಲೇಡ್’ ಇನ್ನು ಬಿಡುಗಡೆಯಾಗುವುದು ಕಷ್ಟ ಎಂಬ ಮಾತಿತ್ತು. ಅದಕ್ಕೆ ಕಾರಣ; ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಲ್ಲೊಬ್ಬರಾದ ವಿನೋದ್ ಧೋಂಡಾಳೆ ನಿಧನ. ಚಿತ್ರದ ಬಜೆಟ್ ಮತ್ತು ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅವರು ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದರು. ಇನ್ನು, ಚಿತ್ರ ಪ್ರಾರಂಭವಾಗುವುದಿಲ್ಲ ಎಂಬ ಸುದ್ದಿ ಇರುವಾಗಲೇ ಚಿತ್ರಕ್ಕೆ ಮರುಜೀವ ಸಿಕ್ಕಿದೆ.
‘ಅಶೋಕ ಬ್ಲೇಡ್’ ಚಿತ್ರದ ಬಾಕಿ ಉಳಿದಿರುವ ಚಿತ್ರೀಕರಣ ಫೆಬ್ರವರಿ 15ರಿಂದ ಪ್ರಾರಂಭವಾಗಲಿದೆ. ವಿನೋದ್ ಧೋಂಡಾಳೆ ಬದಲಿಗೆ ಈ ಚಿತ್ರವನ್ನು ಇದೀಗ ಮನು ಶೆಡ್ಗಾರ್ ಮುಂದುವರೆಸಲಿದ್ದಾರೆ. ಈ ಹಿಂದೆ ಪುಟ್ಟಣ್ಣ ಕಣಗಾಲ್ ನಿಧನರಾದಾಗ, ಅವರು ಅರ್ಧಕ್ಕೆ ಬಿಟ್ಟು ಹೋಗಿದ್ದ ‘ಮಸಣದ ಹೂ’ ಚಿತ್ರವನ್ನು ಕೆ.ಎಸ್.ಎಲ್ ಸ್ವಾಮಿ ಪೂರ್ತಿ ಮಾಡಿ ಬಿಡುಗಡೆ ಮಾಡಿದ್ದರಂತೆ. ಅದರಂತೆಯೇ, ಇದೀಗ ವಿನೋದ್ ಬಿಟ್ಟು ಹೋಗಿರುವ ಚಿತ್ರವನ್ನು ಪೂರ್ತಿ ಮಾಡಿ, ಅದನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಮನು ಹೊತ್ತಿದ್ದಾರೆ.
ಮನು ಶೇಡ್ಗಾರ್ ನಿರ್ದೇಶನ
ಮನು ಮೂಲತಃ ಸಂಕಲನಕಾರರು. ‘ಚಮಕ್’, ‘ಕ್ಷೇತ್ರಪತಿ’, ‘ಅವತಾರ ಪುರುಷ’ ಸೇರಿದಂತೆ ಒಂದಷ್ಟು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಮನು ಶೇಡ್ಗಾರ್, ‘ಅಶೋಕ ಬ್ಲೇಡ್’ ಚಿತ್ರಕ್ಕೂ ಸಂಕಲನ ಮಾಡಿದವರು. ಅವರಿಗೆ ಚಿತ್ರದ ಬಗ್ಗೆ ಸಂಪೂರ್ಣವಾಗಿ ಗೊತ್ತಿರುವುದರಿಂದ, ಅವರಿಂದ ಚಿತ್ರವನ್ನು ಮುಗಿಸಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆಯಂತೆ. ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಮುಗಿದಿದ್ದು, ಒಂದಿಷ್ಟು ಮಾತಿನ ಭಾಗದ ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಇತ್ತಂತೆ. ಇದೀಗ ಈ ಚಿತ್ರವನ್ನು ಮನು ಶೇಡ್ಗಾರ್ ಮುಂದುವರೆಸುತ್ತಿದ್ದಾರೆ.
ನೈಜ ಘಟನೆ ಆಧರಿತ ಸಿನಿಮಾ
ಅಂದಹಾಗೆ, ಚಿತ್ರದ ಹೆಸರು ಸಹ ಬದಲಾಗಿದೆ. ‘ಅಶೋಕ ಬ್ಲೇಡ್’ ಚಿತ್ರಕ್ಕೆ ‘ದಿ ರೈಸ್ ಆಫ್ ಅಶೋಕ’ ಎಂಬ ಹೆಸರನ್ನು ಇಡಲಾಗಿದೆ. 1970ರಲ್ಲಿ ಹಳೆಯ ಮೈಸೂರಿನಲ್ಲಿ ನಡೆದ ಮತ್ತು ಹೆಚ್ಚು ಬೆಳಕಿಗೆ ಬರದ ಒಂದು ನೈಜ ಘಟನೆಯನ್ನು ಆಧರಿಸಿ ಈ ಕಥೆ ಬರೆದಿದ್ದಾರೆ ಟಿ.ಕೆ. ದಯಾನಂದ್. ವರ್ತಕರು ಮತ್ತು ಕಾರ್ಮಿಕರ ನಡುವಿನ ಸಂಘರ್ಷದ ಕುರಿತಾದ ಈ ಚಿತ್ರದ ಕಥೆ ಎರಡು ಕಾಲಘಟ್ಟದಲ್ಲಿ ನಡೆಯುತ್ತದಂತೆ. ಇದುವರೆಗೂ ಎಲ್ಲೂ ಹೆಚ್ಚು ಸುದ್ದಿಯಾಗದ ಈ ಘಟನೆಗಳನ್ನಾಧರಿಸಿ ಚಿತ್ರ ಮಾಡಲಾಗಿದೆ. ‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ Not all battles are fought in the battlefield ಎಂಬ ಅಡಿಬರಹವಿದೆ. ಎಲ್ಲಾ ಯುದ್ಧಗಳು ಯುದ್ದಭೂಮಿಯಲ್ಲಿ ನಡೆಯುವುದಿಲ್ಲ, ಯುದ್ಧ ಎನ್ನುವುದು ದೈಹಿಕವಾಗಿರಬೇಕಿಲ್ಲ ಎಂದು ಈ ಚಿತ್ರ ಸಾರುತ್ತದೆ.
ಕನ್ನಡದ ಜತೆಗೆ ತೆಲುಗು ತಮಿಳಿನಲ್ಲಿಯೂ ಬಿಡುಗಡೆ
‘ದಿ ರೈಸ್ ಆಫ್ ಅಶೋಕ’ ಚಿತ್ರವನ್ನು ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಬ್ಯಾನರ್ ನಡಿ ವರ್ಧನ್ ನರಹರಿ, ಜೈಷ್ಣವಿ ಮತ್ತು ನೀನಾಸಂ ಸತೀಶ್, ‘ರೈಸ್ ಆಫ್ ಅಶೋಕ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸತೀಶ್ ನೀನಾಸಂ ಜೊತೆಗೆ ಬಿ. ಸುರೇಶ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೀಯಾ, ಯಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ‘ದಿ ರೈಸ್ ಆಫ್ ಅಶೋಕ’ ಚಿತ್ರವು ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗಿ, ಬಿಡುಗಡೆಯಾಗಲಿದೆ.