UI Movie: ನಟ ಉಪೇಂದ್ರ ಸಿನಿಮಾ ಚೌಕಟ್ಟಿದು, ಬುದ್ಧಿವಂತ ನಿರ್ದೇಶಕ ಅಂದ್ರೆ ಇದೇ-ಇಷ್ಟೇ ಅಲ್ಲವಾ?
ಉಪೇಂದ್ರ ಅಂದರೆ ಕಮರ್ಷಿಯಲ್ ಪ್ರವಚನಕಾರ. ಹಾಡು, ದೃಶ್ಯಗಳು, ಸಂಭಾಷಣೆ ಮೂಲಕ ಹೇಳಿದ್ದನ್ನೇ ಹೇಳುತ್ತಾ ಹತ್ತು ವರ್ಷಗಳಿಗೊಮ್ಮೆ ಜನರ ಮುಂದೆ ಬರುವವರು. ಚೆನ್ನಾಗಿದ್ದರೆ ಸಿನಿಮಾ ಗೆಲ್ಲಲೇಬೇಕು. ಆದರೆ ಮತ್ತೆ ಅದೇ ಸೈಕಾಲಜಿ, ಪೊಲಿಟಿಕಲ್ ಸೈನ್ಸ್, ಸೋಷಿಯಾಲಜಿ, ರಜನೀಶ್ ಅಂತ ಕಥೆ ತಂದರೋ ಅಲ್ಲಿಗೆ ಅದೇ ಸೇಮ್ ಓಲ್ಡ್ ಉಪೇಂದ್ರ ಅಂತ ಫಿಕ್ಸ್ ಆಗುತ್ತೆ. ಬರಹ: ನೀಲ ಮಾಧವ
ಇನ್ನು ಎಂಟು ದಿನಗಳಲ್ಲಿ ಉಪೇಂದ್ರ ನಿರ್ದೇಶನ ಹಾಗೂ ನಟನೆಯ ‘ಯುಐ‘ ಸಿನಿಮಾ ತೆರೆ ಕಾಣುತ್ತಿದೆ. ಇದು ಉಪೇಂದ್ರ ಪಾಲಿಗೆ ನಿಜವಾದ ಪರೀಕ್ಷೆ. ಈ ಹಿಂದೆ ಅವರೇ ನಿರ್ದೇಶಿಸಿ, ನಟಿಸಿದ್ದ ಉಪ್ಪಿ2 ಹೇಳಿಕೊಳ್ಳುವಂಥ ಸದ್ದು ಮಾಡಿರಲಿಲ್ಲ (ಹಣ ಮಾಡಿರಬಹುದು). ಸೈಕಾಲಜಿ, ಸೋಷಿಯಾಲಜಿ, ಮೈಥಾಲಜಿ ಹಾಗೂ ಪೊಲಿಟಿಕಲ್ ಸೈನ್ಸ್ ಇಷ್ಟರ ಮಿಶ್ರಣವೇ ಉಪೇಂದ್ರ ಸಿನಿಮಾ. ಉಪೇಂದ್ರ ಹೀರೋ ಆಗಿ ಸಿನಿಮಾ ಕೆರಿಯರ್ ಶುರುವಿನಲ್ಲೋ ಅಥವಾ ಆ ನಂತರದ ಕೆಲವು ವರ್ಷಗಳಲ್ಲೋ ಜಗ್ಗಿ ವಾಸುದೇವ್ ಅವರಂಥವರು ಈಗಿನಂಥ ಪ್ರಚಾರದಲ್ಲಿ- ಪ್ರವಚನದಲ್ಲಿ ಹೆಜ್ಜೆಹೆಜ್ಜೆಗೆ ಸಿಕ್ಕಿಬಿಟ್ಟಿದ್ದರೆ ಅಥವಾ ‘ಓಶೋ’ ರಜನೀಶ್ ಹಾಗೂ ಜಿಡ್ಡು ಕೃಷ್ಣಮೂರ್ತಿಯಂಥವರ ಪ್ರವಚನ- ಸಂವಾದ, ಪುಸ್ತಕಗಳು ಇತ್ಯಾದಿ ಜನರಿಗೆ ಸುಲಭಕ್ಕೆ ಸಿಕ್ಕಿಹೋಗಿದ್ದರೆ ಉಪೇಂದ್ರ ಈ ಪರಿಯ ಎಕ್ಸೈಟ್‌ಮೆಂಟ್ ಆಗಿ ಉಳಿಯುತ್ತಿದ್ದುದು ಅಸಾಧ್ಯ. ಇನ್ನೊಂದು ಸವಾಲು ಏನೆಂದರೆ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್ ಇಂಥವುಗಳ ಮೂಲಕ ಇಡೀ ವಿಶ್ವದ ಸಿನಿಮಾ ಆರಿಂಚಿನ ಮೊಬೈಲ್‌ನಲ್ಲಿ ದಕ್ಕಿಹೋಗಿದೆ. ಅದೇನು ದೃಶ್ಯವೋ ಕಂಟೆಂಟೋ ಅಥವಾ ಕಾನ್ಸೆಪ್ಟೋ ಯಾವುದರಿಂದ ಸ್ಫೂರ್ತಿ ಪಡೆದುಕೊಂಡರೋ ಛಕ್ ಅಂತ ನೋಡುಗರಿಗೆ ಗೊತ್ತಾಗಿ ಹೋಗುತ್ತದೆ.
ಇನ್ನು ಈವರೆಗೆ ಎಲ್ಲ ಒಳ್ಳೆಯದನ್ನೂ ಹೇಳಿಯಾಗಿದೆ, ಅದನ್ನು ಜಾರಿಗೆ ತರುವುದಷ್ಟೇ ಬಾಕಿ ಇರುವುದು. ಆಪರೇಷನ್ ಅಂತ, ಎಚ್ ಟು ಒ, ಟೋಪಿವಾಲ, ಸೂಪರ್ ಹೀಗೆ ಅರ್ಧ ಡಜನ್‌ಗೂ ಹೆಚ್ಚಿನ ಉಪೇಂದ್ರ ಸಿನಿಮಾದಲ್ಲಿ ಈ ದೇಶದ ವ್ಯವಸ್ಥೆ, ಸಮಸ್ಯೆ, ಭ್ರಷ್ಟಾಚಾರ, ಪರಿಹಾರವನ್ನು ತೋರಿಸಿಯಾಗಿದೆ. ಉಪೇಂದ್ರ, ಉಪ್ಪಿ ಟೂ ಹಾಗೂ ರೀಮೇಕ್ ಆಗಿ ಕನ್ನಡಕ್ಕೆ ತಂದಂಥ ಆಲ್ ಟೈಮ್ ತಮಿಳಿನ ಕ್ಲಾಸಿಕ್ ‘ರಕ್ತ ಕಣ್ಣೀರು‘ ಇವುಗಳಲ್ಲಿ ಪ್ರವಚನ ಮಾಲಿಕೆ, ಎ, ಓಂ ಇತ್ಯಾದಿಗಳಲ್ಲಿ ಲವ್ವು- ನೋವು. ತೆರೆ ಮೇಲೆ ಉಪೇಂದ್ರ ಕಾಣಿಸಿಕೊಂಡರೆ ಇಷ್ಟುದ್ದದ ಭಾಷಣ, ವಿಲಕ್ಷಣ ಬಟ್ಟೆಗಳು- ಹೇರ್ ಸ್ಟೈಲ್, ಸಿಗರೇಟ್, ಮದ್ಯ ಹಾಗೂ ಮಚ್ಚು- ಲಾಂಗುಗಳು. ಈ ಜನ್ಮದಲ್ಲಿ ತೆಲುಗಿನಲ್ಲಿ ಬಂದಂಥ ‘ಲೀಡರ್‘ ಥರದ ವಾಸ್ತವಕ್ಕೆ ಹತ್ತಿರವಾದ ಹಾಗೂ ಅತಿರೇಕವಿಲ್ಲದ ರಾಜಕೀಯ ಸಿನಿಮಾವನ್ನು ಅಷ್ಟು ಸಂವೇದನಾಶೀಲರಾಗಿ ಉಪೇಂದ್ರ ನಿರ್ದೇಶಿಸಲಾರರು, ನಟಿಸಲಾರರು.
ಹಳಸಲು ಬುದ್ಧಿವಂತಿಕೆ
ಪ್ರಜಾಪ್ರಭುತ್ವ ಅಂತ ವ್ಯವಸ್ಥೆಗೆ ಅಂಥ ಹೆಸರು ಕೊಟ್ಟು, ಪ್ರಜೆಗಳೇ ಪ್ರಭುಗಳು ಅಂತ ಹೇಳಿದ ನಂತರವೂ ತಾನು ಹೊಸದೇನನ್ನೋ ಹೆಸರಿಟ್ಟಂತೆ ರಾಜಕೀಯ ಅನ್ನಬೇಡಿ ಪ್ರಜಾಕೀಯ ಅಂದರು. ಇನ್ನು ದರ್ಶನ್ ಪ್ರಕರಣದಲ್ಲಿ ವಿಚಾರಣೆ ಸಾರ್ವಜನಿಕವಾಗಿ ಆಗಲಿ ಎನ್ನುವ ಮೂಲಕ ಕೋರ್ಟ್ ವಿಚಾರಣೆಗಳು ನಡೆಯುವುದೇ ಸಾರ್ವಜನಿಕವಾಗಿ, ಆಸಕ್ತರು ಯಾರು ಬೇಕಾದರೂ ಅದನ್ನು ನೋಡಬಹುದು ಹಾಗೂ ಇತ್ತೀಚೆಗೆ ನ್ಯಾಯಾಲಯ ಕಲಾಪದ ವಿಡಿಯೋ ಸಹ ಬರುತ್ತಿದೆ ಎಂಬ ಸಂಗತಿ ಈ ವ್ಯಕ್ತಿಗೆ ಗೊತ್ತಿಲ್ಲ ಎಂಬುದನ್ನು ಜಾಹೀರು ಮಾಡಿಕೊಂಡರು. ಇನ್ನು ಚುನಾವಣೆಗೆ ಮತದಾನ ನಡೆದ ದಿನವೇ ಫಲಿತಾಂಶ ಯಾಕೆ ಕೊಡಬಾರದು, ಮತ ಹಾಕಿದ ವ್ಯಕ್ತಿ ತಾನು ಯಾರಿಗೆ ಮತ ನೀಡಿದ್ದು ಎಂಬುದನ್ನು ಯಾಕೆ ಬಹಿರಂಗ ಮಾಡಬಾರದು ಎಂಬುದನ್ನು ಪ್ರಶ್ನೆ ಮಾಡಿ, ಉಪೇಂದ್ರರ ಕಾಮನ್‌ಸೆನ್ಸ್ ಬಗ್ಗೆ, ವಿವೇಕದ ಬಗ್ಗೆ ಗೊತ್ತಾಗುವಂತೆ ಮಾಡಿದ್ದಾರೆ. ಇವೆಲ್ಲವೂ ಉಪೇಂದ್ರರ ಹಳಸಲು ಬುದ್ಧಿವಂತಿಕೆ ಹಾಗೂ ಜನಪ್ರಿಯ ಧಾಟಿಯ ಪ್ರಚಾರ ಕೇಂದ್ರದಲ್ಲಿ ಇರುವಂಥ ದಾರಿಯನ್ನು ತೋರುತ್ತವೆ.
ಕೂಗಾಟ- ಕಿರುಚಾಟ ಇರದೆ ಸಿನಿಮಾ ಇಲ್ಲ
ಅಬ್ಬರದ ಸಂಗೀತ, ಕೂಗಾಟ- ಕಿರುಚಾಟ, ಭಯಂಕರವಾದ ಹಿನ್ನೆಲೆ ಸಂಗೀತ, ಢಾಳಾದ ಬಣ್ಣಗಳು, ವಿಕಾರವಾದ ಸೆಟ್‌ಗಳು ಇಂಥವೆಲ್ಲ ಇಲ್ಲದೆ ಸಹಜ ಧ್ವನಿಯಲ್ಲಿ, ಪ್ರಾಮಾಣಿಕವಾಗಿ ಯಾವುದೇ ವಿಚಾರವನ್ನು ಸಹ ಉಪೇಂದ್ರ ಎಂಬ ನಿರ್ದೇಶಕ-ನಟನಿಗೆ ಹೇಳುವುದಕ್ಕೆ ಈ ತನಕ ಸಾಧ್ಯವೇ ಆಗಿಲ್ಲ. ಇನ್ನು ಅವರು ತೆರೆಯ ಮೇಲೆ ಹಂಚಿಕೊಂಡ ವ್ಯವಸ್ಥೆಯನ್ನು ಸರಿಪಡಿಸುವ ಎಲ್ಲ ಸಿನಿಮಾಗಳಲ್ಲೂ ರೌಡಿಗಳು- ಡಾನ್‌ಗಳು ಇಂಥವರೇ ಮುಖ್ಯ. ಅವರನ್ನೆಲ್ಲ ಒಟ್ಟು ಹಾಕಿಕೊಂಡು, ದುಡ್ಡು ಕೊಟ್ಟು, ಕುಡಿಸಿ- ತಿನ್ನಿಸಿ, ಅಂಥವರಿಂದಲೇ ವ್ಯವಸ್ಥೆಯನ್ನು ಸರಿ ಮಾಡುವುದರಲ್ಲಿಯೇ ಉಪೇಂದ್ರರಿಗೆ ನಂಬಿಕೆ. ಅದು ಸಿನಿಮಾ- ನಿಜ ಜೀವನ ಬೇರೆ ಅಲ್ಲವಾ ಅಂತ ಪ್ರಶ್ನೆ ಕೇಳುವುದಾದರೆ, ಸರಿಯಾದ ಮಾರ್ಗದಲ್ಲಿ, ಅದರಲ್ಲೂ ಹೋರಾಟ- ಚಳವಳಿ, ಎಲೆಕ್ಷನ್, ಪ್ರಜಾಪ್ರಭುತ್ವ ದಾರಿಗಳು ಯಾವುದನ್ನೂ ಈ ತನಕದ ಅವರ ಸಿನಿಮಾದಲ್ಲಿ ಬದಲಾವಣೆ ತರುವುದಕ್ಕೆ ಅಂತ ಬಳಸಿಕೊಂಡಿಲ್ಲ.
ಕ್ರೈಮ್ ಇದ್ದೇ ಇರುತ್ತೆ, ಆದರೆ ಪನಿಷ್‌ಮೆಂಟ್ ಇರಲ್ಲ
ಕೊರೊನಾ ನಂತರದ ಸಿನಿಮಾಗಳು ಬೇರೆಯೇ ಆಗಿವೆ. ಅದು ಸದಭಿರುಚಿಯದ್ದೇ ಅಂದರೆ, ಖಂಡಿತಾ ‘ಇಲ್ಲ‘ ಎಂಬ ಉತ್ತರವೇ ಹೇಳಬೇಕಾಗುತ್ತದೆ. ಏಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಬ್ಲಾಕ್ ಬಸ್ಟರ್ ಆದ ಸಿನಿಮಾಗಳ ‘ಹೀರೋ‘ ಪೂರ್ತಿ ಅಡ್ಡ ದಾರಿ ಹಿಡಿದು, ಪೊಲೀಸರು- ಕಾನೂನು ವ್ಯಾಪ್ತಿಗೆ ಸಿಗದೆ ಬಚಾವ್ ಆಗ್ತಾನೆ. ಅದಕ್ಕೆ ಶಿಳ್ಳೆ- ಚಪ್ಪಾಳೆ. ತಪ್ಪನ್ನು ಯಾರು ಮಾಡಿದರೇನಂತೆ ಶಿಕ್ಷೆ ಆಗಲೇಬೇಕು. ಅದು ಈ ಹಿಂದಿನ ಸಿನಿಮಾಗಳ ಜಾಯಮಾನದ್ದಾಗಿತ್ತು. ಅವುಗಳನ್ನು ‘ಕ್ರೈಮ್ ಅಂಡ್ ಪನಿಷ್‌ಮೆಂಟ್‘ ಥೀಮ್ ಕಥೆಗಳು ಎನ್ನಲಾಗುತ್ತಿತ್ತು. ಈಗೆಲ್ಲ ಕ್ರೈಮ್ ಇರುತ್ತದೆ, ನಾಯಕ ಒಂದನ್ನೂ ಬಿಡುದೆ ಎಲ್ಲ ಕ್ರೈಂ ಮಾಡಿರುತ್ತಾನೆ. ಆದರೆ ಯಾವ ಶಿಕ್ಷೆಯೂ ಇರುವುದಿಲ್ಲ. ಪೊಲೀಸರು ಶುದ್ಧಾನುಶುದ್ಧ ಜೋಕರ್‌ಗಳು, ದಡ್ಡ ಶಿಖಾಮಣಿಗಳು, ಅಪರಾಧಗಳನ್ನು ಮಾಡುವವರ ಬುದ್ಧಿವಂತಿಕೆಗೆ ನಾಲ್ಕಾಣೆಯಷ್ಟು ಸಮಕ್ಕೂ ಬಾರದವರು ಎಂಬಂತೆಯೇ ತೋರಿಸುವುದು ಹಾಗೂ ಅವುಗಳಿಗೆ ಶಿಳ್ಳೆ, ಚಪ್ಪಾಳೆ, ಕೇಕೆ ಹಾಗೂ ಮೆಚ್ಚುಗೆಯೋ ಮೆಚ್ಚುಗೆ. ಉಪೇಂದ್ರರ ಈ ಹಿಂದಿನ ಸಿನಿಮಾಗಳು ಹಾಗೆಯೇ ಇದ್ದವು, ಯಾವುದೇ ಅನುಮಾನವಿಲ್ಲದೆ ಹೇಳಬಹುದು; ಈಗ ಬಿಡುಗಡೆ ಆಗಲಿರುವ ಸಿನಿಮಾ ಕೂಡ ಅದೇ ಜಾಯಮಾನದ್ದಾಗಿರುತ್ತದೆ.
ಅವೇ ಪಾತ್ರಗಳು- ಅವೇ ಸೂತ್ರಗಳು
ರೌಡಿಗಳು, ಮಾಧ್ಯಮಗಳಿಗೆ ಟಾಂಗ್, ಅಪ್ರಾಮಾಣಿಕ ರಾಜಕಾರಣಿಗಳು, ಜೋಕರ್ ಥರದ ಪೊಲೀಸರು, ಲಂಪಟರು, ವಂಚಕರು ಹಾಗೂ ಭಯಂಕರ ಗರ್ವ ಇರುವ ಸ್ತ್ರೀ ಪಾತ್ರ, ಕಾಮವನ್ನು ಜಯಸದ ಸನ್ಯಾಸಿ, ದೇಶಭಕ್ತ ಹಾಗೂ ದೇಶಭಕ್ತಿ ಇವಿಷ್ಟನ್ನು ಒಟ್ಟು ಮಾಡಿಕೊಂಡು ಡಾರ್ವಿನ್ ಥಿಯರಿ, ಓಶೋ ಪ್ರವಚನ, ಮನುಷ್ಯ ಹೀಗೆ, ವ್ಯವಸ್ಥೆ ಹಾಗೆ, ಲವ್ವು ಅಂದರೆ ಅದು, ಜೀವನ ಅಂದರೆ ಇದು… ಹೀಗೆ ಇವಿಷ್ಟನ್ನು ಹೊರತುಪಡಿಸಿದಂತೆ ಉಪೇಂದ್ರ ಏನನ್ನೂ ಹೇಳಿಲ್ಲ ಹಾಗೂ ತೋರಿಸಿಲ್ಲ. ಆದರೆ ಈ ಸಲ ಖಂಡಿತ ಎಐ, ಮಶೀನ್ ಲರ್ನಿಂಗ್, ಸೋಷಿಯಲ್ ಮೀಡಿಯಾ ತಂದಿರುತ್ತಾರೆ.
ಉಪೇಂದ್ರ ಅಂದರೆ ಕಮರ್ಷಿಯಲ್ ಪ್ರವಚನಕಾರ. ಹಾಡುಗಳು, ದೃಶ್ಯಗಳು, ಸಂಭಾಷಣೆ ಮೂಲಕವಾಗಿ ಹೇಳಿದ್ದನ್ನೇ ಹೇಳುತ್ತಾ ಹತ್ತು ವರ್ಷಗಳಿಗೊಮ್ಮೆ ಜನರ ಮುಂದೆ ಬರುವವರು. ಈ ಸಲ ಸ್ವಲ್ಪ ಬೇಗ ಬರುತ್ತಿದ್ದಾರೆ. ಚೆನ್ನಾಗಿದ್ದರೆ ಸಿನಿಮಾ ಗೆಲ್ಲಲೇಬೇಕು. ಆದರೆ ಮತ್ತೆ ಅದೇ ಸೈಕಾಲಜಿ, ಪೊಲಿಟಿಕಲ್ ಸೈನ್ಸ್, ಸೋಷಿಯಾಲಜಿ, ರಜನೀಶ್ ಅಂತ ಕಥೆ ತಂದರೋ ಅಲ್ಲಿಗೆ ಅದೇ ಸೇಮ್ ಓಲ್ಡ್ ಉಪೇಂದ್ರ ಅಂತ ಫಿಕ್ಸ್ ಆಗುತ್ತದೆ.
ಬರಹ: ನೀಲ ಮಾಧವ