ವಾಮನ ಸಿನಿಮಾ ವಿಮರ್ಶೆ: ವಾಮನದಲ್ಲಿ ಧನ್ವೀರ ದರ್ಶನ, ತಾಂತ್ರಿಕ ಶ್ರೀಮಂತಿಕೆಯ ಟೊಳ್ಳು ಕಥೆಯ ಚಿತ್ರ
Vamana Movie Review: ಧನ್ವೀರ್ ಗೌಡ್, ರೀಷ್ಮಾ ನಾಣಯ್ಯ ನಟನೆಯ ವಾಮನ ಚಿತ್ರ ಕೊನೆಗೂ ಬಿಡುಗಡೆಯಾಗಿದೆ. ಶಂಕರ್ ರಮಣ್ ನಿರ್ದೇಶನದ ಈ ಆ್ಯಕ್ಷನ್ ಸಿನಿಮಾ ಹೇಗಿದೆ, ಇಲ್ಲಿದೆ ಚಿತ್ರದ ವಿಮರ್ಶೆ (ಬರಹ: ಚೇತನ್ ನಾಡಿಗೇರ್).

Vamana Movie Review: ಇನ್ನು ಬಿಡುಗಡೆಯೇ ಆಗುವುದಿಲ್ಲ ಎನ್ನುವಂತಿದ್ದ ‘ವಾಮನ’ ಸಿನಿಮಾ ಕೊನೆಗೂ ಬಿಡುಗಡೆಯಾಗಿದೆ. ಟ್ರೇಲರ್ ನೋಡುವುದಾದರೆ ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರದ ಜೊತೆಗೆ ತಾಯಿ ಸೆಂಟಿಮೆಂಟ್‍ನ ಚಿತ್ರ ಎಂದೆನಿಸುತ್ತದೆ. ಇಷ್ಟಕ್ಕೂ ‘ವಾಮನ’ ಚಿತ್ರದ ಕಥೆ ಏನು? ಚಿತ್ರ ಹೇಗಿದೆ? ಎಂದು ನೀವೇ ಓದಿ .
ವಾಮನ ಚಿತ್ರದ ಕಥೆ
ಪಾಪಣ್ಣ (ಸಂಪತ್ ರಾಜ್) ಎಂಬ ಗ್ಯಾಂಗ್‍ಸ್ಟರ್‌ನ ಕಡೆಯ ಇಬ್ಬರು ಪ್ರಮುಖರನ್ನು ವಾಮನ (ಧನ್ವೀರ್ ಗೌಡ) ಎಂಬ ಮೆಕ್ಯಾನಿಕ್ ಕೊಲೆ ಮಾಡುತ್ತಾನೆ. ಅಷ್ಟೇ ಅಲ್ಲ, ಪಾಪಣ್ಣನನ್ನೂ ಮುಗಿಸುವುದಕ್ಕೆ ಸ್ಕೆಚ್ ಹಾಕುತ್ತಾನೆ. ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ವಾಮನನಿಗೂ, ಪಾಪಣ್ಣನಿಗೂ ಇರುವ ದ್ವೇಷವೇನು? ಯಾಕೆ ವಾಮನ ಪಾಪಣ್ಣನ ಹಿಂದೆ ಬಿದ್ದಿರುತ್ತಾನೆ? ಈ ಹೋರಾಟದಲ್ಲಿ ಏನೆಲ್ಲಾ ಆಗುತ್ತದೆ ಎಂಬುದೇ ‘ವಾಮನ’ ಚಿತ್ರದ ಕಥೆ.
ಹೇಗಿದೆ ಚಿತ್ರ?
‘ವಾಮನ’ ಯಾರು? ಯಾಕೆ ಪಾಪಣ್ಣನ ವಿರುದ್ಧ ಹೋರಾಟ ಮಾಡುತ್ತಿರುತ್ತಾನೆ? ಎನ್ನುವುದು ಗೊತ್ತಾಗಬೇಕಿದ್ದರೆ ಕೊನೆಯ ಅರ್ಧ ಗಂಟೆ ಕಾಯಬೇಕು. ಅದಕ್ಕೂ ಮುನ್ನು ಒಂದಿಷ್ಟು ಘಟನೆಗಳು ನಡೆಯುತ್ತಲೇ ಇರುತ್ತದೆ. ಆದರೆ, ಯಾವುದೂ ಪೂರ್ತಿಯಾಗುವುದಿಲ್ಲ ಅಥವಾ ಪೂರ್ತಿ ತೋರಿಸುವುದಿಲ್ಲ. ನಿರ್ದೇಶಕರು ಎಲ್ಲವನ್ನೂ ಮತ್ತು ಎಲ್ಲರನ್ನೂ ಸಸ್ಪೆನ್‌ನಲ್ಲಿಟ್ಟು ಕೊನೆಯ ಅರ್ಧ ತಾಸಿನಲ್ಲಿ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡುತ್ತಾರೆ. ಹಾಗಾಗಿ, ಕೊನೆಯ ಅರ್ಧ ಗಂಟೆಯವರೆಗೂ ಚಿತ್ರದ ಬಗ್ಗೆ ಏನೂ ಅರ್ಥವಾಗುವುದಿಲ್ಲ. ಚಿತ್ರ ಅರ್ಥವಾಗಬೇಕಿದ್ದರೆ ಕೊನೆಯವರೆಗೂ ತಾಳ್ಮೆಯಿಂದ ಕಾಯಬೇಕು. ಆ ತಾಳ್ಮೆ ಇಲ್ಲ ಎಂದರೆ, ‘ವಾಮನ’ನ ಅವತಾರ ಅರ್ಥವಾಗುವುದಿಲ್ಲ.
ಚಿತ್ರದಲ್ಲಿ ಒಂದು ಸರಳ ಕಥೆ ಇದೆ. ಅದನ್ನು ನಾನ್ ಲೀನಿಯರ್ ಶೈಲಿಯಲ್ಲಿ ಹೇಳುವುದಕ್ಕೆ ಹೋಗಿ, ಸಾಕಷ್ಟು ಗೊಂದಲಗಳಾಗಿವೆ. ಇಲ್ಲಿ ಹಲವು ಪ್ರಶ್ನೆಗಳಿಗೆ ಸಮಂಜಸ ಉತ್ತರಗಳೇ ಸಿಗುವುದಿಲ್ಲ. ಕಾಮಿಡಿ, ಪ್ರೇಮಕಥೆ, ರಕ್ತ, ಹಿಂಸೆ, ಹೊಡೆದಾಟ ಎಂದು ಮೊದಲಾರ್ಧ ಹೆಚ್ಚೇನೂ ಆಗುವುದಿಲ್ಲ. ಚಿತ್ರದಲ್ಲಿ ಹಲವು ವಿಷಯಗಳಿವೆ, ಕೆಲವು ಒಳ್ಳೆಯ ಪಾತ್ರಗಳಿವೆ. ಆದರೆ, ಯಾವುದೂ ಗಾಢವಾಗಿ ತಟ್ಟುವುದೇ ಇಲ್ಲ. ದ್ವಿತೀಯಾರ್ಧದಲ್ಲಿ ಚಿತ್ರಕ್ಕೊಂದು ವೇಗ ಸಿಗುತ್ತದಾದರೂ, ಚಿತ್ರ ಕ್ರಮೇಣ ರೂಪ ಪಡೆದುಕೊಳ್ಳುತ್ತದಾದರೂ, ಈಗಾಗಲೇ ಬಂದಿರುವ ಅಸಂಖ್ಯಾತ ಆ್ಯಕ್ಷನ್ ಮತ್ತು ಸೆಂಟಿಮೆಂಟ್ ಚಿತ್ರಗಳ ಪೈಕಿ ವಿಭಿನ್ನವಾಗೇನೂ ನಿಲ್ಲುವುದಿಲ್ಲ.
ತಾಂತ್ರಿಕವಾಗಿ ಶ್ರೀಮಂತ ಚಿತ್ರ
ಕಥೆ-ಚಿತ್ರಕಥೆಯ ವಿಷಯದಲ್ಲಿ ಚಿತ್ರ ಇನ್ನಷ್ಟು ಗಟ್ಟಿಯಾಗಿರಬೇಕಿತ್ತಾದರೂ, ‘ವಾಮನ’ ತಾಂತ್ರಿಕವಾಗಿ ಶ್ರೀಮಂತ ಚಿತ್ರ. ಅರುಣ್ ರಾಜ್, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನವು ಧನ್ವೀರ್ ಅಭಿಮಾನಿಗಳಿಗೆ ಖುಷಿಕೊಡುತ್ತದೆ. ಹೊಡೆದಾಟದ ದೃಶ್ಯಗಳನ್ನು ಛಾಯಾಗ್ರಾಹಕ ಮಹೇನ್ ಸಿಂಹ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಅಜನೀಶ್ ಲೋಕನಾಥ್ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಹ ಖುಷಿ ಕೊಡುತ್ತದೆ. ಹಾಡು ಮತ್ತು ಹೊಡೆದಾಟಗಳನ್ನು ಎಡಿಟ್ ಮಾಡುವಲ್ಲಿನ ಚಾಕಚಕ್ಯತೆ, ಇಡೀ ಚಿತ್ರದಲ್ಲಿ ಕಾಣುವುದಿಲ್ಲ. ಚಿತ್ರಕಥೆಯೇ ಹಾಗಿರುವಾಗ ಸುರೇಶ್ ಆರ್ಮುಗಂ ಕೆಲಸದ ಬಗ್ಗೆ ಹೆಚ್ಚು ಮಾತನಾಡುವಂತಿಲ್ಲ.
ವಿಭಿನ್ನ ಪಾತ್ರದಲ್ಲಿ ಅದೇ ಅಭಿನಯ
ಹೊಡೆದಾಟದ ದೃಶ್ಯಗಳನ್ನು ಹೊರತು ಪಡಿಸಿದರೆ ಮಿಕ್ಕಂತೆ ಎಲ್ಲಾ ದೃಶ್ಯಗಳಲ್ಲೂ ಧನ್ವೀರ್ ಒಂದೇ ತರಹ ಕಾಣುತ್ತಾರೆ. ಹಿಂದಿನ ಮೂರು ಚಿತ್ರಗಳಿಗೆ ಹೋಲಿಸಿದರೆ, ಇದು ವಿಭಿನ್ನ ಪಾತ್ರವಾದರೂ ಅಭಿನಯ, ಭಾವನೆಗಳಲ್ಲಿ ಯಾವುದೇ ಏರಿಳಿತಗಳಿಲ್ಲ. ದರ್ಶನ್ ಅವರ ಮಾತಿನ ಶೈಲಿ, ನಡವಳಿಕೆ ಧನ್ವೀರ್ ಅವರಲ್ಲೂ ಕಾಣಬಹುದು. ರೀಶ್ಮಾ ನಾಣಯ್ಯಗೆ ಹೆಚ್ಚು ಕೆಲಸವಿಲ್ಲ. ಆಗಾಗ ಬಂದು ಹೋಗುತ್ತಾರೆ ಎನ್ನುವುದು ಬಿಟ್ಟರೆ, ರೀಷ್ಮಾ ಪಾತ್ರದಲ್ಲಿ ಧಮ್ ಇಲ್ಲ. ತಾರಾ, ಸಂಪತ್ ರಾಜ್, ಆದಿತ್ಯ ಮೆನನ್ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅಚ್ಯುತ್ ಕುಮಾರ್, ಅವಿನಾಶ್ ಹೆಸರಿಗೆ ಮಾತ್ರ ಇದ್ದಾರೆ.
ಆ್ಯಕ್ಷನ್ ಚಿತ್ರಗಳು ಇಷ್ಟಪಡುವವರಿಗೆ, ದರ್ಶನ್ ಹಾಗೂ ಧನ್ವೀರ್ ಅಭಿಮಾನಿಗಳಿಗೆ ‘ವಾಮನ’ ಖುಷಿಕೊಡುವ ಚಿತ್ರ.
ಸಿನಿಮಾ: ವಾಮನ
ಜಾನರ್: ಆ್ಯಕ್ಷನ್ ಸೆಂಟಿಮೆಂಟ್
ನಿರ್ದೇಶನ: ಶಂಕರ್ ರಾಮನ್
ನಿರ್ಮಾಣ: ಚೇತನ್ ಗೌಡ
ಸಂಗೀತ: ಅಜನೀಶ್ ಲೋಕನಾಥ್
ಛಾಯಾಗ್ರಹಣ: ಮಹೇನ್ ಸಿಂಹ
ಎಚ್‍ಟಿ ಕನ್ನಡ ರೇಟಿಂಗ್: 2.5/5
ವಿಮರ್ಶೆ: ಚೇತನ್ ನಾಡಿಗೇರ್
