ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ಜಾಣಮರಿ ಹಾಡು ರಿಲೀಸ್: ಕನ್ನಡದ ಹುಡುಗ ಮರಾಠಿ ಚೆಲುವೆಯ ಪ್ರೇಮ್ ಕಹಾನಿ ಇದು
ಕಿರುತೆರೆ ಖ್ಯಾತ ನಿರ್ದೇಶಕ ಹಯವದನ ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ಮೊದಲ ಹಾಡು ಈಗಾಗಲೇ ರಿಲೀಸ್ ಆಗಿದ್ದು ಈಗ ಜಾಣಮರಿ ಎಂಬ ಎರಡನೇ ಹಾಡು ಬಿಡುಗಡೆ ಆಗಿದೆ.
ಜೋಗಿ ಚಿತ್ರ ಹಾಡಿನ ಸಾಲುಗಳೇ ಸಿನಿಮಾ ಟೈಟಲ್ ಆಗಿರುವ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾ, ಸೆಟ್ಟೇರಿದಾಗಿನಿಂದ ಬಹಳ ಗಮನ ಸೆಳೆಯುತ್ತಿದೆ. ಈಗಾಗಲೇ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಹೌದಾ ಹುಲಿಯಾ... ಹಾಡಿಗೆ ಭರಪೂರ ಮೆಚ್ಚುಗೆ ಸಿಕ್ಕ ಬೆನ್ನಲ್ಲೇ ಚಿತ್ರತಂಡ ಎರಡನೇ ಹಾಡನ್ನು ಅನಾವರಣ ಮಾಡಿದೆ. ಝೇಂಕಾರ್ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಜಾಣಮರಿ.. ಹಾಡನ್ನು ಬಿಡುಗಡೆ ಮಾಡಲಾಗಿದೆ.
ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಹಾಡು
ಜಾಣಮರಿ ಹಾಡಿಗೆ ಪ್ರಮೋದ್ ಮರವಂತೆ ಕ್ಯಾಚಿ ಮ್ಯಾಚಿ ಪದಗಳನ್ನು ಪೋಣಿಸಿ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕಿ ರಕ್ಷಿತಾ ಸುರೇಶ್ ಹಾಗೂ ವಿಶಾಕ್ ನಾಗಲಾಪುರ ಧ್ವನಿಯಾಗಿದ್ದಾರೆ. ಜಾಣಮರಿ ಪ್ರೇಮಗೀತೆಗೆ ಶಿಯೋಮ್ ಟ್ಯೂನ್ ಹಾಕಿದ್ದಾರೆ. ಈ ಹಾಡಿನಲ್ಲಿ ಅಂಜನ್ ನಾಗೇಂದ್ರ ಹಾಗೂ ವೆನ್ಯಾ ರೈ ಜೋಡಿಯಾಗಿ ಮಿಂಚಿದ್ದಾರೆ. ಕನ್ನಡ ಹುಡುಗನಾಗಿ ಅಂಜನ್ ಅಭಿನಯಿಸಿದರೆ, ವೆನ್ಯಾ ರೈ ಮರಾಠಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಪಂಢರಾಪುರದಲ್ಲಿ ಇಡೀ ಹಾಡನ್ನು ಚಿತ್ರೀಕರಣ ಮಾಡಿರುವುದು ವಿಶೇಷ. ನಾಯಕ ಹಾಗೂ ನಾಯಕಿ ನಡುವಿನ ಸುಮಧುರ ಪ್ರೇಮಗೀತೆ ಇದಾಗಿದ್ದು, ಸಂಗೀತ ಪ್ರಿಯರನ್ನು ಗುನುಗುವಂತೆ ಮಾಡಿದೆ.
ಹಯವದನ ನಿರ್ದೇಶನದ ಮೊದಲ ಸಿನಿಮಾ
ಚಿತ್ರದಲ್ಲಿ ಸಂಜನಾ ದಾಸ್ ಕೂಡಾ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಬಿರಾದರ್, ಶರತ್ ಲೋಹಿತಾಶ್ವ, ದಾನಪ್ಪ, ಸ್ವಾತಿ, ದಿನೇಶ್ ಮಂಗಳೂರು, ಲಕ್ಷ್ಮೀ ನಾಡಗೌಡ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದಲ್ಲಿ ಪ್ರಯಾಣದ ಸುತ್ತ ಸುತ್ತುವ ಕಥೆ ಇದೆ. ಜೊತೆಗೆ ಅಪ್ಪ ಮಗ ಬಾಂಧವ್ಯದ ಎಳೆ ಇದೆ. ಬೆಂಗಳೂರಿನಿಂದ ಶುರುವಾದ ಪ್ರಯಾಣ ಹಿಮಾಲಯದವರೆಗೆ ಸಾಗುತ್ತದೆ. ಭಾವನಾತ್ಮಕವಾದ ಈ ಸಿನಿಮಾ ಯುವ ಜನರಿಗೆ ಹೆಚ್ಚು ಮನರಂಜನೆ ನೀಡುತ್ತದೆ. ಹಲವು ರಾಜ್ಯಗಳ ಅನೇಕ ಲೊಕೇಷನ್‌ಗಳಲ್ಲಿ ಈ ಸಿನಿಮಾ ಶೂಟಿಂಗ್ ಮಾಡಲಾಗಿದೆ.
ಸೂಪರ್ ಹಿಟ್ ಧಾರಾವಾಹಿಗಳಾದ ಅಗ್ನಿಸಾಕ್ಷಿ, ನಾಗಿಣಿ, ಕಮಲಿ ನಿರ್ದೇಶನ ಮಾಡಿರುವ ಹಯವದನ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾಗೆ ಶಿವ ಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಇದೆ. ಪ್ರಮೋದ್ ಮರವಂತೆ ಮತ್ತು ರವೀಂದ್ರ ಮುದ್ದಿ ಈ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನರಸಿಂಹ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಮತ್ತು ಕೃಷ್ಣಛಾಯಾ ಚಿತ್ರ ಬ್ಯಾನರ್ ಮೂಲಕ ಪವನ್ ಸಿಮಿಕೇರಿ ಹಾಗೂ ಸಿಂಧು ಹಯವದನ ಎಲ್ಲೋ ಜೋಗಪ್ಪ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.