Yuddhakaanda: ಅಜೇಯ್ ರಾವ್‌ಗೆ ರಣಧೀರನ ಸಾಥ್; ಯುದ್ಧಕಾಂಡ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿರುವ ಕ್ರೇಜಿಸ್ಟಾರ್ ರವಿಚಂದ್ರನ್
Yuddhakaanda Trailer: ಬಹುನಿರೀಕ್ಷಿತ ಯುದ್ಧಕಾಂಡ ಚಾಪ್ಟರ್ 2 ಸಿನಿಮಾದ ಟ್ರೇಲರ್ ಇಂದು (ಏಪ್ರಿಲ್ 13) ಬಿಡುಗಡೆಯಾಗುತ್ತಿದೆ. ಅಜೇಯ್ ರಾವ್‌ಗೆ ಸಾಥ್ ನೀಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. 1989ರಲ್ಲಿ ಬಿಡುಗಡೆಯಾದ ಯುದ್ಧಕಾಂಡ ಚಿತ್ರದಲ್ಲಿ ರವಿಚಂದ್ರನ್ ನಾಯಕನಾಗಿದ್ದರು.

Yuddhakaanda Trailer Lunch: ಎಕ್ಸ್‌ಕ್ಯೂಸ್ ಮೀ ಖ್ಯಾತಿಯ ನಟ ಅಜೇಯ್ ರಾವ್ ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ ಮುಂತಾದ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದಿದ್ದಾರೆ. ಇದೀಗ ನಟನೆಯ ಜೊತೆಗೆ ನಿರ್ಮಾಣದ ಹೊಣೆಯನ್ನು ಹೊತ್ತು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರ ನಟನೆ, ನಿರ್ಮಾಣದ ಬಹುನಿರೀಕ್ಷಿತ ‘ಯುದ್ಧಕಾಂಡ ಚಾಪ್ಟರ್ 2‘ ಸಿನಿಮಾ ಏಪ್ರಿಲ್ 18ಕ್ಕೆ ಬಿಡುಗಡೆಯಾಗಲಿದೆ.
ಕಳೆದ ಕೆಲವು ದಿನಗಳಿಂದ ಚಂದನವನದಲ್ಲಿ ಅಜೇಯ್ ರಾವ್ ಹಾಗೂ ಯುದ್ಧಕಾಂಡ ಸಿನಿಮಾದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚಿಗೆ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕನ್ನಡ ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಯುದ್ಧಕಾಂಡದ ಟ್ರೈಲರ್ ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ ಅಜೇಯ್ ರಾವ್. ಯುದ್ಧಕಾಂಡ ಚಾಪ್ಟರ್ 2 ಟ್ರೈಲರ್ ಇಂದು (ಏಪ್ರಿಲ್ 13) ಬಿಡುಗಡೆಯಾಗುತ್ತಿದೆ.
ಅಪರಾಧ–ನ್ಯಾಯಾಲಯದ ಕಥಾಹಂದರವಿರುವ ಈ ಚಿತ್ರದಲ್ಲಿ ಅಜೇಯ್ ರಾವ್ ದೌರ್ಜನ್ಯಕ್ಕೊಳಗಾದ ತನ್ನ ಚಿಕ್ಕ ಮಗುವಿನ ನ್ಯಾಯಕ್ಕಾಗಿ ಹೋರಾಡುವ ವಕೀಲನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಯುದ್ಧಕಾಂಡ ಅಧ್ಯಾಯ 2 ಲೋಕದ ತುಣುಕನ್ನ ಟ್ರೈಲರ್ ಮೂಲಕ ಸಿನಿ ಪ್ರೇಕ್ಷಕರಿಗೆ ತೋರಿಸಲು ಸಜ್ಜಾಗಿದೆ ಚಿತ್ರತಂಡ. ಟ್ರೈಲರ್ ಯಾವ ರೀತಿ ಇರಲಿದೆ ಎಂಬುದು ಇಂದು ತಿಳಿಯಲಿದೆ.
ಯುದ್ಧಕಾಂಡ ಚಾಪ್ಟರ್ 2 ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಭಾಗವಹಿಸಲಿದ್ದಾರೆ. 1989ರಲ್ಲಿ ರವಿಚಂದ್ರನ್ ನಟಿಸಿದ್ದ ಯುದ್ಧಕಾಂಡ ಸಿನಿಮಾ ಬಿಡುಗಡೆಯಾಗಿ ಸಾಕಷ್ಟು ಯಶಸ್ಸು ಗಳಿಸಿತ್ತು. ಈಗ ಇವರು ಚಾಪ್ಟರ್ 2 ಟ್ರೈಲರ್ ಬಿಡುಗಡೆ ಮಾಡಲು ಬರುತ್ತಿದ್ದಾರೆ. ಈ ಚಿತ್ರದಲ್ಲಿ ಅರ್ಚನಾ ಜೋಯಿಸ್, ಸುಪ್ರಿತಾ ಸತ್ಯನಾರಾಯಣ, ಪ್ರಕಾಶ್ ಬೆಳವಾಡಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
2022ರ ಶೋಕಿವಾಲಾ ನಂತರ ಅಜೇಯ್ ರಾವ್ ನಟನೆಯ ಯಾವುದೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಒಂದೊಳ್ಳೆ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಬೇಕು ಎಂದು ಪಣತೊಟ್ಟಿರುವ ಅಜೇಯ್ ಯುದ್ಧಕಾಂಡ ಚಾಪ್ಟರ್ –2 ರ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಚಿತ್ರದಲ್ಲಿ ಹೆಣ್ಣು ಮಕ್ಕಳ ಪೋಷಕರನ್ನು ಸುರಕ್ಷಿತವಾಗಿಡುವುದು ಮತ್ತು ದೌರ್ಜನ್ಯವನ್ನು ತಡೆಗಟ್ಟುವ ಬಗ್ಗೆ ಸಂಬಂಧಿತ ಸಂದೇಶವಿದೆ.
ಈ ಚಿತ್ರವು ಸಾಮಾಜಿಕ ಚರ್ಚೆ, ಸಾಮಾಜಿಕ ಮತ್ತು ಕಾನೂನು ಬದಲಾವಣೆಗಳನ್ನು ತರುತ್ತದೆ ಮತ್ತು ಹುಡುಗಿಯರು/ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯುತ್ತದೆ ಎಂದು ಅಜಯ್ ಆಶಿಸಿದ್ದಾರೆ. ಪವನ್ ಭಟ್ ನಿರ್ದೇಶನ ಈ ಚಿತ್ರಕ್ಕಿದೆ.
ಸ್ಯಾಂಡಲ್‌ವುಡ್‌ನಲ್ಲಿ ಎರಡು ದಶಕಗಳ ಕಾಲ ಕೆಲಸ ಮಾಡಿದ ನಂತರ ಅಜಯ್‌ಗೆ ಈ ಚಿತ್ರ ಸಲ್ಲಬೇಕಾದ ಹೆಸರು ಮತ್ತು ಖ್ಯಾತಿಯನ್ನು ತಂದುಕೊಡುತ್ತದೆ ಎಂದು ಅವರು ನಂಬುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಈ ಚಿತ್ರವನ್ನು ತೋರಿಸಬೇಕು ಎಂಬುದು ತಮ್ಮ ಗುರಿ ಎಂದು ಅಜೇಯ್ ಹೇಳಿಕೊಂಡಿದ್ದಾರೆ. ಒಟ್ಟಾರೆ ಈ ಸಿನಿಮಾದ ಬಗ್ಗೆ ಅಜೇಯ್ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದು, ಸಿನಿ ಪ್ರೇಕ್ಷಕರು ಅಜೇಯ್ ಕೈ ಹಿಡಿದು ಗೆಲ್ಲಿಸುತ್ತಾರಾ ನೋಡಬೇಕಿದೆ.
