ಕನ್ನಡ ರಾಜ್ಯೋತ್ಸವಕ್ಕೆ ಯುವ ರಾಜ್‌ಕುಮಾರ್ 2ನೇ ಸಿನಿಮಾ ಟೈಟಲ್ ಅನೌನ್ಸ್; ಭೂಗತ ಲೋಕದ ಕಥೆ ಜೊತೆ ಬಂದ್ರು ರೋಹಿತ್ ಪದಕಿ
ರೋಹಿತ್ ಪದಕಿ ನಿರ್ದೇಶನದಲ್ಲಿ ಯುವ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 2ನೇ ಸಿನಿಮಾ ಟೈಟಲ್ ಅನೌನ್ಸ್ ಆಗಿದೆ. ಸಿನಿಮಾಗೆ ಎಕ್ಕ ಎಂದು ಹೆಸರಿಡಲಾಗಿದೆ. ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡಾ ನಿರ್ಮಾಣ ಮಾಡಿದ್ದಾರೆ. ನವೆಂಬರ್ 28 ರಿಂದ ಚಿತ್ರೀಕರಣ ಆರಂಭವಾಗಲಿದೆ.
ಕನ್ನಡ ರಾಜ್ಯೋತ್ಸವಕ್ಕೆ ಸ್ಯಾಂಡಲ್‌ವುಡ್ ಸಿನಿಪ್ರಿಯರಿಗೆ ಸಾಕಷ್ಟು ಸಿಹಿ ಸುದ್ದಿಗಳನ್ನು ನೀಡುತ್ತಿದೆ. ಕೆಲವೊಂದು ಸಿನಿಮಾ ಅನೌನ್ಸ್ ಆದರೆ, ಕೆಲವು ಸಿನಿಮಾಗಳು ಮುಹೂರ್ತ ಆಚರಿಸಿಕೊಂಡಿವೆ. ಸಿನಿಮಾಗಳ ಪೋಸ್ಟರ್ ರಿಲೀಸ್ ಆಗುತ್ತಿದೆ. ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ರಾಜ್‌ಕುಮಾರ್ ನಟಿಸುತ್ತಿರುವ 2ನೇ ಸಿನಿಮಾ ಟೈಟಲ್ ಕೂಡಾ ಅನೌನ್ಸ್ ಆಗಿದೆ.
ಯುವ 2ನೇ ಚಿತ್ರಕ್ಕೆ ಎಕ್ಕ ಟೈಟಲ್ ಫಿಕ್ಸ್
ಯುವ ರಾಜ್‌ಕುಮಾರ್ 2ನೇ ಚಿತ್ರಕ್ಕೆ ಎಕ್ಕ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ರೋಹಿತ್ ಪದಕಿ ಹಾಗೂ ವಿಕ್ರಂ ಹತ್ವಾರ್ ಕಥೆ ಬರೆದಿದ್ದು, ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಯುವ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬೇರೆ ಯಾರೆಲ್ಲಾ ನಟಿಸುತ್ತಿದ್ದಾರೆಂದು ಚಿತ್ರ ತಂಡ ಶೀಘ್ರದಲ್ಲೇ ಪರಿಚಯಿಸಲಿದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಲಿದ್ದು, ಸತ್ಯ ಹೆಗಡೆ ಪ್ರಮುಖ ಛಾಯಾಗ್ರಾಹಕರಾಗಿರುತ್ತಾರೆ, ದೀಪು ಎಸ್ ಕುಮಾರ್ ಸಂಕಲನಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರಕ್ಕೆ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡುತ್ತಿದ್ದಾರೆ. ಈ ಚಿತ್ರವನ್ನು ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ-ಭೋಗೇಂದ್ರ, ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ಅಡಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣದ ಸಿನಿಮಾ
ಇಂದು ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ನಾಯಕ ಯುವ ಮಾಂಸ ಮಾರುವ ಅಂಗಡಿ ನಡುವೆ ಲಾಂಗ್ ಹಿಡಿದು ಹರಿತವಾದ ಆಯುಧ ಹಿಡಿದು ನಿಂತಿದ್ದಾರೆ. ಅವರ ಬಟ್ಟೆಯಲ್ಲಾ ರಕ್ತಸಿಕ್ತವಾಗಿದೆ. ಈ ಪೋಸ್ಟರನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಪಂಚದ್ ಪಾಪದಲ್ಲಿ, ಎಲ್ರೂ ಪಾಲುದಾರ್ರು! ಎಂಬ ಕ್ಯಾಪ್ಷನ್ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನೂ ತಿಳಿಸಿದ್ದಾರೆ. ಒಬ್ಬ ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಹೇಳುವ ಕಥೆಯೇ ಎಕ್ಕ ಎಂದು ಚಿತ್ರತಂಡ ಹೇಳಿದೆ. ಎಕ್ಕ ಚಿತ್ರೀಕರಣ ನವೆಂಬರ್ 28ರಿಂದ ಆರಂಭವಾಗಲಿದ್ದು 2025ಕ್ಕೆ ಚಿತ್ರ ತೆರೆ ಕಾಣಲಿದೆ.
ಯುವ ರಾಜ್‌ಕುಮಾರ್ ಯುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಸಿನಿಮಾ ಇದೇ ವರ್ಷ ಮಾರ್ಚ್ 29 ರಂದು ರಿಲೀಸ್ ಆಗಿತ್ತು. ಸಂತೋಷ್ ಆನಂದ್ ರಾಮ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಯುವಗೆ ನಾಯಕಿಯಾಗಿ ಸಪ್ತಮಿ ಗೌಡ ನಟಿಸಿದ್ದರು. ಅಚ್ಯುತ್ ಕುಮಾರ್, ಸುಧಾರಾಣಿ, ಹಿತಾ ಚಂದ್ರಶೇಖರ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಯುವ ಎರಡನೇ ಸಿನಿಮಾ ಯಾವ ರೀತಿ ಇರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.