Dr Rajkumar: ಸಂಭಾಷಣೆ ಕೇಳುತ್ತಲೇ ಪರಕಾಯ ಪ್ರವೇಶ ಮಾಡುತ್ತಿದ್ದರು; ಭಾರ್ಗವ ಹೇಳಿದ ಡಾ ರಾಜಕುಮಾರ್ ಕಥೆ
ಕನ್ನಡ ಸುದ್ದಿ  /  ಮನರಂಜನೆ  /  Dr Rajkumar: ಸಂಭಾಷಣೆ ಕೇಳುತ್ತಲೇ ಪರಕಾಯ ಪ್ರವೇಶ ಮಾಡುತ್ತಿದ್ದರು; ಭಾರ್ಗವ ಹೇಳಿದ ಡಾ ರಾಜಕುಮಾರ್ ಕಥೆ

Dr Rajkumar: ಸಂಭಾಷಣೆ ಕೇಳುತ್ತಲೇ ಪರಕಾಯ ಪ್ರವೇಶ ಮಾಡುತ್ತಿದ್ದರು; ಭಾರ್ಗವ ಹೇಳಿದ ಡಾ ರಾಜಕುಮಾರ್ ಕಥೆ

ಡಾ. ರಾಜ್‌ ಕುಮಾರ್‌ ಜಯಂತಿ: ಏಪ್ರಿಲ್‌ 24ರಂದು ಕನ್ನಡದ ಮೇರುನಟ ದಿವಂಗತ ಡಾ. ರಾಜ್‌ಕುಮಾರ್‌ ಅವರ ಜಯಂತಿ ಆಚರಿಸಲಾಗುತ್ತದೆ. ಈ ನಿಮಿತ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸರಣಿ ಲೇಖನದಲ್ಲಿ ಇಂದು ಅಣ್ಣಾವ್ರ ಕುರಿತು ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಹಿರಿಯ ನಿರ್ದೇಶಕ ಭಾರ್ಗವ ನೆನಪಿಸಿಕೊಂಡಿದ್ದಾರೆ. (ಬರಹ: ಚೇತನ್‌ ನಾಡಿಗೇರ್‌)

ಸಂಭಾಷಣೆ ಕೇಳುತ್ತಲೇ ಪರಕಾಯ ಪ್ರವೇಶ ಮಾಡುತ್ತಿದ್ದರು; ಭಾರ್ಗವ ಹೇಳಿದ ಡಾ ರಾಜಕುಮಾರ್ ಕಥೆ
ಸಂಭಾಷಣೆ ಕೇಳುತ್ತಲೇ ಪರಕಾಯ ಪ್ರವೇಶ ಮಾಡುತ್ತಿದ್ದರು; ಭಾರ್ಗವ ಹೇಳಿದ ಡಾ ರಾಜಕುಮಾರ್ ಕಥೆ

ಡಾ. ರಾಜ್‌ಕುಮಾರ್‌: ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಹಿರಿಯ ನಿರ್ದೇಶಕ ಭಾರ್ಗವ ಪ್ರಮುಖರು. ಅಷ್ಟೇ ಅಲ್ಲ, 50 ಚಿತ್ರಗಳನ್ನು ನಿರ್ದೇಶಿಸಿದ ಬೆರಳಣಿಕೆಯ ನಿರ್ದೇಶಕರಲ್ಲೊಬ್ಬರು. ಅವರು ನಿರ್ದೇಶಕರಾಗಿದ್ದು ಡಾ. ರಾಜಕುಮಾರ್ ಅಭಿನಯದ ‘ಭಾಗ್ಯವಂತರು’ ಚಿತ್ರದ ಮೂಲಕ. ದ್ವಾರಕೀಶ್‍ ನಿರ್ಮಾಣದ ಈ ಚಿತ್ರವು ಭಾರ್ಗವ ಅವರ ಚಿತ್ರಜೀವನದಲ್ಲಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲೇ ಒಂದು ಯಶಸ್ವಿ ಮತ್ತು ಜನಪ್ರಿಯ ಚಿತ್ರವಾಗಿ ರೂಪುಗೊಂಡಿದೆ. ಈ ಚಿತ್ರ ರೂಪುಗೊಂಡಿದ್ದು ಹೇಗೆ?

ಈ ಕುರಿತು ಮಾತನಾಡಿರುವ ಭಾರ್ಗವ, ‘ನಾನು ಈ ಚಿತ್ರ ಮಾಡುವಾಗ, ಈ ಚಿತ್ರ ನನ್ನ ವೃತ್ತಿಜೀವನಕ್ಕೆ ದೊಡ್ಡ ಕಾಣಿಕೆ ನೀಡುತ್ತದೆ ಎಂದು ಭಾವಿಸಿರಲಿಲ್ಲ. ನಿರ್ದೇಶನ ಮಾಡಬೇಕಿತ್ತು, ಮಾಡುತ್ತಿದ್ದೆ ಅಷ್ಟೇ. ರಾಜಕುಮಾರ್‍ ಅವರನ್ನು ನಿರ್ದೇಶನ ಮಾಡುವುದಕ್ಕೆ ನನಗೆ ಧೈರ್ಯ ಇರಲಿಲ್ಲ. ಅದರ ನಡುವೆಯೇ ನಾನು ನಿರ್ದೇಶನ ಮಾಡಿದೆ. ಅದಕ್ಕೆ ಕಾರಣ, ನಾನು ಡಾ. ರಾಜಕುಮಾರ್‌‍ ಅಭಿನಯದ ‘ಶ್ರೀ ಕನ್ಯಕಾ ಪರಮೇಶ್ವರಿ ಕಥಾ’, ‘ಮೇಯರ್‌‍ ಮುತ್ತಣ್ಣ’, ‘ಭಕ್ತ ಕುಂಬಾರ, ‘ಜಗ ಮೆಚ್ಚಿದ ಮಗ’, ‘ನಾ ನಿನ್ನ ಮರೆಯಲಾರೆ’ ಮುಂತಾದ 12 ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅವರನ್ನು ಬಹಳ ಹತ್ತಿರದಿಂದ ನೋಡಿದ್ದೆ. ನಾನು ಸಹಾಯಕ ನಿರ್ದೇಶಕನಾಗಿ ಅವರಿಗೆ ಸಂಭಾಷಣೆ ಹೇಳಿಕೊಡುತ್ತಿದ್ದಾಗ, ಅವರು ನನ್ನ ಮುಖವನ್ನೇ ನೋಡುತ್ತಿದ್ದರು. ಅವರು ಮೇಕಪ್‍ ಮಾಡಿಸಿಕೊಳ್ಳುತ್ತಿದ್ದರು. ನಾನು ಸಂಭಾಷಣೆಗಳನ್ನು ಹೇಳುತ್ತಿದ್ದೆ. ಅವರು ಸಂಭಾಷಣೆ ಕೇಳುತ್ತಲೇ ಪರಕಾಯ ಪ್ರವೇಶ ಮಾಡುತ್ತಿದ್ದರು. ಪಾತ್ರದೊಳಗೆ ಹೊಕ್ಕುಬಿಡುತ್ತಿದ್ದರು. ಅಂತಹ ಒಬ್ಬ ನಟನನ್ನು ಕನ್ನಡ ಚಿತ್ರರಂಗದಲ್ಲಿ ನೋಡೋಕೆ ಸಾಧ್ಯವಿಲ್ಲ’ ಎನ್ನುತ್ತಾರೆ ಭಾರ್ಗವ.

‘ಭಾಗ್ಯವಂತರು’ ಚಿತ್ರದ ಚಿತ್ರೀಕರಣ ಸಂದರ್ಭವನ್ನು ನೆನಪಿಸಿಕೊಳ್ಳುವ ಭಾರ್ಗವ, ‘ಚಾಮುಂಡೇಶ್ವರಿ ಸ್ಟುಡಿಯೋದ ದೊಡ್ಡ ಫ್ಲೋರ್‍ನಲ್ಲಿ ದ್ವಾರಕೀಶ್‍ ಅವರು ಸೆಟ್‍ ಹಾಕಿಸಿದ್ದರು. ಮೊದಲ ನಿರ್ದೇಶಕನ ಚಿತ್ರಕ್ಕೆ ಇಂಥ ದೊಡ್ಡ ಸೆಟ್‍ ಸಿಕ್ಕಿದ್ದು ನನ್ನ ಪುಣ್ಯ. ಮನೆಯಲ್ಲದೆ ಚಿಕ್ಕ ಫ್ಲೋರ್‍ ಪೂರಾ ದೊಡ್ಡ ರೂಂ ಸೆಟ್‍ ಹಾಕಿಸಿ ಕೊಟ್ಟಿದ್ದರು. ಚಿತ್ರದಲ್ಲಿ ಗಂಡ-ಹೆಂಡತಿ ಪಾರ್ವತಿ-ಪರಮೇಶ್ವರರ ತರಹ ಇರುತ್ತಾರೆ. ಹಾಗಾಗಿ, ಆ ಕೋಣೆಯಲ್ಲಿ ಪಾರ್ವತಿ-ಪರಮೇಶ್ವರರ ದೊಡ್ಡ ಮೌಲ್ಡ್ ಮಾಡಿಸಿ ಹಾಕಿಸಿದ್ದೆವು. ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿತ್ತು. ಆ ಚಿತ್ರಕ್ಕೆ ಸಿಕ್ಕ ಮನ್ನಣೆ ಅಪಾರ. ಆ ಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಬೇರೂರಿದೆ. ನನ್ನಂತಹ 5 ಅಡಿ ಒಂದಿಂಚಿನ ಮನುಷ್ಯ ಅಂಥದ್ದೊಂದು ಚಿತ್ರ ಮಾಡಿದನಾ ಎಂದು ಹಲವರು ಆಶ್ಚರ್ಯಪಟ್ಟಿದ್ದಾರೆ. ಇವತ್ತಿಗೂ ‘ಭಾಗ್ಯವಂತರು’ ನೋಡಿದರೆ ಮನಮುಟ್ಟುವಂತಿದೆ’ ಎನ್ನುತ್ತಾರೆ ಭಾರ್ಗವ.

‘ಭಾಗ್ಯವಂತರು’ ಅಲ್ಲದೆ, ಡಾ. ರಾಜಕುಮಾರ್ ಮತ್ತು ಲಕ್ಷ್ಮೀ ಅಭಿನಯದಲ್ಲಿ ‘ಒಲವು ಗೆಲವು’ ಎಂಬ ಇನ್ನೊಂದು ಚಿತ್ರವನ್ನೂ ನಿರ್ದೇಶನ ಮಾಡಿದ್ದರು.

(ಬರಹ: ಚೇತನ್‌ ನಾಡಿಗೇರ್‌)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner