Vidyapati Movie Review: ಸಿದ್ದು ವರ್ಸಸ್ ಜಗ್ಗು, ‘ವಿದ್ಯಾಪತಿ’ಯ ಕಾಮಿಡಿ ಹೋರಾಟ, ಕಾಶಿನಾಥ್ ನಟನೆ ನೆನಪಿಸುವ ನಾಗಭೂಷಣ್
Vidyapati Kannada Movie Review: ‘ಟಗರು ಪಲ್ಯ’ ಚಿತ್ರದ ನಂತರ ನಾಗಭೂಷಣ್ ಅಭಿನಯದ ಚಿತ್ರ ಬಿಡುಗಡೆಯಾಗಿರಲಿಲ್ಲ. ಇದೀಗ ಅವರು ‘ವಿದ್ಯಾಪತಿ’ಯಾಗಿ ಎರಡು ವರ್ಷಗಳ ನಂತರ ವಾಪಸ್ಸಾಗಿದ್ದಾರೆ. ಟ್ರೇಲರ್‌ನಲ್ಲಿಯೇ ಗಮನಸೆಳೆದಿದ್ದ ಈ ಚಿತ್ರ ಹೇಗಿದೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. (ವಿಮರ್ಶೆ: ಚೇತನ್ ನಾಡಿಗೇರ್)

Vidyapati Kannada Movie Review: ‘ಟಗರು ಪಲ್ಯ’ ಚಿತ್ರದ ನಂತರ ನಾಗಭೂಷಣ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿರಲಿಲ್ಲ. ಇದೀಗ ಅವರು ‘ವಿದ್ಯಾಪತಿ’ಯಾಗಿ ಎರಡು ವರ್ಷಗಳ ನಂತರ ವಾಪಸ್ಸಾಗಿದ್ದಾರೆ. ಟ್ರೇಲರ್‍ನಲ್ಲೇ ಗಮನಸೆಳೆದಿದ್ದ ಈ ಚಿತ್ರ ಹೇಗಿದೆ? ತಿಳಿಯೋಣ ಬನ್ನಿ.
ಚಿತ್ರದ ಕಥೆ ಏನು?
ಆತನ ಒಂದೇ ಒಂದು ಸಾಧನೆ ಎಂದರೆ ಸಿದ್ದು (ನಾಗಭೂಷಣ್), ಸೂಪರ್ ಸ್ಟಾರ್ ವಿದ್ಯಾಳ (ಮಲೈಕಾ ವಸುಪಾಲ್) ಗಂಡ. ಆಕೆಯ ಶ್ರೀಮಂತಿಕೆ, ಹೆಸರಿನಲ್ಲಿ ಮಜಾ ಮಾಡಿಕೊಂಡಿರುವ ಸಿದ್ದುಗೆ, ಅದೊಂದು ದಿನ ಜಗ್ಗು (‘ಗರುಡ’ ರಾಮ್’) ಮತ್ತು ಗ್ಯಾಂಗ್‍ನಿಂದ ಸಾಕಷ್ಟು ಅವಮಾನವಾಗುತ್ತದೆ. ಹೆಂಡತಿ ಮನೆಯಿಂದ ಹೊರಗೆ ಬರುವ ಸಿದ್ದು, ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವುದಕ್ಕೆ ಹೋರಾಟಕ್ಕಿಳಿಯುತ್ತಾನೆ. ಈ ಹೋರಾಟದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ‘ವಿದ್ಯಾಪತಿ’ಯಲ್ಲಿ ತಮಾಷೆಯಾಗಿ ನಿರೂಪಿಸಲಾಗಿದೆ.
ಹೇಗಿದೆ ಚಿತ್ರ?
‘ವಿದ್ಯಾಪತಿ’ ಒಂದು ಪಕ್ಕಾ ಮನರಂಜನೆಯ ಚಿತ್ರ. ಇಲ್ಲಿ ಯಾವುದೇ ಸಾಮಾಜಿಕ ಕಳಕಳಿ, ಗಹನವಾದ ವಿಷಯಗಳು ಇಲ್ಲ. ಇಡೀ ಕುಟುಂಬ ಎರಡು ತಾಸು ಕೂತು ನಕ್ಕು ಹಗುರಾಗುವ, ಒಂದಿಷ್ಟು ಭಾವನಾತ್ಮಕ ವಿಷಯಗಳಿಂದ ಭಾವುಕರಾಗುವ ಅಂಶಗಳು ಚಿತ್ರದಲ್ಲಿವೆ. ಇಲ್ಲಿ ನಾಯಕ ಸೂಪರ್ ಹೀರೋ ಅಲ್ಲ. ಒಬ್ಬ ಸಾಮಾನ್ಯ ಮನುಷ್ಯ. ಅಂಥವನೊಬ್ಬನು ದೈತ್ಯನೊಬ್ಬನ ಮಾಡುವ ಹೋರಾಟವನ್ನು ಸ್ವಲ್ಪ ತಮಾಷೆಯಾಗಿ, ಸ್ವಲ್ಪ ಭಾವನಾತ್ಮಕವಾಗಿ ಕಟ್ಟಿಕೊಡಲಾಗಿದೆ. ಚಿತ್ರ ಅಲ್ಲಲ್ಲಿ ಸ್ವಲ್ಪ ನಿಧಾನವೆಂದನಿಸಿದರೂ, ಬೋರ್ ಹೊಡೆಸುವುದಿಲ್ಲ ಎಂಬುದು ಚಿತ್ರದ ವಿಶೇಷತೆ ಎನ್ನಬಹುದು.
ಕಾಶೀನಾಥ್ ಅವರನ್ನು ನೆನಪಿಸುವ ನಾಗಭೂಷಣ್
ಕಾಶೀನಾಥ್ ನಂತರ ಸೂಪರ್ ಹೀರೋ ಅಲ್ಲದ ಹೀರೋ ಒಬ್ಬ ಕನ್ನಡಕ್ಕೆ ಸಿಕ್ಕಿವರೆಂದರೆ ಅದು ನಾಗಭೂಷಣ್. ಇಲ್ಲಿ ಅವರು ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. ಅವರು ಸಂತೋಷಪಟ್ಟರೂ, ಸಂಕಟ ಅನುಭವಿಸಿದರೂ ಪ್ರೇಕ್ಷಕರು ನಗುವಂತೆ ಅವರು ಅವರು ಅಭಿನಯಿಸಿದ್ದಾರೆ. ಜಗ್ಗು ಪಾತ್ರದಲ್ಲಿ ‘ಗರುಡ’ ರಾಮ್ ಮಿಂಚಿದ್ದಾರೆ. ಸಿನಿಮಾದ ಹೆಸರಲ್ಲೇ ನಾಯಕಿ ಹೆಸರಿದ್ದರೂ, ಚಿತ್ರದಲ್ಲಿ ಮಲೈಕಾಗೆ ಹೆಚ್ಚು ಜಾಗವಿಲ್ಲ. ಇರುವಷ್ಟು ಸಮಯದಲ್ಲಿ ಮುದ್ದಾಗಿ ಕಾಣಿಸಿಕೊಳ್ಳುವ ಮಲೈಕಾ ಇಷ್ಟವಾಗುತ್ತಾರೆ. ಧನಂಜಯ್ ತೆರೆಯ ಮೇಲೆ ಕಡಿಮೆ ಕಾಣಿಸಿಕೊಂಡರೂ, ತಮ್ಮ ಅನಕೊಂಡ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ಕಾರ್ತಿಕ್ ರಾವ್, ಶ್ರೀವತ್ಸ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರ ತಾಂತ್ರಿಕವಾಗಿಯೂ ಶ್ರೀಮಂತವಾಗಿದೆ. ಲವಿತ್ ಛಾಯಾಗ್ರಹಣ ಮತ್ತು ದಾಸ್ ಮೋಡ್ ಹಾಡುಗಳು ಚಿತ್ರವನ್ನು ಇನ್ನಷ್ಟು ಶ್ರೀಮಂತವಾಗಿಸಿವೆ. ಜಗ್ಗೇಶ್ ಹಾಡಿರುವ ‘ಅಯ್ಯೋ ವಿಧಿಯೇ …’ ಮತ್ತು ಅದರಲ್ಲಿನ ರಂಗಾಯಣ ರಘು ಅವರ ನೃತ್ಯ ಚಿತ್ರದ ಹೈಲೈಟ್‍ಗಳು.
ಮಕ್ಕಳ ಸಮೇತ ಇಡೀ ಕುಟುಂಬ ನೋಡುವ ಚಿತ್ರಗಳು ಕಡಿಮೆಯಾಗುತ್ತಿರುವ ದಿನಗಳಲ್ಲಿ ‘ವಿದ್ಯಾಪತಿ’ ಒಂದು ಫ್ಯಾಮಿಲಿ ಚಿತ್ರವಾಗಿ ಹೊರಹೊಮ್ಮಿದೆ. ಫ್ಯಾಮಿಲಿ ಚಿತ್ರಗಳನ್ನು ನೋಡಲು ಇಷ್ಟಪಡುವವರು, ‘ವಿದ್ಯಾಪತಿ’ ಖುಷಿಕೊಡಬಹುದು.
ಸಿನಿಮಾ: ವಿದ್ಯಾಪತಿ
ಜಾನರ್: ಫ್ಯಾಮಿಲಿ ಡ್ರಮಾ
ನಿರ್ದೇಶನ: ಎಷಮ್ ಮತ್ತು ಹಸೀನ್
ನಿರ್ಮಾಣ: ಧನಂಜಯ್
ಸಂಗೀತ: ದಾಸ್ ಮೋಡ್
ಛಾಯಾಗ್ರಹಣ: ಲವಿತ್
ಸಿನಿಮಾದ ಅವಧಿ: 127 ನಿಮಿಷಗಳು
ಎಚ್‍ಟಿ ಕನ್ನಡ ರೇಟಿಂಗ್: 3/5
ವಿಮರ್ಶೆ: ಚೇತನ್ ನಾಡಿಗೇರ್
