ವೀರ ಚಂದ್ರಹಾಸ, ಸುದೀಪ್ ಮಂದಹಾಸ; ರವಿ ಬಸ್ರೂರು ಯಕ್ಷಗಾನ ಸಿನಿಮಾದ ಬಿರುಗಾಳಿ ಎಬ್ಬಿಸಲು ಬಂದ ಕಿಚ್ಚ
Veera Chandrahasa Movie: ಶಿವರಾಜ್ ಕುಮಾರ್, ಚಂದನ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 400ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ರವಿ ಬಸ್ರೂರು ಕಿಚ್ಚ ಸುದೀಪ್ ಯಕ್ಷಗಾನದ ಕಿರೀಟ ಧರಿಸಿರುವ ಪೋಸ್ಟರ್ ಬಿಡುಗಡೆ ಮಾಡಿ ಕಿಚ್ಚನ ಅಭಿಮಾನಿಗಳಿಗೆ ರೋಮಾಂಚನ ಉಂಟು ಮಾಡಿದ್ದಾರೆ.

ರವಿ ಬಸ್ರೂರು ಅವರ ಮಹಾತ್ವಕಾಂಕ್ಷೆಯ ವೀರ ಚಂದ್ರಹಾಸ ಸಿನಿಮಾ ಬಿಡುಗಡೆಯಾಗಲು ದಿನಗಣನೆ ಆರಂಭವಾಗಿದೆ. ಶಿವರಾಜ್ ಕುಮಾರ್, ಚಂದನ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 400ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ರವಿ ಬಸ್ರೂರು ಕಿಚ್ಚ ಸುದೀಪ್ ಯಕ್ಷಗಾನದ ಕಿರೀಟ ಧರಿಸಿರುವ ಪೋಸ್ಟರ್ ಬಿಡುಗಡೆ ಮಾಡಿ ಕಿಚ್ಚನ ಅಭಿಮಾನಿಗಳಿಗೆ ರೋಮಾಂಚನ ಉಂಟು ಮಾಡಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಸುದೀಪ್ ನಟಿಸುತ್ತಿಲ್ಲ. ಆದರೆ, ಇಂದು ಸಂಜೆ ಆರು ಗಂಟೆಗೆ ಸುದೀಪ್ ವೀರ ಚಂದ್ರಹಾಸದ ಸ್ಟ್ರೋಮ್ (ಬಿರುಗಾಳಿ) ಎಬ್ಬಿಸಲು ಬರುತ್ತಿದ್ದಾರೆ ಎಂದು ರವಿ ಬಸ್ರೂರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ವೀರ ಚಂದ್ರಹಾಸ- ಸುದೀಪ್ ಮಂದಹಾಸ
ವೀರ ಚಂದ್ರಹಾಸ ಸಿನಿಮಾದ ಪೋಸ್ಟರ್‌ನಲ್ಲಿ ಸುದೀಪ್ ಮಂದಹಾಸ ಬೀರುತ್ತಿದ್ದಾರೆ. ರವಿ ಬಸ್ರೂರು ಇನ್‌ಸ್ಟಾಗ್ರಾಂನಲ್ಲಿ ಹೀಗೆ ಬರೆದಿದ್ದಾರೆ. "ಅಪಾರವಾದ ಹೆಮ್ಮೆ ಮತ್ತು ಕೃತಜ್ಞತೆಯೊಂದಿಗೆ ನಾವು ನಮ್ಮ ಮಹಾನ್ ಕೃತಿ "ವೀರ ಚಂದ್ರಹಾಸ"ದ ಮೇಕಿಂಗ್ ಅನ್ನು ಅನಾವರಣಗೊಳಿಸುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸರ್ ಅವರನ್ನು ಸ್ವಾಗತಿಸುತ್ತೇವೆ" ಎಂದು ರವಿ ಬಸ್ರೂರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟರ್ ಜತೆಗೆ ಕ್ಯಾಪ್ಷನ್ ಬರೆದಿದ್ದಾರೆ. ಈ ಪೋಸ್ಟರ್‌ನಲ್ಲಿ "ಕಿಚ್ಚ ಸುದೀಪ್ ಅವರು ಸ್ಟ್ರೋಮ್ (ಬಿರುಗಾಳಿ) ಅನಾವರಣ ಮಾಡಲಿದ್ದಾರೆ" ಎಂದು ಬರೆದಿದ್ದಾರೆ. ಇಂದು ಸಂಜೆ (ಏಪ್ರಿಲ್ 12) 6.03 ಗಂಟೆಗೆ ಈ ಮೇಕಿಂಗ್ ವಿಡಿಯೋ ಬಿಡುಗಡೆಯಾಗಲಿದೆ. "ನಿಮ್ಮ ಸ್ಪೂರ್ತಿದಾಯಕ ಪದಗಳಿಗೆ, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಕಿಚ್ಚ ಸುದೀಪ್ ಸರ್" ಎಂದು ರವಿ ಬಸ್ರೂರು ಬರೆದಿದ್ದಾರೆ. ಹೆಚ್ಚಿನ ವಿವರ ಇಂದು ಸಂಜೆ ದೊರಕಲಿದೆ.
ವೀರ ಚಂದ್ರಹಾಸ ಸಿನಿಮಾ ಬಿಡುಗಡೆ ಯಾವಾಗ?
ಇದು ಯಕ್ಷಗಾನ ಪ್ರಸಂಗ ಆಧರಿತ. ಈ ಸಿನಿಮಾ ಏಪ್ರಿಲ್ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಕುರಿತು ರವಿ ಬಸ್ರೂರು ಹೀಗೆ ಹೇಳಿದ್ದಾರೆ. "ನಾನು ನಿರ್ದೇಶನ ಮಾಡಿರುವ ಸಿನಿಮಾಗಳು ಹಣಕ್ಕಾಗಿ ಮಾಡಿರುವುದಲ್ಲ. ಹಾಕಿದ ಹಣ ವಾಪಸ್ ಬರುತ್ತದೆ ಎಂಬ ಆಸೆಯಿಂದಲೂ ಮಾಡಿಲ್ಲ. ನಮ್ಮೂರ ಸಂಸ್ಕೃತಿ, ಭಾಷೆ, ಸೊಗಡನ್ನು ನಾಡಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದೇನೆ. ಯಕ್ಷಗಾನವನ್ನು ಜಗತತಿನಾದ್ಯಂತ ತಿಳಿಸಬೇಕೆಂದು ಹಲವು ವರ್ಷಗಳಿಂದ ಕನಸು ಕಂಡಿದ್ದೇನೆ. ಇದು ಯಕ್ಷ ಸಿನಿಮಾ. ಈ ಸಿನಿಮಾದಲ್ಲಿ ಯಕ್ಷಗಾನ, ಪ್ರಸಂಗದಿಂದ ಹೊರತಾದ ಸಂಭಾಷಣೆಗಳು, ಹಾಡುಗಳು ಕೂಡ ಈ ಸಿನಿಮಾದಲ್ಲಿ ಇವೆ" ಎಂದು ರವಿ ಬಸ್ರೂರು ಹೇಳಿದ್ದಾರೆ.
ವೀರ ಚಂದ್ರಹಾಸದಲ್ಲಿ ಯಾರೆಲ್ಲ ನಟಿಸಿದ್ದಾರೆ?
ಈ ವೀರ ಚಂದ್ರಹಾಸ ಸಿನಿಮಾದಲ್ಲಿ ನೂರಾರು ಯಕ್ಷಗಾನ ಕಲಾವಿದರು ನಟಿಸಿದ್ದಾರೆ. ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಗೆ ಕುಣಿತ ಹೆಚ್ಚಿಲ್ಲ. ಸಂಭಾಷಣೆಯ ಪಾತ್ರವದು. ಪುನೀತ್, ಗರುಡಾ ರಾಮ್, ಚಂದನ್ ಶೆಟ್ಟಿ ಮುಂತಾದ ಸಿನಿಮಾ ನಟರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. 400-500 ಯಕ್ಷಗಾನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಹಜ ಬೆಳಕಿನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಯಾವುದೇ ಸಿನಿಮಾ ಸೆಟ್‌ನ ಲೈಟ್ ಬಳಸಿಲ್ಲ. ಈ ಸಿನಿಮಾ ಸುಮಾರು 2 ಗಂಟೆ 36 ನಿಮಿಷ ರನ್ ಟೈಮ್ ಹೊಂದಿದೆ. 60-70 ಯಕ್ಷಗೀತೆಗಳು ಈ ಸಿನಿಮಾದಲ್ಲಿವೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ಅರ್ಪಿಸುತ್ತಿದೆ. ಎಸ್.ಎಸ್. ರಾಜಕುಮಾರ್ ಈ ಸಿನಿಮಾದ ನಿರ್ಮಾಣ ಮಾಡಿದೆ ಎಂದು ರವಿ ಬಸ್ರೂರು ಮಾಹಿತಿ ನೀಡಿದ್ದಾರೆ.
