ರಾಧಿಕಾ ಪಂಡಿತ್ ಡೇಟ್ ಕೊಟ್ಟರೆ ನಾಳೆ ಸಿನಿಮಾ ಮಾಡ್ತೀನಿ, ಸೊಸೆಯ ಬಗ್ಗೆ ಯಶ್ ತಾಯಿ ಪುಷ್ಪಾ ಮಾತು
ತಮ್ಮ ಸೊಸೆ ರಾಧಿಕಾ ಪಂಡಿತ್ ಡೇಟ್ ಕೊಟ್ಟರೆ ನಾಳೆ ಬೆಳಿಗ್ಗೆಯೇ ಸಿನಿಮಾ ಮಾಡುತ್ತೇನೆ. ಕೊಡಿಸುತ್ತೀರಾ?’ ಎಂದು ರಾಧಿಕಾ ಪಂಡಿತ್ ಅತ್ತೆ ಮತ್ತು ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಪ್ರಶ್ನಿಸಿದ್ದಾರೆ. (ವರದಿ: ಚೇತನ್ ನಾಡಿಗೇರ್)

ಯಶ್ ಅವರ ತಾಯಿ ಪಿಎ (ಪುಷ್ಪಾ ಅರುಣ್ ಕುಮಾರ್) ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಅದರಡಿ ‘ಕೊತ್ತಲವಾಡಿ’ ಎಂಬ ಚಿತ್ರ ನಿರ್ಮಿಸಿದ್ದಾರೆ. ಪೃಥ್ವಿ ಅಂಬಾರ್, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಮುಂತಾದವರು ನಟಿಸಿರುವ ಈ ಚಿತ್ರದ ಟೀಸರ್, ಬುಧವಾರ ಬಿಡುಗಡೆಯಾಗಿದೆ.
ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿಮ್ಮ ಸೊಸೆ ರಾಧಿಕಾ ಪಂಡಿತ್ ಅಭಿನಯದಲ್ಲಿ ಸಿನಿಮಾ ಮಾಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಧಿಕಾ ಪಂಡಿತ್ ಯಜಮಾನರೇ ನನಗಿಂತ ದೊಡ್ಡ ಬ್ಯಾನರ್ ಪ್ರಾರಂಭ ಮಾಡಿದ್ದಾರೆ. ಅದರಲ್ಲೇ ಅವರಿಗೆ ಸಾಕಷ್ಟು ಕೆಲಸಗಳಿವೆ. ನನ್ನವರೆಗೂ ಬರುವುದಕ್ಕೆ ಚಾನ್ಸೇ ಇಲ್ಲ. ದೇಶ-ವಿದೇಶಕ್ಕೇ ಸಂಪಾದನೆ ಮಾಡುವಷ್ಟು ಅವರ ಗಂಡ ದುಡಿಯುತ್ತಿದ್ದಾರೆ. ನನ್ನ ಹತ್ತಿರ ಅವರು ಯಾಕೆ ಬರುತ್ತಾರೆ ಹೇಳಿ? ಅವರಿಗೆ ಸಿನಿಮಾ ಮಾಡಬಹುದು. ನಾನು ಯಶ್ ಮೀರಿ ಬೆಳೆಯುವುದಕ್ಕೆ ಸಾಧ್ಯವಾ? ಆದರೂ ರಾಧಿಕಾ ಡೇಟ್ ಕೊಟ್ಟರೆ ನಾಳೆ ಬೆಳಿಗ್ಗೆಯೇ ಸಿನಿಮಾ ಮಾಡುತ್ತೀನಿ. ಕೊಡಿಸುತ್ತೀರಾ?’ ಎಂದು ಪ್ರಶ್ನಿಸಿದರು.
ನಿರ್ಮಾಣದಲ್ಲಿ ತಾವಿನ್ನೂ ಬಹಳ ದೂರ ಹೋಗಬೇಕು ಎನ್ನುವ ಪುಷ್ಪಾ, ‘ನಮ್ಮ ರಾಧಿಕಾ ತುಂಬಾ ಚೆನ್ನಾಗಿ ಕಥೆ ಆಯ್ಕೆ ಮಾಡುತ್ತಾಳೆ. ಅವಳು ಯಶ್‍ಗಿಂತ ಕಿಲಾಡಿ. ನಾನು ಅವಳಷ್ಟು ಕಲಿಯಬೇಕು ಎಂದರೆ ತುಂಬಾ ಸಮಯ ಬೇಕು. ಇದೆಲ್ಲಾ ಚೆನ್ನಾಗಿ ಆದಮೇಲೆ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪುತ್ತಾಳಾ ನೋಡೋಣ. ನಾವಿನ್ನೂ ಆ ವಿಷಯದಲ್ಲಿ ತುಂಬಾ ದೂರ ಹೋಗಬೇಕು. ಇದು ನಮ್ಮ ಮೊದಲ ಚಿತ್ರ. ನಾವಿನ್ನೂ ಎ ಬರೆದಿದ್ದೇವೆ. ಅವರು ಡಿಗ್ರಿ ಮಾಡಿದ್ದಾರೆ’ ಎಂದರು.
‘ಕೊತ್ತಲವಾಡಿ’ ಚಿತ್ರ ಪ್ರಾರಂಭವಾಗಿ ಇಷ್ಟು ದಿನವಾದರೂ ಯಾಕೆ ಈ ವಿಷಯವಾಗಿ ಮಾತನಾಡಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ನಾವು ಮಾತನಾಡಬಾರದು. ನಮ್ಮ ಕೆಲಸ ಮಾತನಾಡಬೇಕು. ಯಶ್ ಮನೆ ಸಿನಿಮಾ ಎಂದರೆ ಇಡೀ ದೇಶ ನೋಡುತ್ತದೆ. ಅದಕ್ಕೆ ತಕ್ಕ ಹಾಗೆ ಮಾಡುವುದಾದರೆ ಮಾಡಿ ಎಂದಿದ್ದೆ. ಅವರಿಗೆ ಏನೋ ಬೇಕೋ ಎಲ್ಲವನ್ನೂ ಕೊಟ್ಟಿದ್ದೇವೆ. ಯಾವುದಕ್ಕೂ ನಿರ್ಬಂಧ ಮಾಡಿಲ್ಲ. ಅದಕ್ಕೆ ಪ್ರತಿಯಾಗಿ ಒಳ್ಳೆಯ ಚಿತ್ರ ಕೊಡಬೇಕು ಎಂದು ಹೇಳಿದ್ದೆ. ಅವರು ಒಳ್ಳೆಯ ಚಿತ್ರ ಮಾಡಿಕೊಟ್ಟಿದ್ದಾರೆ. ಮೊದಲು ನಂಬಿಕೆ ಮುಖ್ಯ. ನಂಬಿಕೆ ಇಲ್ಲದಿದ್ದರೆ ಏನೂ ಮಾಡೋಕೆ ಆಗಲ್ಲ. ಯಶ್ ಸಹ ಒಂದು ಕಾಲಕ್ಕೆ ಹೊಸಬ. ಅವನನ್ನು ಯಾರೋ ನಂಬಿ ಚಿತ್ರ ಮಾಡದಿದ್ದರೆ, ಅವಕಾಶ ಸಿಗುತ್ತಿರಲಿಲ್ಲ. ಇವರನ್ನೂ ನಂಬಿ ಅವಕಾಶ ಕೊಟ್ಟಿದ್ದೇವೆ. ಇವರು ಸಹ ನಂಬಿಕೆ ಉಳಿಸಿಕೊಳ್ಳಬೇಕು’ ಎಂದರು.
‘ಕೊತ್ತಲವಾಡಿ’ ಚಿತ್ರವನ್ನು ಹಿರಿಯ ನಿರ್ದೇಶಕರಾದ ಕೆ.ವಿ. ರಾಜು, ರವಿ ಶ್ರೀವತ್ಸ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿಕಾಸ್ ವಸಿಷ್ಠ ಸಂಗೀತ, ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ, ಕಾರ್ತಿಕ್ ಛಾಯಾಗ್ರಹಣವಿದೆ.