Year End 2024: ಮಂಕಾದ ಹಳಬರು, ಮಿಂಚಿದ ಹೊಸಬರು; ಇದು ಸ್ಯಾಂಡಲ್‌ವುಡ್‌ ನಿರ್ದೇಶಕರ ಸೋಲು ಗೆಲುವಿನ ಲೆಕ್ಕಾಚಾರ
ಕನ್ನಡ ಸುದ್ದಿ  /  ಮನರಂಜನೆ  /  Year End 2024: ಮಂಕಾದ ಹಳಬರು, ಮಿಂಚಿದ ಹೊಸಬರು; ಇದು ಸ್ಯಾಂಡಲ್‌ವುಡ್‌ ನಿರ್ದೇಶಕರ ಸೋಲು ಗೆಲುವಿನ ಲೆಕ್ಕಾಚಾರ

Year End 2024: ಮಂಕಾದ ಹಳಬರು, ಮಿಂಚಿದ ಹೊಸಬರು; ಇದು ಸ್ಯಾಂಡಲ್‌ವುಡ್‌ ನಿರ್ದೇಶಕರ ಸೋಲು ಗೆಲುವಿನ ಲೆಕ್ಕಾಚಾರ

Year End 2024: 2024ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ 200 ಪ್ಲಸ್‌ ಸಿನಿಮಾಗಳು ಬಿಡುಗಡೆ ಆಗಿವೆ. ಆ ಪೈಕಿ ಬೆರಳೆಣಿಕೆ ಸಿನಿಮಾಗಳು ಮಾತ್ರ ಸದ್ದು ಮಾಡಿವೆ. ಅದರಲ್ಲಿ ಹೊಸಬರ ಸಿನಿಮಾಗಳೇ ಈ ವರ್ಷ ಪ್ರೇಕ್ಷಕ ಮಹಾಪ್ರಭುವಿಗೆ ಹೆಚ್ಚು ಇಷ್ಟವಾಗಿವೆ. ಹಳಬರ ಪೈಕಿ ಒಬ್ಬಿಬ್ಬರು ಈ ಸಲ ಮೋಡಿ ಮಾಡಿದ್ದು ಬಿಟ್ಟರೆ, ಬಹುತೇಕರು ನೀರಸ ಎನಿಸಿದ್ದಾರೆ.

ಸ್ಯಾಂಡಲ್‌ವುಡ್‌ ನಿರ್ದೇಶಕರ ಸೋಲು ಗೆಲುವಿನ ಲೆಕ್ಕಾಚಾರ
ಸ್ಯಾಂಡಲ್‌ವುಡ್‌ ನಿರ್ದೇಶಕರ ಸೋಲು ಗೆಲುವಿನ ಲೆಕ್ಕಾಚಾರ

Year End 2024: 2024 ಕನ್ನಡ ಚಿತ್ರರಂಗಕ್ಕೆ ಒಂದು ಮಹತ್ವದ ವರ್ಷ. ಈ ವರ್ಷ ಬಹಳ ದೊಡ್ಡ ಸಂಖ್ಯೆಯಲ್ಲಿ ಹೊಸ ನಿರ್ದೇಶಕರು, ಹೀರೋಗಳು ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಅದರಲ್ಲೂ ನಿರ್ದೇಶಕರ ಸಂಖ್ಯೆಯಂತೂ ಬಹಳ ದೊಡ್ಡದಿದೆ. ಈ ವರ್ಷ ಬಿಡುಗಡೆಯಾಗಿರುವ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, 150ಕ್ಕೂ ಹೆಚ್ಚು ಹೊಸ ನಿರ್ದೇಶಕರು ಈ ವರ್ಷ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಿಕ್ಕಂತೆ ಒಂದಿಷ್ಟು ಹಳಬರು ಈ ವರ್ಷ ಚಿತ್ರ ಮಾಡಿದ್ದಾರೆ. ಹೊಸಬರಿಗೆ ಹೋಲಿಸಿದರೆ, ಈ ವರ್ಷ ಸ್ವಲ್ಪ ಮಂಕಾಗಿದ್ದಾರೆ ಎಂದರೆ ತಪ್ಪಿಲ್ಲ.

ಈ ಹಳಬರ ಪಟ್ಟಿಯಲ್ಲೇ ಅತ್ಯಂತ ಹಿರಿಯರೆಂದರೆ ಅದು ಉಪೇಂದ್ರ. ಸುಮಾರು ಒಂಬತ್ತು ವರ್ಷಗಳ ಗ್ಯಾಪ್‍ನ ನಂತರ ಉಪೇಂದ್ರ ನಿರ್ದೇಶನದ ‘UI’ ಚಿತ್ರ ಬಿಡುಗಡೆಯಾಯಿತು. ಮಿಕ್ಕಂತೆ, ಯೋಗರಾಜ್‍ ಭಟ್‍, ಗುರುಪ್ರಸಾದ್‍, ‘ಸಿಂಪಲ್‍’ ಸುನಿ, ಕೆ.ಎಂ. ಚೈತನ್ಯ, ಸಂತೋಷ ಆನಂದರಾಮ್, ಪ್ರದೀಪ್‍ ರಾಜ್, ಇಂದ್ರಜಿತ್‍ ಲಂಕೇಶ್‍, ಎ.ಪಿ. ಅರ್ಜುನ್, ಶ್ರೀನಿವಾಸ ರಾಜ್ ಮುಂತಾದವರ ನಿರ್ದೇಶನದ ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ.

ಪ್ರೇಕ್ಷಕರು ಮತ್ತು ಗಳಿಕೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಉಪೇಂದ್ರ ನಿರ್ದೇಶನದ ‘UI’ ವರ್ಷದ ಕೊನೆಗೆ ಬಿಡುಗಡೆಯಾದ ಚಿತ್ರ. ‘UI’ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದು, ಇದುವರೆಗೂ 25 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿದೆ. ಬಾಕ್ಸ್ ಆಫೀಸ್‍ ವಿಷಯದಲ್ಲಿ ಹೇಳುವುದಾದರೆ, ಚಿತ್ರ ದೊಡ್ಡ ಯಶಸ್ಸಲ್ಲ. ಏಕೆಂದರೆ, ಚಿತ್ರದ ಬಜೆಟ್‍ ಹೆಚ್ಚಿದೆ. ಅದಕ್ಕೆ ಹೋಲಿಸಿದರೆ, ಚಿತ್ರ ಇನ್ನಷ್ಟು ಗಳಿಕೆ ಮಾಡಬೇಕಿದೆ. ಇನ್ನು, ಪ್ರೇಕ್ಷಕರ ವಲಯದಲ್ಲಿ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಚಿತ್ರ ಬೇರೆ ಲೆವೆಲ್‍ನಲ್ಲಿದೆ ಎಂದರೆ, ಇನ್ನೂ ಕೆಲವರು ಚಿತ್ರ ತಲೆಗೆ ಹುಳಬಿಡುತ್ತದೆ, ಗೊಂದಲ ಮಾಡುತ್ತದೆ ಎಂದಿದ್ದಾರೆ.

ನಿರಾಸೆ ಮೂಡಿಸಿದ ಭಟ್ಟರು ಮತ್ತು ಗುರು

ಯೋಗರಾಜ್‍ ಭಟ್‍ ಕಳೆದ ವರ್ಷ ‘ಗರಡಿ’ ಎಂಬ ಚಿತ್ರ ನಿರ್ದೇಶಿಸಿದ್ದರು. ಯಾಕೋ ಈ ಚಿತ್ರ ಮೇಲೇಳಲೇ ಇಲ್ಲ. ಈ ವರ್ಷ ಬಿಡುಗಡೆಯಾದ ಅವರ ‘ಕರಟಕ ದಮನಕ’ ಚಿತ್ರ ಸಹ ಗೆಲ್ಲಲಿಲ್ಲ. ಶಿವರಾಜಕುಮಾರ್ ಮತ್ತು ಪ್ರಭುದೇವರಂತಹ ಜನಪ್ರಿಯ ನಟರಿದ್ದರೂ, ಚಿತ್ರ ಚಿತ್ರಮಂದಿರಗಳಲ್ಲಿ ಐದು ಕೋಟಿ ರೂ.ಗಳನ್ನೂ ಗಳಿಕೆ ಮಾಡಲಿಲ್ಲ. ಇನ್ನು, ಅದೇ ದಿನ (ಮಾರ್ಚ್ 08) ಬಿಡುಗಡೆಯಾದ ‘ರಂಗನಾಯಕ’ ಚಿತ್ರವು ಮೊದಲ ದಿನವೇ ನೆಲಕಚ್ಚಿತು. ಕೆಟ್ಟ ಚಿತ್ರಕಥೆ, ಗೊಂದಲದ ನಿರೂಪಣೆ, ದ್ವಂದ್ವಾರ್ಥದ ಸಂಭಾಷಣೆಗಳೂ … ಇವೆಲ್ಲವೂ ಪ್ರೇಕ್ಷಕರನ್ನು ಸುಸ್ತು ಮಾಡಿ ಹಾಕಿತು. ಗುರುಪ್ರಸಾದ್‍ ಅಭಿರುಚಿ ಮತ್ತು ಕೆಲಸದ ಬಗ್ಗೆ ಸಾಕಷ್ಟು ಟೀಕೆಯೂ ವ್ಯಕ್ತವಾದವು.

ಅಂದುಕೊಂಡಷ್ಟು ಸರಳವಾಗಿರಲಿಲ್ಲ ಈ ಪ್ರೇಮಕಥೆ

‘ಸಿಂಪಲ್‍’ ಸುನಿ ನಿರ್ದೇಶನದ ಎರಡು ಚಿತ್ರಗಳು ಈ ವರ್ಷ ಬಿಡುಗಡೆಯಾದವು. ಒಂದು ಹಳೆಯ ‘ಅವತಾರ ಪುರುಷ 2’ ಮತ್ತು ಇನ್ನೊಂದು ‘ಒಂದು ಸರಳ ಪ್ರೇಮಕಥೆ’. ಮೊದಲ ಚಿತ್ರದ ಬಗ್ಗೆ ಯಾರಿಗೂ ಆಸಕ್ತಿಯೇ ಇರಲಿಲ್ಲ. ‘ಒಂದು ಸರಳ ಪ್ರೇಮಕಥೆ’ ಚಿತ್ರದಲ್ಲಿ ಅಭಿನಯ ಮತ್ತು ಸಂಗೀತದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದರೂ, ಒಟ್ಟಾರೆ ಚಿತ್ರ ದೊಡ್ಡ ಹಿಟ್‍ ಆಗಲಿಲ್ಲ. ಚಿತ್ರದ ದ್ವಿತೀಯಾರ್ಧ ಬಹಳ ಗೊಂದಲಮಯವಾಗಿದೆ, ಕ್ಲೈಮ್ಯಾಕ್ಸ್ ತಲೆ ಕೆಡಿಸುವಂತಿವೆ ಎಂಬ ಮಾತುಗಳು ಕೇಳಿಬಂದವು.

ಗೆಲುವು ಕಾಣದ ಇನ್ನೊಂದಿಷ್ಟು ಹಳಬರು

ಕೆ.ಎಂ. ಚೈತನ್ಯ ಈ ಬಾರಿ ಮಲಯಾಳಂ ಚಿತ್ರವೊಂದನ್ನು ಕನ್ನಡಕ್ಕೆ ‘ಅಬ್ಬಬ್ಬ’ ಹೆಸರಿನಲ್ಲಿ ರೀಮೇಕ್ ಮಾಡಿದರು. ಚಿತ್ರ ಬಂದಿದ್ದು, ಹೋಗಿದ್ದು ಗೊತ್ತಾಗಲಿಲ್ಲ. ಸಂತೋಷ್‍ ಆನಂದರಾಮ್‍ ನಿರ್ದೇಶನದ ‘ಯುವ’ ಚಿತ್ರದಲ್ಲಿ ಯುವ ರಾಜಕುಮಾರ್ ಬಗ್ಗೆ ಒಂದಿಷ್ಟು ಮೆಚ್ಚುಗೆಯ ಮಾತುಗಳು ಕೇಳಿಬಂದರೂ, ಒಟ್ಟಾರೆ ಸಂತೋಷ್‍ ಕೆಲಸದ ಬಗ್ಗೆ ಹೆಚ್ಚು ಚರ್ಚೆಯಾಗಲಿಲ್ಲ. ‘ಗೌರಿ’ ಚಿತ್ರದ ಮೂಲಕ ಇಂದ್ರಜಿತ್‍ ಲಂಕೇಶ್‍ ತಮ್ಮ ಮಗ ಸಮರ್ಜಿತ್‍ಗೆ ದೊಡ್ಡ ಬ್ರೇಕ್‍ ಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಇನ್ನು, ಎ.ಪಿ. ಅರ್ಜುನ್‍ ನಿರ್ದೇಶನದ ‘ಮಾರ್ಟಿನ್‍’ ಚಿತ್ರವು ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಸೋಲು ಎಂಬ ಹಣೆಪಟ್ಟಿ ಅಂಟಿಸಿಕೊಂಡು ಮಾಯವಾಯಿತು. ಚಿತ್ರದಲ್ಲಿ ಏನೇ ಒಳ್ಳೆಯ ವಿಷಯಗಳಿರಲಿ, ಒಟ್ಟಾರೆ ದೊಡ್ಡ ಬಜೆಟ್, ನಿರ್ಮಾಪಕ- ನಿರ್ದೇಶಕರ ನಡುವಿನ ಕಿತ್ತಾಟ, ಕೋರ್ಟ್‌ ಕೇಸ್‍ಗಳು, ಲಂಚದ ಆರೋಪಗಳು … ಇವೆಲ್ಲವೂ ಸೇರಿ ಮರೆಯಾಯಿತು.

ಕ್ರಿಮಿನಲ್‍ಗಳಿಂದ ಫ್ಯಾಮಿಲಿಯತ್ತ ಶ್ರೀನಿವಾಸರಾಜು

ಹಳಬರ ಪೈಕಿ ಈ ವರ್ಷ ಗಮನಸೆಳೆದವರೆಂದರೆ ಅದು ಶ್ರೀನಿವಾಸರಾಜು. ‘ದಂಡುಪಾಳ್ಯ’ ಖ್ಯಾತಿಯ ನಿರ್ದೇಶಕ ಎಂಬ ಬ್ರಾಂಡ್‍ನಿಂದ ಹೊರಬರುವುದಕ್ಕೆ ತವಕಿಸುತ್ತಿದ್ದ ಶ್ರೀನಿವಾಸರಾಜು ಅವರನ್ನು ಅದರಿಂದ ಹೊರಗೆ ಕರೆತಂದಿದ್ದು ಗಣೇಶ್‍ ಮತ್ತು ‘ಕೃಷ್ಣಂ ಪ್ರಣಯ ಸಖಿ’. ಕ್ರೈಮ್‍ ಥ್ರಿಲ್ಲರ್ ಚಿತ್ರಗಳಿಗೆ ಹೆಸರಾಗಿದ್ದ ಶ್ರೀನಿವಾಸರಾಜು, ಈ ಬಾರಿ ತಾನು ಬೇರೆ ಚಿತ್ರಗಳನ್ನು ಸಹ ಮಾಡಬಲ್ಲೆ ಎಂಬುದನ್ನು ತೋರಿಸಿಕೊಟ್ಟರು.

ಗಮನಸೆಳೆದ ಇನ್ನೊಂದಿಷ್ಟ ಮಂದಿ …

ಈಗಾಗಲೇ ನಿರ್ದೇಶನದಲ್ಲಿ ಗುರುತಿಸಿಕೊಂಡಿರುವ ‘ದುನಿಯಾ’ ವಿಜಯ್, ಈ ಬಾರಿ ‘ಭೀಮ’ ಮೂಲಕ ಗಮನಸೆಳೆದರು. ‘ಮಫ್ತಿ’ ಮಾಡಿದ್ದ ನರ್ತನ್‍, ‘ಭೈರತಿ ರಣಗಲ್‍’ನಲ್ಲಿ ಗೆದ್ದರು. ಡಾ. ಸೂರಿ ‘ಬಘೀರ’ನನ್ನು ಕನ್ನಡದ ಮೊದಲ ಸೂಪರ್ ಹೀರೋ ಆಗಿ ಮಾಡಿದರು. ಈಗಾಗಲೇ ಒಂದೆರಡು ಚಿತ್ರಗಳನ್ನು ಮಾಡಿರುವ ದೇವಿಪ್ರಸಾದ್‍ ಶೆಟ್ಟಿ (ಕೇಸ್‍ ಆಫ್‍ ಕೊಂಡಾನ), ಚಂಪಾ ಶೆಟ್ಟಿ (ಕೋಳಿ ಎಸ್ರು), ಪೃಥ್ವಿ ಕೊಣನೂರು (ಹದಿನೇಳೆಂಟು), ರಘು ಶಾಸ್ತ್ರಿ (ಲೈನ್‍ ಮ್ಯಾನ್‍), ಭರತ್‍ ರಾಜ್‍ (ಲಾಫಿಂಗ್ ಬುದ್ಧ), ನಾಗರಾಜ್‍ ಸೋಮಯಾಜಿ (ಮರ್ಯಾದೆ ಪ್ರಶ್ನೆ), ಪ್ರದೀಪ್‍ ವರ್ಮ (ಮರ್‍ಫಿ), ಅಭಿಷೇಕ್‍ ಶೆಟ್ಟಿ (ಆರಾಮ್‍ ಅರವಿಂದಸ್ವಾಮಿ) ಬೇರೆ ಪ್ರಯತ್ನಗಳನ್ನು ಮಾಡಿದರಾದರೂ, ನಿರೀಕ್ಷಿತ ಯಶಸ್ಸು ಕಾಣಲಿಲ್ಲ.

ಮೊದಲ ಪ್ರಯತ್ನದಲ್ಲಿ ಗುರುತಿಸಿಕೊಂಡ ಹೊಸಬರು

ಈ ವರ್ಷ ತಮ್ಮ ಮೊದಲ ಪ್ರಯತ್ನದಿಂದಲೇ ಗುರುತಿಸಿಕೊಂಡ ಒಂದಿಷ್ಟು ಹೊಸ ನಿರ್ದೇಶಕರೆಂದರೆ ಅದು ಸಂದೀಪ್‍ ಸುಂಕದ್‍ (ಶಾಖಾಹಾರಿ), ಶ್ರೀನಿಧಿ ಬೆಂಗಳೂರು (ಬ್ಲಿಂಕ್‌), ಉತ್ಸವ್‍ ಗೋಣವಾರ (ಫೋಟೋ), ಜೈಶಂಕರ್ ಆರ್ಯರ್ (ಶಿವಮ್ಮ), ವೈಭವ್‍ ಮಹದೇವ್‍ (ಜೂನಿ), ಸೂರ್ಯ ವಸಿಷ್ಠ (ಸಾರಾಂಶ), ರಾಜ್‍ಗುರು (ಕೆರೆಬೇಟೆ), ಮಿಥಿಲೇಶ್‍ ಎಡವತ್‍ (ರೂಪಾಂತರ), ವಿಕಾಸ್‍ ಪುಷ್ಪಗಿರಿ (ಸ್ಕ್ಯಾಮ್‍ 1770), ಪ್ರತೀಕ್‍ ಪ್ರಜೋಶ್‍ (ಚಿಲ್ಲಿ ಚಿಕನ್‍), ಚಂದ್ರಜಿತ್‍ ಬೆಳ್ಳಿಯಪ್ಪ (ಇಬ್ಬನಿ ತಬ್ಬಿದ ಇಳೆಯಲಿ) ಮುಂತಾದವರು. ಇವರ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆಲ್ಲದಿದ್ದರೂ, ಇವರೆಲ್ಲರೂ ಭರವಸೆ ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಹೇಗೆ ಮುಂದುವರೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

(ಲೇಖನ: ಚೇತನ್‌ ನಾಡಿಗೇರ್)

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner