ಯುದ್ಧಕಾಂಡಕ್ಕೆ ಫ್ಯಾಮಿಲಿಯನ್ನು ಪಣಕ್ಕೆ ಇಟ್ಟಿದ್ದೇನೆ ಎನ್ನುವುದು ತಪ್ಪು; ಟ್ಯಾಕ್ಸಿ ಓಡಿಸಿಯೂ ಬದುಕಬಲ್ಲೆ ಎಂದ ನಟ ಅಜಯ್ ರಾವ್
Yuddha Kanda Movie Ajay Rao: ಯುದ್ಧಕಾಂಡ ಸಿನಿಮಾ ಇದೇ ಏಪ್ರಿಲ್ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಕುರಿತಂತೆ ನಟ ಅಜಯ್ ರಾವ್ ಮುಕ್ತವಾಗಿ ಬಿ ಗಣಪತಿ ಯೂಟ್ಯೂಬ್ ಚಾನೆಲ್‌ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

Yuddha Kanda Movie Ajay Rao: ಕನ್ನಡದ ಸಿನಿಮಾ ಪತ್ರಕರ್ತರಾದ ಬಿ ಗಣಪತಿ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯುದ್ಧಕಾಂಡ ನಟ ಅಜಯ್ ರಾವ್ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ನಿಮ್ಮ ಸಿನಿಮಾದಲ್ಲಿ ಫೈಟಿಂಗ್ ಇದೆಯಾ? ಸ್ವಿಮ್ಮಿಂಗ್ ಸೀನ್ ಇದೆಯಾ... ಇತ್ಯಾದಿಗಳನ್ನು ಕೇಳುತ್ತಾರೆ ಎಂದಿಟ್ಟುಕೊಳ್ಳಿ. ಇಷ್ಟೆಲ್ಲ ಸೀನ್‌ಗಳನ್ನು ಇಟ್ಟುಕೊಂಡ ಸಿನಿಮಾಗಳು ಏಕೆ ಸೋಲುತ್ತಿವೆ?. ಮಲಯಾಳಂ, ಒರಿಯಾ, ತಮಿಳು, ತೆಲುಗು ಸಿನಿಮಾಗಳಲ್ಲಿ ಜನರ ಅಭಿವ್ಯಕ್ತಿಗೆ ತಕ್ಕಂತೆ ಸಿನಿಮಾ ಮಾಡುವುದು ಹೆಚ್ಚಾಗಿದೆ. ಸಿನಿಮಾಗಳನ್ನು ನಾವೇ ಸೋಲಿಸ್ತೇವೆ ಅನಿಸ್ತಿಲ್ವಾ? ಆದರೆ, ನಿಮ್ಯುಮ ದ್ಧಕಾಂಡ ಸಿನಿಮಾದಲ್ಲಿ ಹೊಸ ಬದಲಾವಣೆ ಕಾಣಿಸುತ್ತಿದೆ." ಎಂದು ಬಿ ಗಣಪತಿ ಹೇಳಿದಾಗ ಅಜಯ್ ಕುಮಾರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಯುದ್ಧಕಾಂಡ ಸಿನಿಮಾವನ್ನು ತೀರಾ ವೈಯಕ್ತಿಕವಾಗಿ ಮಾಡಿದ್ದೇನೆ
"ನಾನು ಸಿನಿಮಾವನ್ನು ತೀರಾ ವೈಯಕ್ತಿಕವಾಗಿ ಮಾಡಿದ್ದೇನೆ. ನನಗೆ ಮಗಳಿದ್ದಾಳೆ. ಇದಕ್ಕಿಂತ ಪರ್ಸನಲ್ ಬೇಕಿಲ್ಲ. ಇವತ್ತು ಜನರ ಮನಸ್ಸಿನಲ್ಲಿಯೂ ಕೂತಿದೆ. ಸಿನಿಮಾ ತಯಾರಕರಲ್ಲಿಯೂ ದೊಡ್ಡ ಬಜೆಟ್‌ನ ಸಿನಿಮಾ ಮಾಡಿದ್ರೆ ಮಾತ್ರ ಯಶಸ್ಸು ಪಡೆಯಬಹುದು ಎನ್ನುವ ಮನೋಭಾವ ಇದೆ. ಸಿನಿಮಾಕ್ಕೆ ಸಂಬಂಧಪಟ್ಟಂತೆ ಎಷ್ಟೇ ಜನರೇಷನ್ ಬದಲಾಗಬಹುದು. ಟೆಕ್ನಿಕಲಿ ಅಪ್‌ಗ್ರೇಡೆಡ್ ಆಗಿರಬಹುದು. ಏನೇ ಬದಲಾವಣೆಯಾಗಲಿ. ಎಮೋಷನಲ್ ವಿಚಾರಗಳು ಎಂದಿಗೂ ಬದಲಾಗಲು ಸಾಧ್ಯವಿಲ್ಲ. ಇದೊಂದು ಚಾಲೆಂಜ್ ಸರ್. ಯಾರೆಲ್ಲ ಸಿನಿಮಾಗಳನ್ನು ಮಾಡುತ್ತಾರೋ ಅವರು ಈ ಚಾಲೆಂಜ್ ಅರ್ಥ ಮಾಡಿಕೊಳ್ಳಬೇಕು" ಎಂದು ಅಜಯ್ ರಾವ್ ಹೇಳಿದ್ದಾರೆ.
ಜನರ ಮೇಲೆ ಪ್ರಭಾವ ಬೀರುವ ಸಿನಿಮಾ ಬೇಕಿದೆ
"ಸಿನಿಮಾ ಮಾಡುವ ವಿಷಯದಲ್ಲಿ ನಾವು ಬದಲಾಗಬೇಕು. ಸಿನಿಮಾ ಮಾಡುವುದು ಹಾಗಲ್ಲ. ಅದು ಭಾವನಾತ್ಮಕವಾಗಿ ಕನೆಕ್ಟ್ ಆಗಬೇಕು ಎಂದು ತಿಳಿಯಬೇಕು. ಮಾನವೀಯತೆಯನ್ನು ಉಳಿಸುವಂತಹ ಸಿನಿಮಾವನ್ನು ಮಾಡಬೇಕು. ಪ್ರಪಂಚಕ್ಕೆ ಇದು ಅಗತ್ಯವಿದೆ. ನಾವು ಕೆಟ್ಟದಾರಿಯ ಸಿನಿಮಾ ಮಾಡೋದಲ್ಲ. ಸಿನಿಮಾಕ್ಕೆ ಆ ತಾಕತ್ ಇದೆ. ಬದಲಾವಣೆ ತರುವ ಶಕ್ತಿ ಸಿನಿಮಾಕ್ಕೆ ಇದೆ. ಅಣ್ಣಾವ್ರ ಸಿನಿಮಾ ನೋಡಿ ನಾವು ಎಷ್ಟು ಜನರು ಬದಲಾವಣೆಯಾಗಿದ್ದೇವೆ. ಶ್ರೇಷ್ಠ ಕಲಾವಿದರು ಯಾಕಾದ್ರು. ಅವರು ಜನರ ಮೇಲೆ ಪ್ರಭಾವ ಬೀರಿದ್ರು ಅದಕ್ಕೆ ಬದಲಾವಣೆ ಉಂಟಾಯಿತು. ಸಿನಿಮಾ ಎನ್ನುವುದು ಪವರ್‌ಫುಲ್ ವೆಪನ್. ಅದನ್ನು ಸರಿಯಾಗಿ ಬಳಸಬೇಕು. ನಾವು ಆ ರೀತಿಯ ಸಿನಿಮಾ ಮಾಡಬೇಕು. ಬಜೆಟ್ ಇದ್ದರೆ ಮಾತ್ರ ಸಿನಿಮಾವಲ್ಲ." ಎಂದು ಅಜಯ್ ರಾವ್ ಹೇಳಿದ್ದಾರೆ.
ಸಮಾಜಕ್ಕೆ ಒಳ್ಳೆಯ ಸಿನಿಮಾ ಕೊಟ್ಟ ತೃಪ್ತಿ ನನಗೆ ಸಾಕು
"ಈ ವಿಚಾರಗಳನ್ನು ಹೇಳಲು ಹೋದಾಗ ನಾನು ಸಾಕಷ್ಟು ಬಾರಿ ಸೋತಿದ್ದೇನೆ. ಈ ಸಿನಿಮಾದಲ್ಲಿ ತಾಕತ್ ಇದೆ. ಅದನ್ನು ನೀವು ಡೈವರ್ಟ್ ಮಾಡ್ತಾ ಇದ್ದೀರಿ ಎಂದು ಸಾಕಷ್ಟು ಬಾರಿ ಹೇಳಿದ್ದೇನೆ. ನಮ್ಮ ಸೊಗಡು ನೀಡಬೇಕು ಎಂದು ಹೇಳಿ ಸಾಕಷ್ಟು ಕೆಟ್ಟವನಾಗಿದ್ದೇನೆ. ಯಾರೂ ಅರ್ಥ ಮಾಡಿಕೊಳ್ಳದ ಸಮಯದಲ್ಲಿ ನಾವು ಸ್ವಂತ ಸಿನಿಮಾ ಮಾಡಬೇಕಾಗುತ್ತದೆ. ಗೆಲುವು, ಸೋಲು ಮುಖ್ಯವಲ್ಲ. ಮನಸ್ಸಿಗೆ ಅನಿಸಿದೆ. ಹಾಗಾಗಿ ಮಾಡಿದ್ದೇನೆ. ನಾನು ಒಳ್ಳೆಯ ಮನಸ್ಸಿನಿಂದ ಮಾಡಿದ್ದೇನೆ ಅಷ್ಟೇ. ಫಲಿತಾಂಶ ಹೇಗೆ ಇರಲಿ. ನಾನು ಒಳ್ಳೆಯ ಸಿನಿಮಾ ಮಾಡಿದ್ದೇನೆ. ನಾಳೆ ನಾಲ್ಕು ಜನರು ಪ್ರೇಕ್ಷಕರು ಬರಬಹುದು. ನೂರು ಜನರು ಬರಬಹುದು. ಅದಕ್ಕಿಂತ ಹೆಚ್ಚೂ ಬರಬಹುದು. ಕೋಟಿಗಟ್ಟಲೆ ಜನಾನೂ ಬರಬಹುದು. ನೋಡಿದವರು ಒಳ್ಳೆಯ ಪ್ರಯತ್ನ ಮಾಡಿದ್ದಾನೆ, ಸಮಾಜಕ್ಕೆ ಒಂದು ಒಳ್ಳೆಯ ಸಿನಿಮಾ ಕೊಟ್ಟಿದ್ದಾನೆ ಎಂದರೆ ಸಾಕು" ಎಂದು ಅಜಯ್ ಹೇಳಿದ್ದಾರೆ.
ನಿಮ್ಮ ಹಿಂದಿನ ಚಿತ್ರಗಳಿಗಿಂತ ಈ ಚಿತ್ರ ಹೇಗೆ ಭಿನ್ನವಾಗಿದೆ ಎಂಬ ಪ್ರಶ್ನೆಗೂ ಅಜಯ್ ಉತ್ತರಿಸಿದ್ದಾರೆ. "ಪ್ಲಾಪ್ ಆಗಿರುವ ಸಿನಿಮಾದಲ್ಲಿಯೂ ಅಷ್ಟೇ ಶ್ರಮ ಹಾಕಿರ್ತಿನಿ. ಹಿಟ್ ಆಗಿರುವ ಸಿನಿಮಾದಲ್ಲಿಯೂ ಅಷ್ಟೇ ಶ್ರಮ ಹಾಕಿರುತ್ತೇನೆ. ಆದರೆ, ಅದು ಗೆಲ್ಲುವುದು ಒಬ್ಬ ಬರಹಗಾರನಿಂದ, ಒಬ್ಬ ನಿರ್ದೇಶಕನಿಂದ, ಅಲಂಕಾರ ಕೊಟ್ಟ ನಿರ್ಮಾಪಕನಿಂದ ಸಿನಿಮಾ ಗೆಲ್ಲುತ್ತದೆ. ಒಬ್ಬ ನಿರ್ಮಾಪಕನಾಗಿ ನಾನು ನಮ್ಮದೇ ಒಂದು ನಿರ್ದೇಶನದ ತಂಡದ ಮೂಲಕ ಈ ಸಿನಿಮಾ ತಂದಿದ್ದೇನೆ. ನನ್ನ ಸಿನಿಮಾದಲ್ಲಿರುವ ಅಂಶಗಳು, ನಿಜವಾದ ಅಂಶಗಳು, ಒಬ್ಬ ತಂದೆಯಾಗಿ ಇರುವ ಇಮೋಷನ್ ಆ ಸಿನಿಮಾಕ್ಕೆ ಶಕ್ತಿ ತುಂಬಿದೆ" ಎಂದು ಅವರು ಹೇಳಿದ್ದಾರೆ.
ನೀವು ಕಾರು ಮಾರಿದ್ದನ್ನೇ ನೋಡಿದ್ರೆ ನಿಮ್ಮ ಬದುಕನ್ನು ಪಣಕ್ಕೆ ಇಟ್ಟಿದ್ದೀರಿ ಎಂದೆನಿಸುದಿಲ್ವಾ? ಎಂಬ ಪ್ರಶ್ನೆಗೆ ಅಜಯ್ ಹೀಗೆ ಉತ್ತರಿಸಿದ್ದಾರೆ. "ನನಗೆ ನನ್ನ ತಂದೆ ಮೊದಲ ಹೀರೋ. ಮಿತ್ತಲ್ ಸ್ಟೀಲ್ಸ್‌ನಲ್ಲಿ ನನ್ನ ತಂದೆ ತುಂಬಾ ದೊಡ್ಡ ಹುದ್ದೆಯಲ್ಲಿದ್ದರು. ನಾನು ರಾಯಲ್ ಆಗಿಯೇ ಬೆಳೆದೆ. ಆದರೆ, ನನ್ನ ತಂದೆ ಕೆಲವು ಫಂಡ್‌ಗಳನ್ನು ನಾಮಿನೇಷನ್ ಮಾಡುವುದನ್ನು ಮರೆತ್ತಿದ್ರು. ಆ ಸಮಯದಲ್ಲಿ ತಂದೆ ತೀರಿಕೊಂಡ್ರು. ನಾವು ದೊಡ್ಡ ಮಟ್ಟದಲ್ಲಿ ಹಣಕಾಸು ಬಿಕ್ಕಟ್ಟು ಎದುರಿಸಿದ್ವಿ. ನನ್ನ ತಂದೆ ನನಗೆ ಕಲಿಸಿಕೊಟ್ಟದ್ದು ಉತ್ತಮ ವಿಚಾರ. ಎಲ್ಲೂ ಕೈಚಾಚದೆ, ಧೈರ್ಯವಾಗಿ ಮುನ್ನುಗಲು ತಂದೆ ಹೇಳಿಕೊಟ್ರು. ನನ್ನ ಫ್ಯಾಮಿಲಿಯನ್ನು ಪಣಕ್ಕೆ ಇಟ್ಟಿದ್ದೇನೆ ಎಂದು ಎಲ್ಲರೂ ಹೇಳಿದ್ರೂ ನಾನು ಅದನ್ನು ವಿರೋಧಿಸುವೆ. ನನ್ನ ಹೆಂಡತಿ, ಮಗುವಿಗೆ ಕೊಡುವ ಅಸ್ತ್ರವೂ ಅದೇ. ಸ್ವಾಭಿಮಾನದಿಂದ ಹೇಗೆ ಬದುಕಬೇಕೆಂದು ಆ ಲೆಗೆಸಿ ನನ್ನ ತಂದೆಯಿಂದ ನನ್ನ ಕುಟುಂಬಕ್ಕೆ ಬಂದಿದೆ. ಇವತ್ತಿಗೂ ನಾನು ಗಟ್ಟಿಯಾಗಿದ್ದೇನೆ. ಕೈಕಾಲು ಗಟ್ಟಿಯಾಗಿದೆ. ಮನಸ್ಸು ಗಟ್ಟಿಯಾಗಿದೆ" ಎಂದರು.
ಟ್ಯಾಕ್ಸಿ ಓಡಿಸಿಯೂ ಬದುಕಬಲ್ಲೆ
"ನಟಿಸಬೇಕೆಂದಾದರೆ ನಾನು ಸಿನಿಮಾದಲ್ಲಿಯೇ ಮಾಡಬೇಕೆಂದು ಇಲ್ಲ. ಸೀರಿಯಲ್‌ನಲ್ಲಿ ಬೇಕಾದರೂ ಮಾಡಬಲ್ಲೆ. ನನಗೆ ಕಲಾವಿದನಾಗಿ ಇರಬೇಕೆಂದು ಆಸೆ. ಬದುಕಲೇಬೇಕೆಂದು ಇದ್ದಾಗ ನನಗೆ ಇವತ್ತಿಗೂ ಸಾಕಷ್ಟು ಮಾರ್ಗಗಳು ಇವೆ. ಸಾಕಷ್ಟು ಜನರು ಸ್ನೇಹಿತರು ಇದ್ದಾರೆ. ಕನ್‌ಸ್ಟ್ರಕ್ಷನ್‌ನಲ್ಲಿರುವ ಸ್ನೇಹಿತರು ಇದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ನನಗೆ ಸ್ನೇಹಿತರು ಇದ್ದಾರೆ. ಎಲ್ಲೋ ಹೋಗಿ ಬದುಕು ಹುಡುಕಿಕೊಳ್ಳುವುದು ನನಗೆ ಕಷ್ಟವಾಗದು. ನಾನು ಹೀರೋ ಆಗಿದ್ದೆ, ಅದೇ ಬೇಕು ಇದೇ ಬೇಕು ಎಂದಿಲ್ಲ. ನಾಳೆ ನಾನು ಟ್ಯಾಕ್ಸಿ ಓಡಿಸಲು ಕೂಡ ರೆಡಿ ಸರ್" ಎಂದು ಅಜಯ್ ರಾಯ್ ಮನದ ಮಾತು ಹೇಳಿದ್ದಾರೆ. ಯುದ್ಧಕಾಂಡ ಸಿನಿಮಾವು ಏಪ್ರಿಲ್ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಸಂದರ್ಶನ ಕೃಪೆ: ಬಿ ಗಣಪತಿ ಯೂಟ್ಯೂಬ್ ಚಾನೆಲ್
