ದಸರಾ ಬದಲು ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ; ಶ್ರೀನಗರ ಕಿಟ್ಟಿ ಜತೆಯಾದ ರಚಿತಾ ರಾಮ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಜನವರಿಯಲ್ಲಿ ರಿಲೀಸ್ ಆಗಲಿದೆ. 2011ರಲ್ಲಿ ‘ಸಂಜು ವೆಡ್ಸ್ ಗೀತಾ' ಸಿನಿಮಾ ರಿಲೀಸ್ ಆಗಿತ್ತು. ಈ ಬಾರಿ ಶ್ರೀನಗರ ಕಿಟ್ಟಿ ಜೊತೆ ಜೋಡಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ದಸರಾ ವೇಳೆ ಚಿತ್ರ ಬಿಡುಗಡೆ ಎಂದು ನಿರ್ದೇಶಕ ನಾಗಶೇಖರ್ ಕೆಲವು ತಿಂಗಳುಗಳ ಹಿಂದೆಯೇ ಘೋಷಿಸಿದ್ದರು. ಆದರೆ, ಅಂದುಕೊಂಡಂತೆ ‘ಸಂಜು ವೆಡ್ಸ್ ಗೀತಾ 2’ ಚಿತ್ರ ಬಿಡುಗಡೆಯಾಗಲೇ ಇಲ್ಲ. ಇಷ್ಟಕ್ಕೂ ಚಿತ್ರ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಸಂಜು ವೆಡ್ಸ್ ಗೀತಾ 2’, ಸಂಕ್ರಾಂತಿ ಪ್ರಯುಕ್ತ ಜನವರಿ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾದ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಚಿತ್ರೀಕರಣ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಮುಗಿದಿತ್ತು. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಮುಕ್ತಾಯದ ಹಂತಕ್ಕೆ ಬಂದಿದ್ದು, ಜನವರಿ 10ರಂದು ಚಿತ್ರ ಬಿಡುಗಡೆ ಎಂದು ಇಂದು ಅಧಿಕೃತವಾಗಿ ಘೋಷಿಸಲಾಗಿದೆ.
'ಸಂಜು ವೆಡ್ಸ್ ಗೀತಾ’ 2011ರಲ್ಲಿ ಬಿಡುಗಡೆಯಾಗಿತ್ತು
‘ಸಂಜು ವೆಡ್ಸ್ ಗೀತಾ’ ಚಿತ್ರವು 2011ರಲ್ಲಿ ಬಿಡುಗಡೆಯಾಗಿತ್ತು. ಸಂಜು ಮತ್ತು ಗೀತಾ ಎಂಬ ಯುವ ಪ್ರೇಮಿಗಳ ದುರಂತಕಥೆಯಾದ ‘ಸಂಜು ವೆಡ್ಸ್ ಗೀತಾ’ ದೊಡ್ಡ ಯಶಸ್ಸು ಕಂಡಿತ್ತು. ಆ ಚಿತ್ರದ ಹಾಡುಗಳು ಈಗಲೂ ಸಾಕಷ್ಟು ಜನಪ್ರಿಯವಾಗಿವೆ. ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಪ್ರೇಮಕಾವ್ಯವನ್ನು ನಾಗಶೇಖರ್ ಈ ಚಿತ್ರದಲ್ಲಿ ಹೇಳಹೊರಟಿದ್ದಾರಂತೆ.
ಈ ಚಿತ್ರದ ಕುರಿತು ಮಾತನಾಡಿರುವ ಶ್ರೀನಗರ ಕಿಟ್ಟಿ, ‘ಚಿತ್ರದಲ್ಲಿ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾಗಶೇಖರ್ ಬಹಳ ಅಪ್‍ಡೇಟ್ ಆಗಿ ಈ ಚಿತ್ರ ಮಾಡಿದ್ದಾರೆ. ನಾಗಶೇಖರ್ ತಮ್ಮ ಚಿತ್ರಗಳಲ್ಲಿ ನಾಯಕಿಯರನ್ನ ಮುಟ್ಟೋದಕ್ಕೆ ಬಿಡಲ್ಲ. ಈ ಚಿತ್ರದಲ್ಲೂ ನಾನು ನಾಯಕಿಯನ್ನು ಮುಟ್ಟಿಲ್ಲ. ‘ಸಂಜು ವೆಡ್ಸ್ ಗೀತಾ’ಗಿಂತ ಈ ಹಾಡುಗಳು ಹಿಟ್ ಆಗುತ್ತವೆ ಎಂಬ ವಿಶ್ವಾಸ ನನಗಿದೆ. ಮೊದಲ ಚಿತ್ರದಲ್ಲಿದ್ದ ಬಹಳಷ್ಟು ಜನ ಇಲ್ಲೂ ಮುಂದುವರೆದಿದ್ದಾರೆ. ಇಲ್ಲಿ ರೇಶ್ಮೆ ಬೆಳೆಗಾರನಾಗಿ ನಾನು ಕಾಣಿಸಿಕೊಂಡಿದ್ದೇನೆ’ ಎಂದರು.
ತಾರಾಗಣ
ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ.
ಅಂದಹಾಗೆ, ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಜೊತೆಗೆ ಅದೇ ದಿನ ಶರಣ್ ಅಭಿನಯದ ‘ಛೂ ಮಂತರ್’ ಸಹ ಬಿಡುಗಡೆಯಾಗುತ್ತಿದೆ.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: ಡಿಸೆಂಬರ್ನಲ್ಲಿ ಒಟಿಟಿಗೆ ಬರಲಿರುವ ಕನ್ನಡ ಸಿನಿಮಾಗಳು; ಭೈರತಿ ರಣಗಲ್, ಮರ್ಫಿ ಜೊತೆಗೆ ಮತ್ತೊಂದು ಚಿತ್ರ