ವೈರಲ್ ಆಗುತ್ತಿದೆ ಸಾನ್ಯ ಮಲ್ಹೋತ್ರಾ ಅಭಿನಯ Mrs ಸಿನಿಮಾದ ದೃಶ್ಯಗಳು; ವಿವಾಹಿತ ಮಹಿಳೆಯರ ಕಷ್ಟದ ದರ್ಶನ ಮಾಡಿಸಿದ ಚಿತ್ರ ಇದು
ಮದುವೆಯಾದ ಸಾಕಷ್ಟು ಮಹಿಳೆಯರು ತಮ್ಮ ನಿತ್ಯ ಜೀವನದಲ್ಲಿ ಏನೆಲ್ಲ ಕಷ್ಟ ಅನುಭವಿಸುತ್ತಾರೆ ಎಂಬ ಸತ್ಯ ದರ್ಶನ ಮಾಡಿಸುವ ಸಿನಿಮಾ Mrs. ಈ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಸಾನ್ಯ ಮಲ್ಹೋತ್ರಾ ಅಭಿನಯ ಸಿನಿಮಾ Mrs (ಶ್ರೀಮತಿ) ಸೀನ್‌ಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಮದುವೆಯಾದ ಹೆಣ್ಣಿನ ಸ್ಥಿತಿ ಹಾಗೂ ವಾಸ್ತವವನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಎಲ್ಲ ಮಹಿಳೆಯರು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಹಂತದಲ್ಲಿ ಅನುಭವಿಸುವ ನೋವನ್ನು, ತಿರಸ್ಕಾರವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಸಾನ್ಯ ಮಲ್ಹೋತ್ರಾ ಅಭಿನಯಕ್ಕಿರುವ ಶಕ್ತಿಯೇ ಈ ಸಿನಿಮಾವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿದೆ ಎಂಬ ಮಾತೂ ಕೇಳಿ ಬರುತ್ತಿದೆ.
ಹೆಣ್ಣಿನ ಬದುಕಿನ ಕರಿನೆರಳು
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ದೃಶ್ಯಗಳಲ್ಲಿ ಕೆಲವೊಂದು ತುಣುಕುಗಳು ಭಾರೀ ಚರ್ಚೆಯಾಗುತ್ತಿದೆ. ಅಂತಹ ಕೆಲವು ವೈರಲ್ ದೃಶ್ಯಗಳಲ್ಲಿ ಕಾಣಿಸುವುದು ಹೆಣ್ಣಿನ ಬದುಕಿನ ಕರಿನೆರಳು. ಹೆಣ್ಣಿನ ಜೀವನದ ಹಲವು ಭಾಗಗಳು ಕಳೆದು ಹೋಗುವುದು ಅಡುಗೆ ಮನೆಯಲ್ಲಿ. ಇತ್ತೀಚಿನ ದಿನಗಳಲ್ಲಿ ಹೆಂಗಳೆಯರೂ ಕೆಲಸಕ್ಕೆ ಹೋಗಿ ಸ್ವಾಲಂಭಿಗಳಾಗಬೇಕು ಎನ್ನುವ ಹಂಬಲದಿಂದ ಹೊರ ಜಗತ್ತಿಗೆ ಪಾದಾರ್ಪಣೆ ಮಾಡಿದರೂ ಸಹ ಅಡುಗೆ ಮಾಡುವವರು ಯಾರು? ಎಂಬ ಪ್ರಶ್ನೆ ಉದ್ಭವವಾದರೆ ಅದಕ್ಕೆ ಉತ್ತರ ಸ್ತ್ರೀ ಆಗಿರುತ್ತಾಳೆ. ಮನೆಯಲ್ಲಿ ಅಡುಗೆ ಮಾಡುವವರು ಯಾರು ಎಂಬ ಪ್ರಶ್ನೆ ಬಂದರೆ ಮೊದಲು ಅಕ್ಕನೋ, ತಂಗಿಯೋ, ಅಮ್ಮನೋ ಯಾರದೋ ಹೆಸರು ಬಂದೇ ಬರುತ್ತದೆ. ಆ ನಂತರದಲ್ಲಿ ಗಂಡಸರ ಪಾಳಿ. ಹೀಗುರುವಾಗ ವೈರಲ್ ಆದ Mrs ಸಿನಿಮಾ ದೃಶ್ಯಗಳೂ ಸಹ ಇದ್ದಕ್ಕೇ ಸಂಬಂಧಿಸಿದೆ.
ವೈರಲ್ ಆದ ದೃಶ್ಯಗಳಲ್ಲೇನಿದೆ?
ಗಂಡ ಮತ್ತು ಮಾವ ಊಟಕ್ಕೆ ಕುಳಿತುಕೊಂಡಿರುತ್ತಾರೆ. ಆಗ ರಿಚಾ (ಸನ್ಯಾ ಮಲ್ಹೋತ್ರಾ) ಊಟ ತಂದು ಬಡಿಸುತ್ತಾಳೆ. ಗ್ರೀನ್ ಚಟ್ನಿ ಮಾಡಿರುತ್ತಾಳೆ. ಆದರೆ ಅದು ಅವಳ ಮಾವನಿಗೆ ಇಷ್ಟ ಆಗುವುದಿಲ್ಲ. ನೀನು ಗ್ರೀನ್ ಚಟ್ನಿ ಮಾಡುವಾಗ ಕೈಯ್ಯಲ್ಲೇ ಅರೆದು ಮಾಡಬೇಕು ಆಗ ಮಾತ್ರ ಅದು ರುಚಿ ಎನ್ನುತ್ತಾರೆ. ಅವಳ ಗಂಡನೂ ಮಾವನ ಪರವಾಗಿಯೇ ಮಾತಾಡುತ್ತಾ ಹೊರತಾಗಿ ತನ್ನ ಹೆಂಡತಿಯ ಪರ ನಿಲ್ಲುವುದಿಲ್ಲ. ಮಾವನ ಜತೆ ಸೇರಿ ಅವನೂ ಅದೇ ರೀತಿ ಮಾತುಗಳನ್ನೇ ಹೇಳುತ್ತಾನೆ. ಇನ್ನೊಂದು ದಿನ ಬಿರಿಯಾನಿ ಮಾಡಿದಾಗ ಅದನ್ನು ಕುಕ್ಕರ್‍ನಲ್ಲಿ ಮಾಡಬಾರದಿತ್ತು ಎಂಬ ಮಾತು ಬರುತ್ತದೆ. ಹೀಗೆ ಪ್ರತಿದಿನವೂ ಅವಳು ಸೋಲುವಂತೆ ಮಾಡುತ್ತಾರೆ. ರಿಚಾ ಎಷ್ಟೇ ಉತ್ತಮವಾಗಿ ಅಡುಗೆ ಮಾಡಿದರೂ ಅದರಲ್ಲೊಂದು ತಪ್ಪು ಕಂಡುಹಿಡಿಯುತ್ತಾರೆ. ಹೀಗೆ ಅವಳ ಆಸೆಗಳನ್ನೆಲ್ಲ ಬಿಟ್ಟು ಮನೆ ಕೆಲಸದಲ್ಲೇ ಅವಳ ಬದುಕು ಕಳೆಯುತ್ತದೆ.
ಗಂಡನಿಂದ ತಿರಸ್ಕಾರ
ಮದುವೆಯಾಗಿ ಹೊಸದಾಗಿ ಗಂಡನ ಮನೆಗೆ ಬಂದ ರಿಚಾ ತನ್ನ ಗಂಡನಿಗಾಗಿ ಕಾಫಿ ಮಾಡುತ್ತಾಳೆ. ಒಂದು ಕಪ್ ಮಾಡಿದ ಕಾಫಿಯನ್ನು ತನ್ನ ಗಂಡನಿಗೆ ಕೊಡುತ್ತಾಳೆ. ಅವನು ಪ್ರೀತಿಯಿಂದ ಅರ್ಧ ಕಪ್ ಅವಳಿಗೆ ಕೊಡುತ್ತಾನೆ. ಆದರೆ ನಂತರದ ದಿನಗಳಲ್ಲಿ ಅವಳು ಆಸೆಯಿಂದ ಇನ್ನೊಂದು ಕಪ್ ಇಟ್ಟುಕೊಂಡು ಕಾದರೆ ಅವನು ಮಾತ್ರ ಇವಳನ್ನು ಲಕ್ಷಿಸದೆ ತಾನೇ ಪೂರ್ತಿ ಕುಡಿಯುತ್ತಾ, ಅವಳ ಹತ್ತಿರ ಮಾತೂ ಆಡದೆ ಅಲ್ಲಿಂದ ಹೋಗುತ್ತಾನೆ. ಇನ್ನು ತನಗೆ ಬೇಕಾದಾಗೆಲ್ಲ ಅವಳು ತನ್ನ ಜತೆ ಸಹಕರಿಸಬೇಕು, ಅವನ ಆಸೆ ಪೂರೈಸಬೇಕು ಎಂಬುದನ್ನೇ ರಿಚಾ ಪತಿ ದಿವಾಕರ್ ಬಯಸುತ್ತಾನೆ.
ಗಂಡು ಮಕ್ಕಳನ್ನು ಬೆಳೆಸುವ ರೀತಿ ಬದಲಾಗಬೇಕು
ತಾನು ಗಂಡನ ಮನೆಯಲ್ಲಿ ಅವರು ಕೊಡುವ ಕಷ್ಟವನ್ನೆಲ್ಲ ಸಹಿಸಿಕೊಂಡು ಬದುಕಲು ಸಾಧ್ಯವಿಲ್ಲ ಎಂಬ ಪ್ರಸಂಗ ಬಂದಾಗ ಅವಳು ತನ್ನ ತವರಿಗೆ ಬರುತ್ತಾಳೆ. ಅಪ್ಪ, ಅಮ್ಮನ ಜತೆ ಕೂತು ಮಾತಾಡುತ್ತಿರುವ ಸಂದರ್ಭದಲ್ಲಿ ತಮ್ಮ ಬರುತ್ತಾನೆ. ಅವನು ನೀನು ಯಾವಾಗ ಬಂದೆ ಎಂಬ ಮಾತು ಕೇಳುತ್ತಾ, ನನಗೆ ದಾಹ ಆಗುದೆ ನೀರು ಬೇಕು ಎಂದು ಕೇಳುತ್ತಾನೆ. ಆಗ ರಿಚಾಳ ತಾಯಿ “ಸಮಾಧಾನ ಮಾಡಿಕೋ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಈಗ ನೀನು ನೀರು ಕುಡಿ, ತಮ್ಮನಿಗೂ ನೀರು ತಂದುಕೊಡು” ಎನ್ನುತ್ತಾರೆ. ಒಟ್ಟಿನಲ್ಲಿ ಮತ್ತೆ ಗಂಡಿನ ಸೇವೆ ಮಾಡುವುದನ್ನೇ ಎಲ್ಲೆಡೆ ಹೇಳುತ್ತಾರೆ ಎಂದು ಅವಳಿಗೆ ಕೋಪ ಬರುತ್ತದೆ.
ಒಟಿಟಿಯಲ್ಲಿ ವೀಕ್ಷಿಸಿ Mrs
ನೀವು ಈ ಸಿನಿಮಾವನ್ನು ಜೀ5 ಒಟಿಟಿಯಲ್ಲಿ ವೀಕ್ಷಿಸಬಹುದು.
