ಸಾನ್ಯ ಮಲ್ಹೋತ್ರಾ ಅಭಿನಯದ Mrs ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಚಲನಚಿತ್ರ; ಈ ಒಟಿಟಿಯಲ್ಲಿ ಸಿನಿಮಾ ಲಭ್ಯ
ಸಾನ್ಯ ಮಲ್ಹೋತ್ರಾ ಅಭಿನಯದ Mrs (ಶ್ರೀಮತಿ) ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದೆ. ಮಲಯಾಳಂ ರಿಮೇಕ್ ಸಿನಿಮಾ ಇದಾಗಿದ್ದು, ಈಗ ಹಿಟ್ ಆಗಿದೆ. ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಚಿತ್ರವಾಗಿದೆ.

ಒಟಿಟಿಯಲ್ಲಿ ಕ್ರೈಮ್ ಥ್ರಿಲ್ಲರ್ ಹಾಗೂ ಭಯಹುಟ್ಟಿಸುವಂತ ಹಾರರ್ ಸಿನಿಮಾಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದವು. ಆದರೆ, ಈಗ ಫ್ಯಾಮಿಲಿ ಡ್ರಾಮಾ ಸಿನಿಮಾವೊಂದು ಟ್ರೆಂಡ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ Mrs ಸಿನಿಮಾ ಜನಪ್ರಿಯತೆ ಗಳಿಸಿದೆ. ಸಾಕಷ್ಟು ಜನ ಈ ಸಿನಿಮಾ ಯಾವ ಒಟಿಟಿಯಲ್ಲಿ ಬಿಡುಗಡೆಯಾಗಿದೆ ಎಂದು ಹುಡುಕುತ್ತಿದ್ದಾರೆ. ಇದು ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಚಿತ್ರ ಎಂದು ಹೇಳಲಾಗುತ್ತಿದೆ. ಈ ಹುಡುಕಾಟವೇ.. ಸಿನಿಮಾವು ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಎಂಬುದನ್ನು ತಿಳಿಸಿಬಿಡುತ್ತದೆ. ವಿಶೇಷವಾಗಿ ಸಾನ್ಯಾ ಮಲ್ಹೋತ್ರಾ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಒಟಿಟಿಯಲ್ಲಿ ಲಭ್ಯ
ಸಾನ್ಯ ಅಭಿನಯದ Mrs ಸಿನಿಮಾ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮದುವೆಯಾದ ಹೆಣ್ಣೊಬ್ಬಳ ಕಷ್ಟವನ್ನು ಸ್ಪಷ್ಟವಾಗಿ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಜೀ5 ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, 2025ರಲ್ಲಿ ಜೀ5ಗೆ ಯಶಸ್ಸು ನೀಡಿದ ಸಿನಿಮಾ ಇದಾಗಿದೆ.
ವೈರಲ್ ಆದ ದೃಶ್ಯಗಳಲ್ಲೇನಿದೆ?
ಗಂಡ ಮತ್ತು ಮಾವ ಊಟಕ್ಕೆ ಕುಳಿತುಕೊಂಡಿರುತ್ತಾರೆ. ಆಗ ರಿಚಾ (ಸನ್ಯಾ ಮಲ್ಹೋತ್ರಾ) ಊಟ ತಂದು ಬಡಿಸುತ್ತಾಳೆ. ಗ್ರೀನ್ ಚಟ್ನಿ ಮಾಡಿರುತ್ತಾಳೆ. ಆದರೆ ಅದು ಅವಳ ಮಾವನಿಗೆ ಇಷ್ಟ ಆಗುವುದಿಲ್ಲ. ನೀನು ಗ್ರೀನ್ ಚಟ್ನಿ ಮಾಡುವಾಗ ಕೈಯ್ಯಲ್ಲೇ ಅರೆದು ಮಾಡಬೇಕು ಆಗ ಮಾತ್ರ ಅದು ರುಚಿ ಎನ್ನುತ್ತಾರೆ. ಅವಳ ಗಂಡನೂ ಮಾವನ ಪರವಾಗಿಯೇ ಮಾತಾಡುತ್ತಾ ಹೊರತಾಗಿ ತನ್ನ ಹೆಂಡತಿಯ ಪರ ನಿಲ್ಲುವುದಿಲ್ಲ. ಮಾವನ ಜತೆ ಸೇರಿ ಅವನೂ ಅದೇ ರೀತಿ ಮಾತುಗಳನ್ನೇ ಹೇಳುತ್ತಾನೆ. ಇನ್ನೊಂದು ದಿನ ಬಿರಿಯಾನಿ ಮಾಡಿದಾಗ ಅದನ್ನು ಕುಕ್ಕರ್‍ನಲ್ಲಿ ಮಾಡಬಾರದಿತ್ತು ಎಂಬ ಮಾತು ಬರುತ್ತದೆ. ಹೀಗೆ ಪ್ರತಿದಿನವೂ ಅವಳು ಸೋಲುವಂತೆ ಮಾಡುತ್ತಾರೆ. ರಿಚಾ ಎಷ್ಟೇ ಉತ್ತಮವಾಗಿ ಅಡುಗೆ ಮಾಡಿದರೂ ಅದರಲ್ಲೊಂದು ತಪ್ಪು ಕಂಡುಹಿಡಿಯುತ್ತಾರೆ. ಹೀಗೆ ಅವಳ ಆಸೆಗಳನ್ನೆಲ್ಲ ಬಿಟ್ಟು ಮನೆ ಕೆಲಸದಲ್ಲೇ ಅವಳ ಬದುಕು ಕಳೆಯುತ್ತದೆ.
ಮಿಸೆಸ್ ಸಿನಿಮಾ ಬಗ್ಗೆ
Mrs ಚಿತ್ರವನ್ನು ಆರತಿ ಕಡವ್ ನಿರ್ದೇಶಿಸಿದ್ದಾರೆ. ಈ ಚಿತ್ರವು 2021ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ ‘ದಿ ಗ್ರೇಟ್ ಇಂಡಿಯನ್ ಕಿಚನ್’ ನ ರಿಮೇಕ್ ಆಗಿದೆ. ಆ ಸಮಯದಲ್ಲಿ ಈ ಚಿತ್ರವು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು, ಅದೇ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗಿದ್ದು, ಈ ಸಿನಿಮಾ ಕೂಡ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ ಸಾನ್ಯ ಮಲ್ಹೋತ್ರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
2023ರಲ್ಲಿ 'ದಿ ಗ್ರೇಟ್ ಇಂಡಿಯನ್ ಕಿಚನ್' ಅದೇ ಚಿತ್ರವನ್ನು ತಮಿಳಿನಲ್ಲಿಯೂ ರಿಮೇಕ್ ಮಾಡಲಾಗಿತ್ತು. ಈಗ ಇದನ್ನು Mrs ಎಂದು ಹಿಂದಿಯಲ್ಲಿ ತರಲಾಗಿದೆ. ಈ ಸಿನಿಮಾವನ್ನು ನೇರವಾಗಿ ಜೀ5 ಒಟಿಟಿಯಲ್ಲಿ ಸ್ಟ್ರೀಮ್ ಮಾಡಲಾಗಿದೆ. ಸಾನ್ಯ ಮಲ್ಹೋತ್ರಾ, ನಿಶಾಂತ್ ದಹಿಯಾ ಮತ್ತು ಕನ್ವಾಲ್ಜೀತ್ ಸಿಂಗ್ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನೃತ್ಯ ಶಿಕ್ಷಕಿಯಾಗಿರುವ ಹುಡುಗಿಯ ಜೀವನವು ಮದುವೆಯ ನಂತರ ಹೇಗೆ ಬದಲಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಈ ಚಿತ್ರವು ನ್ಯೂಯಾರ್ಕ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿದೆ. ಚಿತ್ರವನ್ನು ಹಿಂದಿ ಪ್ರೇಕ್ಷಕರಿಗೆ ಹತ್ತಿರವಾಗಿಸಲು ಉತ್ತರ ಭಾರತದಲ್ಲಿ ಕಥೆಯನ್ನು ಚಿತ್ರೀಕರಿಸಲಾಗಿದೆ ಎಂದು ನಿರ್ದೇಶಕಿ ಆರತಿ ಹೇಳಿದ್ದಾರೆ.
