Jyothi Kiran Interview: ನನಗೆ ಸಾವಿನ ಅನುಭವ ಆದ್ಮೇಲೆ ಲೈಫ್ ತುಂಬಾ ಬದಲಾಗಿದೆ: ಜ್ಯೋತಿ ಕಿರಣ್ ಸಂದರ್ಶನ
ಕನ್ನಡ ಸುದ್ದಿ  /  ಮನರಂಜನೆ  /  Jyothi Kiran Interview: ನನಗೆ ಸಾವಿನ ಅನುಭವ ಆದ್ಮೇಲೆ ಲೈಫ್ ತುಂಬಾ ಬದಲಾಗಿದೆ: ಜ್ಯೋತಿ ಕಿರಣ್ ಸಂದರ್ಶನ

Jyothi Kiran Interview: ನನಗೆ ಸಾವಿನ ಅನುಭವ ಆದ್ಮೇಲೆ ಲೈಫ್ ತುಂಬಾ ಬದಲಾಗಿದೆ: ಜ್ಯೋತಿ ಕಿರಣ್ ಸಂದರ್ಶನ

Jyothi Kiran Interview: ‘ಸೀತಾರಾಮ’ ಧಾರಾವಾಹಿಯಲ್ಲಿ ಸುಲೋಚನಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಜ್ಯೋತಿ ಕಿರಣ್‌ ಅವರು ರಿಯಲ್‌ ಲೈಫ್‌, ಭಗವದ್ಗೀತೆ ಎನ್ನುತ್ತ ಸೀರಿಯಲ್‌ನಿಂದಾಚೆ ಮಾತನಾಡಿದ್ದಾರೆ.

ಸೀತಾರಾಮ ಧಾರಾವಾಹಿ ಖ್ಯಾತಿಯ ಜ್ಯೋತಿ ಕಿರಣ್‌ ಸಂದರ್ಶನ
ಸೀತಾರಾಮ ಧಾರಾವಾಹಿ ಖ್ಯಾತಿಯ ಜ್ಯೋತಿ ಕಿರಣ್‌ ಸಂದರ್ಶನ (PC: Jyothi Kiran Instagram)

Seetharaama Serial Jyothi Kiran Interview: ʼಸೀತಾರಾಮʼ ಧಾರಾವಾಹಿಯಲ್ಲಿ ಸುಲೋಚನಾ ಪಾತ್ರದಲ್ಲಿ ನಟಿ ಜ್ಯೋತಿ ಕಿರಣ್‌ ಅವರು ಅಭಿನಯಿಸುತ್ತಿದ್ದಾರೆ. ಸುಲೋಚನಾಗೆ ಹಣದ ಆಸೆ. ಹೀಗಾಗಿ ಅವಳು ನಾದಿನಿ ಸೀತಾಳನ್ನು ಕೂಡ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಬಲ್ಲಳು.‌ ಪಾಸಿಟಿವ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಜ್ಯೋತಿ ಕಿರಣ್ ಈ ಬಾರಿ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಅವರು ಜೀವನದ ವಾಸ್ತವಿಕತೆ, ಭಗವದ್ಗೀತೆ, ಸೋಶಿಯಲ್‌ ಮೀಡಿಯಾ ಕುರಿತಂತೆ Panchami Talks ಜೊತೆಗೆ ಮಾತನಾಡಿದ್ದಾರೆ.

ಈ ಹಿಂದಿನ ಜೀವನಕ್ಕೂ, ಇಂದಿನ ಜೀವನಕ್ಕೂ ಏನು ವ್ಯತ್ಯಾಸ ಇದೆ?

ತುಂಬ ವ್ಯತ್ಯಾಸ ಇದೆ. ನನಗೆ ಸಾವಿನ ಅನುಭವ ಆಗಿದೆ, ಇದನ್ನೇ ವೈದ್ಯರೇ ಹೇಳಿದ್ದಾರೆ. ಆಪರೇಶನ್‌ ಥಿಯೇಟರ್‌ನಲ್ಲಿ ಇರುವವರಿಗೆ ಈ ರೀತಿ ಅನುಭವ ಆಗುವುದಂತೆ. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋಗಳು ಇರುತ್ತವೆ. ಬಿಳಿ ಕಪ್ಪಾದಂತೆ, ಕಪ್ಪು ಬಿಳಿಯಾದಂತೆ ನನ್ನ ಬದುಕು ಬದಲಾಗಿದೆ. ಇಂದು ಜೀವನ ತುಂಬ ಚೆನ್ನಾಗಿದೆ. ನಾನು ಯಾವುದಕ್ಕೂ ಈಗ ತಲೆ ಕೆಡಿಸಿಕೊಳ್ಳೋದಿಲ್ಲ. ಈ ಹಿಂದೆಯೇ ಈ ರೀತಿ ಅನುಭವ ಆಗಬೇಕಿತ್ತು ಅಂತ ಅನಿಸುತ್ತದೆ. ಆದರೆ ಯಾರಿಗೂ ಈ ರೀತಿ ಆಗೋದು ಬೇಡ.

ಜೀವನದಲ್ಲಿ ಏನೇನೋ ಕಾರಣಕ್ಕೆ ಜನರು ಅಳುತ್ತಾರೆ..

ಹೌದು, ಆದರೆ ಈ ಎಲ್ಲ ಸಮಸ್ಯೆಗಳು, ಬೇಸರಕ್ಕೆ ಭಗವದ್ಗೀತೆಯೇ ಮದ್ದು. ಚಿಕ್ಕ ವಯಸ್ಸಿನಿಂದ ದೊಡ್ಡವರೆಗೂ ಕೂಡ ಈ ಪುಸ್ತಕವನ್ನು ಓದಬೇಕು. ಹಿತ್ತಲ ಗಿಡ ಮದ್ದಲ್ಲ ಅಂತ ಹೇಳ್ತಾರೆ. ನಮ್ಮ ಭಾರತೀಯರು ಯಾಕೆ ಈ ಪುಸ್ತಕವನ್ನು ಓದಲ್ಲ, ಅರ್ಥಮಾಡಿಕೊಳ್ಳಲ್ಲ ಅಂತ ಅನಿಸುತ್ತದೆ. ವಯಸ್ಸಾದವರು ಭಗವದ್ಗೀತೆ ಓದಬೇಕು ಅಂತ ಮಾತು ಬರುತ್ತದೆ. ಆದರೆ ಇದು ತಪ್ಪು. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಭಗವದ್ಗೀತೆ ಹೇಳಿಕೊಡಬೇಕು. ಒಂದೇ ನಕ್ಷತ್ರ, ಒಂದೇ ರಾಶಿಯಲ್ಲಿ ಹುಟ್ಟಿದವರ ಹಣೆಬರಹ ಬೇರೆ ಇರುತ್ತದೆ. ಯಾಕೆ ಎನ್ನೋದನ್ನು ಭಗವದ್ಗೀತೆ ಓದಿ ತಿಳಿದುಕೊಳ್ಳಬಹುದು.

ಕಷ್ಟಗಳ ಬಗ್ಗೆ ನಿಮ್ಮ ಉತ್ತರ ಏನು?

ಕಷ್ಟ ಬರಲಿ, ಸುಖ ಬರಲಿ ಈ ಸಮಯ ಕಳೆದು ಹೋಗುವುದು ಎಂದು ಶ್ರೀಕೃಷ್ಣ ಹೇಳಿದ್ದಾನೆ. ಸುಖ ಬಂದಾಗ ಈ ಸಮಯ ಕಳೆದುಹೋಗುತ್ತದೆ ಅಂತ ಬೇಸರ ಆಗುತ್ತದೆ. ಎಲ್ಲರಿಗೂ ಸುಖ ಬೇಕು ಎನ್ನೋದಿರುತ್ತದೆ. ಸುಖ ಬಂದಾಗ ಹಿಗ್ಗಬಾರದು, ದುಃಖ ಬಂದಾಗ ಕುಗ್ಗಬಾರದು. ಸುಖ-ದುಃಖವನ್ನು ಸರಿಸಮಾನವಾಗಿ ನೋಡಿದಾಗ ನಮಗೆ ಜೀವನ ತುಂಬ ಸುಂದರವಾಗಿ ಕಾಣುತ್ತದೆ.

ವೀಕ್ಷಕರಿಗೆ ಏನು ಹೇಳ್ತೀರಿ?

ಈ ಕೆಲಸಕ್ಕಾಗಲೀ, ಹೆಸರಿಗಾಗಲೀ ಭಗವಂತ ನಮ್ಮನ್ನು ಇಲ್ಲಿಗೆ ಕಳಿಸಿರೋದಿಲ್ಲ. ಮಟಿರಿಯಲ್‌ ಜೀವನಕ್ಕೋಸ್ಕರ ನಾವು ಒದ್ದಾಡುತ್ತಿರುತ್ತೇವೆ. ಸಂತೋಷಕ್ಕೆ ಲಿಮಿಟ್‌ ಏನು ಎನ್ನೋದನ್ನು ನಾವು ಕಂಡುಕೊಳ್ಳಬೇಕು. ನಮ್ಮ ಜನ್ಮದ ಉದ್ದೇಶ ಏನು ಅಂತ ಅರ್ಥ ಮಾಡಿಕೊಳ್ಳಬಹುದು. ನಮ್ಮಹತ್ರ ಇರೋದಕ್ಕೆ ನಾವು ಖುಷಿಪಡೋದಿಲ್ಲ, ಆದರೆ ನಮ್ಮ ಬಳಿ ಇಲ್ಲದೆ ಇರೋದು ಬೇರೆಯವರ ಹತ್ರ ಇದೆ ಅಂತ ಬೇಸರ ಪಡ್ತೀವಿ. ನಾವು ಯಾವುದ್ಯಾವುದಕ್ಕೋ ಕೊರಗ್ತೀವಿ, ನಮ್ಮ ಬಳಿ ಇರೋದಕ್ಕೆ ಖುಷಿ ಇಲ್ಲದೆ ಇದ್ರೆ ಪ್ರಯೋಜನ ಇಲ್ಲ.

ನಿಮ್ಮ ಪಾತ್ರಗಳನ್ನು ನೋಡಿ ಜನರು ನೀವು ರಿಯಲ್‌ ಆಗಿಯೂ ಹಾಗೆ ಅಂತ ಅಂದುಕೊಳ್ತಾರೆ..

ನಾವು ಕೂಡ ನಿಮ್ಮಂತೆಯೇ. ನಾನು ಮನೆಯಲ್ಲಿ ಎಲ್ಲ ಕೆಲಸ ಮಾಡ್ತೀನಿ, ಮಗಳನ್ನು ನೋಡಿಕೊಳ್ತೀನಿ..ನಾವು ತುಂಬ ವಿಶೇಷ ಅಲ್ಲ.

ಸೋಶಿಯಲ್‌ ಮೀಡಿಯಾದಲ್ಲಿ ಹಾಕುವ ಫೋಟೋಗಳನ್ನು ನೋಡಿ ಬೇರೆಯವರ ಜೀವನ ತುಂಬ ಸುಂದರವಾಗಿರುತ್ತದೆ ಅಂತ ಜನರು ಅಂದುಕೊಳ್ತಾರೆ..

ಆ ಫೋಟೋದ ಹಿಂದೆ ಸಾಕಷ್ಟು ಕಷ್ಟಗಳಿರುತ್ತವೆ. ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳೋದೆಲ್ಲ ಸತ್ಯ ಅಲ್ಲ.

ದುಡುಕಿನ ನಿರ್ಧಾರಗಳನ್ನು ತಗೊಂಡು ಯುವಜನತೆ ಎಡವುದುಂಟು..

ಹೌದು, ಮನೆಯಲ್ಲಿ ಪಾಲಕರು ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕು. ಆದರೆ ಸಹವಾಸದಿಂದ ಕೆಡವುದುಂಟು. ಹೀಗಾಗಿ ಎಷ್ಟು‌ ಹುಷಾರಾಗಿದ್ರೂ ಕೂಡ ಕಡಿಮೆ ಎನ್ನುವ ಹಾಗೆ ಆಗಿದೆ.

ಸಂದರ್ಶನ: ಪದ್ಮಶ್ರೀ ಭಟ್

Whats_app_banner