ಆ ಒಂದು ಸಾವು ನನ್ನ ಎಲ್ಲ ಮಂಗಾಟಗಳಿಗೆ ಬ್ರೇಕ್‌ ಹಾಕಿತ್ತು; ಸೀತಾ ರಾಮ ಸೀರಿಯಲ್‌ ಮೇಘಶ್ಯಾಮ್‌ ಪಾತ್ರಧಾರಿ ನಾಗಾರ್ಜುನ್‌ ಸಂದರ್ಶನ
ಕನ್ನಡ ಸುದ್ದಿ  /  ಮನರಂಜನೆ  /  ಆ ಒಂದು ಸಾವು ನನ್ನ ಎಲ್ಲ ಮಂಗಾಟಗಳಿಗೆ ಬ್ರೇಕ್‌ ಹಾಕಿತ್ತು; ಸೀತಾ ರಾಮ ಸೀರಿಯಲ್‌ ಮೇಘಶ್ಯಾಮ್‌ ಪಾತ್ರಧಾರಿ ನಾಗಾರ್ಜುನ್‌ ಸಂದರ್ಶನ

ಆ ಒಂದು ಸಾವು ನನ್ನ ಎಲ್ಲ ಮಂಗಾಟಗಳಿಗೆ ಬ್ರೇಕ್‌ ಹಾಕಿತ್ತು; ಸೀತಾ ರಾಮ ಸೀರಿಯಲ್‌ ಮೇಘಶ್ಯಾಮ್‌ ಪಾತ್ರಧಾರಿ ನಾಗಾರ್ಜುನ್‌ ಸಂದರ್ಶನ

ಸಂದರ್ಶನ ಪದ್ಮಶ್ರೀ ಭಟ್‌: ಸೀತಾರಾಮ, ಮಗಳು ಜಾನಕಿ ಧಾರಾವಾಹಿ ಖ್ಯಾತಿಯ ನಟ ನಾಗಾರ್ಜುನ ಬಿಆರ್‌ ಅವರು ಕಿಚ್ಚ ಸುದೀಪ್‌ ಜೊತೆಗೆ ಮ್ಯಾಕ್ಸ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಇಲ್ಲಿಯವರೆಗಿನ ನಟನಾ ಜರ್ನಿಯನ್ನು ಮೆಲುಕು ಹಾಕುತ್ತ ಮ್ಯಾಕ್ಸ್‌ ಚಿತ್ರದ ವಿಶೇಷತೆ ಬಗ್ಗೆಯೂ ಮಾತನಾಡಿದ್ದಾರೆ.

ನಾಗಾರ್ಜುನ್‌ ಬಿ ಆರ್‌ ಸಂದರ್ಶನ
ನಾಗಾರ್ಜುನ್‌ ಬಿ ಆರ್‌ ಸಂದರ್ಶನ

Seetha Rama Serial Nagarjun BR Interview: ಸೀತಾರಾಮ ಧಾರಾವಾಹಿಯಲ್ಲಿ ಮೇಘಶ್ಯಾಮ್‌ ಪಾತ್ರದಲ್ಲಿ ನಟಿಸುತ್ತಿದ್ದ ನಾಗಾರ್ಜುನ ಬಿಆರ್‌ ಅವರು ಕಿಚ್ಚ ಸುದೀಪ್‌ ನಟನೆಯ Max ಸಿನಿಮಾದಲ್ಲಿ ನಟಿಸಿದ್ದಾರೆ. ಈ ನಡುವೆ ಇದೇ ನಾಗಾರ್ಜುನ್‌, ತಮ್ಮ ಜರ್ನಿಯನ್ನೊಮ್ಮೆ ಮೆಲುಕು ಹಾಕಿದ್ದಾರೆ. ನಟನೆ ಆರಂಭವಾಗಿದ್ದು ಹೇಗೆ? ಇಲ್ಲಿಯವರೆಗಿನ ನಟನಾ ಜರ್ನಿ ಹೇಗೆ ಸಾಗಿದೆ? ಕಿಚ್ಚ ಸುದೀಪ್‌ ಜೊತೆ ನಟಿಸಿದ್ದು ಹೇಗಿತ್ತು? ಮುಂತಾದ ವಿಚಾರಗಳ ಬಗ್ಗೆ ನಾಗಾರ್ಜುನ ಅವರು ಪಂಚಮಿ ಟಾಕ್ಸ್‌ ಯುಟ್ಯೂಬ್‌ ಚಾನೆಲ್‌ ಜೊತೆಗೆ ಮಾತನಾಡಿದ್ದಾರೆ.

ಪ್ರ: ನಟನಾ ಜೀವನ ಹೇಗೆ ನಡೆಯುತ್ತಿದೆ?

ಉ: ನಿಧಾನವಾದರೂ ಕೂಡ, ಒಳ್ಳೆಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತ ನಡೆಯುತ್ತಿದ್ದೇನೆ. ನಾನು ಎಲ್ಲಿ ಹೋಗಿ ತಲುಪಬೇಕು ಅಂಥ ಗೊತ್ತಿದೆ. ಹಾಗಾಗಿ ಅದಕ್ಕೆ ಹೊಂದಿಕೆ ಆಗುವಂತೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ತಿದೀನಿ.

ಪ್ರ: ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಚೂಸಿ ಆಗಿಬಿಟ್ಟರೆ, ಒಮ್ಮೊಮ್ಮೆ ಕಲಾವಿದರಿಗೆ ವಯಸ್ಸಾಗಿ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ ಅಂತ ಅನಿಸೋದಿಲ್ವಾ?

ಉ: ಹೌದು, ನಾನು ಇಪ್ಪತ್ನಾಲ್ಕನೇ ವಯಸ್ಸಿಗೆ ನಟನೆ ಶುರು ಮಾಡಿದೆ. ಆಗ ಕೆಲವರು ನಟನೆಯಲ್ಲಿ ಮುಂದಿದ್ದರು, ನಾನು ಆಗ ನಟನೆ ಕಲಿಯುತ್ತಿದ್ದೆ. ಆದರೆ ಸಿಕ್ಕಿದ್ದನ್ನೆಲ್ಲ ಆಯ್ಕೆ ಮಾಡಿಕೊಂಡ್ರೆ ಕಷ್ಟ ಆಗುತ್ತದೆ. ಆ ಪ್ರಾಜೆಕ್ಟ್‌ ಯಶಸ್ಸು ತಂದುಕೊಡುತ್ತದೆ ಅಂತ ಕೂಡ ಹೇಳೋಕೆ ಆಗೋದಿಲ್ಲ. ಧಾರಾವಾಹಿ ಅಂದ್ರೆ ಮಹಿಳಾ ಪ್ರಧಾನ ಕಥೆಗಳು ಹೆಚ್ಚಿರುತ್ತವೆ. ಆದರೆ ಈ ಮಧ್ಯೆ ನನಗೆ ಒಳ್ಳೆಯ ಅವಕಾಶಗಳು ಸಿಕ್ಕಿವೆ.

ಪ್ರ: ನಿಮ್ಮ ಊರು, ಕುಟುಂಬದ ಬಗ್ಗೆ ಹೇಳಿ

ಉ: ಹುಟ್ಟಿದ್ದು ತುಮಕೂರು, ಬೆಳೆದಿದ್ದು ಬೆಂಗಳೂರಿನಲ್ಲೇ. ನಮ್ಮ ಮನೆಯಲ್ಲಿ ಯಾರೂ ಕಲಾವಿದರಿಲ್ಲ. ಡಿಗ್ರಿಯನ್ನು ಅರ್ಧಕ್ಕೆ ನಿಲ್ಲಿಸಿದೆ. ನಾನು ಒಳ್ಳೆಯ ವಿದ್ಯಾರ್ಥಿಯಾದರೂ ಕೂಡ ಬೇರೆ ಬೇರೆ ವಿಚಾರಗಳು ಗಮನಸೆಳೆದವು. ನನಗೆ ಮದುವೆಯಾಗಿ ಮಗು ಇದೆ.

ಪ್ರ: ನಟನೆಗೆ ಬಂದಿದ್ದು ಹೇಗೆ?

ಉ: ಫ್ರೀಲ್ಯಾನ್ಸ್‌ ಟ್ರೇನರ್‌ ಆಗಿದ್ದೆ, ಟ್ರೆಕ್ಕಿಯಾಗಿದ್ದೆ, ನ್ಯಾವಿಗೇಶನ್‌ ಶುರುಮಾಡೋಣ ಅನ್ಕೊಂಡಿದ್ದೆ. ಅದೇ ಟೈಮ್‌ಗೆ ಅನಂತಪುರದಲ್ಲಿ ಒಂದು ಕಾರ್ಯಕ್ರಮ ಮುಗಿಸಿ ಗಣಪತಿ ಹಬ್ಬಕ್ಕೆ ಮನೆಗೆ ಬರುವಾಗ ನಾನು, ನನ್ನ ಸ್ನೇಹಿತನಿಗೆ ಅಪಘಾತ ಆಯ್ತು. ಆ ಅಪಘಾತದಲ್ಲಿ ನನ್ನ ಸ್ನೇಹಿತ ತೀರಿಕೊಂಡ. ಇದು ನನ್ನ ಜೀವನದ ದುರಂತ ಬದುಕು. ನನಗೆ ಸುತ್ತಾಡೋದು, ತಿರುಗಾಡೋದು, ಸಾಹಸ ಮಾಡೋದು ತುಂಬ ಇಷ್ಟ. ಆ ಘಟನೆ ನನ್ನ ಎಲ್ಲ ಮಂಗಾಟಗಳಿಗೆ ಬ್ರೇಕ್‌ ಹಾಕಿತ್ತು. ನನ್ನ ಅಂಕಲ್‌ ಸಲಹೆ ಮೇರೆಗೆ ನಾನು ನಟನೆಗೆ ಬಂದೆ. ನಾಲ್ಕು ಸಿನಿಮಾಗಳು, ಧಾರಾವಾಹಿಗಳಲ್ಲಿ ನಟಿಸಿದ್ದೇನೆ.

ಪ್ರ: ಸೀರಿಯಲ್‌ನಲ್ಲಿ ನಟಿಸುವಾಗ ಸಿನಿಮಾ ಮಾಡೋದು ನಿಮ್ಮ ಗುರಿಯಾಗಿತ್ತಾ?

ಉ: ನನಗೆ ಏನು ಮಾಡಬೇಕು ಎನ್ನುವ ಸ್ಪಷ್ಟನೆ ಇರಲಿಲ್ಲ. ಮೊದಲು ನಟನೆಯಲ್ಲಿ ಓಕೆ ಅಂತ ಅನಿಸಿಕೊಂಡು ನೆಮ್ಮದಿಯಿಂದ ನಿದ್ದೆ ಮಾಡಬೇಕು ಎನ್ನೋದು ನನ್ನ ಗುರಿಯಾಗಿತ್ತು, ಆಮೇಲೆ ಇದು ಖುಷಿಕೊಟ್ಟಿತು. ಹೀಗೆ ಕಲಿಯುತ್ತ, ಒಂದಷ್ಟು ಆಶಯ ಬಂದು ಮುನ್ನಡೆಯುತ್ತಿದ್ದೇನೆ.

ಪ್ರ: ಕಿಚ್ಚ ಸುದೀಪ್‌ ಜೊತೆಗೆ Max ಸಿನಿಮಾದಲ್ಲಿ ನಟಿಸಿದ್ದೀರಿ?

ಉ: ತೆಲುಗು ಸಿನಿಮಾ ಮಾಡುತ್ತಿದ್ದೆ, ಅದು ಅರ್ಧಕ್ಕೆ ನಿಂತು ಹೋಯ್ತು. ಆ ಟೈಮ್‌ನಲ್ಲಿ Max ಸಿನಿಮಾದಲ್ಲಿ ನಟಿಸುವ ಅವಕಾಶ ಬಂತು. ಈ ಸಿನಿಮಾ ಸೆಟ್‌ಗೆ ಹೋಗುವ ಎರಡು ದಿನದ ಮುಂಚೆ ನಾನು ಸಿನಿಮಾಕ್ಕೆ ಆಯ್ಕೆ ಆಗಿದ್ದೆ.

ಪ್ರ: ಕಿಚ್ಚ ಸುದೀಪ್‌ ಅವರಿಂದ ಏನು ಕಲಿತ್ರಿ?

ಉ: ಕಿಚ್ಚ ಸುದೀಪ್ ಅವರ ಜೊತೆ ಇಡೀ ಸಿನಿಮಾದುದ್ದಕ್ಕೂ ಇರುತ್ತೇನೆ. ಕೆಲವೊಂದು ವ್ಯಕ್ತಿಗಳನ್ನು ನೋಡಿದಾಗ ಅಭಿಮಾನ ಹುಟ್ಟುತ್ತೆ, ಆ ಥರದ ವ್ಯಕ್ತಿತ್ವ ಅವರದ್ದು. ಸೆಟ್‌ಗೆ ಬಂದು ಅವರು ಎಲ್ಲ ವಿಷಯವನ್ನು ಗಮನಿಸೋದು, ವರ್ತನೆ ನೋಡಿ ಖುಷಿ ಆಯ್ತು. ಎಲ್ಲಿಯೂ ದಾರಿ ತಪ್ಪದೆ ಗುರಿ ತಲುಪಬೇಕು ಎನ್ನೋದು ಅರಿವಾಯ್ತು. ಸಾಕಷ್ಟು ಸಲ ನನ್ನ ಬೆನ್ನು ತಟ್ಟಿದ್ದಾರೆ. ಚೆನ್ನೈನಲ್ಲಿ ನಮ್ಮನ್ನು ಕರೆದು ಮಾತನಾಡುತ್ತಿದ್ದರು. ಚೆನ್ನೈನಲ್ಲಿ ಅವರ ಮನೆಯಿದ್ದು, ಅಲ್ಲಿ ಸಾಕಷ್ಟು ಸಲ ಹೋಗುತ್ತಿದ್ದೆವು. ನಮ್ಮ ಪ್ರಶ್ನೆಗಳಿಗೆ ಅವರು ಉತ್ತರ ಕೊಡುತ್ತಿದ್ದರು.

ಪ್ರ: Max ಸಿನಿಮಾದಲ್ಲಿನ ವಿಶೇಷತೆಗಳು ಏನು?

ಉ: ಎರಡೂವರೆ ವರ್ಷದ ನಂತರ ಕಿಚ್ಚ ಸುದೀಪ್‌ ಅವರು ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಇದು. ಇಲ್ಲಿ ಆಕ್ಷನ್‌, ಕಾಮಿಡಿ ಎಲ್ಲವೂ ಇದೆ. ಜನರನ್ನು ಹಿಡಿದಿಟ್ಟುಕೊಳ್ಳುತ್ತದೆ.

(ಸಂದರ್ಶನ- ಪದ್ಮಶ್ರೀ ಭಟ್‌, ಪಂಚಮಿ ಟಾಕ್ಸ್‌)

Whats_app_banner