ಅಮೆರಿಕದಲ್ಲಿ ಸಂಗೀತ ಶಾಲೆ ಕಟ್ಟಿ, ಬೆಳೆಸುತ್ತಿದ್ದಾರೆ ಸೀತಾ ರಾಮ ಸೀರಿಯಲ್‌ನ ಶಾಂತಮ್ಮಜ್ಜಿ ಮಗಳು ದಿವ್ಯಾ ರಮೇಶ್‌
ಕನ್ನಡ ಸುದ್ದಿ  /  ಮನರಂಜನೆ  /  ಅಮೆರಿಕದಲ್ಲಿ ಸಂಗೀತ ಶಾಲೆ ಕಟ್ಟಿ, ಬೆಳೆಸುತ್ತಿದ್ದಾರೆ ಸೀತಾ ರಾಮ ಸೀರಿಯಲ್‌ನ ಶಾಂತಮ್ಮಜ್ಜಿ ಮಗಳು ದಿವ್ಯಾ ರಮೇಶ್‌

ಅಮೆರಿಕದಲ್ಲಿ ಸಂಗೀತ ಶಾಲೆ ಕಟ್ಟಿ, ಬೆಳೆಸುತ್ತಿದ್ದಾರೆ ಸೀತಾ ರಾಮ ಸೀರಿಯಲ್‌ನ ಶಾಂತಮ್ಮಜ್ಜಿ ಮಗಳು ದಿವ್ಯಾ ರಮೇಶ್‌

Seetha Rama Serial: ಸೀತಾ ರಾಮ ಧಾರಾವಾಹಿ ನಟಿ ಪದ್ಮಕಲಾ ಅವರ ಮಗಳು ದಿವ್ಯಾ ರಮೇಶ್‌ ಅನೇಕ ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲಿಯೇ ಸಂಗೀತ ಶಾಲೆಯನ್ನು ಆರಂಭಿಸಿದ್ದಾರೆ. ಈ ಬಗ್ಗೆ ಪಂಚಮಿ ಟಾಕ್ಸ್‌ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಅಮೆರಿಕಾದಲ್ಲಿ ಸಂಗೀತ ಶಾಲೆ ನಡೆಸ್ತಿದ್ದಾರೆ ಸೀತಾ ರಾಮ ಸೀರಿಯಲ್‌ ಪದ್ಮಕಲಾ ಮಗಳು ದಿವ್ಯಾ ರಮೇಶ್‌.
ಅಮೆರಿಕಾದಲ್ಲಿ ಸಂಗೀತ ಶಾಲೆ ನಡೆಸ್ತಿದ್ದಾರೆ ಸೀತಾ ರಾಮ ಸೀರಿಯಲ್‌ ಪದ್ಮಕಲಾ ಮಗಳು ದಿವ್ಯಾ ರಮೇಶ್‌.

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಶಾಂತಮ್ಮ ಪಾತ್ರದಲ್ಲಿ ನಟಿಸ್ತಿರುವ ಪದ್ಮಕಲಾ ಅವರು ಈ ಹಿಂದೆ ಟೇಲರಿಂಗ್‌ ಕ್ಲಾಸ್‌ ಮಾಡಿ, ಐಟಿಐ ಸಂಸ್ಥೆ ಕಟ್ಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಪದ್ಮಕಲಾ ಅವರಿಂದ ಸಾಕಷ್ಟು ಜನರು ಟೇಲರಿಂಗ್‌ ಕಲಿತು ಬದುಕು ಕಟ್ಟಿಕೊಂಡಿದ್ದಾರೆ. ಇದರ ಜೊತೆಗೆ ನಟನೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಪದ್ಮಕಲಾ ಅನೇಕರಿಗೆ ಮಾದರಿ. ಈಗ ಈ ನಿಟ್ಟಿನಲ್ಲಿ ಅವರ ಮಗಳು ದಿವ್ಯಾ ರಮೇಶ್‌ ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಈ ಕುರಿತು ತಾಯಿ-ಮಗಳು ಪಂಚಮಿ ಟಾಕ್ಸ್‌ ಯುಟ್ಯೂಬ್‌ ಚಾನೆಲ್‌ ಜೊತೆಗೆ ಮಾತನಾಡಿದ್ದಾರೆ.

ಅಮೆರಿಕದಲ್ಲಿ ಸಂಗೀತ ಹೇಳಿಕೊಡ್ತಾರೆ!

ಸೀತಾ ರಾಮ ಸೀರಿಯಲ್‌ ನಟಿ ಪದ್ಮಕಲಾ ಅವರಿಗೆ ಮೂವರು ಹೆಣ್ಣು ಮಕ್ಕಳು. ಅವರಲ್ಲಿ ಮೂರನೇಯವರು ದಿ‌ವ್ಯಾ ರಮೇಶ್. 20ನೇ ವಯಸ್ಸಿಗೆ ಮದುವೆಯಾದ ದಿವ್ಯಾ ರಮೇಶ್‌ ಕೆಲ ವರ್ಷಗಳ ಕಾಲ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದರು. ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ದಿವ್ಯಾ ರಮೇಶ್‌ ಅವರಿಗೆ ಸಂಗೀತದ ಮೇಲೆ ಒಲವು ಇತ್ತು. ಆದರೆ ಸಂಗೀತವನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ದಿವ್ಯಾ ರಮೇಶ್‌ಗೆ ಸಿನಿಮಾ ಗೀತೆಯನ್ನು ಹಾಡಲು ಆಸಕ್ತಿ ಇರಲಿಲ್ಲವಂತೆ. ಇನ್ನು ಆಂಧ್ರ ಮೂಲದ ಪತಿ ರಮೇಶ್‌ ಜೊತೆ ದಿವ್ಯಾ ರಮೇಶ್‌ ಅವರು ಅಮೆರಿಕಕ್ಕೆ ಹೋದರು. ಅಮೆರಿಕದಲ್ಲಿ ದಿವ್ಯಾ ರಮೇಶ್‌ ಅವರು ಆರಂಭದಲ್ಲಿ ಅಕ್ಕ-ಪಕ್ಕದ ಮನೆಯವರ ಮಕ್ಕಳಿಗೆ ಸಂಗೀತ ಹೇಳಿಕೊಡಲು ಆರಂಭಿಸಿದರು. ಅದೇ ಈಗ ಸಂಗೀತ ಶಾಲೆಯಾಗಿ ಬೆಳೆದಿದೆ.

ಅಮೆರಿಕದಲ್ಲಿ ಸಂಗೀತ ಶಾಲೆ ಸ್ಥಾಪನೆ

ಅಮೆರಿಕದಲ್ಲಿ ಸಾಫಲ್ಯ ಮ್ಯೂಸಿಕ್‌ ಅಕಾಡೆಮಿ ಆರಂಭಿಸಿದ್ದಾರೆ ದಿವ್ಯಾ. ಪದ್ಮಕಲಾ ಅವರು ʼಸಾಫಲ್ಯʼ ಎಂಬ ಹೆಸರಿನಲ್ಲಿಯೇ ಐಟಿಐ ಸಂಸ್ಥೆ ಕಟ್ಟಿದ್ದರು. ಆ ಹೆಸರನ್ನು ಪದ್ಮಕಲಾ ಮಗಳು ತಮ್ಮ ಮ್ಯೂಸಿಕ್‌ ಅಕಾಡೆಮಿಗೆ ಇಟ್ಟಿದ್ದು ಇನ್ನೊಂದು ವಿಶೇಷ. 2009ರಲ್ಲಿ ಆರಂಭವಾದ ಈ ಸಂಸ್ಥೆಯಲ್ಲಿ ಶಾಸ್ತ್ರೀಯ ಸಂಗೀತ ಹೇಳಿಕೊಡಲಾಗುವುದು. ಸಂಗೀತದಲ್ಲಿ ಡಿಪ್ಲೋಮಾ ಪೂರೈಸಿರುವ ದಿವ್ಯಾ ರಮೇಶ್‌, ಅಮೆರಿಕದ ಸಾಕಷ್ಟು ದೇವಸ್ಥಾನಗಳಲ್ಲಿ, ಕಾರ್ಯಕ್ರಮಗಳಲ್ಲಿ ಹಾಡು ಹಾಡಿದ್ದಾರೆ. ಅಷ್ಟೇ ಅಲ್ಲದೆ ಈಗ ಅವರು ಕಾರ್ಯಕ್ರಮಗಳನ್ನು ಕೂಡ ಆಯೋಜಿಸುತ್ತಾರೆ. ಪದ್ಮಕಲಾ ಅವರಿಗೆ ಮೊದಲಿನಿಂದಲೂ ದಾಸ ಸಾಹಿತ್ಯ ಅಂದ್ರೆ ಪಂಚಪ್ರಾಣ. ಅಷ್ಟೇ ಅಲ್ಲದೆ ವಿದೇಶದಲ್ಲಿ ಪುರಂದರದಾಸರ ಆರಾಧನೆಯನ್ನು ಆರಂಭಿಸಿದರು. ಈಗ ದಿವ್ಯಾ ಕೂಡ ಅಲ್ಲಿ ಆರಾಧನೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ಅಲ್ಲಿನ ಸಂಗೀತ ಕಾರ್ಯಕ್ರಮಗಳ ಜಡ್ಜ್‌ ಆಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.

ಪುರಸ್ಕಾರಗಳು ಸಂದಿವೆ!

ಗಾನ ಸೇವಾ ಮಣಿ, ಡ್ರೋನ್‌ ಆಚಾರ್ಯ, ಪುರಂದರ ಸೇವಾ ರತ್ನ, ಗಾನತಿಲಕ ಮುಂತಾದ ಪುರಸ್ಕಾರಗಳಿಗೆ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ಮಹಾಭಾರತ, ರಾಮಾಯಣ, ದಾಸ ಸಾಹಿತ್ಯ ಮುಂತಾದ ವಿಷಯಗಳನ್ನು ಆಧರಿಸಿದ ಡ್ಯಾನ್ಸ್‌ ಕಾರ್ಯಕ್ರಮಗಳಿಗೆ ದಿವ್ಯಾ ಅವರು ಸಂಗೀತ ನೀಡಿ, ಹಾಡಿದ್ದಾರೆ. ಅಮೆರಿಕದಲ್ಲಿ ಪುರಂದರ ವೈಭವ, ದಾಸ ಸ್ಮೃತಿಯ ಆಯೋಜಕಿಯಾಗಿಯೂ ಕೆಲಸ ಮಾಡುತ್ತಿರುವ ದಿವ್ಯಾ ಅವರು, SPARK Global Club ಸಂಸ್ಥಾಪಕಿ ಕೂಡ ಹೌದು.

ರಿವ್ಯಾ ರಮೇಶ್‌ ಏನಂದ್ರು?

ಈ ಬಗ್ಗೆ ಮಾತನಾಡಿರುವ ದಿವ್ಯಾ ರಮೇಶ್‌, “ನನ್ನ ತಾಯಿಗೆ ದಾಸ ಸಾಹಿತ್ಯ ಅಂದ್ರೆ ತುಂಬ ಇಷ್ಟ. ದಾಸ ಸಾಹಿತ್ಯದಲ್ಲಿ ಇಲ್ಲದೆ ಇರೋದು ಯಾವುದೂ ಕೂಡ ಇಲ್ಲ. ನಮ್ಮ ಜೀವನಕ್ಕೆ ದಾಸ ಸಾಹಿತ್ಯ ಎನ್ನೋದು ದಾರಿ ದೀಪವಾಗಿದೆ. ನನ್ನ ತಾಯಿಯ ಬೆಂಬಲ, ಸ್ಫೂರ್ತಿಯಿಂದ ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ನನ್ನ ತಾಯಿಗೆ ಇರುವ ಜೀವನೋತ್ಸಾಹ ನೋಡಿದ್ರೆ ತುಂಬ ಖುಷಿಯಾಗುತ್ತದೆ. ನನ್ನ ಸಾಧನೆಯ ಎಲ್ಲ ಕ್ರೆಡಿಟ್‌ ಕೂಡ ತಾಯಿಗೆ ಸಲ್ಲಬೇಕು. ನನಗೆ ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ ಇರಲಿಲ್ಲ, ಹೀಗಾಗಿ ನಾನು ಒಂದೆರಡು ಧಾರಾವಾಹಿಗಳಲ್ಲಿ ನಟಿಸಿದ್ದು ಬಿಟ್ಟರೆ ನಾನು ನಟನೆಯನ್ನು ಮುಂದುವರೆಸಿಕೊಂಡು ಹೋಗಲಿಲ್ಲ. ಇನ್ನು ಸಿನಿಮಾ ಹಾಡುಗಳನ್ನು ಹಾಡುವ ಆಸಕ್ತಿಯೂ ಇಲ್ಲದಿದ್ದರಿಂದ ಹಾಡಲೂ ಇಲ್ಲ. ಅಮೆರಿಕದಲ್ಲಿ ಸಾಂಸ್ಕೃತಿಕ ವಿಷಯಗಳಿಗೆ ಹೆಚ್ಚಿನ ಗಮನ ಕೊಡಲಾಗುತ್ತದೆ. ಅಲ್ಲಿನ ಮಕ್ಕಳು ಭಾರತೀಯ ಸಂಸ್ಕೃತಿಯನ್ನು ಮರೆಯದೆ ಪದ್ಧತಿಯನ್ನು ರೂಢಿಸಿಕೊಂಡು ಹೋಗುತ್ತಿರೋದು ನಿಜಕ್ಕೂ ಖುಷಿಯ ವಿಷಯ” ಎಂದು ಹೇಳಿದ್ದಾರೆ.

ವರದಿ: ಪದ್ಮಶ್ರೀ ಭಟ್‌, ಪಂಚಮಿ ಟಾಕ್ಸ್‌

Whats_app_banner