ಕನ್ನಡ ಸುದ್ದಿ  /  Entertainment  /  Shah Rukh Khan S Pathaan Gets Its Ott Release Date

Pathaan on Ott: ಒಟಿಟಿಗೆ ಬರುತ್ತಿದೆ ಶಾರುಖ್‌ ಖಾನ್‌ ನಟನೆಯ ‘ಪಠಾಣ್‌’; ಯಾವಾಗಿನಿಂದ, ಯಾವ ವೇದಿಕೆಯಲ್ಲಿ ಸ್ಟ್ರೀಮಿಂಗ್‌? ಇಲ್ಲಿದೆ ಮಾಹಿತಿ

ಶಾರುಖ್‌ ಖಾನ್ ನಟನೆಯ ಪಠಾಣ್‌ ಸಿನಿಮಾ ಒಟಿಟಿಯಲ್ಲಿ ಯಾವಾಗ ‌ಬಿಡುಗಡೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಒಟಿಟಿಗೆ ಬರುತ್ತಿದೆ ಶಾರುಖ್‌ ಖಾನ್‌ ನಟನೆಯ ‘ಪಠಾಣ್‌’; ಯಾವಾಗಿನಿಂದ, ಯಾವ ವೇದಿಕೆಯಲ್ಲಿ ಸ್ಟ್ರೀಮಿಂಗ್‌? ಇಲ್ಲಿದೆ ಮಾಹಿತಿ..
ಒಟಿಟಿಗೆ ಬರುತ್ತಿದೆ ಶಾರುಖ್‌ ಖಾನ್‌ ನಟನೆಯ ‘ಪಠಾಣ್‌’; ಯಾವಾಗಿನಿಂದ, ಯಾವ ವೇದಿಕೆಯಲ್ಲಿ ಸ್ಟ್ರೀಮಿಂಗ್‌? ಇಲ್ಲಿದೆ ಮಾಹಿತಿ..

Pathaan on Ott: ಬಾಲಿವುಡ್‌ ಬಾದ್ಶಾ ಶಾರುಖ್‌ ಖಾನ್‌ ಕೊನೆಗೂ ಸೋಲಿನ ಸರಪಳಿಯಿಂದ ಹೊರಬಂದಿದ್ದಾರೆ. ಸರಣಿ ಸಿನಿಮಾ ಸೋಲುಗಳಿಂದ ಸುದೀರ್ಘ ನಾಲ್ಕು ವರ್ಷ ನಟನೆಯಿಂದಲೇ ದೂರ ಉಳಿದಿದ್ದ ಶಾರುಖ್‌ ಅವರನ್ನು ಬದುಕಿಸಿದ್ದೇ ‘ಪಠಾಣ್‌’ ಚಿತ್ರ! ಬಾಕ್ಸ್‌ ಆಫೀಸ್‌ನಲ್ಲಿ ಸಾವಿರ ಪ್ಲಸ್‌ ಕೋಟಿ ಗಳಿಕೆ ಕಂಡ ಈ ಸಿನಿಮಾ, ಕೇವಲ್‌ ಶಾರುಖ್‌ಗೆ ಮಾತ್ರವಲ್ಲ ಬಾಲಿವುಡ್‌ಗೂ ಮರುಜನ್ಮ ನೀಡಿತ್ತು. ಹತ್ತು ಹಲವು ದಾಖಲೆಗಳೂ ‘ಪಠಾಣ್‌’ ಚಿತ್ರದ ಪಾಲಾದವು.

ಜನವರಿ 25ರಂದು ವಿಶ್ವದಾದ್ಯಂತ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಆಗಿದ್ದ ‘ಪಠಾಣ್‌’ ಚಿತ್ರ, ಮೊದಲ ದಿನವೇ ದಾಖಲೆಯ ಮೊತ್ತ ಗಳಿಸುವ ಮೂಲಕ ಗೆಲುವಿನ ಹಳಿಗೇರಿತು. ದಿನಗಳೆದಂತೆ, ನೂರು, ಇನ್ನೂರು, ಐನೂರು, ಸಾವಿರ ಕೋಟಿ ಗಳಿಕೆ ಕಂಡು ಶಾರುಖ್‌ ಮತ್ತೊಮ್ಮೆ ಬಾಕ್ಸ್‌ ಆಫೀಸ್‌ನಲ್ಲಿ ಬಾದ್ಶಾ ಆಗಿ ಹೊರಹೊಮ್ಮಿದರು. ಈಗಲೂ ಹಲವು ಚಿತ್ರಮಂದಿರಗಳಲ್ಲಿ ‘ಪಠಾಣ್‌’ ಓಟ ಮುಂದುವರಿದಿದೆ.

ಭಾರತದಲ್ಲಿ 540 ಕೋಟಿಗೂ ಅಧಿಕ ಗಳಿಕೆ ಕಂಡಿರುವ ಈ ಸಿನಿಮಾ ಇದೀಗ ಇಂದಿಗೆ 50ನೇ ದಿನವನ್ನು ಪೂರೈಸಿದಂತಾಗಿದೆ. ಬಿಡುಗಡೆಯಾಗಿ 49ನೇ ದಿನಕ್ಕೆ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 25 ಲಕ್ಷ ಗಳಿಕೆ ಕಂಡಿದೆ. ಹೀಗೆ ಥಿಯೇಟರ್‌ಗಳಲ್ಲಿ ಈಗಲೂ ಮುನ್ನುಗ್ಗುತ್ತಿರುವ ‘ಪಠಾಣ್‌’ ಚಿತ್ರ ಇದೀಗ ಒಟಿಟಿ ಅಂಗಳಕ್ಕೆ ಆಗಮಿಸಲು ಸಿದ್ಧತೆ ನಡೆಸಿದೆ. ಸಹಜವಾಗಿ ಸಿನಿಮಾ ಬಿಡುಗಡೆಯಾದ 30 ದಿನಕ್ಕೆ ಬಹುತೇಕ ಚಿತ್ರಗಳು ಒಟಿಟಿಯಲ್ಲಿ ರಿಲೀಸ್‌ ಆಗುತ್ತವೆ. ಆದರೆ, ‘ಪಠಾಣ್‌’ ಮಾತ್ರ ಒಟಿಟಿ ಬಿಡುಗಡೆಯ ಬಗ್ಗೆ ಮಾಹಿತಿ ಹಂಚಿಕೊಂಡಿರಲಿಲ್ಲ.

ಅಮೆಜಾನ್‌ ಪ್ರೈಂನಲ್ಲಿ ‘ಪಠಾಣ್‌’

‘ಪಠಾಣ್‌’ ಸಿನಿಮಾ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಸದ್ಯದ ಮಾಹಿತಿ ಪ್ರಕಾರ ಮಾರ್ಚ್‌ 25ಕ್ಕೆ ‘ಪಠಾಣ್‌’ ಚಿತ್ರ ಸ್ಟ್ರಿಮಿಂಗ್‌ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ಏಪ್ರಿಲ್‌ 25ರಂದು ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆಯಾದರೂ, ಇಂದು ಅಧಿಕೃತವಾಗಿ ಘೋಷಣೆ ಆಗಲಿದೆ. ಇತ್ತ ಈಗಾಗಲೇ ಚಿತ್ರದ ಕೆಲವು ಡಿಲಿಟೆಡ್‌ ಸೀನ್‌ಗಳನ್ನು ಚಿತ್ರತಂಡ ರಿವೀಲ್‌ ಮಾಡಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್‌’ ಚಿತ್ರದಲ್ಲಿ ಶಾರುಖ್ ಖಾನ್ ಜತೆಗೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಅಶುತೋಷ್ ರಾಣಾ, ಡಿಂಪಲ್ ಕಪಾಡಿಯಾ ನಟಿಸಿದರೆ, ಸ್ಪೈ ಥ್ರಿಲ್ಲರ್‌ ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ನಿಭಾಯಿಸಿದ್ದಾರೆ. ಯಶ್‌ ರಾಜ್‌ ಫಿಲಂಸ್‌ ಈ ಅದ್ದೂರಿ ಚಿತ್ರವನ್ನು ನಿರ್ಮಾಣ ಮಾಡಿದೆ.

ಇನ್ನು ಶಾರುಖ್‌ ಅವರ ಬೇರೆ ಸಿನಿಮಾಗಳ ವಿಚಾರಕ್ಕೆ ಬಂದರೆ, ಅಟ್ಲಿ ಜತೆಗಿನ ಜವಾನ್‌ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಿದರೆ, ರಾಜ್‌ಕುಮಾರ್‌ ಹಿರಾನಿ ಜತೆಗೆ ಡಂಕಿ ಚಿತ್ರದ ಕೆಲಸಗಳಲ್ಲಿಯೂ ಶಾರುಖ್‌ ಬಿಜಿ. ಇತ್ತ ದೀಪಿಕಾ ಪಡುಕೋಣೆ ಪ್ರಭಾಸ್‌ ಮತ್ತು ಅಮಿತಾಬ್‌ ಜತೆಗೆ ಪ್ರಾಜೆಕ್ಟ್‌ ಕೆ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ