ಬಿಡುಗಡೆಯಾಗುತ್ತಿದೆ ‘ದೇವಾ’ ಸಿನಿಮಾ; ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶಾಹಿದ್ ಕಪೂರ್ - ನಾಯಕಿಯಾಗಿ ಪೂಜಾ ಹೆಗ್ಡೆ
ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ದೇವಾ’ ಸಿನಿಮಾ ನಾಳೆ (ಜನವರಿ 31) ಬಿಡುಗಡೆಯಾಗುತ್ತಿದೆ. ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶಾಹಿದ್ ಕಪೂರ್ ಕಾಣಿಸಿಕೊಂಡಿದ್ದಾರೆ.

ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆ ಅಭಿನಯದ ದೇವಾ ಸಿನಿಮಾ ನಾಳೆ (ಜನವರಿ 31) ಬಿಡುಗಡೆಯಾಗುತ್ತಿದೆ. ಮುಂಗಡ ಬುಕಿಂಗ್ ಕೂಡ ಜೋರಾಗಿ ನಡೆದಿದೆ. ಇದೊಂದು ಪವರ್-ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಚಿತ್ರದ ಟೀಸರ್ ಈಗಾಗಲೇ ಸಾಕಷ್ಟು ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾಯುವಂತೆ ತುದಿಗಾಲಲ್ಲಿ ಕೂರುವಂತೆ ಮಾಡಿದೆ. ರೋಶನ್ ಆಂಡ್ರ್ಯೂಸ್ ನಿರ್ದೇಶನ ಮಾಡಿರುವ ದೇವಾ ಮಲಯಾಳಂ ಭಾಷೆಯ 'ಮುಂಬೈ ಪೊಲೀಸ್' ಸಿನಿಮಾದ ರಿಮೇಕ್ ಆಗಿದೆ. ಎಲ್ಲ ಅಂದುಕೊಂಡಂತೇ ಆದರೆ 2024ರಲ್ಲೇ ಬಿಡುಗಡೆಯಾಗಬೇಕಿದ್ದ ದೇವಾ ಸಿನಿಮಾ ಕೆಲ ಕಾರಣಗಳಿಂದಾಗಿ 2025ರ ಆರಂಭದಲ್ಲಿ ಬಿಡುಗಡೆಯಾಗುತ್ತಿದೆ.
ದೇವಾ ಸಿನಿಮಾದ ಟ್ರೇಲರ್ ಮೂಲಕವೇ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ನಿರೀಕ್ಷಿಸಬಹುದಾದ ಖಡಕ್ ಅಂಶಗಳ ಸುಳಿವು ವ್ಯಕ್ತವಾಗಿತ್ತು. ಭಯೋತ್ಪಾದಕರಿಂದ ಹತರಾದ ಅಧಿಕಾರಿಯ ಸಾವಿಗೆ ಸೇಡು ತೀರಿಸಿಕೊಳ್ಳುವ ಕೆಚ್ಚು ಹೊಂದಿರುವ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಶಾಹಿದ್ ಕಪೂರ್ ಸಿನಿಮಾ ಟ್ರೇಲರ್ ನೋಡಿದವರಲ್ಲಿ ನಿರೀಕ್ಷೆ ಸೃಷ್ಟಿಸಿದ್ದರು.
ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆ ಜೋಡಿ
ಈ ಸಿನಿಮಾದ ಮೂಲಕ ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆ ಜೋಡಿ ತೆರೆಯ ಮೇಲೆ ಹೇಗೆ ಕಾಣಬಹುದು ಎಂಬ ಅಭಿಮಾನಿಗಳ ಕುತೂಹಲ ತಣಿಯುವ ನಿರೀಕ್ಷೆ ವ್ಯಕ್ತವಾಗಿದೆ. ರಾಯ್ ಕಪೂರ್ ಫಿಲ್ಮ್ಸ್ ಮತ್ತು ಜೀ ಸ್ಟುಡಿಯೋಸ್ ಸಹಯೋಗದಲ್ಲಿ ಸಿನಿಮಾ ಮೂಡಿಬಂದಿದೆ. ಶಾಹಿದ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಕೊಲೆ ಪ್ರಕರಣವೊಂದರ ತನಿಖೆಯ ಕಥಾಹಂದರವನ್ನು ಆಧರಿಸಿದೆ. ಪೊಲೀಸ್ ಅಧಿಕಾರಿಯ ವೈಯಕ್ತಿಯ ಜೀವನದ ಬಗ್ಗೆ ಸಹ ದೇವಾ ಸಿನಿಮಾ ಕಥೆ ವೀಕ್ಷಕರನ್ನು ಸೆಳೆಯುವ ನಿರೀಕ್ಷೆ ಶಾಹಿದ್ ಕಪೂರ್ ಅಭಿಮಾನಿಗಳಲ್ಲಿದೆ.
ತಾರಾಗಣ
ರೋಶನ್ ಆಂಡ್ರ್ಯೂಸ್ ನಿರ್ದೇಶನದಲ್ಲಿ ಶಾಹಿದ್ ಕಪೂರ್ ಪೊಲೀಸ್ ಅಧಿಕಾರಿ ದೇವ್ ಅಂಬ್ರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ ಅವರು ದಿಯಾ ಆಗಿ ಕಾಣಿಸಿಕೊಂಡಿದ್ದಾರೆ. ಪಾವೈಲ್ ಗುಲಾಟಿ, ಗಿರೀಶ್ ಕುಲಕರ್ಣಿ, ಕುಬ್ಬ್ರ ಸೇಟ್ ಮತ್ತು ಇತರರು ತಾರಾಗಣದಲ್ಲಿದ್ದಾರೆ. ಶಾಹಿದ್ ಕಪೂರ್ ಅಭಿನಯದ ಚಿತ್ರವು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ.
