ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ ಶಾಹಿದ್ ಕಪೂರ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಸಿನಿಮಾ ‘ದೇವಾ’
ಚಿತ್ರಮಂದಿರಗಳಲ್ಲಿ ನೀರಸ ಪ್ರತಿಕ್ರಿಯೆಯನ್ನು ಪಡೆದು ಬಾಕ್ಸ್ ಆಫೀಸ್‌ನಲ್ಲಿಯೂ ನಷ್ಟ ಅನುಭವಿಸಿದ ಸಿನಿಮಾ ‘ದೇವಾ’ ಇದೀಗ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಯಾವ ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದು ಎಂಬ ಮಾಹಿತಿ ಇಲ್ಲಿದೆ.

ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ನಟಿ ಪೂಜಾ ಹೆಗ್ಡೆ ಅಭಿನಯದ ದೇವಾ ಚಿತ್ರ ಜನವರಿ 31 ರಂದು ಬಿಡುಗಡೆಯಾಯಿತು. ಈ ಹಿಂದಿ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲು ವಿಫಲವಾಗಿತ್ತು. ಆದರೆ, ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ ನಂತರ ಈ ಚಿತ್ರ ಟ್ರೆಂಡಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ನೀವು ಸಹ ಮನೆಯಲ್ಲೇ ಕುಳಿತು ಈ ಸಿನಿಮಾ ವೀಕ್ಷಿಸಬಹುದು.
ಮೊದಲ ಸ್ಥಾನದಲ್ಲಿದೆ ದೇವಾ
ದೇವಾ ಚಿತ್ರ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಪ್ರಸ್ತುತ ಅಗ್ರಸ್ಥಾನದಲ್ಲಿದೆ. ಚಲನಚಿತ್ರ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. ಫೆಬ್ರವರಿ 28ರಂದು ಒಟಿಟಿಯಲ್ಲಿ ಬಿಡುಗಡೆಯಾದ ಈ ಚಿತ್ರ ಕೇವಲ ಎರಡು ದಿನಗಳಲ್ಲಿಯೇ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಸಾಕಷ್ಟು ಜನ ಚಿತ್ರಮಂದಿರದಲ್ಲಿ ನೋಡಿದ್ದರೂ ಒಟಿಟಿಯಲ್ಲಿ ಈ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ.
ಒಟಿಟಿ ಬಿಡುಗಡೆಯ ನಂತರವೂ ಮಿಶ್ರ ಪ್ರತಿಕ್ರಿಯೆ
ನೆಟ್‌ಫ್ಲಿಕ್ಸ್‌ನಲ್ಲಿ ದೇವಾ ಚಿತ್ರವನ್ನು ವೀಕ್ಷಿಸಿದ ಕೆಲವು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಒಟಿಟಿ ಬಿಡುಗಡೆಯ ನಂತರವೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಥಾವಸ್ತು ಮತ್ತು ಕಥನ ಆಕರ್ಷಕವಾಗಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಶಾಹಿದ್ ಕಪೂರ್ ಅವರ ಅಭಿನಯಕ್ಕೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿದೆ.
ಮಲಯಾಳಂ ಸಿನಿಮಾದ ಪುನರ್ನಿರ್ಮಾಣ
2013ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ ಮುಂಬೈ ಪೋಲೀಸ್‌ನ ಪುನರ್ನಿರ್ಮಾಣವಾಗಿ ದೇವಾ ಚಿತ್ರ ಮೂಡಿಬಂದಿದೆ. ರೋಷನ್ ಆಂಡ್ರೂಸ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಷಾಹಿದ್ ಕಪೂರ್ ಎಸಿಪಿ ದೇವ್ ಆಂಬ್ರೆ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಪೂಜಾ ಹೆಗ್ಡೆ ಪತ್ರಕರ್ತೆ ದಿವ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.
ಬಾಕ್ಸ್ ಆಫೀಸ್ ವೈಫಲ್ಯ
ದೇವಾ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರಾಶೆ ಮೂಡಿಸಿತ್ತು. ಸುಮಾರು 80 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಸುಮಾರು 50 ಕೋಟಿ ರೂಪಾಯಿಗಳನ್ನು ಮಾತ್ರ ಸಂಗ್ರಹಿಸಿದೆ. ಸಿನಿಮಾ ನಿರ್ಮಾಣಕ್ಕಾಗಿ ವ್ಯಯ ಮಾಡಿದ ಹಣವೂ ಹಿಂದಿರುಗಿ ಬಂದಿಲ್ಲ.
ದೇವಾ ಕಥಾವಸ್ತು
ಮುಂಬೈನಲ್ಲಿ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿರುವ ದೇವ್ (ಶಾಹಿದ್ ಕಪೂರ್) ಗ್ಯಾಂಗ್‌ಸ್ಟರ್ ಪ್ರಭಾತ್ ಜಾದವ್ (ಮನೀಶ್ ವಾಧ್ವಾ)ನನ್ನು ಎನ್‌ಕೌಂಟರ್ ಮಾಡುತ್ತಾನೆ. ಆದರೆ, ಆ ಎನ್‌ಕೌಂಟರ್‌ನ ಕ್ರೆಡಿಟ್ಅನ್ನು ಎಸಿಪಿ ರೋಷನ್ ಡಿ ಸಿಲ್ವಾ (ಪವೈಲ್) ಪಡೆಯುತ್ತಾನೆ. ರೋಹನ್ ಹತ್ಯೆಗೀಡಾಗುತ್ತಾನೆ ಮತ್ತು ದೇವ್ ಆ ಹತ್ಯೆ ಪ್ರಕರಣವನ್ನು ಭೇದಿಸಲು ಪ್ರಯತ್ನಿಸುತ್ತಾನೆ. ಹೀಗೇ ಕಥೆ ಸಾಗುತ್ತದೆ.
ಈ ಸಿನಿಮಾದಲ್ಲಿ ಶಾಹಿದ್ ಮತ್ತು ಪೂಜಾ ಮಾತ್ರವಲ್ಲದೆ ಇನ್ನೂ ಪ್ರಮುಖ ನಟರು ನಟಿಸಿದ್ದಾರೆ. ಪವೈಲ್ ಗುಲಾಟಿ ಅವರು ಎಸಿಪಿ ರೋಹನ್ ಡಿ’ಸಿಲ್ವಾ ಪಾತ್ರದಲ್ಲಿ ನಟಿಸಿದ್ದಾರೆ. ಪ್ರವೇಶ್ ರಾಣಾ ಡಿಸಿಪಿ ಫರ್ಹಾನ್ ಖಾನ್ ಪಾತ್ರದಲ್ಲಿ ನಟಿಸಿದ್ದಾರೆ. ಮನೀಶ್ ವಾಧ್ವಾ, ಗಿರೀಶ್ ಕುಲಕರ್ಣಿ, ಗೌರವ್ ಮೋರೆ ಮತ್ತು ಪ್ರವೀಣ್ ಪಾಟೀಲ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ದೇವಾ ಸಿನಿಮಾದಲ್ಲಿ ಶಾಹಿದ್ ಕಪೂರ್, ಪೂಜಾ ಹೆಗ್ಡೆ, ಪವೈಲ್ ಗುಲಾಟಿ ಮತ್ತು ಕುಬ್ರಾ ಸೇಠ್ ನಟಿಸಿದ್ದಾರೆ. ಸಿದ್ಧಾರ್ಥ್ ರಾಯ್ ಕಪೂರ್ ಅವರ ರಾಯ್ ಕಪೂರ್ ಫಿಲ್ಮ್ಸ್ ನೆರವಿನೊಂದಿಗೆ ಮಲಯಾಳಂನ ಕ್ರೈಮ್ ಡ್ರಾಮಾ "ಮುಂಬೈ ಪೊಲೀಸ್"ನ ರಿಮೇಕ್ ಆಗಿದೆ. 'ದೇವಾ' ಸಿನಿಮಾಕ್ಕೆ ರೋಶನ್ ಆಂಡ್ರ್ಯೂಸ್ ಆಕ್ಷನ್ ಕಟ್ ಹೇಳಿದ್ದಾರೆ. ಅಬ್ಬಾಸ್ ದಲಾಲ್, ಬಾಬಿ-ಸಂಜಯ್, ಹುಸೇನ್ ದಲಾಲ್, ಸುಮಿತ್ ಅರೋರಾ ಮತ್ತು ಅರ್ಷದ್ ಸೈಯದ್ ಚಿತ್ರಕಥೆ ಬರೆದಿದ್ದಾರೆ.