ಡಿ 24ರಂದು ಮಿಯಾಮಿಯಲ್ಲಿ ಶಿವರಾಜಕುಮಾರ್‌ಗೆ ಆಪರೇಷನ್; ಆದಷ್ಟು ಬೇಗ ಹುಷಾರಾಗಿ ವಾಪಸ್ಸಾಗಿ ಎಂದ ಅಭಿಮಾನಿಗಳು
ಡಿ 24ರಂದು ಮಿಯಾಮಿಯಲ್ಲಿ ಶಿವರಾಜಕುಮಾರ್‌ಗೆ ಆಪರೇಷನ್ ಜರುಗಲಿದೆ ಎಂದು ಗೀತಾ ಶಿವರಾಜಕುಮಾರ್ ತಿಳಿಸಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋದಲ್ಲಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಭಿಮಾನಿಗಳೂ ಬೇಗ ಗುಣಮುಖರಾಗಿ ಎಂದು ಆಶಿಸುತ್ತಿದ್ದಾರೆ.
ಶಿವರಾಜಕುಮಾರ್ ಅವರ ಆರೋಗ್ಯದಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಅವರಿಗೆ ಡಿಸೆಂಬರ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂಬ ವಿಷಯ ಗೊತ್ತೇ ಇದೆ. ಈ ವಿಷಯವನ್ನು ಸ್ವತಃ ಶಿವರಾಜಕುಮಾರ್ ಕಳೆದ ತಿಂಗಳು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೆ, ಆಪರೇಷನ್ ಯಾವಾಗ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಈ ಕುರಿತು ಈಗ ಕೊನೆಗೂ ಸ್ಪಷ್ಟತೆ ಸಿಕ್ಕಿದೆ.
ಇತ್ತೀಚೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್, ತಮ್ಮ ಪತಿಯ ಶಸ್ತ್ರಚಿಕಿತ್ಸೆಗಾಗಿ ಡಿ. 18ರಂದು ಅಮೇರಿಕಾಗೆ ಪ್ರಯಾಣ ಬೆಳೆಸಿದ್ದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಮಿಯಾಮಿಯಲ್ಲಿ ಡಿ. 24ರಂದು ಆಪರೇಷನ್ ನಡೆಯಲಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಅವರು ‘ಈ ಕಷ್ಟದ ಸಮಯದಲ್ಲಿ ಇಲ್ಲಿ ಸಮಯ ಕಳೆಯದಿದ್ದರೆ ಬಹಳ ಕಷ್ಟವಾಗಿರುತ್ತಿತ್ತು. ಡಿ. 18ರಂದು ಅಮೇರಿಕಾಗೆ ಹೋಗುತ್ತಿದ್ದೇವೆ. ಡಿ. 24ರಂದು ಮಿಯಾಮಿಯಲ್ಲಿ ಆಪರೇಷನ್ ನಡೆಯಲಿದೆ’ ಎಂದು ಹೇಳಿದರು. ಇದನ್ನು ಕೇಳಿ ಶಿವರಾಜಕುಮಾರ್ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.
ಇಷ್ಟಕ್ಕೂ ಶಿವರಾಜಕುಮಾರ್ ಅವರಿಗಾಗಿರುವ ಸಮಸ್ಯೆ ಏನು? ಮೂಲಗಳ ಪ್ರಕಾರ, ಅವರು ಪಿತ್ತಕೋಶದ ತೊಂದರೆಯಿಂದ ಬಳಲುತ್ತಿದ್ದು ಕೆಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸದ್ಯದಲ್ಲೇ ಅವರು ಅಮೇರಿಕಾಗೆ ಪ್ರಯಾಣ ಬೆಳೆಸಿ, ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ.
ಅದಕ್ಕೂ ಮೊದಲು, ಇತ್ತೀಚೆಗೆ ಶಿವರಾಜ್‌ಕುಮಾರ್, ಪತ್ನಿ ಗೀತಾ, ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್ ಮುಂತಾದವರು ತಿರುಪತಿಗೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ಇಬ್ಬರೂ ಮುಡಿ ಕೊಟ್ಟಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿವೆ. ಫೋಟೋಗಳನ್ನು ನೋಡಿದ ಅಭಿಮಾನಿಗಳು, ಶಿವಣ್ಣ ಅವರಿಗೆ ಆದಷ್ಟು ಬೇಗ ಹುಷಾರಾಗಿ ವಾಪಸ್ಸಾಗಿ ಎಂದು ಹಾರೈಸಿದ್ದಾರೆ.
ಇನ್ನು, ಆಪರೇಷನ್ ಕುರಿತು ಕೆಲವು ದಿನಗಳ ಹಿಂದೆ ಮಾತನಾಡಿದ್ದ ಶಿವರಾಜಕುಮಾರ್ ‘ಆಪರೇಷನ್ ನಂತರ ಒಂದು ತಿಂಗಳು ಚಿಕಿತ್ಸೆ ಪಡೆಯಬೇಕಾಗುತ್ತದೆ. ಜನವರಿ ಕೊನೆಯ ಹೊತ್ತಿಗೆ ಎಲ್ಲ ಸರಿ ಹೋಗುತ್ತದೆ’ ಎಂದು ಹೇಳಿದ್ದರು.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: Annayya Serial: ಸತ್ಯ ತಿಳಿದು ಮೂಕಳಾದ ಪಾರು; ಇನ್ನೆಂದಿಗೂ ಸಿದ್ದಾರ್ಥ್ ಅವಳ ಬದುಕಿನಲ್ಲಿ ಬರೋದೇ ಇಲ್ಲ