ದರ್ಶನ್ ನವಗ್ರಹ ಚಿತ್ರವನ್ನೇ ಕಾಪಿ ಮಾಡಿ ಕಾಮಿಡಿ ಕಿಕ್ ಕೊಟ್ಟ ಶಿವಪುತ್ರ ಯಶಾರದಾ ಗ್ಯಾಂಗ್; ಎರಡು ಭಾಗಗಳಲ್ಲಿ ಬಂತು ‘ಒಂಭತ್ತು ಗ್ರಹಗಳು’
Shivaputra Yasharadha Comedy Shows: ಯೂಟ್ಯೂಬ್ನಲ್ಲಿ ತಮ್ಮ ಕಾಮಿಡಿ ವಿಡಿಯೋ ಮೂಲಕವೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ ವಿಜಯಪುರದ ಬಸವನ ಬಾಗೇವಾಡಿಯ ಶಿವಪುತ್ರ ಯಶಾರದಾ ಮತ್ತವರ ತಂಡ. ಇದೀಗ ತಮ್ಮ ಯೂಟ್ಯೂಬ್ನಲ್ಲಿ ಹೊಸ ವಿಡಿಯೋ ಶೇರ್ ಮಾಡಿದ್ದಾರೆ. ದರ್ಶನ್ ಅವರ ನವಗ್ರಹ ಚಿತ್ರವನ್ನೇ ಸ್ಪೂಪ್ ಮಾಡಿ ನಕ್ಕು ನಗಿಸಿದ್ದಾರೆ.

Navagraha Kannada Movie: 16 ವರ್ಷಗಳ ಹಿಂದೆ ಬಹುತಾರಾಗಣದ ಸಿನಿಮಾ ನವಗ್ರಹ ಬಿಡುಗಡೆ ಆಗಿತ್ತು. ಕನ್ನಡದ ಖಳನಟರ ಮಕ್ಕಳೇ ಈ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ದಿನಕರ್ ತೂಗುದೀಪ ನಿರ್ದೇಶನದ ಈ ಸಿನಿಮಾಕ್ಕೆ ಆಗಿನ ಸಮಯದಲ್ಲಿ ಪ್ರೇಕ್ಷಕರಿಂದ ಬಹುಪರಾಕ್ ಸಿಕ್ಕಿತ್ತು. 2008ರ ನವೆಂಬರ್ 7ರಂದು ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಒಳ್ಳೆಯ ಕಲೆಕ್ಷನ್ ಜತೆಗೆ ಮೆಚ್ಚುಗೆ ಪಡೆದಿತ್ತು. ಇದೀಗ ಇದೇ ಸಿನಿಮಾ ಅದೇ ನವೆಂಬರ್ 8ರಂದು ಮತ್ತೆ ಚಿತ್ರಮಂದಿರದಲ್ಲಿ ಮರು ಬಿಡುಗಡೆ ಆಗಲಿದೆ. ಈ ಮೂಲಕ ತೆರೆಮೇಲೆ ಮತ್ತೆ ದರ್ಶನ್ ಅಬ್ಬರಿಸಲಿದ್ದಾರೆ. ಈ ಚಿತ್ರಕ್ಕೂ ಮುನ್ನ ಯೂಟ್ಯೂಬ್ನಲ್ಲಿ 9 ಗ್ರಹಗಳು ಎಂಬ ಕಾಮಿಡಿ ಸ್ಕಿಟ್ ಇದೀಗ ಸದ್ದು ಮಾಡುತ್ತಿದೆ.
ಯೂಟ್ಯೂಬ್ನಲ್ಲಿ ಒಂಭತ್ತು ಗ್ರಹಗಳ ಹವಾ..
ಯೂಟ್ಯೂಬ್ನಲ್ಲಿ ತಮ್ಮ ಕಾಮಿಡಿ ವಿಡಿಯೋ ಮೂಲಕವೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ ವಿಜಯಪುರದ ಬಸವನ ಬಾಗೇವಾಡಿಯ ಶಿವಪುತ್ರ ಯಶಾರದಾ ಮತ್ತವರ ತಂಡ. shivaputra yasharadha comedy shows ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಹೊಸ ವಿಡಿಯೋ ಶೇರ್ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನವಗ್ರಹ ಚಿತ್ರವನ್ನೇ ಸ್ಪೂಪ್ ಮಾಡಿ ನಕ್ಕು ನಗಿಸಿದ್ದಾರೆ. ಒಂಭತ್ತು ಗ್ರಹಗಳು ಹೆಸರಿನಲ್ಲಿ ಈಗಾಗಲೇ ಎರಡು ಕಾಮಿಡಿ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ಮೂಲ ನವಗ್ರಹ ಸಿನಿಮಾದಲ್ಲಿ ಮೈಸೂರಿನ ಚಿನ್ನದ ಅಂಬಾರಿಯನ್ನು ಕಳ್ಳತನ ಮಾಡುವ ಪ್ಲಾನ್ ಇದ್ದರೆ, ಶಿವಪುತ್ರ ಅಂಡ್ ಗ್ಯಾಂಗ್ನ ಕಾಮಿಡಿ ವಿಡಿಯೋದಲ್ಲಿ ವಿಜಯಪುರದ ಗೋಲಗುಮ್ಮಟವನ್ನೇ ಹೋಲುವ ಚಿನ್ನದ ಗುಮ್ಮಟವನ್ನು ಕದಿಯೋ ಪ್ಲಾನ್ ಹಾಕಿದ್ದಾರೆ. ಥೇಟ್ ಸಿನಿಮಾದಲ್ಲಿರುವ ಜೀಪ್ಅನ್ನೇ ಇಲ್ಲಿಯೂ ಬಳಿಸಿದ್ದಾರೆ. ಸಿನಿಮಾದಲ್ಲಿನ ಪಾತ್ರಗಳನ್ನೇ ಹೋಲುವ ರೀತಿಯಲ್ಲಿ ಗೆಟಪ್ ಚೇಂಜ್ ಮಾಡಿಕೊಂಡಿದ್ದಾರೆ. ಸದ್ಯ ಎರಡು ವಿಡಿಯೋಗಳು ಬಿಡುಗಡೆ ಆಗಿದ್ದು, ಮುಂದಿನ ವಾರ ಪಾರ್ಟ್ 3 ಬಿಡುಗಡೆ ಆಗಲಿದೆ.
ನವೆಂಬರ್ 8ರಂದು ಚಿತ್ರಮಂದಿರದಲ್ಲಿ ನವಗ್ರಹ
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಡೆವಿಲ್ ಸಿನಿಮಾದ ಸಾಲು ಸಾಲು ಅಪ್ಡೇಟ್ಗಳು ಅಭಿಮಾನಿಗಳಿಗೆ ಸಿಕ್ಕಿರುತ್ತಿದ್ದವು. ಆದರೆ, ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿ ನಾಲ್ಕು ತಿಂಗಳು ಕಳೆಯಿತು. ಇಂದಿಗೂ ಅವರಿಗೆ ಜಾಮೀನು ಸಿಕ್ಕಿಲ್ಲ. ಈ ನಡುವೆ ಚಿತ್ರಮಂದಿರಗಳಲ್ಲಿ ದರ್ಶನ್ ಅವರ ಹಳೇ ಸಿನಿಮಾಗಳು ಮರು ಬಿಡುಗಡೆ ಆಗಿ ಸದ್ದು ಮಾಡಿದ್ದರು. ಕರಿಯ, ಶಾಸ್ತ್ರಿ, ಪೊರ್ಕಿ ಸಿನಿಮಾಗಳನ್ನು ಅವರ ಫ್ಯಾನ್ಸ್ ಮತ್ತೆ ವೀಕ್ಷಿಸಿ ಸಂಭ್ರಮಿಸಿದ್ದರು. ಇದೀಗ ದರ್ಶನ್ ಅವರ ನವಗ್ರಹ ಚಿತ್ರದ ಸರದಿ. ನವೆಂಬರ್ 8ರಂದು ಚಿತ್ರಮಂದಿರದಲ್ಲಿ ಈ ಸಿನಿಮಾ ಮರು ಬಿಡುಗಡೆ ಆಗಲಿದೆ.
ದಿನಕರ್ ತೂಗುದೀಪ್ ಹೇಳಿದ್ದೇನು?
ದರ್ಶನ್ ಜತೆಗೆ ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ತರುಣ್ ಸುಧೀರ್, ನಾಗೇಂದ್ರ ಅರಸ್, ಧರ್ಮ ಕೀರ್ತಿರಾಜ್, ಗಿರಿ ದಿನೇಶ್, ಶರ್ಮಿಳಾ ಮಾಂಡ್ರೆ ಮತ್ತು ವರ್ಷಾ ಸೇರಿ ಬಹುತಾರಾಗಣವೇ ಈ ಚಿತ್ರದಲ್ಲಿತ್ತು. ಈ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ನಿರ್ದೇಶಕ ದಿನಕರ್, "ನನ್ನ ನಿರ್ದೇಶನದ 2ನೇ ಚಿತ್ರ - 'ನವಗ್ರಹ', ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಬೆಳ್ಳ್ಳಿತೆರೆಯ ಮೇಲೆ ತಂದ ಒಂದು ಪ್ರಾಮಾಣಿಕ ಪ್ರಯತ್ನ. 16 ವರ್ಷಗಳ ಹಿಂದೆ ಬಿಡುಗಡೆಯಾಗಿ ನಿಮ್ಮೆಲ್ಲರ ಪ್ರೀತಿ-ಪ್ರೋತ್ಸಾಹದಿಂದ ಇಂದಿಗೂ ಜನಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರ ಒತ್ತಾಯದ ಫಲವಾಗಿ ಇದೇ ನವೆಂಬರ್ 8ರಂದು ಮರುಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ನೋಡಿ ಆನಂದಿಸಿ" ಎಂದಿದ್ದಾರೆ