Shobitha Shivanna: ಬ್ರಹ್ಮಗಂಟು ಧಾರಾವಾಹಿ ಪಿಂಕಿ ಖ್ಯಾತಿಯ ಶೋಭಿತಾ ಶಿವಣ್ಣ ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಶರಣು
ಕನ್ನಡ ಸುದ್ದಿ  /  ಮನರಂಜನೆ  /  Shobitha Shivanna: ಬ್ರಹ್ಮಗಂಟು ಧಾರಾವಾಹಿ ಪಿಂಕಿ ಖ್ಯಾತಿಯ ಶೋಭಿತಾ ಶಿವಣ್ಣ ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಶರಣು

Shobitha Shivanna: ಬ್ರಹ್ಮಗಂಟು ಧಾರಾವಾಹಿ ಪಿಂಕಿ ಖ್ಯಾತಿಯ ಶೋಭಿತಾ ಶಿವಣ್ಣ ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಶರಣು

Shobitha Shivanna: ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿ ಗುಂಡಮ್ಮ ತಂಗಿ ಪಿಂಕಿ ಪಾತ್ರದಲ್ಲಿ ನಟಿಸುತ್ತಿದ್ದ ಶೋಭಿತಾ ಶಿವಣ್ಣ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಶೋಭಿತಾ, ಎರಡೊಂದ್ಲಾ ಮೂರು, ಒಂದ್‌ ಕಥೆ ಹೇಳಾ, ಫಸ್ಟ್‌ ಡೇ ಫಸ್ಟ್‌ ಶೋ ಸೇರಿ ಕೆಲವೊಂದು ಸಿನಿಮಾಗಳಲ್ಲಿ ಕೂಡಾ ನಟಿಸಿದ್ದರು.

ಬಹ್ಮಗಂಟು ಧಾರಾವಾಹಿ ಪಿಂಕಿ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ
ಬಹ್ಮಗಂಟು ಧಾರಾವಾಹಿ ಪಿಂಕಿ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ (PC: Shobitha Shivanna Instagram)

ಖ್ಯಾತ ಕಿರುತೆರೆ ನಟಿ ಶೋಭಿತಾ ಶಿವಪ್ಪ ಆತ್ಮಹತ್ಯೆ ಮಾಡಿಕೊಂಡು ಶಾವಿಗೆ ಶರಣಾಗಿದ್ದಾರೆ. ಸುಮಾರು 6 ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿಯಲ್ಲಿ ಶೋಭಿತಾ ನಟಿಸಿದರು. ಶೋಭಿತಾ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕೆಲವು ವರ್ಷಗಳಿಂದ ಈ ನಟಿ ಹೈದರಾಬಾದ್‌ನಲ್ಲಿ ನೆಲೆಸಿದ್ದರು.

2016 ರಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿ

ಶೋಭಿತಾ ಆತ್ಮಹತ್ಯೆ ಸುದ್ದಿ ಕೇಳಿ ಕಿರುತೆರೆ ಆಘಾತಕ್ಕೆ ಒಳಗಾಗಿದೆ. 2016 ರಲ್ಲಿ ಜೀ ಕನ್ನಡದಲ್ಲಿ ಬ್ರಹ್ಮಗಂಟು ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಶೋಭಿತಾ, ನಾಯಕಿ ಗೀತಾ ಮಲ ತಂಗಿ ಪಿಂಕಿ ಪಾತ್ರದಲ್ಲಿ ನಟಿಸಿದ್ದರು. ನೆಗೆಟಿವ್‌ ಶೇಡ್‌ನಲ್ಲಿ, ಅಕ್ಕನಿಗೆ ತೊಂದರೆ ಕೊಡು ಪಾತ್ರದಲ್ಲಿ ಶೋಭಿತಾ ಅದ್ಭುತವಾಗಿ ನಟಿಸಿದ್ದರು. ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ಕೂಡಾ ಶೋಭಿತಾ ನಟಿಸಿದ್ದರು. ಧಾರಾವಾಹಿ ಮಾತ್ರವಲ್ಲ ಶೋಭಿತಾ ಎರಡೊಂದ್ಲಾ ಮೂರು, ಒಂದ್‌ ಕಥೆ ಹೇಳಾ, ಫಸ್ಟ್‌ ಡೇ ಫಸ್ಟ್‌ ಶೋ ಸೇರಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರು. ಕೆಲವು ವರ್ಷಗಳ ಹಿಂದೆ ಅವರು ಮದುವೆ ಆಗಿ ಹೈದರಾಬಾದ್‌ನಲ್ಲಿ ಸೆಟಲ್‌ ಆಗಿದ್ದರು.

ಮದುವೆ ನಂತರ ನಟನೆಯಿಂದ ದೂರ ಉಳಿದಿದ್ದ ಶೋಭಿತಾ , ಕಮ್‌ ಬ್ಯಾಕ್‌ ಮಾಡಲು ತಯಾರಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಮದುವೆಯಲ್ಲಿ, ಗೀತಾ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದರು. ಶೋಭಿತಾ ಸಾವಿನ ಸುದ್ದಿ ತಿಳಿದು ನಟಿ ಗೀತಾ ಭಾರತಿ ಭಟ್‌ ಕೂಡಾ ಆಘಾತ ವ್ಯಕ್ತಪಡಿಸಿದ್ದಾರೆ. ಪರಿಚಯಸ್ಥರು ಹಾಕಿಕೊಂಡಿದ್ದ ಸ್ಟೇಟಸ್‌ ನೋಡಿ ಗಾಬರಿ ಆದೆ, ಸುಳ್ಳು ಸುದ್ದಿ ಇರಬಹುದು ಎಂದುಕೊಂಡಿದ್ದೆ, ಆದರೆ ನಿಜ ಎಂದು ತಿಳಿದ ನಂತರ ಶಾಕ್‌ ಆದೆ. ಧಾರಾವಾಹಿ ನಂತರ ನಾವು ಅಷ್ಟು ಸಂಪರ್ಕದಲ್ಲಿರಲಿಲ್ಲ. ಆದರೆ ಕಾರ್ಯಕ್ರಮಗಳಲ್ಲಿ ಭೇಟಿ ಆದಾಗ ಮಾತನಾಡಿಸುತ್ತಿದ್ದೆವು ಎಂದು ಗೀತಾ ಹೇಳಿದ್ದಾರೆ.

ಹೈದರಾಬಾದ್‌ಗೆ ತೆರಳಿದ ಶೋಭಿತಾ ಪೋಷಕರು

ಕೌಟುಂಬಿಕ ಕಲಹ ಅಥವಾ ವೃತ್ತಿ ಯಾವ ವಿಚಾರಕ್ಕೆ ಶೋಭಿತಾ ಆತ್ಮಹತ್ಯೆಯಂಥ ನಿರ್ಧಾರ ಕೈಗೊಂಡರು ಎಂಬುದು ತಿಳಿದುಬಂದಿಲ್ಲ. ಇತ್ತೀಚೆಗೆ ಶೋಭಿತಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಶನಿವಾರ ರಾತ್ರಿ ಶೋಭಿತಾ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಹೊರಬಿದ್ದಿದೆ. ವಿಚಾರ ತಿಳಿದ ಕೂಡಲೇ ಶೋಭಿತಾ ಪೋಷಕರು ಹೈದರಾಬಾದ್‌ಗೆ ತೆರಳಿದ್ದಾರೆ. ಶೋಭಿತಾ ಮೃತದೇಹವನ್ನು ಹೈದರಾಬಾದ್‌ನಲ್ಲೀ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಬೆಂಗಳೂರಿಗೆ ತಂದು ಅಂತ್ಯಕ್ರಿಯೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಶೋಭಿತಾ ಸಾವಿಗೆ ಕಿರುತೆರೆ, ಸಿನಿಮಾ ಕಲಾವಿದರು ಸಂತಾಪ ಸೂಚಿಸಿದ್ದಾರೆ.

Whats_app_banner