Shreegowri Serial End: ನೂರು ಜನ್ಮಕೂ ಧಾರಾವಾಹಿಗೆ ಜಾಗಮಾಡಿಕೊಟ್ಟ ಶ್ರೀಗೌರಿ; ನಾಳೆಯಿಂದ ಕೊನೇ ಏಪಿಸೋಡ್‌ಗಳ ಪ್ರಸಾರ
Colors Kannada serials: ಡಿಸೆಂಬರ್ 23ರಿಂದ ಕಲರ್ಸ್ ಕನ್ನಡದಲ್ಲಿ ನೂರು ಜನ್ಮಕೂ ಹೊಸ ಧಾರಾವಾಹಿ ಪ್ರಸಾರ ಆರಂಭಿಸಲಿದೆ. ಈ ಧಾರಾವಾಹಿ ಸಲುವಾಗಿ ಶ್ರೀಗೌರಿ ಸೀರಿಯಲ್ ಕೊನೆಯಾಗಲಿದೆ. ನಾಳೆಯಿಂದ ಒಂದು ವಾರದಲ್ಲಿ ಶ್ರೀಗೌರಿ ಧಾರಾವಾಹಿಯ ಕೊನೇ ಏಪಿಸೋಡ್‌ಗಳು ಪ್ರಸಾರವಾಗಲಿವೆ.
Shreegowri Serial End: ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೀಗ ನೂರು ಜನ್ಮಕೂ ಎಂಬ ಹೊಸ ಸೀರಿಯಲ್ ಪ್ರಸಾರಕ್ಕೆ ಅಣಿಯಾಗಿದೆ. ಹಾರರ್ ಕಥೆಯ ಪ್ರೋಮೋ ಮೂಲಕವೇ ಈಗಾಗಲೇ ವೀಕ್ಷಕರ ಗಮನ ಸೆಳೆದ ಈ ಧಾರಾವಾಹಿ, ಇನ್ನೇನು ಇದೇ ಡಿಸೆಂಬರ್ 23ರಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರವಾಗಲಿದೆ. ಈ ನಡುವೆ ಒಂದು ಸೀರಿಯಲ್ ಬರ್ತಿದೆ ಎಂದಾದರೆ, ಇನ್ನೊಂದರ ಕೊನೆಯಾಗಲೇ ಬೇಕು. ಅಥವಾ ಮಹತ್ವದ ಬದಲಾವಣೆಯನ್ನು ವಾಹಿನಿ ಮಾಡಿಕೊಳ್ಳಬೇಕು. ಇದೀಗ ಹೊಸ ನೂರು ಜನ್ಮಕೂ ಧಾರಾವಾಹಿಗಾಗಿ, ಶ್ರೀಗೌರಿ ಸೀರಿಯಲ್ ಕೊನೆಯಾಗುತ್ತಿದೆ!
ಶ್ರೀಗೌರಿ ಸೀರಿಯಲ್ ಬಗ್ಗೆ ಹೇಳುವುದಾದರೆ, ಇದೇ ವರ್ಷದ ಜನವರಿ 29ರ ರಾತ್ರಿ 8:30ಕ್ಕೆ ಈ ಸಿರೀಯಲ್ ಪ್ರಸಾರ ಆರಂಭಿಸಿತ್ತು. ಕಮಲಿ ಸೀರಿಯಲ್ ಮೂಲಕ ಗಮನ ಸೆಳೆದ ಅಮೂಲ್ಯ ಗೌಡ ಶ್ರೀಗೌರಿಯಾಗಿ ಕಾಣಿಸಿಕೊಂಡಿದ್ದರೆ, ನಾಯಕನಾಗಿ ಕಾರ್ತಿಕ್ ಅತ್ತಾವರ್ ನಟಿಸುತ್ತಿದ್ದಾರೆ. ಇನ್ನುಳಿದಂತೆ ಸುನೀಲ್ ಪುರಾಣಿಕ್, ನಂದಿನಿ ಗೌಡ, ಗಾಯತ್ರಿ ಪ್ರಭಾಕರ್, ಸಂಜಯ್ ಸೂರಿ ಈ ಸೀರಿಯಲ್‌ನಲ್ಲಿದ್ದಾರೆ. ಆರಂಭದಲ್ಲಿ ಕಾಂತಾರ ಸಿನಿಮಾವನ್ನೇ ಹೋಲುವ ಕಂಬಳದ ಹಿನ್ನೆಲೆಯ ಪ್ರೋಮೋ ಮೂಲಕವೇ ಈ ಧಾರಾವಾಹಿ ಗಮನ ಸೆಳೆದಿತ್ತು.
ಪಾತ್ರಧಾರಿಗಳು ಯಾರ್ಯಾರು?
‘ಶ್ರೀಗೌರಿ’ ಧಾರಾವಾಹಿಯಲ್ಲಿ ಗೌರಿ ಪಾತ್ರದಲ್ಲಿ ನಟಿ ಅಮೂಲ್ಯ ಗೌಡ ನಟಿಸಿದರೆ, ಅಪ್ಪು ಅಲಿಯಾಸ್ ಶಂಕರ್ ಆಗಿ ಕಾರ್ತಿಕ್ ಅತ್ತಾವರ್ ಕಾಣಿಸಿಕೊಂಡಿದ್ದಾರೆ. ಸುನೀಲ್ ಪುರಾಣಿಕ್ ಅವರಿಗಿಲ್ಲಿ ರಘುರಾಮ್ ಹೆಗಡೆ ಪಾತ್ರ. ಮಂಗಳಮ್ಮನ ಪಾತ್ರದಲ್ಲಿ ನಟಿ ನಂದಿನಿ ಗೌಡ ನಟಿಸಿದರೆ, ಆರೋಹಿ ನೈನಾ ಅವರಿಗೆ ಅರ್ಚನಾ ಪಾತ್ರ ಸಿಕ್ಕಿದೆ. ಮಾಣಿಕ್ಯ ಪಾತ್ರದಲ್ಲಿ ಸಚಿನ್ ತಿಮ್ಮಯ್ಯ, ಶರಣನಾಗಿ ರಾಜೇಶ್ ಧ್ರುವ, ಭಾರತಿ ಪಾತ್ರದಲ್ಲಿ ಗಾಯತ್ರಿ ಪ್ರಭಾಕರ್, ಇಶಿತಾ ವರ್ಷ ಸೋನಿಕಾ ಪಾತ್ರದಲ್ಲಿದ್ದಾರೆ. ಈಗ ಇದೇ ಸೀರಿಯಲ್ ಕೊನೇ ಹಂತಕ್ಕೆ ಬಂದು ನಿಂತಿದೆ.
ಸದ್ಯ ಕಥೆಯಲ್ಲಿ ಏನಾಗಿದೆ?
ಮಂಗಳಮ್ಮನ ಮುಂದೆ ಅರ್ಚನಾ ಬಣ್ಣ ಬಯಲಾಗುವ ಸಮಯ ಹತ್ತಿರವಾಗಿದೆ. ಜಾತಕದಲ್ಲಿ ಸಮಸ್ಯೆ ಇದೆ ಅನ್ನೋ ಕಾರಣಕ್ಕೆ ಅರ್ಚನಾಳಿಂದಲೇ ಮನೆ ಬಿಟ್ಟಿದ್ದ ಗೌರಿಯನ್ನು ಮಂಗಳಮ್ಮ ಮತ್ತೆ ಕರೆತಂದಿದ್ದಾಳೆ. ಆದರೆ, ಇದರ ಮೂಲ ಅರ್ಚನಾ ಎಂಬುದು ಮಂಗಳಮ್ಮನಿಗೆ ಮಾತ್ರ ತಿಳಿದಿಲ್ಲ. ಮುಂದಿನ ಒಂದು ವಾರದಲ್ಲಿ ಇದೆಲ್ಲದಕ್ಕೂ ಅಂತ್ಯ ಬೀಳಲಿದೆ.
ನೂರು ಜನ್ಮಕೂ ಸೀರಿಯಲ್ ಕಥೆ ಏನು?
ಮೊದಲ ನೋಟಕ್ಕೆ ‘ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕತೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕತೆಯಿದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರಸ್ವಾಮಿಯ ಪರಮಭಕ್ತೆಯಾದ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳಲು ಒದ್ದಾಡುವ ಹೆಣ್ಣಾಗಿ ಮೈತ್ರಿ ನೋಡುಗರ ಮನಸನ್ನು ಆವರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.
ವಿಭಾಗ