Singham Again OTT: ಕೆಲವೇ ಗಂಟೆಗಳಲ್ಲಿ ಈ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ ಸಿಂಗಂ ಅಗೇನ್ ಸಿನಿಮಾ
Singham Again OTT Release Date: ಬಾಲಿವುಡ್‌ನ ಬಹುತಾರಾಗಣದ ಸಿಂಗಂ ಅಗೇನ್ ಸಿನಿಮಾ ಇನ್ನೇನು ಕೆಲವೇ ಗಂಟೆಗಳಲ್ಲಿ ಒಟಿಟಿಗೆ ಆಗಮಿಸಲಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾ, ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 1ರಂದು ಬಿಡುಗಡೆ ಆಗಿತ್ತು. ಆದರೆ, ನಿರೀಕ್ಷೆ ಮಟ್ಟ ತಲುಪುವಲ್ಲಿ ವಿಫಲವಾಗಿತ್ತು. ಈಗ ಎರಡು ತಿಂಗಳ ಬಳಿಕ ಒಟಿಟಿಯತ್ತ ಮುಖ ಮಾಡಿದೆ.
Singham Again OTT Release Date: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನದ ಸಿನಿಮಾ ಸಿಂಗಮ್ ಅಗೇನ್. ಬಹುತಾರಾಗಣದ ಈ ಸಿನಿಮಾದಲ್ಲಿ ಅಜಯ್ ದೇವಗನ್ ಜತೆಗೆ, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್, ದೀಪಿಕಾ ಪಡುಕೋಣೆ ಸೇರಿ ಇನ್ನೂ ಹಲವು ಘಟಾನುಘಟಿಗಳು ನಟಿಸಿದ್ದಾರೆ. ನವೆಂಬರ್ 1ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲಿಯೂ ಮೋಡಿ ಮಾಡಿತ್ತು. ಈಗ ಇದೇ ಸಿನಿಮಾ ಒಟಿಟಿಗೆ ಆಗಮಿಸಲು ತುದಿಗಾಲ ಮೇಲೆ ನಿಂತಿದೆ.
ಯಾವಾಗಿನಿಂದ ವೀಕ್ಷಣೆ?
ಸಿಂಗಂ ಸಿನಿಮಾದ ಫ್ರಾಂಚೈಸಿಯಾಗಿರುವ ಸಿಂಗಂ ಅಗೇನ್ ಸುದೀರ್ಘ ಎರಡು ತಿಂಗಳ ಬಳಿಕ ಒಟಿಟಿಗೆ ಆಗಮಿಸುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಅಮೆಜಾನ್ ಪ್ರೈಂನಲ್ಲಿ ಬಾಡಿಗೆ ಆಧಾರದ ಮೇಲೆ ಈ ಸಿನಿಮಾ ವೀಕ್ಷಣೆಗೆ ಲಭ್ಯವಿತ್ತು. ಇದೀಗ ಡಿಸೆಂಬರ್ 27ರ ಶುಕ್ರವಾರದಿಂದ ಎಲ್ಲ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರರಿಗೆ ಉಚಿತವಾಗಿ ಲಭ್ಯವಾಗಲಿದೆ. 370 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 390 ಕೋಟಿ ಗಳಿಕೆ ಕಂಡು ಎವರೇಜ್ ಎನಿಸಿಕೊಂಡಿತ್ತು.
ಬಹುಕೋಟಿಗೆ ಒಟಿಟಿ ಹಕ್ಕು ಸೇಲ್
ದೊಡ್ಡ ತಾರಾಬಳಗ, ಅದ್ಧೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾದರೂ, ಕಲೆಕ್ಷನ್ ವಿಚಾರದಲ್ಲಿ ಈ ಸಿನಿಮಾ ನಿರೀಕ್ಷಿತ ಮಟ್ಟ ತಲುಪಿರಲಿಲ್ಲ. ಡಿಜಿಟಲ್ ಹಕ್ಕುಗಳು, ಟಿವಿ ಹಕ್ಕುಗಳನ್ನು ಮಾರಿಕೊಂಡಿದ್ದೇ ಈ ಸಿನಿಮಾಕ್ಕೆ ಸಿಕ್ಕ ಅಷ್ಟೋ ಇಷ್ಟು ಲಾಭ. ಬರೋಬ್ಬರಿ 130 ಕೋಟಿಗೆ ಅಜಯ್ ದೇವಗನ್ ಅವರ ಸಿಂಗಂ ಅಗೇನ್ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಪ್ರೈಂ ವಿಡಿಯೋ ಪಡೆದುಕೊಂಡಿತ್ತು ಎಂದು ವರದಿಯಾಗಿತ್ತು. ಇದೀಗ ಡಿಸೆಂಬರ್ 27ರಂದು ಒಟಿಟಿಗೆ ಆಗಮಿಸುತ್ತಿದೆ.
ಈ ಒಟಿಟಿ ಬಿಡುಗಡೆ ಕುರಿತ ವಿಚಾರವನ್ನು ಅಮೆಜಾನ್ ಪ್ರೈಮ್ ವಿಡಿಯೋ ತನ್ನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದೆ. "ಸಿಂಹದ ಘರ್ಜನೆಯನ್ನು ಎದುರಿಸಲು ಸಿದ್ಧರಾಗಿರಿ. ಸಿಂಗಂ ಅಗೇನ್ ನಾಳೆ (ಡಿಸೆಂಬರ್ 27ರಂದು) ಪ್ರೈಮ್ ವಿಡಿಯೋಗೆ ಬರಲಿದೆ" ಎಂದು ಪೋಸ್ಟ್ ಮಾಡಿದೆ. ಸಿಂಗಂ ಅಗೇನ್ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿತ್ತು. ಈ ಸಿನಿಮಾ ಎದುರು ಕಾರ್ತಿಕ್ ಆರ್ಯನ್ ಅವರ ಭೂಲ್ ಭುಲ್ಲಯ್ಯ 3 ಸಿನಿಮಾ ಸಹ ತೆರೆಕಂಡಿತ್ತು. ಎರಡೂ ಸಿನಿಮಾಗಳ ನಡುವೆ ದೊಡ್ಡ ಕ್ಲ್ಯಾಷ್ ಸಹ ಏರ್ಪಟ್ಟಿತ್ತು. ಈ ಎರಡು ಸಿನಿಮಾಗಳ ಪೈಕಿ ಭೂಲ್ ಭುಲ್ಲಯ್ಯ 3 ಚಿತ್ರ ಮುಂದಡಿ ಇರಿಸಿತ್ತು.
ಬಾಲಿವುಡ್ ಇತಿಹಾಸದಲ್ಲೇ ಅತಿ ದೊಡ್ಡ ಟ್ರೇಲರ್ (4 ನಿಮಿಷ 57 ಸೆಕೆಂಡ್) ಸಿಂಗಂ ಅಗೇನ್ ಚಿತ್ರದ್ದಾಗಿತ್ತು. ರಾಮಾಯಣ ಕಥೆಯ ಹಿನ್ನೆಲೆಯಲ್ಲಿಯೇ ಹೆಣೆದ ಟ್ರೇಲರ್ ಪ್ರೇಕ್ಷಕರನ್ನು ರಂಜಿಸಿತ್ತು. ಆದರೆ, ಸಿನಿಮಾ ಬಿಡುಗಡೆ ಆದ ಬಳಿಕ ನಿರೀಕ್ಷಿತ ಗುರಿ ಮುಟ್ಟಲಿಲ್ಲ. ಈಗ ಎರಡು ತಿಂಗಳ ನಂತರ ಒಟಿಟಿಗೆ ಪ್ರವೇಶಿಸುತ್ತಿದೆ. ಚಿತ್ರಮಂದಿರಗಳಲ್ಲಿ ಹೆಚ್ಚು ಯಶಸ್ವಿಯಾಗದ ಈ ಸಿನಿಮಾಕ್ಕೆ ಒಟಿಟಿಯಲ್ಲಾದರೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಾ ಕಾದು ನೋಡಬೇಕಾಗಿದೆ.
ವಿಭಾಗ