Sky Force Trailer: ಪಾಕಿಸ್ತಾನದ ಮೇಲೆ ಭಾರತದ ಮೊದಲ ವೈಮಾನಿಕ ದಾಳಿಯ ರೋಚಕತೆ; ಸ್ಕೈ ಫೋರ್ಸ್ ಚಿತ್ರದ ಟ್ರೇಲರ್ ಬಿಡುಗಡೆ
Sky Force Movie Trailer: ನೈಜ ಘಟನೆ ಆಧರಿತ ಬಾಲಿವುಡ್‌ನ ಸ್ಕೈ ಫೋರ್ಸ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಪಾಕಿಸ್ತಾನದ ಮೇಲಿನ ವೈಮಾನಿಕ ದಾಳಿಯ ಹಿನ್ನೆಲೆಯ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದರೆ, ವೀರ್ ಪಹಾಡಿಯಾ ಬಿಟೌನ್‌ಗೆ ಪದಾರ್ಪಣೆ ಮಾಡಿದ್ದಾರೆ. ಜನವರಿ 14ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
Sky Force Trailer: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಸ್ಕೈ ಫೋರ್ಸ್ ಚಿತ್ರದ ಟ್ರೇಲರ್ ಇಂದು (ಜ 5) ಬಿಡುಗಡೆಯಾಗಿದೆ. ಅಕ್ಷಯ್ ಕುಮಾರ್, ನಿಮ್ರತ್ ಕೌರ್, ಸಾರಾ ಅಲಿ ಖಾನ್ ಮತ್ತು ಶರದ್ ಕೇಳ್ಕರ್ ಅವರನ್ನು ಹೊರತುಪಡಿಸಿ, ಈ ಸಿನಿಮಾ ಮೂಲಕ ವೀರ್ ಪಹಾಡಿಯಾ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಪಾಕಿಸ್ತಾನದ ಮೇಲೆ ಭಾರತದ ಮೊದಲ ವೈಮಾನಿಕ ದಾಳಿ ಮತ್ತು ಮಿಷನ್‌ನಲ್ಲಿ ಕಾಣೆಯಾದ ಭಾರತೀಯ ವಾಯುಪಡೆಯ ಸೈನಿಕನ ಕಥೆ ಈ ಚಿತ್ರದ ಎಳೆ. ಇನ್ನೇನು ಇದೇ ಜ 24ರಂದು ಗಣರಾಜ್ಯೋತ್ಸವದ ಪ್ರಯುಕ್ತ ಈ ಸಿನಿಮಾ ತೆರೆಗೆ ಬರುತ್ತಿದೆ.
1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ನೈಜ ಘಟನೆಯನ್ನು ಆಧರಿಸಿ ಚಿತ್ರದ ಕಥೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯುನೆಲೆ ಮೇಲೆ ಭಾರತೀಯ ವಾಯುಸೇನೆ ವೈಮಾನಿಕ ದಾಳಿ ನಡೆಸಿತು. ಇದು ಭಾರತೀಯ ವಾಯುಪಡೆಯ ಮೊದಲ ಮತ್ತು ಅತ್ಯಂತ ಮಾರಣಾಂತಿಕ ದಾಳಿ ಎಂದು ಪರಿಗಣಿಸಲಾಗಿದೆ. ಚಿತ್ರದಲ್ಲಿ ದೇಶಪ್ರೇಮದ ಜೊತೆಗೆ ಆ್ಯಕ್ಷನ್ ಕೂಡ ಇದೆ. ಇದು ಭಾರತೀಯ ವಾಯುಪಡೆಯ ಧೈರ್ಯದ ಪ್ರತೀಕ ಎಂಬಂತೆ ಕಾಣಿಸುತ್ತದೆ.
ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಸ್ಕೈ ಫೋರ್ಸ್ ಚಿತ್ರದ 2 ನಿಮಿಷ 28 ಸೆಕೆಂಡುಗಳ ಟ್ರೇಲರ್‌ನಲ್ಲಿ ವೈಮಾನಿಕ ಸಾಹಸವೇ ಹೈಲೈಟ್. ಇದೇ ಟ್ರೇಲರ್‌ನಲ್ಲಿ ಭಾರತೀಯ ಸೈನಿಕರ ಮನಸ್ಥಿತಿ ಹೇಗಿರಬೇಕು ಎಂಬುದನ್ನೂ ಸೂಚ್ಯವಾಗಿ ಹೇಳಿದ್ದಾರೆ ನಿರ್ದೇಶಕರು. 'ನಾವು ಕೂಡ ನುಗ್ಗಿ ಹೊಡೆಯಬಹುದು ಎಂದು ನಮ್ಮ ನೆರೆಹೊರೆಯವರಿಗೂ ಹೇಳಬೇಕು. ಈಗ ನಮ್ಮ ಆಲೋಚನೆ ಬದಲಾಗಬೇಕು. ನಾವು ಸೈನಿಕರು, ಇನ್ನೊಂದು ಕೆನ್ನೆ ತೋರಿಸುವುದಿಲ್ಲ" ಎಂದು ಅಕ್ಷಯ್ ಕುಮಾರ್ ಅವರ ಬಾಯಿಂದ ಡೈಲಾಗ್ ಬಂದಿದೆ.
ಏನಿದು ಕಥೆ?
ಭಾರತೀಯ ವಾಯುಪಡೆಯು ಪಾಕಿಸ್ತಾನದ ಮೇಲೆ ನಡೆಸಿದ ನೈಜ ಘಟನೆ ಆಧರಿತ, ಮೊದಲ ವೈಮಾನಿಕ ದಾಳಿಯ ಕಥೆ ಈ ಚಿತ್ರದ್ದು. ಅದರ ಹೆಸರೇ ಸ್ಕೈ ಫೋರ್ಸ್. ಸರ್ಗೋಧಾದಲ್ಲಿರುವ ಪಾಕಿಸ್ತಾನಿ ವಾಯುನೆಲೆಯ ಮೇಲೆ ಭಾರತದ ಮೊದಲ ವೈಮಾನಿಕ ದಾಳಿಯನ್ನು ಈ ಸಿನಿಮಾ ಆಧರಿಸಿದೆ. ಈ ಕಾರ್ಯಾಚರಣೆಯಲ್ಲಿ ವೀರ್ ಪಹಾಡಿಯಾ ನಾಪತ್ತೆಯಾಗುತ್ತಾನೆ. ನಾಪತ್ತೆಯಾದ ಸೈನಿಕನನ್ನು ಹುಡುಕುವುದೇ ಈ ಸಿನಿಮಾದ ಎಳೆ. ಈ ರೋಚಕ ಹುಡುಕಾಟವನ್ನು ಅಷ್ಟೇ ಸಾಹಸ ಮಯವಾಗಿ ಟ್ರೇಲರ್‌ನಲ್ಲಿ ಕಾಣಬಹುದು.
ಜನವರಿ 24ರಂದು ಬಿಡುಗಡೆ
ಮ್ಯಾಡಾಕ್ ಫಿಲ್ಮ್ಸ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್, ಅಮರ್ ಕೌಶಿಕ್ ಮತ್ತು ಜ್ಯೋತಿ ದೇಶಪಾಂಡೆ ಈ ಸಿನಿಮಾ ನಿರ್ಮಿಸಿದ್ದಾರೆ. ಸಂದೀಪ್ ಕೇವಾಲಾನಿ ಮತ್ತು ಅಭಿಷೇಕ್ ಅನಿಲ್ ಕಪೂರ್ ಜಂಟಿಯಾಗಿ ಸಿನಿಮಾ ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ವೀರ್ ಪಹಾಡಿಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಾರಾ ಅಲಿ ಖಾನ್, ನಿಮ್ರತ್ ಕೌರ್ ಮತ್ತು ಶರದ್ ಕೇಳ್ಕರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ವೀರ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರವು ಜನವರಿ 24ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.