Renu Desai Instagram: ಪವನ್ ಕಲ್ಯಾಣ್ ಜೈಲಿಗೆ ಹೋಗುವುದನ್ನು ರೇಣು ದೇಸಾಯಿ ತಪ್ಪಿಸಿದ್ದಾರೆ.. ಕೃಷ್ಣಕುಮಾರಿ
ಪವನ್ ಕಲ್ಯಾಣ್ ಮೊದಲ ಪತ್ನಿಗೆ ಡಿವೋರ್ಸ್ ಕೊಡುವ ಮುನ್ನವೇ ರೇಣು ದೇಸಾಯಿ ಅವರೊಂದಿಗೆ ಸಹ ಜೀವನ ನಡೆಸಿದ್ದರು. ಆಗ ಅಕಿರಾ ಜನಿಸಿದ್ದರು. ರೇಣುದೇಸಾಯಿ ಪವನ್ ಕಲ್ಯಾಣ್ ವಿರುದ್ಧ ಒಂದು ಮಾತು ಹೇಳಿದ್ದರೆ, ಆತ ಅಂದೇ ಜೈಲಿಗೆ ಹೋಗುತ್ತಿದ್ದರು.
ಟಾಲಿವುಡ್ ನಾಯಕ ಪವನ್ ಕಲ್ಯಾಣ್ ಹಳೆಯ ಮದುವೆ ವಿಚಾರ ಆಗ್ಗಾಗ್ಗೆ ಪ್ರಸ್ತಾಪ ಆಗುತ್ತಲೇ ಇದೆ. ಇದೇ ವಿಚಾರಕ್ಕೆ ಪವನ್ ಕಲ್ಯಾಣ್ ಟ್ರೋಲ್ ಕೂಡಾ ಆಗಿದ್ದಾರೆ. ಆದರೆ ಪವನ್ ಕಲ್ಯಾಣ್ ಅಭಿಮಾನಿಗಳು ಮಾತ್ರ ಅವರ ಎರಡನೇ ಪತ್ನಿ ರೇಣು ದೇಸಾಯಿ ಅವರನ್ನು ಅವಕಾಶ ಸಿಕ್ಕಾಗಲೆಲ್ಲಾ ಬೈಯ್ಯುತ್ತಲೇ ಇರುತ್ತಾರೆ. ಇದಕ್ಕೆ ಸಂಬಂಧಿಸಿದ್ದಂತೆ ಇತ್ತೀಚೆಗೆ ಸಾಮಾಜಿಕ ಹೋರಾಟಗಾರ್ತಿ ಕೃಷ್ಣ ಕುಮಾರಿ ಪ್ರತಿಕ್ರಿಯಿಸಿದ್ದಾರೆ.
ಪವನ್ ಕಲ್ಯಾಣ್, 1997ರಲ್ಲಿ ನಂದಿನಿ ಎಂಬುವರನ್ನು ಮದುವೆಯಾದರು. ಆದರೆ ಈ ಜೋಡಿ 2007ರಲ್ಲಿ ವಿಚ್ಛೇದನ ಪಡೆದರು. ನಂತರ ತಮ್ಮ ಸಹನಟಿ ರೇಣು ದೇಸಾಯಿ ಅವರನ್ನು ಪವನ್ ಕಲ್ಯಾಣ್ 2009ರಲ್ಲಿ ಮದುವೆಯಾದರು, ಈ ಸಂಬಂಧ ಕೂಡಾ ಹೆಚ್ಚು ಕಾಲ ಉಳಿಯಲಿಲ್ಲ. 2012ರಲ್ಲಿ ಪವನ್ ಹಾಗೂ ರೇಣು ದೇಸಾಯಿ ದೂರಾದರು. ನಂತರ ಪವನ್ ಕಲ್ಯಾಣ್ 2013 ರಲ್ಲಿ ಅನ್ನಾ ಲೆಜ್ನೆವಾ ಎಂಬ ವಿದೇಶಿ ಯುವತಿಯ ಕೈ ಹಿಡಿದರು. ಆದರೆ ಪವನ್ ಕಲ್ಯಾಣ್ ಅಭಿಮಾನಿಗಳು ಮಾತ್ರ ರೇಣು ದೇಸಾಯಿ ಅವರನ್ನು ಪದೇ ಪದೆ ದೂರುತ್ತಾ ಬಂದಿದ್ಧಾರೆ. ಮೊನ್ನೆ ಅಕಿರಾ ನಂದನ್ ಹುಟ್ಟುಹಬ್ಬದ ದಿನ ಕೂಡಾ ವ್ಯಕ್ತಿಯೊಬ್ಬರು ಕಮೆಂಟ್ ಮಾಡಿ, ಅಕಿರಾ, ತಂದೆ ಪ್ರೀತಿಯಿಂದ ವಂಚಿತರಾಗುವಂತೆ ಮಾಡಿದ್ದೀರ ಎಂದು ದೂರಿದ್ದರು. ಇದಕ್ಕೆ ರೇಣು ದೇಸಾಯಿ ಬೇಸರ ವ್ಯಕ್ತಪಡಿಸಿದ್ದರು.
ಇದೇ ವಿಚಾರಕ್ಕೆ ಸಾಮಾಜಿಕ ಹೋರಾಟಗಾರ್ತಿ ಕೃಷ್ಣ ಕುಮಾರಿ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. ''ಖ್ಯಾತ ನಟ-ನಟಿಗೆ ಡಿವೋರ್ಸ್ ಆದರೆ ಜನರು ನಟಿಯತ್ತ ಬೆರಳು ಮಾಡಿ ತೋರಿಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ನಟನ ಬಗ್ಗೆ ಒಂದೂ ಮಾತನಾಡುವುದಿಲ್ಲ. ಸಮಂತಾ ವಿಚಾರದಲ್ಲಿ ಕೂಡಾ ಹಾಗೇ ಆಯ್ತು. ನಾಗಚೈತನ್ಯ ಜೊತೆ ಡಿವೋರ್ಸ್ ಆದಾಗ ಎಲ್ಲರೂ ಆಕೆ ವಿರುದ್ದ ಬಾಯಿಗೆ ಬಂದಂತೆ ಮಾತನಾಡಿದರು. ಆಕೆಗೆ ಅಫೇರ್ ಇದೆ ಎಂದರು. ಈ ಎಲ್ಲಾ ನೋವಿಂದಲೇ ಆಕೆ ಅನಾರೋಗ್ಯಕ್ಕೆ ಒಳಗಾದರು. ‘’
''ರೇಣು ದೇಸಾಯಿ ಬಗ್ಗೆ ಕೂಡಾ ಜನರು ಮೊದಲಿನಿಂದ ಇದೇ ರೀತಿ ಕಮೆಂಟ್ ಮಾಡುತ್ತಾ ಬಂದಿದ್ದಾರೆ. ರೇಣು, ಪವನ್ ಕಲ್ಯಾಣ್ ಅವರಿಂದ ದೂರ ಆದ ನಂತರ ಆಕೆ ಇಬ್ಬರು ಮಕ್ಕಳ ಜವಾಬ್ದಾರಿ ವಹಿಸಿಕೊಂಡು ಒಂದು ಪ್ರೊಡಕ್ಷನ್ ಹೌಸ್ ಶುರು ಮಾಡಿ ಜೊತೆಗೆ ನಟಿಸುತ್ತಿದ್ದಾರೆ. ಈ ಸಮಯದಲ್ಲಿ ಸಮಾಜ ಆಕೆಗೆ ಧೈರ್ಯ ತುಂಬಬೇಕು. ಅದನ್ನು ಹೊರತು ಪಡಿಸಿ ಆಕೆಯನ್ನು ನಿಂದಿಸುವುದು ಸರಿ ಅಲ್ಲ. ಆಕೆಯಿಂದ ದೂರಾದ ನಂತರ ಪವನ್ ಕಲ್ಯಾಣ್ ಮತ್ತೊಂದು ಮದುವೆ ಆದರು. ಆದರೆ ರೇಣು ದೇಸಾಯಿ ಮದುವೆ ಆಗುತ್ತೇನೆ ಎಂದಾಗ ಎಲ್ಲರೂ ಆಕೆಯನ್ನು ಬೈಯ್ಯಲು ಶುರು ಮಾಡಿದರು.''
''ಪವನ್ ಕಲ್ಯಾಣ್ ಮೊದಲ ಪತ್ನಿಗೆ ಡಿವೋರ್ಸ್ ಕೊಡುವ ಮುನ್ನವೇ ರೇಣು ದೇಸಾಯಿ ಅವರೊಂದಿಗೆ ಸಹ ಜೀವನ ನಡೆಸಿದ್ದರು. ಆಗ ಅಕಿರಾ ಜನಿಸಿದ್ದರು. ಅಕಿರಾ, ಪವನ್ ಕಲ್ಯಾಣ್ ಜೊತೆಗಿನ ಸಹ ಜೀವನದಿಂದ ಹುಟ್ಟಿದ್ದಲ್ಲ, ಪವನ್ ಕಲ್ಯಾಣ್ ನನಗೆ ದೇವಸ್ಥಾನದಲ್ಲೋ, ಮನೆಯಲ್ಲೋ ತಾಳಿ ಕಟ್ಟಿದ್ದರು ಎಂದು ರೇಣುದೇಸಾಯಿ ಪವನ್ ಕಲ್ಯಾಣ್ ವಿರುದ್ಧ ಒಂದು ಮಾತು ಹೇಳಿದ್ದರೆ, ಆತ ಅಂದೇ ಜೈಲಿಗೆ ಹೋಗುತ್ತಿದ್ದರು. ಆದರೆ ಅದೆಲ್ಲದರಿಂದ ಆತನನ್ನು ರೇಣು ತಪ್ಪಿಸಿದ್ದಾರೆ. ಇಷ್ಟಾದರೂ ಆಕೆಯನ್ನು ಹೀಗೆ ನಿಂದಿಸುವುದು ಎಷ್ಟು ಸರಿ'' ಎಂದು ಕೃಷ್ಣ ಕುಮಾರಿ ಪ್ರಶ್ನಿಸಿದ್ದಾರೆ.
ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರೇಣು ದೇಸಾಯಿ, ''ಅವರು ಯಾರು ಎಂದೇ ನನಗೆ ಗೊತ್ತಿಲ್ಲ. ನನ್ನ ಬಗ್ಗೆ ಅವರು ಏಕೆ ಮಾತನಾಡಿದರೋ ಗೊತ್ತಿಲ್ಲ. ಮೊದಲ ಬಾರಿಗೆ ಸಾರ್ವಜನಿಕವಾಗಿ ಯಾರೋ ಒಬ್ಬರು ನನ್ನ ಬಗ್ಗೆ ಮಾತನಾಡಿದ್ದನ್ನು ಕೇಳಿ ನನಗೆ ಬಹಳ ಖುಷಿ ಆಯ್ತು. ಈ ವಿಡಿಯೋ ನೋಡಿದ ನಂತರ ನನ್ನ ಕಷ್ಟ ಅರ್ಥ ಮಾಡಿಕೊಳ್ಳುವವರು ಇದ್ದಾರೆ ಎಂಬುದು ನನಗೆ ಅರಿವಾಯ್ತು'' ಎಂದು ರೇಣು ದೇಸಾಯಿ ಬರೆದುಕೊಂಡಿದ್ದಾರೆ.