ಬಡವರಿಗೊಂದು ನ್ಯಾಯ-ಶ್ರೀಮಂತರಿಗೊಂದು; ಜೈಲಿನಲ್ಲಿ ದರ್ಶನ್‌ಗೆ ರಾಜಮರ್ಯಾದೆ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಜನರ ಆಕ್ರೋಶ
ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ದುಡ್ಡು ಇದ್ದೋರು ಲೋಕಕ್ಕೆ ದೊಡ್ಡೋರು ಎಂಬಂತೆ ಸರ್ಕಾರ ಹಾಗೂ ಪೊಲೀಸರು ದರ್ಶನ್ ಅವರಿಗೆ ವಿಐಪಿ ಟ್ರೀಟ್‌ಮೆಂಟ್ ಕೊಡುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.
ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್‌ಗೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಒದಗಿಸಿರುವ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಚೇರ್ ಮೇಲೆ ಕುಳಿತುಕೊಂಡು ಕೈಯಲಿ ದೊಡ್ಡ ಕಾಫಿ ಮಗ್, ಸಿಗರೇಟ್ ಹಿಡಿದು ನಗುತ್ತಾ ಮಾತನಾಡುತ್ತಿರುವ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರ ಬೆನ್ನಲ್ಲೆ ಎಲ್ಲೆಡೆ ವ್ಯಾಪಕ ಆಕ್ರೋಶಗಳು ಕೇಳಿಬರುತ್ತಿದ್ದು, ಸರ್ಕಾರ ಹಾಗೂ ಪೊಲೀಸರ ನಡೆಗೆ ಅಸಮಾಧಾನ ವ್ಯಕ್ತವಾಗಿದೆ. ಈ ಹಿಂದೆ ದರ್ಶನ್ ರೌಡಿ ಶೀಟರ್ ಒಬ್ಬರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವ ದೃಶ್ಯ ವೈರಲ್ ಆಗಿತ್ತು. ಇದರ ನಡುವೆ, ಪೊಲೀಸರೂ ಇದ್ದರೂ ಜೈಲಿನಲ್ಲಿಯೇ ಕೊಲೆ ಆರೋಪಿಯೊಬ್ಬರಿಗೆ ರಾಜಾಥಿತ್ಯ ಸಿಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಜನರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬಿಜೆಪಿ ಕೇಂದ್ರ ಘಟಕದ ಮಾಧ್ಯಮ ಸಂಯೋಜಕ ಶೆಹ್‌ನಾಜ್ ಪೂನವಾಲಾ ಅವರು, ಕರ್ನಾಟಕ ಸರ್ಕಾರವು ಕೊಲೆ ಆರೋಪಿಗೆ ರಾಜಾತಿಥ್ಯ ನೀಡಿದೆ ಎಂದು ಆರೋಪಿಸಿದ್ದಾರೆ. ಇದು ಸರ್ಕಾರವು ಎಷ್ಟರಮಟ್ಟಿಗೆ ನ್ಯಾಯಪರವಾಗಿದೆ ಎನ್ನುವುದನ್ನು ಸೂಚಿಸುತ್ತಿದೆ ಎಂದು ಟೀಕಿಸಿದ್ದಾರೆ. ಇದೇ ವೇಳೆ ಜನಸಾಮಾನ್ಯರು ಕೂಡಾ ಪೊಲೀಸರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಹಣವಂತರು, ಪ್ರಭಾವಿಗಳು ಏನು ಮಾಡಿದರೂ ಸರಿ. ಕಾನೂನು ಬಡವರಿಗೆ ಮಾತ್ರ ಅನ್ವಸುತ್ತದೆ ಅಲ್ಲವೇ? ಸಾಮಾನ್ಯ ಜನರು ತಮ್ಮ ತಂದೆ ಜೈಲಿನಲ್ಲಿದ್ದರೂ ನೋಡಲು ಪರದಾಡಬೇಕು. ಆದರೆ ಶ್ರೀಮಂತರಿಗೆ ಯಾವ ನಿಯಮಗಳೂ ಅನ್ವಯವಾಗುವುದಿಲ್ಲ' ಎಂದು ಜನರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜನರ ಪ್ರತಿಕ್ರಿಯೆ ಹೀಗಿದೆ
ಇದು ಗಂಭೀರ ಕ್ರಮ ಕೈಗೊಳ್ಳಬೇಕಾದ ಪ್ರಕರಣ, ಸರ್ಕಾರ ಇದರತ್ತ ಗಮನ ಹರಿಸಬೇಕು ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. ಭಾರತದಲ್ಲಿ ಶ್ರೀಮಂತರೊಬ್ಬರು ಕೊಲೆ ಆರೋಪಿಯಾದರೆ, ಜೈಲಿನಲ್ಲಿ ರಾಜಾತಿಥ್ಯ ಸ್ವೀಕರಿಸಬಹುದು. ಆದರೆ, ಜನಸಾಮಾನ್ಯರು ತಪ್ಪು ಮಾಡಿದರೆ ಛಡಿಏಟು ಬೀಳುತ್ತದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಕೊಲೆ ಮಾಡಿದ ಕೊಲೆಗಾರನಿಗೆ (ಆರೋಪಿ) ಪೊಲೀಸ್ ಬಳಗ ಅತಿಥಿ ಸತ್ಕಾರ ಮಾಡುತ್ತಿದೆ. ನ್ಯಾಯಾಂಗ ವ್ಯವಸ್ಥೆ, ಪೊಲೀಸ್ ಇಲಾಖೆ ಮೇಲೆ ಇದ್ದ ಗೌರವ ಪೂರ್ತಿ ಹೋಯ್ತು ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.
ತಪ್ಪಿತಸ್ಥರು ಅಮಾನತು
ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್, ತಪ್ಪು ಮಾಡಿರುವ ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ. 'ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಕಾಫಿ-ಟೀ ಕುಡಿಯುತ್ತಿರುವ ಫೋಟೊ ಬಗ್ಗೆ ನಿನ್ನೆಯೇ ನನಗೆ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಅಗತ್ಯ ಪರಿಶೀಲನೆ ನಡೆಸಿ, 7 ಮಂದಿಯನ್ನು ಅಮಾನತು ಮಾಡಿದ್ದೇನೆ' ಎಂದು ಹೇಳಿದ್ದಾರೆ.
ವಿಭಾಗ