ನಕಲಿ ಚಿನ್ನಾಭರಣ, ನಕಲಿ ಗನ್, ಬಂಧನಕ್ಕೆ ಒಳಗಾದ ಚಿತ್ರದುರ್ಗದ ಶೋಕಿಲಾಲಾ ರೀಲ್ಸ್ ರಾಜ ಅರುಣ್ ಕಟಾರೆ ವೃತ್ತಾಂತ
ಚಿತ್ರದುರ್ಗ ಮೂಲದ ರೀಲ್ಸ್ ರಾಜ ಅರುಣ್ ಕಟಾರೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೈತುಂಬಾ ನಕಲಿ ಚಿನ್ನಾಭರಣ, ಸುತ್ತಮುತ್ತ ಬಾಡಿಗಾರ್ಡ್ಸ್, ಸುಂದರಿಯರ ಜತೆ ದುಬಾರಿ ಕಾರುಗಳಲ್ಲಿ ತಿರುಗಾಡುತ್ತಿದ್ದ ಈತ ಬಹುತೇಕರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿಯ ವ್ಯಕ್ತಿಯಂತೆ ಕಾಣಿಸುತ್ತಿದ್ದ.

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಪ್ರತಿಭೆಗಳು ಅಚ್ಚರಿ ಹುಟ್ಟಿಸುತ್ತಾರೆ. ಯಾರಿವರು? ಇಷ್ಟು ದಿನ ಎಲ್ಲಿದ್ದರು? ಡಿಢೀರ್ ಎಲ್ಲಿಂದ ಉದ್ಭವವಾದರು ಎನ್ನೋ ರೀತಿ ಕೆಲವರು ವೈರಲ್ ಆಗುತ್ತಿರುತ್ತಾರೆ. ಅರುಣ್ ಕಟಾರೆ ಎಂಬ ರೀಲ್ಸ್ ರಾಜನನ್ನು ನೋಡಿದಾಗಲೂ ಎಲ್ಲರಿಗೂ "ಯಾರಿವನು ಗೋಲ್ಡ್ ಬಾಯ್?" ಎಂಬ ಸಂದೇಹ ಕಾಡಿತ್ತು. ಮೈತುಂಬಾ ಚಿನ್ನಾಭರಣ, ಸುತ್ತಮುತ್ತ ವಿದೇಶಿ ಚೆಲುವೆಯರು, ದುಬಾರಿ ಕಾರುಗಳಲ್ಲಿ ರೀಲ್ಸ್ ಮಾಡುತ್ತಿರುವ ಈತನನ್ನು ನೋಡಿ ಈತ ಯಾರೋ ಕುಬೇರನ ಮಗನೇ ಇರಬೇಕು ಎಂದುಕೊಂಡಿದ್ದರು. ಚಿತ್ರದುರ್ಗ ಮೂಲದ ಈತ ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ "ನಾನು ಹಾಗೇ ಹೀಗೆ" ಎಂದು ಕೊಚ್ಚಿಕೊಂಡಿದ್ದ. ಇದೀಗ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ನಕಲಿ ಗನ್ ಬಳಸಿ ರೀಲ್ಸ್ ಶೂಟಿಂಗ್ ಮಾಡಿರುವ ಕಾರಣಕ್ಕೆ ಅರುನ್ ಕಟಾರೆಯನ್ನು ಪೊಲೀಸರು ಬಂಧಿಸಿದ್ದಾರೆ. ಲಗ್ಷುರಿ ಕಾರಿನಲ್ಲಿ ಬಾಡಿ ಗಾರ್ಡ್ ಸಮೇತ ಅರುಣ್ ಕಟಾರೆ ಡಾನ್ ರೀತಿ ಇಳಿದಿದ್ದ. ಬಾಡಿಗಾರ್ಡ್‌ಗಳ ಕೈಯಲ್ಲಿ ಎಕ47 ರೀತಿಯ ಗನ್‌ಗಳು ಇದ್ದವಂತೆ. ಈ ವಿಡಿಯೋ ಸೆರೆ ಹಿಡಿದು ಅರುಣ್ ಕಟಾರೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದ.
ಚೊಕ್ಕನಹಳ್ಳಿಗೆ ಪಿಎಸ್‌ಐ ಡಿಕೆ ಮಂಜುನಾಥ್ ಗಸ್ತು ತಿರುಗುತ್ತ ಬಂದಾಗ ಅಲ್ಲಿನ ಸ್ಥಳೀಯರು ಈ ವಿಷಯವನ್ನು ಗಮನಕ್ಕೆ ತಂದಿದ್ದರು. ಈ ಯುವಕನಿಂದ ಅಪರಾಧ ನಡೆಯಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದರು. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಅರುಣ್ ಕಟಾರೆಯನ್ನು ಬಂಧಿಸಿದ್ದಾರೆ. ಜೆಪಿ ನಗರದಲ್ಲಿ ನೆಲೆಸಿದ್ದ ಆರೋಪಿಯನ್ನು ಬಂಧಿಸಲಾಗಿತ್ತು.
ಈತ ಶೋಕಿಗಾಗಿ ನಕಲಿ ಚಿನ್ನಾಭರಣ ಬಳಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತ ಕೊರಳಲ್ಲಿ ದಪ್ಪಗಿನ ಹಲವು ಚಿನ್ನದ ಸರಗಳನ್ನು ಹಾಕಿಕೊಳ್ಳುತ್ತಿದ್ದ. ವಿದೇಶಿ ಮಹಿಳೆಯರ ಜತೆ ಸುತ್ತಾಡುತ್ತಿದ್ದ. ರೀಲ್ಸ್ ಕಂಟೆಂಟ್‌ಗಾಗಿ ಈತ ಈ ರೀತಿ ಮಾಡುತ್ತಿದ್ದ. ಸೋಷಿಯಲ್ ಮೀಡಿಯಾದಲ್ಲಿ ಇನ್‌ಫ್ಲೂಯೆನ್ಸರ್ ಆಗಲು ಈ ರೀತಿ ಮಾಡುತ್ತಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸದ್ಯ ಪೊಲೀಸರು ಈತನ ವಿರುದ್ಧ ಆರ್ಮ್ಸ್ ಆಕ್ಟ್‌ನಡಿ ಕೇಸ್ ದಾಖಲಿಸಿದ್ದಾರೆ. ರೀಲ್ಸ್‌ಗಾಗಿ ಏನೇನೋ ಮಾಡಲು ಹೋಗುವವರಿಗೆ ಇದು ಪಾಠವಾಗಿದೆ.
ಕಿರಿಕ್ ಕೀರ್ತಿ ಸಂದರ್ಶನ
ಯಾರಿವನು ಅರುಣ್ ಕಟಾರೆ ಎಂದು ಬಿಗ್‌ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಈತನನ್ನು ಸಂದರ್ಶನ ಮಾಡಿದ್ದರು. ಈ ರೀತಿ ಕಂಟೆಂಟ್ ಮಾಡುವ ಅಪರೂಪದ ಕನ್ನಡಿಗನ ಸಂದರ್ಶನ ಮಾಡಿದ್ದರು. ಈ ಸಂದರ್ಶನದಲ್ಲಿ ತನ್ನಲ್ಲಿ ಕೋಟಿ ಕೋಟಿ ರೂಪಾಯಿ ಹಣ ಇರುವ ವ್ಯಕ್ತಿಯ ರೀತಿಯೇ ಅರುಣ್ ಪರಿಚಯಿಸಿಕೊಂಡಿದ್ದ. ತಾನು ಬದುಕಿನಲ್ಲಿ ಪಟ್ಟ ಕಷ್ಟ, ಡಿಪ್ರೆಷನ್‌ಗೆ ಹೋದದ್ದು, ಕುಟುಂಬದ ಆಪ್ತರು ಕಷ್ಟಕಾಲದಲ್ಲಿ ಲಕ್ಷಾಂತರ ರೂಪಾಯಿ ನೆರವು ನೀಡಿದ್ದು, ಹೀಗೆ ಸಾಕಷ್ಟು ಕಥೆಗಳನ್ನು ಈ ಸಂದರ್ಶನದಲ್ಲಿ ಹೇಳಿದ್ದರು. ಆದರೆ, ಇದೀಗ ಬಂಧನಕ್ಕೆ ಒಳಗಾದ ಬಳಿಕ ಪೊಲೀಸರು "ಈತ ನಕಲಿ ಚಿನ್ನಾಭರಣ ಧರಿಸಿ" ಶೋಕಿ ಮಾಡುತ್ತಿದ್ದಾನೆ ಎಂದಿದ್ದಾರೆ.
