ಅಯೇ ಅಯೇ ಹೋಯೆ ಹೋಯೆ, ರೀಲ್ಸ್ ರಾಜ ನೋಯೆಲ್ ರಾಬಿನ್ಸನ್ ಬೆಟ್ಟದಂತಹ ಕೂದಲು ನೋಡಿ ಭಾರತೀಯರ ರಿಯಾಕ್ಷನ್
Noel Robinson Viral Videos: ಜರ್ಮನಿಯ ರೀಲ್ಸ್ ರಾಜ ಭಾರತದಲ್ಲಿ ಹಲವು ವಿಡಿಯೋಗಳನ್ನು ಮಾಡುತ್ತ ಇದ್ದಾನೆ. ಈತನ ಫ್ರಾಂಕ್ ವಿಡಿಯೋಗಳಿಗೆ, ಡ್ಯಾನ್ಸ್ ಸ್ಟೆಪ್‌ಗಳಿಗೆ, ಬೆಟ್ಟದಂತಹ ಕೂದಲ ವೈಭವಕ್ಕೆ ಭಾರತೀಯರ ರಿಯಾಕ್ಷನ್ ಹೇಗಿದೆ ನೋಡಿ.
Noel Robinson Viral Videos: ಜರ್ಮನಿಯ ರೀಲ್ಸ್ ರಾಜ ಭಾರತಕ್ಕೆ ಬಂದಿರುವ ಸಂಗತಿ ಈಗಾಗಲೇ ನಿಮಗೆ ತಿಳಿದಿದೆ. ತಲೆಯಲ್ಲಿ ಬೆಟ್ಟದ್ದಷ್ಟು ಕೂದಲನ್ನು ಇಟ್ಟುಕೊಂಡು ಈತ ಮಾಡುವ ರೀಲ್ಸ್ ಸಖತ್ ಫೇಮಸ್. ಸಡನ್ ಆಗಿ ಯಾರ ಮುಂದೆ ಬಂದು ಕೋಟ್ ಹ್ಯಾಟ್‌ನಲ್ಲಿ ಬಚ್ಚಿಟ್ಟ ತನ್ನ ತಲೆಕೂದಲು ಹೊರಕ್ಕೆ ತೆಗೆದಾಗ ಎಲ್ಲರೂ "ವಾಹ್" ಎಂದು ಅಚ್ಚರಿ ಸೂಚಿಸುವುದು ಸಹಜ. ಆದರೆ, ಭಾರತದ ಬಹುತೇಕರು ಇವನ ತಲೆಕೂದಲು ನೋಡಿ ಅಚ್ಚರಿ ವ್ಯಕ್ತಪಡಿಸಿಲ್ಲ. ಇದನ್ನೇ ಒಂದು ರೀಲ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಯಾರೀತ ರೀಲ್ಸ್ ರಾಜ?
ಈತ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್. ಜರ್ಮನಿ ಮೂಲದ ಈತ ಕೊರೊನಾ ಕಾಲದ ಬಳಿಕ ಬೆಳಕಿಗೆ ಬಂದ ಪ್ರತಿಭೆ. ಈತನ ರೀಲ್ಸ್ ಈತನಿಗೆ ಪ್ರತಿತಿಂಗಳಿಗೆ ಹಲವು ಕೋಟಿ ಆದಾಯ ತಂದುಕೊಡುತ್ತದೆ. ಈತನಿಗೆ ಹಲವು ಲಕ್ಷ ಫಾಲೋವರ್ಸ್ ಇದ್ದಾರೆ. ಈತನ ಕೂದಲೇ ಪ್ರಮುಖ ಆಕರ್ಷಣೆ. ಜತೆಗೆ ಡಿಫರೆಂಟ್ ಆಗಿ ಡ್ಯಾನ್ಸ್ ಮಾಡುತ್ತಾನೆ. ಜರ್ಮನಿಯ ಈ ಟಿಕ್‌ಟಾಕ್ ಸ್ಟಾರ್ ತನ್ನ ಅನನ್ಯ ಡ್ಯಾನ್ಸ್ ಸ್ಟೆಪ್‌ಗಳಿಂದ, ಫ್ರಾಂಕ್ ವಿಡಿಯೋಗಳಿಂದ, ತಲೆಕೂದಲ ಪ್ರದರ್ಶನದಿಂದ, ಚಿತ್ರವಿಚಿತ್ರ ಹಾಸ್ಯ ಕ್ಲಿಪ್‌ಗಳಿಂದ ಫೇಮಸ್ ಆಗಿದ್ದಾನೆ.
ಭಾರತೀಯರ ರಿಯಾಕ್ಷನ್
ಈತ ಸಡನ್ ಆಗಿ ಯಾರಾದರೂ ಮುಂದೆ ನಿಂತು ತನ್ನ ತಲೆಕೂದಲಿನ ದರ್ಶನ ನೀಡುತ್ತಾನೆ. ಇದನ್ನು ನೋಡಿ ತಕ್ಷಣ ಅಚ್ಚರಿ ವ್ಯಕ್ತಪಡಿಸುತ್ತಾರೆ. ಭಾರತದಲ್ಲಿರುವ ಈತ ಈ ಟ್ರಿಕ್ ಅನ್ನು ಭಾರತೀಯರ ಮುಂದೆ ಮಾಡಲು ಪ್ರಯತ್ನಿಸಿದ್ದಾನೆ. ಆದರೆ, ಇದನ್ನು ನೋಡಿ ಬಹುತೇಕರು ಕ್ಯಾರೇ ಹೇಳಲಿಲ್ಲ. ಇದನ್ನೇ ವಿಡಿಯೋ ಮಾಡಿ ನೋಯೆಲ್ ಹಂಚಿಕೊಂಡಿದ್ದಾನೆ. ಸಿಖ್ ವ್ಯಕ್ತಿಯೊಬ್ಬರ ಮುಂದೆ ಈತ ಈ ರೀತಿ ತಲೆಕೂದಲ ದರ್ಶನ ನೀಡಿದಾಗ "ಸಾಕು ಹೋಗಪ್ಪ" ಎನ್ನುವ ರೀತಿ ಸೂಚನೆ ನೀಡಿದ್ದಾರೆ. ಇನ್ನೂ ಹಲವು ಜನರು ಇದೇ ರೀತಿ ಯಾವುದೇ ಅಚ್ಚರಿಯಿಲ್ಲದ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಇಲ್ಲಿದೆ, ನೋಡಿ ನೀವು ನಕ್ಕುಬಿಡಿ.
ಬೆಂಗಳೂರಿಗೂ ಬಂದಿದ್ದ ರೀಲ್ಸ್ ರಾಜ
ನೋಯೆಲ್ ರಾಬಿನ್ಸನ್ ಆದಾಯ ಎಷ್ಟು?
ನೋಯೆಲ್ ರಾಬಿನ್ಸನ್ ಎಂಬ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವು ದಶಲಕ್ಷ ಫಾಲೋವರ್ಸ್ ಇದ್ದಾರೆ. ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾದಲ್ಲಿ ತಿಂಗಳಿಗೆ 80 ಲಕ್ಷ ರೂಪಾಯಿಯಿಂದ 1 ಕೋಟಿಗೂ ಹೆಚ್ಚು ಆದಾಯ ಗಳಿಸುತ್ತಾರೆ ಎನ್ನಲಾಗಿದೆ. ಜತೆಗೆ ಹಲವು ಬ್ರಾಂಡ್‌ಗಳ ಪ್ರಮೋಷನ್ ಕೂಡ ಮಾಡುತ್ತಾರೆ. ಇನ್‌ಫ್ಲೂಯೆನ್ಸರ್‌ಗಳ ಆದಾಯ ಮಾಹಿತಿ ನೀಡುವ ವರದಿಗಳ ಪ್ರಕಾರ ಕಳೆದ ತಿಂಗಳ ಈತನ ಆದಾಯ 111ಕೆ ಡಾಲರ್. ಅಂದರೆ, 1,11,000 ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ ನೋಡಿದರೆ ಈ ಮೊತ್ತ 92,19,521.25 ರೂಪಾಯಿ ಆಗುತ್ತದೆ.
ಯೂಟ್ಯೂಬರ್ಸ್.ಮಿ ಪ್ರಕಾರ ಈತನ ತಿಂಗಳ ಸರಾಸರಿ ಆದಾಯ 229k ಡಾಲರ್. ಅಂದರೆ, 229000 ಡಾಲರ್. ರೂಪಾಯಿ ಲೆಕ್ಕದಲ್ಲಿ ನೋಡಿದರೆ ಇವರ ತಿಂಗಳ ಸರಾಸರಿ ಆದಾಯ 1.90 ಕೋಟಿ ರೂಪಾಯಿಗಿಂತಲೂ ಹೆಚ್ಚು. ಹೀಗೆ ಜಗತ್ತಿನ ವಿವಿಧ ಮಾಧ್ಯಮಗಳು ಇವರ ಆದಾಯ ಹಲವು ಕೋಟಿ ಎಂದು ಬರೆದಿವೆ. ತನ್ನ ವಿನೂತನ ರೀಲ್ಸ್ ಮೂಲಕವೇ ಈತ ಸಖತ್ ಆದಾಯ ಗಳಿಸುತ್ತಾನೆ.
ಸೋಷಿಯಲ್ ಮೀಡಿಯಾವನ್ನು ಸಮರ್ಥವಾಗಿ ಬಳಸಿದರೆ ಕೈತುಂಬಾ ಹಣ ಗಳಿಸಬಹುದು ಎನ್ನುವುದಕ್ಕೆ ನೋಯೆಲ್ ರಾಬಿನ್ಸನ್ ಸೂಕ್ತ ಉದಾಹರಣೆ. ಪ್ರತಿತಿಂಗಳು ಇಂತಹ ರೀಲ್ಸ್‌ಗಳಿಂದ ಹಲವು ಕೋಟಿ ರೂಪಾಯಿ ಗಳಿಸುವ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಈಗ ಇದ್ದಾರೆ. ಇದೀಗ ನೋಯೆಲ್ ಭಾರತದ ವಿವಿಧೆಡೆ ಭೇಟಿ ನೀಡುತ್ತ ಜನರನ್ನು ಮನರಂಜಿಸುತ್ತ ಇದ್ದಾನೆ. ಜರ್ಮನಿ ಮೂಲದ ಈತನಿಗೆ ಭಾರತದಲ್ಲಿಯೇ ಅತ್ಯಧಿಕ ಫಾಲೋವರ್ಸ್ ಇದ್ದಾರಂತೆ. ಆ ಪ್ರೀತಿಗೆ ಖುಷಿಯಾಗಿ ಈತ ಭಾರತಕ್ಕೆ ಭೇಟಿ ನೀಡಿದ್ದಾನೆ.