Pandya 420 Interview: ಪಾಂಡ್ಯ 420 ಬಗ್ಗೆ ನಿಮಗೆ ಗೊತ್ತಾ? ಸಂಗೀತ ಕುಟುಂಬದಿಂದ ಬಂದವ ಆಗಿದ್ದು ಕಾಮಿಡಿಯನ್!; ಇಲ್ಲಿದೆ ಸಂದರ್ಶನ
ಕನ್ನಡ ಸುದ್ದಿ  /  ಮನರಂಜನೆ  /  Pandya 420 Interview: ಪಾಂಡ್ಯ 420 ಬಗ್ಗೆ ನಿಮಗೆ ಗೊತ್ತಾ? ಸಂಗೀತ ಕುಟುಂಬದಿಂದ ಬಂದವ ಆಗಿದ್ದು ಕಾಮಿಡಿಯನ್!; ಇಲ್ಲಿದೆ ಸಂದರ್ಶನ

Pandya 420 Interview: ಪಾಂಡ್ಯ 420 ಬಗ್ಗೆ ನಿಮಗೆ ಗೊತ್ತಾ? ಸಂಗೀತ ಕುಟುಂಬದಿಂದ ಬಂದವ ಆಗಿದ್ದು ಕಾಮಿಡಿಯನ್!; ಇಲ್ಲಿದೆ ಸಂದರ್ಶನ

ಇನ್‌ಸ್ಟಾಗ್ರಾಂನಲ್ಲಿ ಪಾಂಡ್ಯಾ 420 (Pandya420) ಎಂದೇ ಫೇಮಸ್‌ ಆದವರು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಗಂಗಾಧರ್‌ ಪತ್ತಾರ್.‌ ಬಿಎಸ್ಸಿ ಡ್ರಾಪ್‌ಔಟ್‌ ಆದರೂ, ಸೋಷಿಯಲ್‌ ಮೀಡಿಯಾದಲ್ಲಿ ತಮ್ಮದೇ ಆದ ಬಳಗ ಹೊಂದಿದ್ದಾರೆ. ಶ್ರಮಕ್ಕೆ ತಕ್ಕಂತೆ ತಿಂಗಳಿಗೆ ಲಕ್ಷಾಂತರ ರೂ. ಆದಾಯವನ್ನೂ ಇವರು ಗಳಿಸುತ್ತಿದ್ದಾರೆ.

ಪಾಂಡ್ಯ 420 ಬಗ್ಗೆ ನಿಮಗೆ ಗೊತ್ತಾ? ಸಂಗೀತ ಕುಟುಂಬದಿಂದ ಬಂದವ ಆಗಿದ್ದು ಕಾಮಿಡಿಯನ್!; ಸಂದರ್ಶನ
ಪಾಂಡ್ಯ 420 ಬಗ್ಗೆ ನಿಮಗೆ ಗೊತ್ತಾ? ಸಂಗೀತ ಕುಟುಂಬದಿಂದ ಬಂದವ ಆಗಿದ್ದು ಕಾಮಿಡಿಯನ್!; ಸಂದರ್ಶನ

Pandya 420:ಸೋಷಿಯಲ್‌ ಮೀಡಿಯಾದಲ್ಲಿ ರಾತ್ರೋ ರಾತ್ರಿ ವೈರಲ್‌ ಆಗಿ ನೇಮು ಫೇಮು ಪಡೆದವರು ಸಾಕಷ್ಟು ಜನರಿದ್ದಾರೆ. ಇನ್ನು ಕೆಲವರು ತಮ್ಮೊಳಗಿನ ಪ್ರತಿಭೆಯನ್ನೂ ಸಾಣೆ ಹಿಡಿದು ಒಂದಷ್ಟು ಕಾಲ ಶ್ರಮಪಟ್ಟು ಮೇಲೆ ಬಂದವರೂ ಇದ್ದಾರೆ. ಈ ಎರಡರಲ್ಲಿ ಎರಡನೇ ಆಯ್ಕೆ ಪಾಂಡ್ಯಾ 420 (Pandya 420). ನೀವು ಇನ್‌ಸ್ಟಾಗ್ರಾಂ ಬಳಕೆ ಮಾಡುತ್ತಿದ್ದರೆ ಈ ಪಾಂಡ್ಯಾ ಬಗ್ಗೆ ನಿಮಗೆ ತಿಳಿದಿರುತ್ತದೆ. ತಮ್ಮ ಯೂನಿಕ್‌ ಸ್ಟೈಲ್‌ನಿಂದಲೇ ಎಲ್ಲರನ್ನು ನಗಿಸುವ ಇವರು, ಕಾಮಿಡಿ ವಿಡಿಯೋಗಳ ಮೂಲಕವೇ ಯೂಸರ್ಸ್‌ ಗಮನ ಸೆಳೆದವರು. ಹಾಗಾದರೆ, ಈ ಹುಡುಗ ಎಲ್ಲಿಯವರು? ಇವರ ಹಿನ್ನೆಲೆ ಏನು? ಇವರು ಮೂಲ ಹೆಸರು, ವಯಸ್ಸು, ಉದ್ಯೋಗ, ಆದಾಯ.. ಹೀಗೆ ಈ ಎಲ್ಲದರ ಬಗ್ಗೆ ಸ್ವತಃ ಪಾಂಡ್ಯಾ 420 ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ (Hindustan Times Kannada) ಜತೆಗೆ ಮಾತನಾಡಿದ್ದಾರೆ.

ಪಾಂಡ್ಯ 420 ಹಿನ್ನೆಲೆ ಏನು?

"ನಮ್ಮದು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕು. ನನ್ನ ಹೆಸರು ಗಂಗಾಧರ ಪತ್ತಾರ. ವಯಸ್ಸು ಈಗಿನ್ನೂ 24. ಅಪ್ಪ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ ಕೆಲಸದಲ್ಲಿದ್ದಾರೆ. ಅಮ್ಮನದ್ದು ಶಿಕ್ಷಕಿ ವೃತ್ತಿ. ಮನೆಯಲ್ಲಿ ನಾವು ಐದು ಮಂದಿ ಮಕ್ಕಳು. ಮೂವರು ಅಕ್ಕಂದಿರ ಮದುವೆ ಆಗಿದೆ. ನಾನು ಬಿಎಸ್‌ಸಿ ಡ್ರಾಪ್‌ಔಟ್‌. ತಮ್ಮ ಇದೀಗ ಡಿಗ್ರಿ ಮುಗಿಸಿ ಕೆಲಸ ನೋಡ್ತಿದ್ದಾನೆ. ನಮ್ಮದು ಸಂಗೀತದ ಕುಟುಂಬ. ಕಳೆದ 36 ವರ್ಷಗಳಿಂದ ಸಂಗೀತ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಅಮ್ಮ ಬಾಗಲಕೋಟೆಯಲ್ಲಿ ಸಂಗೀತ ಶಿಕ್ಷಕಿಯಾಗಿದ್ದಾರೆ. ಹೇಳಬೇಕೆಂದರೆ ಮನೆಯಲ್ಲಿ ನನ್ನೊಬ್ಬನನ್ನು ಬಿಟ್ಟು ಎಲ್ಲರಿಗೂ ಸಂಗೀತದ ಜ್ಞಾನವಿದೆ. ಎಸ್ಸೆಸೆಲ್ಸಿಯಲ್ಲಿ ಶೇ. 85 ಮಾಡಿದಾಗ, ಇವ ಮುಂದ ಏನೋ ಒಂದ್‌ ಆಗ್ತಾನ್..‌ ಎಂದು ಎಲ್ರೂ ಹೇಳಿದ್ರು. ಆದರೆ, ಅದು ನನ್ನಿಂದಾಗಲಿಲ್ಲ.

ಇದನ್ನೂ ಓದಿ: Prakash R K Interview: ಸಾವಜಿ ಖಾನಾವಳಿಯಿಂದ.. ಸೋಷಿಯಲ್‌ ಮೀಡಿಯಾ ಸ್ಟಾರ್‌ವರೆಗೆ... ಗುಮ್ಮಟನಗರಿಯ ಪ್ರಕಾಶ್‌ ಆರ್‌.ಕೆ ಸಂದರ್ಶನ

ಹಾಗಂತ ನನಗೆ ಗೊತ್ತಿರುವುದು ನನ್ನ ಮನೆಯಲ್ಲಿ ಯಾರಿಗೂ ಬರಲ್ಲ. ಅಂದರೆ ನನ್ನ ಅಜ್ಜನವರಿಗೆ ಕಣ್ಣಿರಲಿಲ್ಲ. ಆಗಿನ ಕಾಲದಲ್ಲಿ ಗದಗಿನ ಪುಟ್ಟರಾಜ ಗವಾಯಿಗಳ ಬಳಿ ಸಂಗೀತ ಕಲಿತಿದ್ದರು. ಮುಂದೆ ಅದೇ ಪುಟ್ಟರಾಜ ಗವಾಯಿಗಳೇ ಗುಳೇದಗುಡ್ಡದಲ್ಲಿ ನಮ್ಮ ಸಂಗೀತ ಶಾಲೆಯನ್ನು ಉದ್ಘಾಟಿಸಿದ್ದರು. ಆಗ ಸಂಗೀತದ ಜತೆಗೆ ನಾಟಕದ ಬಗ್ಗೆಯೂ ನಮ್ಮ ಅಜ್ಜನವರಿಗೂ ಆಸಕ್ತಿ. ಎಷ್ಟೋ ಮಂದಿಗೆ ನಾಟಕದ ಬಗ್ಗೆಯೂ ಹೇಳಿಕೊಡುತ್ತಿದ್ದರು. ಆ ನಮ್ಮಜ್ಜನ ಗುಣವೇ ಇಂದು ನನಗೆ ಬಂದಿದೆ.

ಮಿಡಲ್‌ ಕ್ಲಾಸ್‌ ಫ್ಯಾಮಿಲಿ ಅಂದ ಮೇಲೆ ಅಲ್ಲಿ ಕನಸುಗಳಿಗೆ ಕೊರತೆ ಇರಲ್ಲ. ಅದೇ ರೀತಿ ನಾನೂ ಸಾಕಷ್ಟು ಕನಸು ಕಂಡಿದ್ದೆ. ಪಿಯುಸಿ ಸೈನ್ಸ್‌ನಲ್ಲಿ ಕಡಿಮೆ ಅಂಕ ಬಂದ ಮೇಲೆ. ಡಿಗ್ರಿಗೆ ಕಾಲೇಜು ಸೇರಿದರೂ, ಮೊದಲ ವರ್ಷವೇ ಸಾಕಾಯ್ತು. ಇದು ನನ್ನ ಕೈಲಿ ಆಗಲ್ಲ ಎಂದು ಗೊತ್ತಾಯ್ತು. ಅಲ್ಲಿಗೆ ಸರ್ಕಾರಿ ಕೆಲಸ ಹಿಡೀಬೇಕು ಅನ್ನೋ ಮನೆಯವರ ಆಸೆ ಈಡೇರಲಿಲ್ಲ. ಅಲ್ಲಿಂದ ನಾನು ಯಾವತ್ತೂ ನಾರ್ಮಲ್‌ ಲೈಫ್‌ ಲೀಡ್‌ ಮಾಡಬಾರದೆಂದು ತೀರ್ಮಾನಕ್ಕೆ ಬಂದೆ. ಕಾಲೇಜು ಬಿಟ್ಟು ಕೆಲಸಕ್ಕೆಂದು ಬೆಂಗಳೂರು ಸೇರಿದೆ. ಊರಲ್ಲಿದ್ದಾಗ ಸ್ನೇಹಿತರ ನಡುವೆ ಒಬ್ಬ ಕಾಮಿಡಿಯನ್‌ ಇದ್ದೇ ಇರ್ತಾನೆ. ನಾನೂ ಹಾಗೇ ಗುರುತಿಸಿಕೊಂಡಿದ್ದೆ.

ಇದನ್ನೂ ಓದಿ: Udaal Pavvya Interview: ಈ 'ಉಡಾಳ್‌ ಪವ್ಯಾ' ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಕಾಮಿಡಿಯನ್‌... ಇಲ್ಲಿದೆ ಸಂದರ್ಶನ..

ಪಾಂಡ್ಯ 420 ಎಂಬ ಹೆಸರು ಬಂದಿದ್ದೇ ಮಜ

ನಾನು ನಾಲ್ಕನೇ ತರಗತಿಯಲ್ಲಿದ್ದೆ. ನಾನು ಬರೆಯುವ ಅಕ್ಷರ ಅಷ್ಟೊಂದು ದುಂಡಾಗಿರುತ್ತಿರಲಿಲ್ಲ. ಟೀಚರ್‌ ಅದನ್ನ ನೋಡಿ, ತಲೆಗೆ ಹೊಡೆದು, ಏನಿದು ಪತ್ತಾರ್‌ ಪಾಂಡ್ಯ ಎಂದು ಬೈಯ್ದಿದ್ದರು. ಆವತ್ತು ಅವರು ಹೇಳಿದ್ದು ಇಂದಿಗೂ ಖಾಯಂ ಆಗಿ ಉಳಿದಿದೆ. ಕ್ಲಾಸ್‌ ಮುಗಿಸಿ ಹೊರಬರುತ್ತಿದ್ದಂತೆ ನಮ್ಮಕ್ಲೋಸ್‌ ಫ್ರೆಂಡ್ಸ್‌ ಎಲ್ಲರೂ ಪತ್ತಾರ್‌ ಪಾಂಡ್ಯ ಎಂದು ಕರೆಯಲು ಶುರು ಮಾಡಿದ್ರು. ಹೈಸ್ಕೂಲ್‌ನಲ್ಲಿದ್ದಾಗ ಬರೀ ಪಾಂಡ್ಯ ಆಯ್ತು. ಇದೀಗ ಈ ಫಿಲ್ಡ್‌ಗೆ ಬಂದ ಮೇಲೆ ಪಾಂಡ್ಯ 420 ಎಂದು ಬದಲಿಸಿಕೊಂಡೆ.

500 ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ

ಒಂದನೇ ತರಗತಿಗೂ ಮುನ್ನ ನಾನು ಕಲ್ಚರಲ್‌ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದೆ. ಅದು ಬಿಟ್ಟರೆ ಯಾವತ್ತೂ ಅದರ ಹತ್ತಿರ ಹೋಗಿರಲಿಲ್ಲ. ಹೀಗಿರುವಾಗಲೇ ಏನಾದರೂ ಮಾಡಬೇಕೆಂದು 2019ರಲ್ಲಿ ದೋಸ್ತ್‌ ಹೆಸರಿನ ಸಿನಿಮಾ ಮಾಡಿದ್ದೆ. ಅದಕ್ಕೆ ನಾನೇ ಡೈರೆಕ್ಟರ್‌, ನಂದೇ ಸ್ಕ್ರೀನ್‌ ಪ್ಲೇ, ನಾನೇ 500 ಹಾಕಿ ನಿರ್ಮಾಪಕನಾಗಿದ್ದೆ. 3 ತಿಂಗಳು ನಾನೇ ಎಡಿಟ್‌ ಮಾಡಿದ್ದೆ. ಕೊನೆಗೆ 1 ಗಂಟೆ 37 ನಿಮಿಷದ ಸಿನಿಮಾ ರೆಡಿಯಾಗಿತ್ತು. ಊರ ತುಂಬ ಮೈಕ್‌ ಹಿಡಿದು ನಾನೇ ಪ್ರಚಾರ ಮಾಡಿದ್ದೆ. ಈ ಚಿತ್ರವನ್ನು ಗುಳೇದಗುಡ್ಡದ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ದೆ. 15 ಸಾವಿರ ಹಣ ಸಹ ನಮಗೆ ಇದರಿಂದ ಬಂದಿತ್ತು. ಆಗ ಟಿಕ್‌ಟಾಕ್‌ ಸಹ ಟ್ರೆಂಡಿಂಗ್‌ನಲ್ಲಿತ್ತು. ಆದರೆ, ಅದಕ್ಕೆ ಬೇಕಾದ ಸ್ಮಾರ್ಟ್‌ ಫೋನ್‌ ಇರಲಿಲ್ಲ. ಅಕ್ಕ ಫೋನ್‌ ಕೊಟ್ಟರು. ಸ್ನೇಹಿತರು ಹುರಿದುಂಬಿಸಿದರು.

ಇದನ್ನೂ ಓದಿ: ಜಾಲತಾಣದ ಆದಾಯದ ಬಗ್ಗೆ ಹೇಳ್ಕೊಂಡು "ನಮ್‌ ಉತ್ಸಾಹ ಕೊಲ್ಲಬ್ಯಾಡ್ರಿ..ʼ ಅಂದ್ರು ಯೂಟ್ಯೂಬರ್‌ ಪ್ರಕಾಶ್‌ R K

ನಾನೂ ವಿಡಿಯೋ ಹಾಕಿದೆ. ಹಾಕಿದ ಕೇವಲ 9ನೇ ವಿಡಿಯೋ ವೈರಲ್‌ ಆಯ್ತು. ಒಂದು ತಿಂಗಳಲ್ಲಿ 15 ಸಾವಿರ ಫಾಲೋವರ್ಸ್‌ ಸಿಕ್ಕರು. ನನ್ನ ವಿಡಿಯೋಗಳು ಆಗ 3ರಿಂದ 4 ಮಿಲಿಯನ್‌ ವೀಕ್ಷಣೆ ಕಂಡವು. ಆಗ ನನ್ನ ಮುಖ್ಯ ಉದ್ದೇಶ ಜನರನ್ನು ರೀಚ್‌ ಮಾಡುವುದಾಗಿತ್ತು. ಮತ್ತೆ ಬೆಂಗಳೂರಿಗೆ ಬಂದು ಯಲಹಂಕ ಬಳಿ ಅಮೆಜಾನ್‌ನಲ್ಲಿ ಕೆಲಸ ಶುರು ಮಾಡಿದೆ. ಕೆಲಸದ ಜತೆಗೆ ಒಳ್ಳೊಳ್ಳೆ ಕಾಮಿಡಿ ಕಂಟೆಂಟ್‌ ರೆಡಿ ಮಾಡಿ ಹಾಕುತ್ತ ಹೋದೆ. ನಿಧಾನಕ್ಕೆ ಫಾಲೋವರ್ಸ್‌ ಲಕ್ಷದ ಗಡಿ ದಾಟಿದರು. ಟಿಕ್‌ಟಾಕ್‌ನಲ್ಲಿ ಜಾಹೀರಾತೂ ಬಂದವು. ಅದ್ಯಾವ ಮಟ್ಟಿಗೆ ಎಂದರೆ, ನನ್ನ ಸಂಬಳಕ್ಕಿಂತ ಹೆಚ್ಚೇ ಸಿಗುತ್ತ ಹೋಯಿತು.

ಸ್ಯಾಲರಿಗಿಂತ ಟಿಕ್‌ಟಾಕ್‌ ಕೊಟ್ಟ ಸಂಭಾವನೆಯೇ ಹೆಚ್ಚು

ಇಲ್ಲಿ ಏನೋ ಇದೆ ಎಂದು ನನಗೆ ನಾನೇ ತಿಳಿದುಕೊಂಡೆ. ಬೇರೆಯವರ ಕಡೆಗೆ ಗಮನ ಹರಿಸಲಿಲ್ಲ. ಏಕೆಂದರೆ, ನನ್ನ ಕುಟುಂಬ, ನನ್ನ ಒತ್ತಡ ನನಗೇ ಹೆಚ್ಚಾಗಿತ್ತು. ದೇವರ ಮೇಲೆ ನಂಬಿಕೆ ಇಟ್ಟೆ. ಕೆಲಸ ಮಾಡಿದೆ. ನನ್ನ ಸ್ಯಾಲರಿಗಿಂತ ಟಿಕ್‌ಟಾಕ್‌ ಹೆಚ್ಚು ಹಣ ಕೊಟ್ತು. ದಿನವಿಡೀ ಮಾಡ್ತಿದ್ದ ಕೆಲಸ ಬಿಟ್ಟು, ಫುಲ್‌ ಟೈಮ್‌ ಇದರಲ್ಲಿಯೇ ತೊಡಗಿಸಿಕೊಳ್ಳಲು ನಿರ್ಧರಿಸಿದೆ. ಆಗ ನನಗೆ 3 ಲಕ್ಷ ಫಾಲೋವರ್ಸ್‌ ಜತೆಗಿದ್ದರು. ಕರೊನಾ ಟೈಮ್‌ನಲ್ಲಿ ಸ್ನೇಹಿತರ ಜತೆ ಸೇರಿ ಒಂದು ಅಪಾರ್ಟ್‌ಮೆಂಟ್‌ ಬಾಡಿಗೆ ಹಿಡಿದು, ವಿಡಿಯೋ ಕಂಟೆಂಟ್‌ ಹಾಕಲು ಶುರು ಮಾಡಿದೆ. ಕೇವಲ ಮೂರ್ನಾಲ್ಕು ವಿಡಿಯೋ ಹಾಕ್ತಿದ್ದಂತೆ, ದೊಡ್ಡ ಮಟ್ಟದಲ್ಲಿ ನನ್ನ ವಿಡಿಯೋಗಳು ವೈರಲ್‌ ಆದವು. ಬಹುತೇಕ ಎಲ್ಲ ಸುದ್ದಿವಾಹಿನಿಗಳಲ್ಲಿ ಪ್ರಸಾರವಾದವು. ಆದರೆ, ಅದಾಗಿ ಕೇವಲ ಮೂರೇ ದಿನಕ್ಕೆ ಟಿಕ್‌ಟಾಕ್‌ ಬ್ಯಾನ್‌ ಆಯ್ತು.

ಇದನ್ನೂ ಓದಿ: Masala Chai Media: ಕರ್ನಾಟಕ ಸುತ್ತಿಸೋ ಈ 'ಮಸಾಲಾ ಚಾಯ್‌' ಹುಡುಗ್ರ ಬಗ್ಗೆ ನಿಮಗೆಷ್ಟು ಗೊತ್ತು? ಇವ್ರ ಊರು, ಕೆಲಸವೇನು? ಇಲ್ಲಿದೆ ಸಂದರ್ಶನ

ಮತ್ತೆ ಮೊದಲಿನಿಂದ ಕೆಲಸ ಮಾಡುವ ಪ್ರಸಂಗ ಒದಗಿಬಂತು. ಬೇರೆ ಬೇರೆ ಪ್ಲಾಟ್‌ಫಾರ್ಮ್‌ಗಳಿದ್ದರೂ, ಟಿಕ್‌ಟಾಕ್‌ನಷ್ಟು ಫೇಮಸ್‌ ಯಾವುದೂ ಇರಲಿಲ್ಲ. ಆಗ ಇನ್‌ಸ್ಟಾಗ್ರಾಂ ರೀಲ್ಸ್‌ ಶುರು ಮಾಡಿದೆ. ಒಂದೇ ತಿಂಗಳ ಅವಧಿಯಲ್ಲಿ ಒಂದು ಲಕ್ಷ ಫಾಲೋವರ್ಸ್‌ ಸಿಕ್ಕರು. ಆದರೆ ಇನ್‌ಸ್ಟಾಗ್ರಾಂನಲ್ಲಿಯೂ ದುಡ್ಡು ಬರುತ್ತೆ ಅಂತ ನನಗೆ ಗೊತ್ತಿರಲಿಲ್ಲ. ಒಂದಷ್ಟು ಸ್ಟಡಿ ಮಾಡಿದೆ. ಇಲ್ಲಿ ದುಡ್ಡಿದೆ ಎಂದು ಗೊತ್ತಾಯ್ತು. ಕಂಟೆಂಟ್‌ ಕೊಡಲು ಶುರು ಮಾಡಿದೆ. ಹುಡುಗಿಯ ವೇಷ ಹಾಕಿದೆ ಎಲ್ಲರಿಗೂ ಇಷ್ಟವಾಯ್ತು. ಸಂಬಂಧಿಕರು ಏನೆನೋ ಅಂದುಕೊಂಡರು. ಆ ಕಡೆ ನೋಡುವಷ್ಟೂ ನನಗೆ ಸಮಯ ಇರಲಿಲ್ಲ. ಅವರೊಂದಿಗೆ ಚರ್ಚೆಗೆ ಇಳಿದರೆ ನನಗದು ಉಪಯೋಗವಿಲ್ಲ. ನನಗೆ ಕ್ಲಿಯರ್‌ ಮೈಂಡ್‌ಸೆಟ್‌ ಹೊಂದಿದ್ದೆ. ಕಂಟೆಂಟ್‌ ರೆಡಿ ಮಾಡಬೇಕು, ಜನರನ್ನು ರೀಚ್‌ ಆಗಬೇಕು ಅದೇ ನನ್ನ ಉದ್ದೇಶವಾಗಿತ್ತು. ಅದರಂತೆ ಕೆಲಸ ಮುಂದುವರಿಸಿದ್ದೇನೆ. ಇಲ್ಲಿಯವರೆಗೂ ನಾನು ಏನನ್ನೂ ಸಾಧಿಸಿಲ್ಲ ಎಂಬುದು ನನ್ನ ಅನಿಸಿಕೆ.

ನನಗೆ ನಾನೇ ಬಾಸ್;‌ ಆದಾಯವೂ ಖುಷಿ ಇದೆ

ಅಮೆಜಾನ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಆಗ 15 ಸಾವಿರ ಸಂಬಳ ಕೊಡುತ್ತಿದ್ದರು. ಈಗ ಅದಕ್ಕಿಂತ 10 ಪಟ್ಟು ಹೆಚ್ಚು ಸಿಗುತ್ತಿದೆ. ಇಲ್ಲಿಯವರೆಗೂ 100ಕ್ಕೂ ಅಧಿಕ ಡಿಜಿಟಲ್‌ ಜಾಹೀರಾತಿಗಳನ್ನು ಮಾಡಿದ್ದೇನೆ. ಆದರೆ ನನಗಿನ್ನು ನನ್ನ ಕೆಲಸದಲ್ಲಿ ತೃಪ್ತಿಯಾಗಿಲ್ಲ. ನಾನು ಈ ವರೆಗೂ ಏನೂ ಕೆಲಸ ಮಾಡಿಲ್ಲ. ಇಲ್ಲಿಯವರೆಗೂ ಶೇ. 1 ಮಾತ್ರ ನನ್ನ ಕೆಲಸ ಎಂದು ನಾನಂದುಕೊಂಡಿದ್ದೇನೆ. ಮುಂದಿನ ಆರು ತಿಂಗಳಲ್ಲಿ ಮಹತ್ತರ ಬದಲಾವಣೆಗೆ ಕಾಲಿಡುತ್ತಿದ್ದೇನೆ. ಅದನ್ನು ಈಗಲೇ ಹೇಳುವುದಿಲ್ಲ. ಮಾಡಿ ತೋರಿಸಿ ಆಮೇಲೆ ಜನರೇ ಹೇಳಬೇಕು ಎಂದುಕೊಂಡಿದ್ದೇನೆ. ಆ ನಿಟ್ಟಿನಲ್ಲಿ ಕೆಲಸವೂ ನಡೆಯುತ್ತಿದೆ. ನನ್ನ ವಿಡಿಯೋಗಳಲ್ಲಿ ಹೆಚ್ಚಾಗಿ ನಾನು ಚಡ್ಡಿಯಲ್ಲಿಯೇ ಕಾಣಿಸುತ್ತೇನೆ. ಅದಕ್ಕೆ ಕಾರಣ ರಣವೀರ್‌ ಸಿಂಗ್.‌ ನಾನು ಅವರ ಅಪ್ಪಟ ಅಭಿಮಾನಿ. ಅವರ ಫ್ಯಾಷನ್‌ ಸ್ಟೈಲ್‌ಅನ್ನು ನಾನು ಫಾಲೋ ಮಾಡುತ್ತಿರುತ್ತೇನೆ. ನನ್ನ ಚಡ್ಡಿ ಅವತಾರವನ್ನು ಜನರೂ ಇಷ್ಟ ಪಟ್ಟಿದ್ದಾರೆ. ಅದೇ ದೊಡ್ಡ ಖುಷಿ.

Whats_app_banner