ಕರ್ನಾಟಕದಲ್ಲಿ ನಿಮಗೆ ತುಳು ಬರಲ್ವ? ಎಂದ ತುಳುವೆದಿ ರಕ್ಷಿತಾ ಶೆಟ್ಟಿ ಕಿವಿಹಿಂಡಿದ ನೆಟ್ಟಿಗರು, ನನ್ನ ರಾಷ್ಟ್ರಭಾಷೆ ತುಳು!-social media news rakshita tulu talks with auto driver video viral learn tulu language in karnataka pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕರ್ನಾಟಕದಲ್ಲಿ ನಿಮಗೆ ತುಳು ಬರಲ್ವ? ಎಂದ ತುಳುವೆದಿ ರಕ್ಷಿತಾ ಶೆಟ್ಟಿ ಕಿವಿಹಿಂಡಿದ ನೆಟ್ಟಿಗರು, ನನ್ನ ರಾಷ್ಟ್ರಭಾಷೆ ತುಳು!

ಕರ್ನಾಟಕದಲ್ಲಿ ನಿಮಗೆ ತುಳು ಬರಲ್ವ? ಎಂದ ತುಳುವೆದಿ ರಕ್ಷಿತಾ ಶೆಟ್ಟಿ ಕಿವಿಹಿಂಡಿದ ನೆಟ್ಟಿಗರು, ನನ್ನ ರಾಷ್ಟ್ರಭಾಷೆ ತುಳು!

Rakshita Tulu Talks Viral Video: ಕರ್ನಾಟಕದಲ್ಲಿ ಕನ್ನಡ ರಾಷ್ಟ್ರ ಭಾಷೆ ಎಂದ ಆಟೋ ಚಾಲಕನಿಗೆ, ನಮ್ಮ ಮಂಗಳೂರಲ್ಲಿ ತುಳು ರಾಷ್ಟ್ರ ಭಾಷೆ ಎಂದು ತುಳುವೆದಿ ರಕ್ಷಿತಾ ಶೆಟ್ಟಿ ಹೇಳಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರಕ್ಷಿತಾ ಶೆಟ್ಟಿಯ ಬೆಂಗಳೂರು ಜರ್ನಿಯ ವ್ಲಾಗ್‌ನ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ತುಳುವೆದಿ ರಕ್ಷಿತಾ ಶೆಟ್ಟಿ- ಬೆಂಗಳೂರಲ್ಲಿ ತುಳು ಬರೋಲ್ವ ವಿವಾದ
ತುಳುವೆದಿ ರಕ್ಷಿತಾ ಶೆಟ್ಟಿ- ಬೆಂಗಳೂರಲ್ಲಿ ತುಳು ಬರೋಲ್ವ ವಿವಾದ

Rakshita Tulu Talks Viral Video: ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರಿಗೆ ತುಳುವೆದಿ ರಕ್ಷಿತಾ ಚಿರಪರಿಚಿತ. ತನ್ನ ವಿಭಿನ್ನ ಶೈಲಿ ಮಾತುಗಾರಿಕೆಯಿಂದಲೇ ಎಲ್ಲರ ಗಮನ ಸೆಳೆದವರು. ವಿಶೇಷವಾಗಿ ಚಿತ್ರವಿಚಿತ್ರ ಶೈಲಿಯ ಮಾತಿನಿಂದಲೇ ಕಾಮಿಡಿ ಮಾಡುತ್ತ ಇರುತ್ತಾರೆ. ಈಕೆಯ ಮಾತಿನ ವಿಡಿಯೋಗಳು ವೈರಲ್‌ ಆಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಹಿಂದಿ ಶೈಲಿಯ ತುಳು ಮಾತು ವೈರಲ್‌ ಆದ ಸಂದರ್ಭದಲ್ಲಿಯೇ ಅದೇ ಶೈಲಿಯನ್ನೇ ಮುಂದುವರೆಸಿ ಸಾಕಷ್ಟು ಫಾಲೋವರ್ಸ್‌ ಪಡೆದಿದ್ದಾರೆ. ಆದರೆ, ಇದೀಗ ಕನ್ನಡ ಭಾಷೆಯ ಕುರಿತು ಈಕೆ ಮಾತನಾಡಿದ್ದು, ಕನ್ನಡಿಗರನ್ನು ಕೆರಳಿಸಿದೆ. ಕನ್ನಡಿಗರು ಮಾತ್ರವಲ್ಲದೆ ತುಳು ಭಾಷಿಗರೂ ಸೋಷಿಯಲ್‌ ಮೀಡಿಯಾದಲ್ಲಿ ಇವರಿಗೆ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ.

"ಎ ಡೇಸ್‌ ಇನ್‌ ಬೆಂಗಳೂರು" ಎಂಬ ವಿಡಿಯೋವನ್ನು ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ತುಳುವೆದಿ ರಕ್ಷಿತಾ ಹಂಚಿಕೊಂಡಿದ್ದರು. "ನಾನಿಂದು ಬೆಂಗಳೂರಿನಲ್ಲಿದ್ದೇನೆ. ಟೀಕ್‌ ಹೈ" ಎಂದು ಬೆಂಗಳೂರು ದರ್ಶನ ಆರಂಭಿಸಿದರು. ಮೊದಲು ಗಣೇಶ್‌ ಫುಡ್‌ ಪಾಯಿಂಟ್‌ಗೆ ಹೋಗಿ ತಿಂಡಿತಿಂದಿದ್ದರು. ಇದಾದ ಬಳಿಕ ರಾಪಿಡೋ ಬುಕ್‌ ಮಾಡುತ್ತಿದ್ದೇನೆ ಎಂದು ರಿಕ್ಷಾ ಬುಕ್‌ ಮಾಡಿದ್ದರು. ಆಗ ಆಟೋ ಬಂದಿದೆ. "ವೆಂಕಟೇಶ್‌ ಟೆಂಪಲ್‌ ಬುಡ್ಲೆ" ಎಂದು ಹೇಳುತ್ತಾಳೆ. "ಸರಿ" ಎನ್ನುತ್ತಾರೆ ಆಟೋ ಚಾಲಕ. "ನಿಮಗೆ ತುಳು ಹೇಗೆ ಬರುತ್ತೆ? ಎಂದು ರಕ್ಷಿತಾ ಕೇಳಿದಾಗ "ನನಗೆ ತುಳು ಅರ್ಥ ಆಗುತ್ತದೆ" ಎನ್ನುತ್ತಾರೆ ಚಾಲಕ. "ಬೆಂಗಳೂರಲ್ಲಿ ಯಾರಾದರೂ ತುಳು ಮಾತನಾಡಿದರೆ ನಮಗೆ ಖುಷಿ ಆಗುತ್ತದೆ" ಎಂದು ತುಳುವೆದಿ ರಕ್ಷಿತಾ ಹೇಳಿದಾಗ "ನಮಗೆ ಜಾಸ್ತಿ ಮಾತನಾಡಲು ಬರೋದಿಲ್ಲ" ಎಂದು ಆಟೋ ಚಾಲಕ ಮಾರುತ್ತರ ನೀಡುತ್ತಾರೆ.

"ನಮಗೆ ಕೂಡ ಕನ್ನಡ ಜಾಸ್ತಿ ಮಾತಾಡೋಕ್ಕೆ ಬರೆಯೋಕ್ಕೆ ಬರೋದಿಲ್ಲ" ಎನ್ನುತ್ತಾಳೆ ರಕ್ಷಿತಾ. ಇದಾದ ಬಳಿಕ ಆಟೋ ಚಾಲಕನ ಬಳಿ ತುಳುವಲ್ಲೇ "ಅಂದೇ, ಬೆಂಗಳೂರುಡು ಬರ್ಸ ಉಂಡೇ..." ಎಂದು ಕೇಳುತ್ತಾಳೆ. "ಬರ್ಸಾ?" ಎಂದು ಅಚ್ಚರಿಯಿಂದ ಚಾಲಕ ಕೇಳಿದಾಗ "ಮಳೆ, ಮಳೆ. ಬೆಂಗಳೂರು ಮಳೆ ಉಂಟಾ" ಎನ್ನುತ್ತಾರೆ. "ಮಳೆ ಜಾಸ್ತಿ ಇವಿನಿಂಗ್‌ ಅಲ್ವ. ನಿನ್ನೆ ಕೂಡ ರಾತ್ರೆಗೆ ಬರ್ಸ ಬಂದಿದ್ದು. ಕರೆಂಟ್‌ ಕೂಡ ಹೋಗಿತ್ತು. ರಾತ್ರೆ ನಿದ್ರೆನೇ ಇಲ್ಲ" ಎಂದೆಲ್ಲ ಮಾತನಾಡುತ್ತಾಳೆ. ಆಟೋ ಚಾಲಕ ಹೂಂ ಹೂಂ ಎನ್ನುತ್ತಾರೆ. ಇದಾದ ಬಳಿಕ "ಈರ್‌ ಪಾತೆರ್ನು ಕಮ್ಮಿಯ (ನೀವು ಮಾತಾಡೋದು ಕೊಂಚ ಕಡಿಮೆಯಾ)." ಎಂದು ಹೇಳುತ್ತಾಳೆ. ಬಳಿಕ ತುಳುವಿನಲ್ಲೇ "ನೆಂಟರಲ್ಲಿ ಸ್ವಲ್ಪ ಮಾತನಾಡಬೇಕು. ನಿಮ್ಮ ಊರು ಎಷ್ಟು ಚೆನ್ನಾಗಿದೆ ಎಂದು ನೆಂಟರಿಗೆ ಗೊತ್ತಾಗಬೇಕು" ಎಂದೆಲ್ಲ ತನ್ನದೇ ಮುದ್ದು ಶೈಲಿಯಲ್ಲಿ ರಕ್ಷಿತಾ ಮಾತಾಡುತ್ತಾರೆ. ಇಷ್ಟೆಲ್ಲ ಮಾತಾಡಿ ಆಟೋದಿಂದ ಇಳಿದು ದೇಗುಲಕ್ಕೆ ಹೋಗುತ್ತಾರೆ. ದೇಗುಲ ಓಪನ್‌ ಆಗಿರೋದಿಲ್ಲ. "ಈ ದೇವಸ್ಥಾನ ಎಷ್ಟು ಗಂಟೆಗೆ ಸ್ಟಾರ್ಟ್‌ ಆಗುತ್ತದೆ" ಎಂದು ಅಲ್ಲಿನವರಲ್ಲಿ ವಿಚಾರಿಸುತ್ತಾರೆ. ಬಳಿಕ ಬೆಂಗಳೂರಿನಲ್ಲಿರುವ ತಿರುಪತಿ ತಿರುಮಲ ದೇಗುಲಕ್ಕೂ ಹೋಗುತ್ತಾರೆ. ಹೀಗೆ ರಕ್ಷಿತಾ ಬೆಂಗಳೂರಲ್ಲಿ ಸಮಯ ಕಳೆಯುತ್ತಾರೆ.

ಬೆಂಗಳೂರಲ್ಲಿ ನಿಮಗೆ ತುಳು ಬರೋಲ್ವ?

ಮತ್ತೆ ರಕ್ಷಿತಾ ಶೆಟ್ಟಿ ಬೇರೊಂದು ಆಟೋದಲ್ಲಿ ಹೋಗುತ್ತಾರೆ. ಆ ಆಟೋದಲ್ಲಿ ಚಾಲಕನ ಜತೆ ಸಂಭಾಷಣೆಯನ್ನು ತನ್ನ ವ್ಲೋಗ್‌ನಲ್ಲಿ ಹಂಚಿಕೊಂಡಿದ್ದಾರೆ. "ನೀವು ಕನ್ನಡದಲ್ಲಿ ಮಾತನಾಡಿದರೆ ನಾವೂ ಕನ್ನಡದಲ್ಲಿ ಮಾತನಾಡುತ್ತೇವೆ" ಎಂದು ರಕ್ಷಿತಾ ಹೇಳಿದಾಗ ಆಟೋ ಚಾಲಕ ಕೂಡ ಖುಷಿಯಿಂದ ಮಾತನಾಡುತ್ತಾರೆ. "ಊರಿಂದ ಯಾವಾಗ ಬಂದ್ರಿ" ಎಂದೆಲ್ಲ ಮಾತನಾಡುತ್ತಾರೆ. ಇದಾದ ಬಳಿಕ ಚಾಲಕ ಈಕೆಯ ವಿಡಿಯೋ ನೋಡಿದ್ದೇನೆ ಎನ್ನುತ್ತಾನೆ. "ವಿಡಿಯೋದಲ್ಲಿ ನನ್ನ ಮುಖಲಿ ಗೊತ್ತಾಗೋದು ಇಲ್ಲ ಅಲ್ವ. ಯಾಕೆಂದ್ರೆ ಅಲ್ಲಿ ನಾನು ದೊಡ್ಡ ಕಾಣಿಸ್ತೇನೆ" ಎಂದೆಲ್ಲ ಮಾತನಾಡುತ್ತ ಹೋಗುತ್ತಾರೆ. ಇದಾದ ಬಳಿಕ ನಿಮ್ಮ ಮಾತಲ್ಲಿಯೇ ನೀವು ಮಂಗಳೂರಿನವರು ಎಂದು ಗೊತ್ತಾಗುತ್ತದೆ ಎಂದೆಲ್ಲ ಮಾತಾಡುತ್ತಾರೆ. "ಕರ್ನಾಟಕದಲ್ಲಿ ನಿಮಗೆ ತುಳು ಬರೋಲ್ವ ನಿಮಗೆ" ಎಂದು ಕೇಳುತ್ತಾಳೆ. ಅದಕ್ಕೆ "ನಮಗೆ ಯಾಕೆ ಬರಬೇಕು" ಎಂದು ಚಾಲಕ ಹೇಳುತ್ತಾರೆ.

"ತುಳು ಬರ್ಬೆಕು ನಿಮಗೆ. ನಮಗೆ ಕೂಡ ಕನ್ನಡ ಯಾಕೆ ಬರ್ಬೆಕು" ಎಂದು ಹೇಳುತ್ತಾಳೆ. ಅದಕ್ಕೆ ಚಾಲಕ "ಕರ್ನಾಟಕದ್ದು ರಾಷ್ಟ್ರ ಭಾಷೆ ಕನ್ನಡ" ಎನ್ನುತ್ತಾನೆ. "ಹಾ... ಮಂಗಳೂರಲ್ಲಿ ನನ್ನ ರಾಷ್ಟ್ರ ಭಾಷೆ ತುಳುನಾಡು, ತುಳು. ಮ್ಯಾಂಗ್ಲೂರಲ್ಲಿ ನಮ್ಮ ಉಡುಪಿಯಲ್ಲಿ ಯಾರೂ ಕನ್ನಡ ಜಾಸ್ತಿ ಮಾತಾಡೋದಿಲ್ಲ. ಎಲ್ಲರೂ ತುಳುವೇ ಮಾತಾನಾಡೋದು. ಗೊತ್ತಾಯ್ತಾ... "ಎಂದು ತುಳುವೆದಿ ರಕ್ಷಿತಾ ಹೇಳುತ್ತಾರೆ. "ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ ಇವರಲ್ಲಿ ಎಲ್ಲಾ ಹೇಳಿ, ಕನ್ನಡ ಮಾತಾಡಬೇಡಿ" ಎಂದು ಚಾಲಕ ಹೇಳುತ್ತಾನೆ. "ಹಾಗಲ್ಲ.. ನಾನು ಹಾಗೇ ಹೇಳಿಲ್ಲ. ಕನ್ನಡ ಮಾತನಾಡಬೇಡಿ ಎಂದು ಹೇಳಿಲ್ಲ. ತುಳು ಕೂಡ ಸ್ವಲ್ಪ ಬರಬೇಕು ನಿಮಗೆ. ನಾವು ತುಳುವಿಗೆ ಎಷ್ಟು ಕೊಡ್ತೆವೆ ಅಲ್ವ. ಅಷ್ಟು ಕನ್ನಡಕ್ಕೂ ಕೊಡ್ತೆವೆ" ಎಂದೆಲ್ಲ ಮಾತನಾಡಿದ್ದಾರೆ. ಒಟ್ಟಾರೆ ಆಟೋ ಚಾಲಕನ ಜತೆ ಫನ್ನಿಯಾಗಿ ಮಾತನಾಡಿದ ಎರಡು ವಾರದ ಹಿಂದಿನ ಘಟನೆ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ತುಳುವೆದಿ ರಕ್ಷಿತಾ ಶೆಟ್ಟಿ ವೈರಲ್‌ ವಿಡಿಯೋ

ಈ ವಿಡಿಯೋವನ್ನು ಕೆಲವರು ಎಕ್ಸ್‌ (ಟ್ವಿಟ್ಟರ್‌), ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಮುಂತಾದ ಕಡೆ ಹಂಚಿಕೊಂಡಿದ್ದಾರೆ. ಸಹಜವಾಗಿ ಕನ್ನಡಿಗರಿಗೆ ಈಕೆಯ ಮಾತು ಕೋಪ ತರಿಸಿದೆ. ಇನ್ನೊಂದಿಷ್ಟು ಜನರು ಈಕೆಯ ಕಾಮಿಡಿಯ ಅರಿವು ಇರುವವರು ಕಿಚಾಯಿಸುವಂತಹ ಕಾಮೆಂಟ್‌ಗಳನ್ನು ಹಾಕಿದ್ದಾರೆ. "ತುಳು ವರ್ಸಸ್‌ ಕನ್ನಡ ತಪ್ಪು, ತುಳು ಮತ್ತು ಕನ್ನಡ ಸರಿ" "ನಾವು ಉತ್ತರ ಭಾರತೀಯರಿಗೆ ಕನ್ನಡ ಕಲಿಯಬೇಕು ಎಂದು ಹೇಳುತ್ತೇವೆ, ಈಕೆ ಕನ್ನಡಿಗರಿಗೆ ತುಳು ಕಲಿಯಬೇಕು ಎಂದು ಹೇಳುತ್ತಾಳೆ. ಸೂಪರ್‌" "ನಮ್ಮ ಬೆಂಗಳೂರಿಗೆ ಸ್ವಾಗತ. ನೀವು ಯಾವುದೇ ಸ್ಥಳಕ್ಕೆ ಹೋದರೂ ಆ ಸ್ಥಳದ ಸಂಸ್ಕೃತಿಗೆ ಗೌರವ ನೀಡಿ" "ಇದೆಲ್ಲ ಓವರ್‌ ಆಯ್ತು" "ಬೆಂಗಳೂರಲ್ಲಿ ತಮಿಳು, ತೆಲುಗು, ಹಿಂದಿ ಎಲ್ಲಾ ಕಲಿತೀರಿ, ತುಳು ಕಲಿತರೆ ತಪ್ಪೇನು" ಹೀಗೆ ಸಾಕಷ್ಟು ಕನ್ನಡಿಗರು ಮತ್ತು ತುಳು ಭಾಷಿಗರು ಈಕೆಯ ವಿಡಿಯೋಗೆ ಕಾಮೆಂಟ್‌ ಮಾಡಿದ್ದಾರೆ.