Udaal Pavvya Interview: ಈ 'ಉಡಾಳ್‌ ಪವ್ಯಾ' ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಕಾಮಿಡಿಯನ್‌... ಇಲ್ಲಿದೆ ಸಂದರ್ಶನ..
ಕನ್ನಡ ಸುದ್ದಿ  /  ಮನರಂಜನೆ  /  Udaal Pavvya Interview: ಈ 'ಉಡಾಳ್‌ ಪವ್ಯಾ' ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಕಾಮಿಡಿಯನ್‌... ಇಲ್ಲಿದೆ ಸಂದರ್ಶನ..

Udaal Pavvya Interview: ಈ 'ಉಡಾಳ್‌ ಪವ್ಯಾ' ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಕಾಮಿಡಿಯನ್‌... ಇಲ್ಲಿದೆ ಸಂದರ್ಶನ..

ಮುಧೋಳದ ಉಡಾಳ ಎಂದೇ ಕರೆಸಿಕೊಳ್ಳುವ 'ಉಡಾಳ್‌ ಪವ್ಯಾ' ( Udaal Pavvya ) ಅಲಿಯಾಸ್‌ ಪವನ್‌ ಕುಲಕರ್ಣಿ (Pavan Kulkarni) ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್.‌ ಬಗೆಬಗೆ ವಿಡಿಯೋಗಳನ್ನು ಉತ್ತರ ಕರ್ನಾಟಕ ಶೈಲಿಯಲ್ಲಿ ಪ್ರೆಸೆಂಟ್‌ ಮಾಡುವ ಅವರ ಶೈಲಿಗೆ ಫಿದಾ ಆದವರಿಲ್ಲ.

<p>ಈ 'ಉಡಾಳ್‌ ಪವ್ಯಾ' ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಕಾಮಿಡಿಯನ್‌... ಇಲ್ಲಿದೆ ಸಂದರ್ಶನ..</p>
ಈ 'ಉಡಾಳ್‌ ಪವ್ಯಾ' ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಕಾಮಿಡಿಯನ್‌... ಇಲ್ಲಿದೆ ಸಂದರ್ಶನ.. (Instagram/ Udaal Pavvya)

ಸೋಷಿಯಲ್‌ ಮೀಡಿಯಾ ಸದ್ಯ ಎಲ್ಲರ ನೆಚ್ಚಿನ ಹಾಟ್‌ಸ್ಪಾಟ್‌.. ಯಾರು ಎಲ್ಲಿರ್ತಾರೋ ಗೊತ್ತಿಲ್ಲ. ಎಲ್ಲರೂ ಸೋಷಿಯಲ್‌ ಮೀಡಿಯಾದಲ್ಲಂತೂ ಇದ್ದೇ ಇರ್ತಾರೆ! ಒಂದಲ್ಲ ಒಂದು ಸಲ ಸಿಕ್ಕೇ ಸಿಗ್ತಾರೆ. ಇಂಥ ಸೋಷಿಯಲ್‌ ಮೀಡಿಯಾ ಇದೀಗ ಕೇವಲ ಮನರಂಜನೆ ಮಾತ್ರವಲ್ಲ, ಉದ್ಯಮವಾಗಿಯೂ ದೊಡ್ಡ ಮಟ್ಟದಲ್ಲಿ ಬೆಳೆದು ಹೆಮ್ಮರವಾಗಿ ನಿಂತಿದೆ. ಇದೇ ಮರದ ಕೆಳಗೆ ತಮ್ಮ ಕಲೆಯ ಮೂಲಕವೋ, ಪ್ರತಿಭೆಯ ಮೂಲಕವೇ ಜನರನ್ನು ನಗಿಸುವ ಕಾಯಕವನ್ನೂ ಸಾಕಷ್ಟು ಮಂದಿ ಮಾಡುತ್ತಿದ್ದಾರೆ. ತಮಗೆ ಗೊತ್ತಿರುವುದನ್ನು ಇನ್ನೊಬ್ಬರಿಗೆ ತಿಳಿ ಹೇಳುವ ಕೆಲಸವೂ ಇಲ್ಲಾಗುತ್ತಿರುತ್ತದೆ. ಒಟ್ಟಿನಲ್ಲಿ ಈ ವೇದಿಕೆಯಲ್ಲಿ ಇದಿಲ್ಲ ಎನ್ನುವಂತಿಲ್ಲ. ಬೇಕಾಗಿದ್ದು ಎಲ್ಲವೂ ಇಲ್ಲಿ ದಕ್ಕುತ್ತದೆ.

ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸದ್ಯ ಟ್ರೆಂಡಿಂಗ್‌ ಪ್ಲಾಟ್‌ಫಾರ್ಮ್‌ಗಳು. ಯುವಜನತೆಯನ್ನು ಸೆಳೆದ ಈ ವೇದಿಕೆಗಳಲ್ಲಿ ಚಿಕ್ಕ ಚಿಕ್ಕ ವಯಸ್ಸಿನಲ್ಲಿ ಟ್ಯಾಲೆಂಟ್‌ ಮೂಲಕವೇ ಗುರುತಿಸಿಕೊಂಡಿದ್ದಾರೆ. ದುಡಿಮೆ ಕಂಡುಕೊಂಡಿದ್ದಾರೆ. ಆ ಪೈಕಿ ಬಾಗಲಕೋಟೆ ಜಿಲ್ಲೆ ಮುಧೋಳದ ಉಡಾಳ ಎಂದೇ ಕರೆಸಿಕೊಳ್ಳುವ ಉಡಾಳ್‌ ಪವ್ಯಾ ( Udaal Pavvya ) ಅಲಿಯಾಸ್‌ ಪವನ್‌ ಕುಲಕರ್ಣಿ (Pavan Kulkarni) ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್.‌ ಬಗೆಬಗೆ ವಿಡಿಯೋಗಳನ್ನು ಉತ್ತರ ಕರ್ನಾಟಕ ಶೈಲಿಯಲ್ಲಿ ಪ್ರೆಸೆಂಟ್‌ ಮಾಡುವ ಅವರ ಶೈಲಿಗೆ ಫಿದಾ ಆದವರಿಲ್ಲ. ಅವರ ಮಾತಿನ ಧಾಟಿ ಕಂಡು ನಗದವರಿಲ್ಲ. ಇದೀಗ ಇದೇ ಉಡಾಳ ಪವ್ಯಾ, Hindustan Times Kannada ದ ಜತೆಗೆ ಮಾತನಾಡಿದ್ದಾರೆ.

ನಾನು ಹುಟ್ಟ ಉಡಾಳ..

ಚಿಕ್ಕಂದಿನಿಂದಲೇ ನಾನು ಅತೀ ಉಡಾಳ.. ಕೀಟಲೆ ಸ್ವಭಾವದವನು.. ಸ್ಕೂಲ್‌ ಡೇಸ್‌ನಲ್ಲಿಯೂ ಅದು ಮುಂದುವರಿದಿತ್ತು. ಟೀಚರ್‌ ಸಹ ನನಗ ಉಡಾಳ ಎಂದೇ ಕರೀತಿದ್ರು. ಆವತ್ತಿನ ಉಡಾಳಗಿರಿ, ಇವತ್ತು ನನ್ನ ಪೇಜ್‌ಗೆ ಟೈಟಲ್‌ ಆಗಿದೆ. ಪೇಜ್‌ ಕ್ರಿಯೇಟ್‌ ಮಾಡುವಾಗ ಅದನ್ನೇ ವಿಚಾರ ಮಾಡ್ತಿದ್ದೆ, ಏನು ಹೆಸರು ಇಡೋದು ಅಂತ. ಆಗ ಉಡಾಳ ಫಿಕ್ಸ್‌ ಆಯಿತು. ಇನ್ನು ಅದರ ಮುಂದೆ ಇನ್ನೊಂದು ಪದ ಬೇಕಿತ್ತು. ಸ್ನೇಹಿತ್ರು ಪವ್ಯಾ, ಪವನ್ಯಾ ಅಂತ ಕರೀತಿದ್ರು. ಅದರಲ್ಲಿ ಪವ್ಯಾ ಫಿಕ್ಸ್‌ ಮಾಡಿ, 2019ರಲ್ಲಿ ಉಡಾಳ್‌ ಪವ್ಯಾ ಅಂತ ನಾಮಕರಣ ಮಾಡಿದೆ.

ನಮ್ಮ ತಂದೆಯವ್ರೂ ಕಲಾವಿದ್ರು...

ನಮ್ಮ ತಂದೆ ಕೃಷ್ಣ ವಸಂತ ಕುಲಕರ್ಣಿ. ಸದ್ಯ ವಕೀಲಿ ವೃತ್ತಿಯಲ್ಲಿದ್ದಾರೆ. ಅದರ ಜತೆಗೆ ಕಲೆ, ನಾಟಕದಲ್ಲಿಯೂ ಅವರು ಮುಂದು. ಗಾಯಕರೂ ಹೌದು. ಅವರಿಂದಲೇ ಈ ಕಲೆ ನಮಗೂ ಅಂಟಿಕೊಂಡಿದೆ. ಇದೆಲ್ಲದರ ಜತೆಗೆ ಅಪ್ಪ ವಕೀಲಿ ವೃತ್ತಿ ಮಾಡ್ತಿರುವುದರಿಂದ ನಾನೂ ಸಹ ಎಲ್‌ಎಲ್‌ಬಿ ಮುಗಿಸಿ, ತಂದೆಯವರ ಜತೆಗೇ ಇದ್ದೇನೆ. ಮನೆಯಲ್ಲಿಯೇ ಆಫೀಸ್‌ ಮಾಡಿಕೊಂಡು, ಪ್ರಾಕ್ಟಿಸ್‌ ಸಹ ಮುಂದುವರಿಸಿದ್ದೇನೆ.

15 ಸಾವಿರಕ್ಕೂ ಅಧಿಕ ಮೀಮ್ಸ್‌ ಕ್ರಿಯೆಟ್..‌

2016ರಿಂದ ನಾನು ಟ್ರಾಲ್‌ ಪೇಜ್‌ಗಳಿಗೆ ಮೀಮ್ಸ್‌ ಬರೆಯುತ್ತಿದ್ದೆ. ಹಾಗೆ ಬರೆದ ಮೀಮ್‌ಗಳು ರಾಜ್ಯದ ಬಹುತೇಕ ಎಲ್ಲ ಟ್ರಾಲ್‌ ಪೇಜ್‌ಗಳಲ್ಲಿಯೂ ಪ್ರಕಟಗೊಳುತ್ತಿದ್ದವು. ನೋಡಿದವರಿಂದ ಮೆಚ್ಚುಗೆ ಸಹ ಸಿಗುತ್ತಿತ್ತು. ನಾಲ್ಕೈದು ವರ್ಷದಲ್ಲಿ ಏನಿಲ್ಲ ಅಂದರೂ 15 ಸಾವಿರಕ್ಕೂ ಅಧಿಕ ಮೀಮ್‌ಗಳನ್ನು ಮಾಡಿದೆ. ಆದ್ರೆ ಸ್ವಂತಕ್ಕೆ ನನಗೆ ಏನಾದ್ರೂ ಮಾಡ್ಕೋಬೇಕಲ್ಲ ಅಂತ ಅನಿಸ್ತು. ಆಗ ಶುರುವಾಗಿದ್ದೇ ಯೂಟ್ಯೂಬ್‌ ಚಾನೆಲ್.‌ ಆರಂಭದಲ್ಲಿ ಫಿನ್ನಿ ವಿಡಿಯೋ ಮಾಡಿ ಹಾಕ್ತಿದ್ದೆ. ವಿಡಿಯೋಗಳಿಗೆ ಕಾಮೆಂಟರಿ ಕೊಡ್ತಿದ್ದೆ. ಅದಾದ ಮೇಲೆ ಅನ್‌ಬಾಕ್ಸಿಂಗ್‌ ಶುರುಮಾಡಿದೆ. ಟ್ರೆಂಡಿಂಗ್‌ನಲ್ಲಿ ಏನಿರುತ್ತೋ ಅದನ್ನ ಮಾಡೋದಷ್ಟೇ ನನ್ನ ಕೆಲಸ. ನನ್ನ ಯೂಟ್ಯೂಬ್‌ ಚಾನೆಲ್‌ ಶುರು ಆದಾಗ, ಅಭಿಷೇಕ್‌ ಅನ್ನೋ ನನ್ನ ಸ್ನೇಹಿತ ತುಂಬ ಸಹಾಯ ಮಾಡಿದ. ಆ ವಿಡಿಯೋ ಕ್ರೆಡಿಟ್‌ ಎಲ್ಲವೂ ಅವನಿಗೇ ಸಲ್ಲಬೇಕು. ಎಡಿಟ್‌, ಶೂಟಿಂಗ್‌ ಎಲ್ಲವೂ ಅವನದೇ.

ಮನೆಯಲ್ಲಿ ಮೊದಲೆಲ್ಲ ಬೈತಿದ್ರು, ಇದೀಗ ಅವರಿಗೂ ರೂಢಿ ಆಗಿದೆ...

ಸಣ್ಣ ಪುಟ್ಟ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡ್ತಿದ್ದಂತೆ ಲಕ್ಷಾಂತರ ಮಂದಿ ನೋಡಿ ಖುಷಿ ಪಡ್ತಿದ್ರು. ಆರಂಭದಲ್ಲಿ ಪ್ರತಿ ವಿಡಿಯೋದಲ್ಲಿ ಉತ್ತರ ಕರ್ನಾಟಕ ಭಾಗದ ಬೈಗುಳಗಳೇ ಇರುತಿದ್ವು. ಆದರೆ, ಹೊರಗೆ ಹೋದಾಗ ಮಕ್ಕಳು ನನ್ನ ಜೊತೆ ಫೋಟೋ ಕ್ಲಿಕ್‌ ಮಾಡಿಕೊಂಡಾಗ, ಮಕ್ಕಳೂ ನನ್ನ ವಿಡಿಯೋ ನೋಡ್ತಾರೆ ಅನ್ನೋದು ಗೊತ್ತಾಯ್ತು. ಆವತ್ತಿನಿಂದ ಶೇ. 50 ರಷ್ಟಿದ್ದ ಬೈಗುಳ ಶೇ. 5ಕ್ಕೆ ಬಂದು ನಿಂತಿದೆ. ಜವಾಬ್ದಾರಿಯಿಂದ ವಿಡಿಯೋ ಮಾಡಬೇಕು ಎಂದು ನಿರ್ಧರಿಸಿದೆ. ಮನೆಯ ವಿಚಾರಕ್ಕೆ ಬಂದರೆ, ಆರಂಭದಲ್ಲಿ ನಾನು ಕೋಣೆಯಲ್ಲಿ ಕುತ್ಕೋಂಡು ಕಿರುಚಾಡ್ತಿದ್ದೆ. ಆವಾಗೆಲ್ಲ ಮನೆಯವ್ರು ಒಂಥರಾ ನೋಡ್ತಿದ್ರು. ಈಗೀಗ ಎಲ್ಲವೂ ರೂಢಿ ಆಗಿದೆ. ಏನಾದ್ರೂ ಮಾಡ್ಕೊಂಡು ಹೋಗ್ಲಿ ಅಂತ ಕೈ ಬಿಟ್ಟಿದ್ದಾರೆ.

ಪ್ಯಾಂಡಮಿಕ್‌ ಮುಗಿದ ಮೇಲೆ ನಮ್‌ ಹಲಕಟ್‌ಗಿರಿ ಶುರುವಾಯ್ತು..

ಇನ್‌ಸ್ಟಾಗ್ರಾಂ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಯೂಟ್ಯೂಬ್‌ನಲ್ಲಿಯೇ ಆಗೊಂದು ಈಗೊಂದು ವಿಡಿಯೋ ಹಾಕ್ತಿದ್ದೆ. ಒಳ್ಳೆ ಹಿಟ್ಸ್‌ ಸಹ ಸಿಕ್ಕಿತ್ತು. ಈ ನಡುವೆ ಕರೊನಾ ಪ್ಯಾಂಡಮಿಕ್‌ ಬಂದ ಮೇಲೆ ಫ್ರೆಂಡ್ಸ್‌ ಎಲ್ಲ ಮನೆಯಲ್ಲಿಯೇ ಚೈನಿ (ಹರಟೆ) ಹೊಡಿಯೋಕೆ ಶುರು ಮಾಡಿದ್ವಿ. ಪ್ಯಾಂಡಮಿಕ್‌ ಟೈಮಿನಲ್ಲಿ ಈ ಸೋಷಿಯಲ್‌ ಮೀಡಿಯಾದಿಂದ ಎಷ್ಟೋ ಮಂದಿ ಸ್ಟಾರ್‌ ಆಗಿಬಿಟ್ರು. ನಾವು ಆ ಹೊತ್ತಿನಲ್ಲಿ ಮಾತ್ರ ಪೊಲೀಸರ ಕಣ್ಣು ತಪ್ಪಿಸಿ ಫ್ರೆಂಡ್ಸ್‌ ರೂಮ್‌ನಲ್ಲಿ ಮ್ಯಾಗಿ ಮಾಡಿ ತಿನ್ನೋದು, ಕಾರ್ಡ್ಸ್‌ ಆಡೋದು ಇಷ್ಟೇ ಆಗಿತ್ತು. ಒಂದು ರೀತಿ ಹಲಕಟ್‌ಗಿರಿ ಮಾಡೋದು ಆಗಿತ್ತು. ಪ್ಯಾಂಡಮಿಕ್‌ ಮುಗಿದ ಮೇಲೆ ಇನ್‌ಸ್ಟಾಗ್ರಾಂ ಓಪನ್‌ ಮಾಡಿದೆ. ಕೇವಲ ಒಂದೂವರೆ ವರ್ಷದಲ್ಲಿಯೇ ನನಗೆ ಅಚ್ಚರಿ ಆಗೋವಷ್ಟು ಚೇಂಜ್‌ ಕಂಡೆ. ಲಕ್ಷ ಲಕ್ಷ ಫಾಲೋವರ್ಸ್‌ ಸಿಕ್ಕರು. ಹೋದಲ್ಲಿ ಬಂದಲ್ಲಿ ಜನ ಗುರುತಿಸೋಕೆ ಶುರುಮಾಡಿದ್ರು. ನಿತ್ಯ ನೂರಾರು ಮೆಸೆಜ್, ಮೇಲ್‌ ಬರೋಕೆ ಶುರುವಾದ್ವು. ಇದೀಗ ವಕೀಲಿ ಪ್ರಾಕ್ಟಿಸ್‌ ಜತೆಗೆ ಪ್ರವೃತ್ತಿಯಾಗಿ ಈ ಕಾಯಕ ಮುಂದುವರಿಸಿದ್ದೇನೆ. ವಾರಕ್ಕೆ ಹೇಗಾದ್ರೂ ಮಾಡಿ ಮೂರು ವಿಡಿಯೋ ಪೋಸ್ಟ್‌ ಮಾಡಬೇಕು ಎಂದುಕೊಂಡಿದ್ದೇನೆ. ಅದೇ ರೀತಿ ವೆಬ್‌ಸಿರೀಸ್‌ ಮಾಡುವ ಪ್ಲಾನ್‌ ಇದೆ. ಅದರ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದೇನೆ.

ಪವ್ಯಾನ ತಿಂಗಳ ವರಮಾನ ಎಷ್ಟು?

ಹೋದಲ್ಲಿ ಬಂದಲ್ಲಿ. "ಮತ್ತೇನ್ಪಾ.. ಸೋಷಿಯಲ್‌ ಮೀಡಿಯಾದಾಗ ನಿಂದ ಹವಾ ಇರತೇತಿ. ಇನ್‌ಕಮ್‌ ಸಹ ಹಂಗ ಇರಬೇಕಲ್ಲ?" ಎಂದು ಎಲ್ಲರೂ ಕೇಳ್ತಾರ. ಆದರೆ, ಅಸಲಿಯತ್ತು ನಮಗ ಮಾತ್ರ ಗೊತ್ತಿರುತ್ತೆ. ಅವರ ಮಾತಿಗೆ ನಾನೂ ಸುಮ್ಮನಿರುವ ಮನುಷ್ಯ ಅಲ್ಲ. ಅದಕ್ಕೆ ಪ್ರತಿಯಾಗಿ "ನಾಲ್ಕು ಸೈಟ್‌ ತಗೊಂಡಿದಿನಿ, ಫಾರ್ಚೂನರ್‌ ಕಾರ್‌ ಬುಕ್‌ ಮಾಡಿದಿನಿ" ಅಂತ ಬಿಲ್ಡ್‌ಅಪ್‌ ಹೇಳ್ತಿರ್ತಿನಿ. ಯೂಟ್ಯೂಬ್‌ನಲ್ಲಿ ಅಷ್ಟೋ ಇಷ್ಟೋ ಅಮೌಂಟ್‌ ಬರುತ್ತೆ. ಅವು ನಮ್ಮ ಚಟಕ್ಕೆ ಮಾತ್ರ ಸಾಕಾಗುತ್ತೆ. ಇನ್‌ಸ್ಟಾಗ್ರಾಂನಲ್ಲಿ ಪ್ರಾಯೋಜಕತ್ವ ಹಿಡಿಬೇಕು. ಸ್ವಿಗ್ಗಿ, ವಿಕ್ಸ್‌ ಸೇರಿ ಸಿನಿಮಾ ಪ್ರಮೋಷನ್‌ ಒಂದಷ್ಟು ಮಾಡಿದೀನಿ. ಆದರೆ ಅಲ್ಟಿಮೇಟ್‌ ಆಗಿ ರೊಕ್ಕಾ ಬರೋದಕ್ಕಿಂತ ನಾಲ್ಕು ಜನ ವಿಡಿಯೋ ನೋಡಿ ನಕ್ಕರೆ ಅಷ್ಟೇ ಸಾಕು.. ಈ ವಿಡಿಯೋ ಶುರುಮಾಡಿದ ಮೇಲೆ ಇಂಡಿಪೆಂಡೆಂಟ್‌ ಆಗಿದಿನಿ. ಮನೆಯಲ್ಲಿ ಪದೇಪದೆ ಅಪ್ಪನ ಕಡೆ ಪಾಕೆಟ್‌ ಮನಿ ಇಸ್ಕೊಳ್ಳೊದು ತಪ್ಪಿದೆ. ಹಾಗಾಗಿ ನನ್ನ ಮಾತು ಏನಂದ್ರ ಯಾರೂ ಖಾಲಿ ಕೂರಬ್ಯಾಡ್ರಿ.. ಏನಾದ್ರೂ ಮಾಡ್ಕೊಂತ ಇರ್ರಿ. ನಮ್ಮನ್ನು ನೋಡಿ ಸಹಿಸಿಕೊಳ್ಳಲಾರದ ಮಂದಿ ನೂರಾಎಂಟು ಮಾತನಾಡ್ತಾವ. ಆ ಕಡೆ ನೋಡದೆ, ನಮ್ಮ ಕೆಲಸದಾಗ ನಾವು ಮುಂದುವರಿಬೇಕು ಅಷ್ಟ..

ಇನ್ನೂ ಹೆಚ್ಚಿನ ಸಂದರ್ಶನಗಳು ಇಲ್ಲಿವೆ..

Whats_app_banner