Allegations on Umapathy: ಕೋಟ್ಯಂತರ ಬೆಲೆ ಬಾಳುವ ಭೂಮಿ ಕಬಳಿಸಿದ್ದಾರೆ...ಸ್ಯಾಂಡಲ್‌ವುಡ್ ನಿರ್ಮಾಪಕ ಉಮಾಪತಿ ವಿರುದ್ಧ ಆರೋಪ
ಉಮಾಪತಿ ತಾವು ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಗಣಿಗಾರಿಕೆ ಇಲಾಖೆಯಿಂದ ಪರವಾನಗಿ ಪಡೆಯದೆ ಅಕ್ರಮ ಗಣಿಗಾರಿಕೆ ಕೂಡಾ ಆರಂಭಿಸಿದ್ದಾರೆ ಎಂದು ಹೇಮಂತ್, ನಿರ್ಮಾಪಕ ಉಮಾಪತಿ ವಿರುದ್ಧ ಕಂದಾಯ ಇಲಾಖೆ ಹಾಗೂ ಡಿಸಿ ಕಚೇರಿಗೆ ದೂರು ನೀಡಿದ್ದಾರೆ.
ಉಮಾಪತಿ ಶ್ರೀನಿವಾಸ್, ಕನ್ನಡ ಚಿತ್ರರಂಗದಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಉದ್ಯಮಿಯಾಗಿ, ಸಿನಿಮಾ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಉಮಾಪತಿ ಶ್ರೀನಿವಾಸ್, ಕಳೆದ ವರ್ಷ ದರ್ಶನ್ ವಿಚಾರಕ್ಕೆ ಸುದ್ದಿಯಾಗಿದ್ದರು. ಇದೀಗ ಅವರ ವಿರುದ್ಧ ಸರ್ಕಾರಿ ಭೂಮಿ ಕಬಳಿಸಿದ ಆರೋಪ ಕೇಳಿ ಬಂದಿದೆ.
ಉಮಾಪತಿ ಶ್ರೀನಿವಾಸ್ ಬೆಂಗಳೂರು ದಕ್ಷಿಣ, ತಾವರೆಕೆರೆ, ಸೂಲಿವಾರ, ಚಿಕ್ಕನಹಳ್ಳಿ ಹಾಗೂ ಇನ್ನಿತರ ಕಡೆ ನಕಲಿ ಕ್ರಯಪತ್ರವನ್ನು ಸೃಷ್ಟಿಸಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಹೇಮಂತ್ ರಾಜು ಎನ್ನುವವರು ಆರೋಪಿಸಿದ್ದಾರೆ. ಉಮಾಪತಿ ತಾವು ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಗಣಿಗಾರಿಕೆ ಇಲಾಖೆಯಿಂದ ಪರವಾನಗಿ ಪಡೆಯದೆ ಅಕ್ರಮ ಗಣಿಗಾರಿಕೆ ಕೂಡಾ ಆರಂಭಿಸಿದ್ದಾರೆ ಎಂದು ಹೇಮಂತ್, ನಿರ್ಮಾಪಕ ಉಮಾಪತಿ ವಿರುದ್ಧ ಕಂದಾಯ ಇಲಾಖೆ ಹಾಗೂ ಡಿಸಿ ಕಚೇರಿಗೆ ದೂರು ನೀಡಿದ್ದಾರೆ.
ತಮ್ಮ ಮೇಲಿನ ಆರೋಪ ನಿರಾಕರಿಸಿದ ಉಮಾಪತಿ
ತಮ್ಮ ಮೇಲಿನ ಆರೋಪವನ್ನು ನಿರ್ಮಾಪಕ ಉಮಾಪತಿ ನಿರಾಕರಿಸಿದ್ದಾರೆ. ''ತಾತನ ಕಾಲದಿಂದಲೂ ನಾವು ಜಮೀನುದಾರರು. ಭೂಮಿ ಕಬಳಿಸಿದ್ದಾರೆ, ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಶುದ್ಧ ಸುಳ್ಳು. ಬಹಳ ವರ್ಷಗಳ ಹಿಂದೆಯೇ ನಮ್ಮ ತಂದೆ ಈ ಸ್ಥಳವನ್ನು ಖರೀದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. ಅವಶ್ಯಕತೆ ಬಂದಾಗ ಆ ದಾಖಲೆಗಳನ್ನು ನೀಡುತ್ತೇನೆ. ಹೇಮಂತ್ ಅವರು 6 ತಿಂಗಳಿನಿಂದ ಈ ಆರೋಪ ಮಾಡುತ್ತಲೇ ಬಂದಿದ್ದಾರೆ. ನಾನು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇನ್ನೊಬ್ಬರ ಭೂಮಿಯನ್ನು ಕಬಳಿಸುವ ಪರಿಸ್ಥಿತಿ ನಮಗೆ ಬಂದಿಲ್ಲ. ಹೇಮಂತ್ ನನ್ನ ವಿರುದ್ಧ ದೂರು ನೀಡಿದ್ದಾರೆ. ಅವರು ಕಾನೂನಿನ ಮುಖಾಂತರ ಹೋರಾಡಲಿ, ನಾನೂ ಕಾನೂನು ಹೋರಾಟಕ್ಕೆ ಸಿದ್ದನಿದ್ದೇನೆ'' ಎಂದು ಉಮಾಪತಿ ಹೇಳಿದ್ದಾರೆ.
ಫೋರ್ಜರಿ ಪ್ರಕರಣದಲ್ಲಿ ದರ್ಶನ್-ಉಮಾಪತಿ ನಡುವೆ ಮನಸ್ತಾಪ
ನಟ ದರ್ಶನ್ ಹೆಸರಿನಲ್ಲಿ ಸ್ನೇಹಿತರು 25 ಕೋಟಿ ಲೋನ್ ಪಡೆದಿದ್ಧಾರೆ ಎಂದು ಹೇಳಿಕೊಂಡು ಕಳೆದ ವರ್ಷ, ಮಹಿಳೆಯೊಬ್ಬರು ನಿರ್ಮಾಪಕ ಉಮಾಪತಿ ಬಳಿ ಬಂದಿದ್ದರು. ಆಗ ಉಮಾಪತಿ, ಆ ಮಹಿಳೆಯನ್ನು ದರ್ಶನ್ ಬಳಿ ಕರೆದೊಯ್ದಿದ್ದರು. ಪ್ರಕರಣ ಗಂಭೀರವಾಗುತ್ತಿದ್ದಂತೆ ದರ್ಶನ್, ಅವರ ಸ್ನೇಹಿತರು ಹಾಗೂ ಉಮಾಪತಿ ಸೇರಿದಂತೆ ಎಲ್ಲರೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದಲ್ಲಿ ಉಮಾಪತಿ ಪಾತ್ರ ಇದೆ ಎಂಬ ಆರೋಪ ಕೂಡಾ ಕೇಳಿ ಬಂದಿತ್ತು. ''ನಾನು ಯಾವುದೇ ತಪ್ಪು ಮಾಡಿಲ್ಲ, ಎಲ್ಲಾ ರೀತಿಯ ವಿಚಾರಣೆಗೆ ಸಿದ್ಧ. ದರ್ಶನ್ ಎಂದರೆ ನನಗೆ ಬಹಳ ಗೌರವ, ಅವರಿಗೆ ತೊಂದರೆ ಆಗುವ ಯಾವ ಕೆಲಸಕ್ಕೂ ನಾನು ಕೈ ಹಾಕುವುದಿಲ್ಲ'' ಎಂದು ಸ್ಪಷ್ಟಪಡಿಸಿದ್ದರು. ಇದೀಗ ಇಬ್ಬರೂ ಮುನಿಸು ಮರೆತು ಒಂದಾಗಿದ್ದಾರೆ ಎನ್ನಲಾಗಿದೆ.
ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾಗೆ ಸಹ ನಿರ್ಮಾಪಕರಾಗುವ ಮೂಲಕ ಚಿತ್ರರಂಗಕ್ಕೆ ಬಂದ ಉಮಾಪತಿ, ನಂತರ 'ಒಂದಲ್ಲಾ ಎರಡಲ್ಲಾ' ಸಿನಿಮಾ ನಿರ್ಮಿಸಿದರು. ಈ ಚಿತ್ರಕ್ಕೆ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಏಕತೆ ಸಿನಿಮಾ ಪ್ರಶಸ್ತಿ ದೊರೆತಿದೆ. ನಂತರ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರಕ್ಕೆ ಬಂಡವಾಳ ಹೂಡಿದ್ದ ಉಮಾಪತಿ, ಅಲ್ಲಿ ಕೂಡಾ ಗೆಲುವು ಕಂಡರು. ನಂತರ ಶ್ರೀಮುರಳಿ ಅಭಿನಯದ 'ಮದಗಜ' ಸಿನಿಮಾವನ್ನು ನಿರ್ಮಿಸಿದ್ದರು.
ವಿಭಾಗ