ಎಸ್‌ಪಿಬಿ, ಪಿಬಿ ಶ್ರೀನಿವಾಸ್‌, ಎಸ್‌ ಜಾನಕಿ ಯಾವತ್ತೂ ಸೋನು ನಿಗಮ್‌ ರೀತಿ ವರ್ತಿಸಲಿಲ್ಲ; ರಹಮತ್‌ ತರೀಕೆರೆ ಟೀಕೆ
ಕನ್ನಡ ಸುದ್ದಿ  /  ಮನರಂಜನೆ  /  ಎಸ್‌ಪಿಬಿ, ಪಿಬಿ ಶ್ರೀನಿವಾಸ್‌, ಎಸ್‌ ಜಾನಕಿ ಯಾವತ್ತೂ ಸೋನು ನಿಗಮ್‌ ರೀತಿ ವರ್ತಿಸಲಿಲ್ಲ; ರಹಮತ್‌ ತರೀಕೆರೆ ಟೀಕೆ

ಎಸ್‌ಪಿಬಿ, ಪಿಬಿ ಶ್ರೀನಿವಾಸ್‌, ಎಸ್‌ ಜಾನಕಿ ಯಾವತ್ತೂ ಸೋನು ನಿಗಮ್‌ ರೀತಿ ವರ್ತಿಸಲಿಲ್ಲ; ರಹಮತ್‌ ತರೀಕೆರೆ ಟೀಕೆ

ಬೆಂಗಳೂರಿನಲ್ಲಿ ನಡೆದ ಮ್ಯೂಸಿಕ್‌ ಕಾನ್ಸರ್ಟ್‌ನಲ್ಲಿ ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ, ಖ್ಯಾತ ಗಾಯಕ ಸೋನು ನಿಗಮ್‌ ಸದ್ಯ ಸುದ್ದಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಇವರ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಲೇಖಕ ರಹಮತ್‌ ತರೀಕೆರೆ ಸಹ ಟೀಕೆ ಮಾಡಿದ್ದಾರೆ.

ಸೆಲೆಬ್ರಿಟಿಗಳಿಗೆ ಓದು -ಚಿಂತನೆ ಕಡಿಮೆ, ಪ್ರಬುದ್ಧರಾಗಿದ್ದರೆ ಸಿರಿವಂತರ ಮದುವೆಯಲ್ಲಿ ಲಜ್ಜೆಬಿಟ್ಟು ಕುಣಿಯುತ್ತಿರಲಿಲ್ಲ; ರಹಮತ್‌ ತರೀಕೆರೆ
ಸೆಲೆಬ್ರಿಟಿಗಳಿಗೆ ಓದು -ಚಿಂತನೆ ಕಡಿಮೆ, ಪ್ರಬುದ್ಧರಾಗಿದ್ದರೆ ಸಿರಿವಂತರ ಮದುವೆಯಲ್ಲಿ ಲಜ್ಜೆಬಿಟ್ಟು ಕುಣಿಯುತ್ತಿರಲಿಲ್ಲ; ರಹಮತ್‌ ತರೀಕೆರೆ

‌‌ಬಲರಾಜ್ ಸಹಾನಿ, ಎಂ.ಎಸ್ ಸತ್ಯು, ಸಾದತ್ ಹಸನ ಮಂಟೋ, ಕೆ. ಎ.‌ಅಬ್ಬಾಸ್, ರುತ್ವಿಕ್ ಘಟಕ್, ಸತ್ಯಜಿತರೇ, ಶಬಾನಾ, ಜಾವೇದ್ ಅಖ್ತರ್ ಮೊದಲಾದ ಚಿಂತನಶೀಲ ವ್ಯಕ್ತಿಗಳು ಭಾರತೀಯ ಸಿನಿಮಾದಲ್ಲಿ ಕೆಲಸ‌ ಮಾಡಿದ್ದಾರೆ. ಅಮೀರಬಾಯಿ ಕರ್ನಾಟಕಿ- ಬೇಗಂ ಅಖ್ತರ್ ಮುಂತಾದವರೆಲ್ಲ ಸ್ವಾತಂತ್ರ್ಯ ಹೋರಾಟದಲ್ಲೂ ಕೆಲಸ‌ ಮಾಡಿದವರು. ಇವರದೊಂದು ಪರಂಪರೆಯಿದೆ. ಆದರೆ ಇವರ ಸಂಖ್ಯೆ ತೀರ ಕಡಿಮೆ.

ಉಳಿದಂತೆ, ಭಾರತದಲ್ಲಿ ಸೆಲೆಬ್ರಿಟಿಗಳಾಗಿರುವ ಬಹಳಷ್ಟು ನಟರು ಕ್ರಿಕೆಟ್ ಆಟಗಾರರು ಹಾಗೂ ಗಾಯಕರಲ್ಲಿ ಸಾಮಾಜಿಕವಾದ ಸೂಕ್ಷ್ಮಸಂವೇದನೆ, ಸಾಮಾನ್ಯ ತಿಳಿವಳಿಕೆ, ಓದು-ಚಿಂತನೆ ಕಡಿಮೆ.‌ ಹಾಗೆ ಇದ್ದಿದ್ದರೆ ಅವರು ಆರೋಗ್ಯಕ್ಕೆ ಹಾನಿ ಮಾಡುವ ಕೋಕಾಕೋಲಾಕ್ಕೆ ಪಾನಪರಾಗುಗಳಿಗೆ ಮಾಡೆಲ್ ಆಗುತ್ತಿರಲಿಲ್ಲ. ಸಿರಿವಂತರ ಅದ್ದೂರಿ ಮದುವೆಗೆ ಹೋಗಿ ಲಜ್ಜೆಬಿಟ್ಟು ಕುಣಿಯುತ್ತಿರಲಿಲ್ಲ.

ದಕ್ಷಿಣ ಭಾರತದ ಜನ ತಮ್ಮ ಭಾಷೆ ಸಂಸ್ಕೃತಿಗಳ ಬಗ್ಗೆ‌ ಅಭಿಮಾನ ಹೊಂದಿರುವುದು, ಹಿಂದಿಹೇರಿಕೆಯ ವಿರೋಧ ಮಾಡುವುದು, ತಮ್ಮ ದ್ರಾವಿಡ ಪರಂಪರೆಯ ಬಗ್ಗೆ ಮಾತಾಡುವುದು-ಈ ಬಗ್ಗೆ ಅವರಲ್ಲಿ ಬಹಳ‌ ಮಂದಿಗೆ ಅಸಹನೆಯಿದೆ. ಅದು ರಾಷ್ಟ್ರ ವಿರೋಧಿ ಎಂದೂ ಹಲವರು ತಿಳಿದಿದ್ದಾರೆ. ಇದು ಉತ್ತರ ಭಾರತೀಯ ಮಧ್ಯಮ ವರ್ಗದಲ್ಲಿ ಆಳವಾಗಿರುವ ಪೂರ್ವಗ್ರಹದ ವಿಸ್ತರಣೆ. ದಕ್ಷಿಣದವರ ಬಗೆಗಿನ ವಿರೋಧವೂ ಮತೀಯವಾದವೂ ಸಾಮಾನ್ಯವಾಗಿ ಜತೆಗೂಡಿ ನಡೆಯುತ್ತವೆ.

ಕನ್ನಡದಲ್ಲಿ ಹಾಡಬೇಕೆಂಬ ಹಂಬಲ ವ್ಯಕ್ತಪಡಿಸಿದ ಕನ್ನಡಿಗನ ದನಿಯನ್ನು ಸೋನುನಿಗಂ, "ಕನ್ನಡ ಕನ್ನಡ ಕನ್ನಡ" ಎಂದು ಅಸಹನೆಯ ದನಿಯಲ್ಲಿ ಅನುಕರಿಸಿದ ಬಗೆ ಮತ್ತು ಅದರಲ್ಲಿದ್ದ ವ್ಯಂಗ್ಯ ತುಂಬ ಕೆಟ್ಟದಾಗಿತ್ತು. ಕನ್ನಡದಲ್ಲಿ ಹಾಡಿದ ಕನ್ನಡ ಮನೆಮಾತಲ್ಲದ ಗಾಯಕರಾದ ಪಿಬಿ ಶ್ರೀನಿವಾಸ, ಎಸ್ಪಿ, ಸುಶೀಲಾ, ಜಾನಕಿ, ಶೀರ್ಕಾಳಿ, ಘಂಟಸಾಲಾ ಎಂದೂ ಹೀಗೆ ವರ್ತಿಸಿಲ್ಲ. ಹಿಂದಿ ಪ್ರದೇಶದ ಕಲಾವಿದರಿಗೆ ಭಾರತದ ಬಹುತ್ವದ ಬಗ್ಗೆ ಸಾಂಸ್ಕೃತಿಕ ಶಿಕ್ಷಣ ಅಗತ್ಯವಾಗಿದೆ.

ರಹಮತ್‌ ತರಿಕೇರೆ ಬರಹಕ್ಕೆ ಬಂದ ಕಾಮೆಂಟ್‌ಗಳಿವು

  • ಇದು ಸೋನು ನಿಗಮ್‌ನ ಧಿಮಾಕಿನ ಪ್ರಶ್ನೆಗಿಂತ ಕನ್ನಡ ಚಿತ್ರರಂಗದವರನ್ನು ಕೇಳಬೇಕಾದ ಪ್ರಶ್ನೆ. ಕನ್ನಡದ ನಿರ್ಮಾಪಕ ನಿರ್ದೇಶಕ, ಸಂಗೀತ ನಿರ್ದೇಶಕ ಮುಂತಾದವರಿಗೆ ಕನ್ನಡದ ಪ್ರತಿಭೆಗಳನ್ನು ಬಳಸಿ ಒಂದು ಚಿತ್ರವನ್ನು ಯಶಸ್ವಿಯಾಗಿಸಬಹುದು ಎನ್ನುವ ಆತ್ಮವಿಶ್ಚಾಸವೇ ಇಲ್ಲ. ಕದ್ದ ಕತೆ, ಬೇರೆ ಬಾಷೆಯ ನಟಿಯರು, ಕದ್ದ ಹಾಡಿನ ಟ್ಯೂನ್‌ಗಳು, ಹೊರರಾಜ್ಯದ ಹಾಡುಗಾರರು., ಹೊರರಾಜ್ಯಗಳಲ್ಲಿ ಚಿತ್ರೀಕರಣ ಇವೆಲ್ಲವನ್ನೂ ಪ್ರಶ್ನಿಸಬೇಕಲ್ಲವೇ? ಸೋನುನೋ ಮತ್ತೊಬ್ಬನೋ ಕೇಳಿದಷ್ಟು ದುಡ್ಡು ಕೊಟ್ಟರೆ ಹಾಡುತ್ತಾರೆ. ಆದರೆ ಅವರ ಮನೆ ಎದರು ದಿನಗಟ್ಟಲೆ ಕಾದು, ಒಂದೆರೆಡು ಗಂಟೆಯಲ್ಲಿ ಹಾಡಿಗಾಗಿ 10 ಲಕ್ಷ ಕೊಟ್ಟು ಅದನ್ನು ಇಲ್ಲಿ ತಂದು ಆಟೋಟ್ಯೂನ್‌ರನಲ್ಲಿ ಹೊಂದಿಸು ಕನ್ನಡಿಗರಿಗೆ ಉಣಬಡಿಸುವವರು ಇರುವಾಗ ಇವೆಲ್ಲವೂ ಸಹಜ. - ವಸಂತ ನಡಹಳ್ಳಿ

ಇದನ್ನೂ ಓದಿ: ಪಹಲ್ಗಾಮ್‌ ಉಗ್ರರ ದಾಳಿಗೂ ಕನ್ನಡ ಹಾಡಿನ ಕೋರಿಕೆಗೂ ಏನಿದೆ ನಂಟು? ಬೆಂಗಳೂರಲ್ಲಿ ಸೋನು ನಿಗಮ್‌ ಎಡವಟ್ಟು

  • ಅಲ್ಲಿದ್ದವರೆಲ್ಲ ಅವನ ಮಾತಿಗೆ ಕೇಕೆ ಹಾಕಿ ಎನ್ಕರೇಜ್ ಮಾಡುತ್ತಿದ್ದರು. ಅವನ ಅಣಕ ಕಿವಿಗೆ ಬೀಳುತ್ತಲೇ ನಿಂತು ಪ್ರಶ್ನಿಸುವ ಸಂವೇದನೆ ಅವರಿಗೆ ಇರಲಿಲ್ಲ. ನಮ್ಮವರಿಗೂ ನಮ್ಮತನದ ಬಗ್ಗೆ, ಅದನ್ನು ಕಾಯ್ದಿಟ್ಟುಕೊಳ್ಳುವ ಅಗತ್ಯ ಮತ್ತು ಮಹತ್ವದ ಬಗ್ಗೆ ಮನದಟ್ಟು ಮಾಡಿಸುವ ಜರೂರು ಇದೆಯೇನೋ... -ಗಾಯತ್ರಿ ಎಚ್‌ಎನ್‌
  • ಕೆಲವು ವರ್ಷಗಳ‌ಹಿಂದೆ ಮಧ್ಯಾಹ್ನ‌೪ ರ ವೇಳೆಗೆ ದೂರದರ್ಶನ ನೋಡ ಹೊರಟಾಗ ಚಲನ ಚಿತ್ರ ಗಳ ಬಹುಮಾನ ವಿತರಣಾ ಸಮಾರಂಭ Live ಬರಿತ್ತಿತ್ತು. ರಾಷ್ಟ್ರಪತಿಗಳು ಭಾಗವಹಿಸುವ ಸಿನೆಮಾ ಕಾರ್ಯಕ್ರಮ. ಬಹಳ ಗಂಭೀರವಾಗಿ ಘನತೆಯಿಂದ ಕೂಡಿರುತ್ತದೆ.ಪ್ರಶಸ್ತಿ ವಿತರಣೆಯ ನಡುವೆ brake ಕೊಟ್ಟರು. ಹಾಡಲು ಕೈಲಾಶ್ ಖೇರ್ ಅವರನ್ನು ಆಹ್ವಾನಿಸಿದರು.ಅವರು ಕನ್ನಡ ಸಿನೆಮಾದ ಜನಪ್ರಿಯ ಹಾಡು " ಯಕ್ಕ,ರಾಜಾ ರಾಣಿ....." ಹಾಡಲು ತೊಡಗಿದಾಗ ಆ ಸಮಾರಂಭದಲ್ಲಿ ಈತನ ಬಾಯಲ್ಲಿ‌ದಕ್ಷಿಣದ ಕನ್ನಡ ಹಾಡು ಕೇಳಿ ಬಹಳ ಸಂತೋಷವಾಗಿತ್ತು. -ವೆಂಕಟರಾಜು ಕೃಷ್ಣಮೂರ್ತಿ

ಇದನ್ನೂ ಓದಿ: ʻಬ್ರಹ್ಮಗಂಟುʼ ಸೀರಿಯಲ್‌ ನರಸಿಂಹನ ರಿಯಲ್‌ ಲೈಫ್‌ ಹೆಂಡತಿ ಇವರೇ ನೋಡಿ; ನಟನೆ ಜತೆಗೆ ಉದ್ಯಮದಲ್ಲೂ ಮುಂದಿದೆ ಈ ಜೋಡಿ

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.