Sambhavam 2022-23: ಐಎಎಸ್‌ ವಿದ್ಯಾರ್ಥಿಗಳಿಗಾಗಿ 'ಸಂಭವಂ' ಆರಂಭಿಸಿದ ಸೋನು ಸೂದ್..ಏನು ಹಾಗಂದ್ರೆ..?
ಕನ್ನಡ ಸುದ್ದಿ  /  ಮನರಂಜನೆ  /  Sambhavam 2022-23: ಐಎಎಸ್‌ ವಿದ್ಯಾರ್ಥಿಗಳಿಗಾಗಿ 'ಸಂಭವಂ' ಆರಂಭಿಸಿದ ಸೋನು ಸೂದ್..ಏನು ಹಾಗಂದ್ರೆ..?

Sambhavam 2022-23: ಐಎಎಸ್‌ ವಿದ್ಯಾರ್ಥಿಗಳಿಗಾಗಿ 'ಸಂಭವಂ' ಆರಂಭಿಸಿದ ಸೋನು ಸೂದ್..ಏನು ಹಾಗಂದ್ರೆ..?

ಸೋನುಸೂದ್‌ ತಮ್ಮ ಚಾರಿಟಿ ವತಿಯಿಂದ ಕಳೆದ 2 ವರ್ಷಗಳಿಂದ ಇಂಜಿನಿಯರಿಂಗ್, ಕಾನೂನು, ಎಂಬಿಬಿಎಂ, ಪ್ರವಾಸೋದ್ಯಮ, ಬ್ಯುಸಿನೆಸ್‌ ಸ್ಟಡೀಸ್‌ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದರು. ಇದೀಗ ಮತ್ತೆ ಅವರು ಸಂಭವಂ ವಿದ್ಯಾರ್ಥಿ ವೇತನದ ಮೂಲಕ ಐಎಎಸ್‌ ವಿದ್ಯಾರ್ಥಿಗಳಿಗೆ ಉಚಿತ ಆನ್‌ ಲೈನ್‌ ತರಬೇತಿ ನೀಡಲು ಮುಂದಾಗಿದ್ದಾರೆ.

<p>ಐಎಎಸ್‌ ವಿದ್ಯಾರ್ಥಿಗಳಿಗಾಗಿ 'ಸಂಭವಂ' ಆರಂಭಿಸಿದ ಸೋನು ಸೂದ್</p>
ಐಎಎಸ್‌ ವಿದ್ಯಾರ್ಥಿಗಳಿಗಾಗಿ 'ಸಂಭವಂ' ಆರಂಭಿಸಿದ ಸೋನು ಸೂದ್

ರಿಯಲ್‌ ಹೀರೋ ಸೋನು ಸೂದ್‌, ಕೊರೊನಾ ಲಾಕ್‌ಡೌನ್‌ನಿಂದ ಇದುವರೆಗೂ ಸಾಕಷ್ಟು ಸಮಾಜಸೇವೆ ಮಾಡುತ್ತಲೇ ಬಂದಿದ್ದಾರೆ. ಅವರು ಮಾಡಿರುವ ಸಹಾಯಗಳು ಒಂದಲ್ಲಾ ಎರಡಲ್ಲ. ಇದೀಗ ಅವರು ಐಎಎಸ್‌ ಆಕಾಂಕ್ಷಿಗಳಿಗೆ ಬೆನ್ನುಲುಬಾಗಿ ನಿಂತಿದ್ದಾರೆ.

ಸೋನುಸೂದ್‌ ತಮ್ಮ ಚಾರಿಟಿ ವತಿಯಿಂದ ಕಳೆದ 2 ವರ್ಷಗಳಿಂದ ಇಂಜಿನಿಯರಿಂಗ್, ಕಾನೂನು, ಎಂಬಿಬಿಎಂ, ಪ್ರವಾಸೋದ್ಯಮ, ಬ್ಯುಸಿನೆಸ್‌ ಸ್ಟಡೀಸ್‌ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದರು. ಇದೀಗ ಮತ್ತೆ ಅವರು ಸಂಭವಂ ವಿದ್ಯಾರ್ಥಿ ವೇತನದ ಮೂಲಕ ಐಎಎಸ್‌ ವಿದ್ಯಾರ್ಥಿಗಳಿಗೆ ಉಚಿತ ಆನ್‌ ಲೈನ್‌ ತರಬೇತಿ ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ಸೋನು ಸೂದ್‌ ಚಾರಿಟಿ ಫೌಂಡೇಷನ್‌, ಡಿವೈನ್‌ ಇಂಡಿಯಾ ಯೂತ್‌ ಅಸೋಸಿಯೇಷನ್‌ ಜೊತೆ ಕೈ ಜೋಡಿಸಿದೆ. ಈ 'ಸಂಭವಂ' ವಿದ್ಯಾರ್ಥಿ ವೇತನದ ಅಡಿ, ಆಯ್ಕೆಯಾದ ವಿದ್ಯಾರ್ಥಿಗಳು ದೇಶದ ಖ್ಯಾತ ಸಿವಿಲ್‌ ಸರ್ವಿಸ್‌ ಸಂಸ್ಥೆಗಳಿಂದ ಆನ್‌ ಲೈನ್‌ ತರಬೇತಿ ಪಡೆಯಲಿದ್ದಾರೆ.

ಅಷ್ಟೇ ಅಲ್ಲ, ಈ ಸಂಭವಂ ವಿದ್ಯಾರ್ಥಿವೇತನ ಯೋಜನೆ ಅಡಿ, ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಕೂಡಾ ಸಹಾಯವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿವೈನ್‌ ಇಂಡಿಯಾ ಯೂತ್‌ ಅಸೋಸಿಯೇಷನ್‌ ಮನೀಷ್‌ ಕುಮಾರ್‌ ಸಿಂಗ್‌, ಈ ಉತ್ತಮ ಕೆಲಸದಲ್ಲಿ ನಾವು ಸೋನು ಸೂದ್‌ ಹಾಗೂ ಅವರ ಚಾರಿಟಿಯೊಂದಿಗೆ ಕೈ ಜೋಡಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.

ಕೊರೊನಾ ಲಾಕ್‌ಡೌನ್‌ ಆರಂಭವಾಗುತ್ತಿದ್ದಂತೆ ಸೋನು ಸೂದ್​​ ಕೊರೊನಾ ವಾರಿಯರ್ಸ್​ಗಾಗಿ ತಮ್ಮ ಐಷಾರಾಮಿ ಹೋಟೆಲ್ ಬಿಟ್ಟುಕೊಟ್ಟಿದ್ದರು. ನಿರ್ಗತಿಕರಿಗೆ ಆಹಾರ ಧಾನ್ಯ ವಿತರಿಸಿದ್ದರು. ವಲಸೆ ಕಾರ್ಮಿಕರು, ಅದರಲ್ಲೂ ಕರ್ನಾಟಕದಿಂದ ಮುಂಬೈಗೆ ತೆರಳಿ ಸಿಲುಕಿಕೊಂಡಿದ್ದವರು ತಮ್ಮ ತಮ್ಮ ಊರುಗಳಿಗೆ ತೆರಳಲು ಸುಮಾರು 8 ಬಸ್​​​​ಗಳ ವ್ಯವಸ್ಥೆ ಮಾಡಿದ್ದರು. ತಾವೇ ಮುಂದೆ ನಿಂತು ಜನರನ್ನು ಬಸ್ ಹತ್ತಿಸಿ ಬೀಳ್ಕೊಟ್ಟಿದ್ದರು. ಅಲ್ಲದೆ ವಿಡಿಯೋ ಮೂಲಕ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಕೂಡಾ ಮೂಡಿಸಿದ್ದರು. ಮನೆಯಲ್ಲೇ ಫೇಸ್ ಶೀಲ್ಡ್​ ತಯಾರಿಸುವುದು ಹೇಗೆ ಎಂಬುದನ್ನೂ ವಿಡಿಯೋ ಮಾಡಿ ತೋರಿಸಿಕೊಟ್ಟಿದ್ದರು.

ತಮಿಳು, ತೆಲುಗು, ಹಿಂದಿ, ಕನ್ನಡ ಭಾಷೆಗಳಲ್ಲಿ ನಟಿಸಿ ಸೂಪರ್ ವಿಲನ್ ಎಂದು ಹೆಸರಾಗಿದ್ದ ಸೋನು ಸೂದ್ ಅವರ ನಿಜವಾದ ವ್ಯಕ್ತಿತ್ವ ಎಲ್ಲರಿಗೂ ತಿಳಿದದ್ದು ಕೊರೊನಾ ಲಾಕ್​ಡೌನ್ ಸಮಯದಲ್ಲಿ. ಜನರು ಹೀರೋಗಳನ್ನು ಮಾತ್ರವಲ್ಲ ವಿಲನ್​​​ಗಳನ್ನೂ ಕೂಡಾ ಇಷ್ಟಪಡುತ್ತಾರೆ ಎಂಬುದು ಸೋನು ಸೂದ್ ವಿಚಾರದಲ್ಲಿ ನಿಜವಾಗಿದೆ. ತೆರೆ ಮೇಲೆ ವಿಲನ್ ಆಗಿ ನಟಿಸುವ ಸೋನು ಸೂದ್ ತಾನೊಬ್ಬ ರಿಯಲ್ ಹೀರೋ ಎಂಬುದನ್ನು ಜನರಿಗೆ ಸಹಾಯ ಮಾಡುವ ಮೂಲಕ ಪ್ರೂವ್ ಮಾಡಿದ್ದಾರೆ. 2ನೇ ಬಾರಿ ಕೂಡಾ ಲಾಕ್‌ ಡೌನ್‌ ಆದಾಗ ಕೂಡಾ ಸೋನು ಸೂದ್‌ ಬಹಳ ಸಹಾಯ ಮಾಡಿದ್ದರು. ಆಕ್ಸಿಜನ್​​ ಇಲ್ಲದೆ ಬಳಲುತ್ತಿದ್ದ ರೋಗಿಗಳಿಗೆ ಅಗತ್ಯವಿರುವಷ್ಟು ಆಕ್ಸಿಜನ್ ಸಿಲಿಂಡರ್​​​ಗಳನ್ನು ನೀಡಿ ಪ್ರಾಣ ಉಳಿಸಿದ್ದರು. ಮನವಿ ಮಾಡಿದವರಿಗೆ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿಕೊಟ್ಟಿದ್ದರು. ಇಷ್ಟೆಲ್ಲಾ ಸಮಾಜ ಸೇವೆ ಮಾಡಿರುವ ಸೋನು ಸೂದ್‌, ಈಗ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ.

Whats_app_banner