Sookshmadarshini OTT: ಒಟಿಟಿಗೆ ಎಂಟ್ರಿಕೊಟ್ಟ ಮಲಯಾಳಂ ಬ್ಲ್ಯಾಕ್ ಕಾಮಿಡಿ ಮಿಸ್ಟರಿ ಥ್ರಿಲ್ಲರ್ ಸಿನಿಮಾ; 5 ಭಾಷೆಗಳಲ್ಲಿ ಸ್ಟ್ರೀಮಿಂಗ್
Sookshmadarshini OTT Release: ಕಳೆದ ವರ್ಷದ ನವೆಂಬರ್ 22ರಂದು ಮಲಯಾಳಂನಲ್ಲಿ ಬಿಡುಗಡೆಯಾದ ಸೂಕ್ಷ್ಮದರ್ಶಿನಿ ಸಿನಿಮಾ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು, ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಈಗ ಇದೇ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಗೆ ಆಗಮಿಸಿದೆ.
Sookshmadarshini OTT Release: ಮಲಯಾಳಂ ಚಿತ್ರಗಳ ಕ್ರೇಜ್ ಸಾಮಾನ್ಯವೇನಲ್ಲ. ಬೇರೆ ಬೇರೆ ಪ್ರಕಾರದ ಚಿತ್ರಗಳು ಬರುತ್ತಿರುವುದು ಮಾತ್ರವಲ್ಲದೆ ಮಲಯಾಳಿ ಪ್ರೇಕ್ಷಕರ ಜತೆಗೆ ಭಾರತದಾದ್ಯಂತ ಈ ಸಿನಿಮಾಗಳಿಗೆ ಒಟಿಟಿಯಲ್ಲಿ ಕೋಟ್ಯಂತರ ವೀಕ್ಷಕರಿದ್ದಾರೆ. ಅದರಂತೆ, ಬಹು ನಿರೀಕ್ಷೆ ಮೂಡಿಸಿದ್ದ ಮಾಲಿವುಡ್‌ನ ಸೂಕ್ಷ್ಮದರ್ಶಿನಿ ಸಿನಿಮಾ ಇದೀಗ ಒಟಿಟಿ ಅಂಗಳ ಪ್ರವೇಶಿಸಿದೆ. ಹಾಗಾದರೆ ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ.
ನಟ ಫಹಾದ್ ಫಾಸಿಲ್ ಪತ್ನಿ ನಜ್ರಿಯಾ ನಜೀಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೂಕ್ಷ್ಮದರ್ಶಿನಿ ಸಿನಿಮಾದಲ್ಲಿ ಬಾಸಿಲ್ ಜೋಸೆಫ್ ನಾಯಕನಾಗಿ ನಟಿಸಿದ್ದಾರೆ. ಈ ಹಿಂದೆ ಮಿನ್ನಲ್ ಮುರಳಿ ಅನ್ನೋ ಮಲಯಾಳಿ ಚಿತ್ರದ ಮೂಲಕ ನಿರ್ದೇಶಕರಾಗಿ ಯಶಸ್ಸು ಕಂಡ ಇದೇ ಬಾಸಿಲ್ ಜೋಸೆಫ್, 'ಜಯ ಜಯ ಜಯ ಜಯ ಹೇ' ಸಿನಿಮಾ ಮೂಲಕ ಖ್ಯಾತಿ ಗಿಟ್ಟಿಸಿಕೊಂಡಿದ್ದರು. ಅದಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
10 ಕೋಟಿ ಬಜೆಟ್, 60 ಕೋಟಿ ಗಳಿಕೆ
ಕಳೆದ ವರ್ಷದ ನವೆಂಬರ್ 22ರಂದು ಮಲಯಾಳಂನಲ್ಲಿ ಬಿಡುಗಡೆಯಾದ ಸೂಕ್ಷ್ಮದರ್ಶಿನಿ ಸಿನಿಮಾ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು, ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಯಿತು. 10 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ, ಈ ವರೆಗೂ 60 ಕೋಟಿ ಕಲೆಕ್ಷನ್ ಮಾಡಿ ಹಿಟ್ ಪಟ್ಟ ಅಲಂಕರಿಸಿದೆ. ಚಿತ್ರಮಂದಿರದ ಬಳಿಕ, ಒಟಿಟಿಯಲ್ಲಿ ಈ ಸಿನಿಮಾ ಅದ್ಯಾವಾಗ ಸ್ಟ್ರೀಮಿಂಗ್ ಆಗಲಿದೆ ಎಂದು ಕಾದಿದ್ದೇ ಬಂತು. ಆದರೆ, ಉತ್ತರ ಸಿಕ್ಕಿರಲಿಲ್ಲ. ಈಗ ಇದೇ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ.
ಕನ್ನಡದಲ್ಲೂ ನೋಡಿ
ಮೂಲ ಮಲಯಾಳಿ ಸಿನಿಮಾ ಆದರೂ, ಕನ್ನಡದ ಜತೆಗೆ ತಮಿಳು ಮತ್ತು ತೆಲುಗಿನಲ್ಲಿಯೂ ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಇಂದಿನಿಂದ (ಜ 11) ಸ್ಟ್ರೀಮಿಂಗ್ ಆರಂಭಿಸಿದೆ. ಪ್ರಿಯದರ್ಶಿನಿಯಾಗಿ ನಜ್ರಿಯಾ ನಜೀಮ್, ಮ್ಯಾನ್ಯುವಲ್ ಆಗಿ ಬಾಸಿಲ್ ಜೋಸೆಫ್ ನಟಿಸಿದರೆ, ಅಖಿಲಾ ಭಾರ್ಗವನ್, ಮರೀನ್ ಫಿಲಿಪ್, ಪೂಜಾ ಮೋಹನ್ ರಾಜ್, ದೀಪಕ್ ಪರಂಬೋಲ್ ಮತ್ತು ಇತರರು ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಐಎಂಡಿಬಿಯಲ್ಲಿ ಒಳ್ಳೆಯ ರೇಟಿಂಗ್
ಈ ಚಿತ್ರವನ್ನು ಎವಿಎ ಪ್ರೊಡಕ್ಷನ್ಸ್ ಮತ್ತು ಹ್ಯಾಪಿ ಅವರ್ಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ಗಳ ಅಡಿಯಲ್ಲಿ ಎವಿ ವಿನೂಪ್, ಶೈಜು ಮತ್ತು ಸಮೀರ್ ನಿರ್ಮಿಸಿದ್ದಾರೆ. ಈ ಸಿನಿಮಾವನ್ನು ಎಂ ಸಿ ಜಿತಿನ್ ನಿರ್ದೇಶನ ಮಾಡಿದ್ದಾರೆ. ಸಂಗೀತ ಸಂಯೋಜಿಸಿದವರು ಕ್ರಿಸ್ಟೋ ಜೇವಿಯರ್. ಬ್ಲ್ಯಾಕ್ ಕಾಮಿಡಿ ಮಿಸ್ಟರಿ ಥ್ರಿಲ್ಲರ್ ಪ್ರಕಾರದಲ್ಲಿ ನಿರ್ಮಿಸಲಾದ ಈ ಚಿತ್ರವು IMDBಯಲ್ಲಿ 8.1 ರೇಟಿಂಗ್ ಹೊಂದಿದೆ.