ದಕ್ಷಿಣ ಭಾರತದ ವಿವಿಧ ಭಾಷೆಗಳ ಟಾಪ್ 10 ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು: ಯಾವ ಒಟಿಟಿಯಲ್ಲಿ ನೋಡಬಹುದು ವಿವರ ಇಲ್ಲಿದೆ
ದಕ್ಷಿಣ ಭಾರತದ 4 ನಾಲ್ಕು ಭಾಷೆಗಳಲ್ಲಿ ಒಂದಕ್ಕಿಂತ ಒಂದು ರೋಚಕವಾಗಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿವೆ. ನೀವು ಸಿನಿಮಾ ಪ್ರೇಮಿಯಾಗಿದ್ರೆ ಈ ಚಿತ್ರಗಳನ್ನು ಒಟಿಟಿ ವೇದಿಕೆಗಳಲ್ಲಿ ತಪ್ಪದೇ ವೀಕ್ಷಿಸಿ.

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಕ್ಷಣ ಕ್ಷಣಕ್ಕೂ ತಿರುವುಗಳನ್ನು ಹೊಂದಿರುವ ಕಾರಣ ಕ್ಷಣವೂ ನಾವು ಜಾಗ ಬಿಟ್ಟು ಕದಲದಂತೆ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಕೆಲವೊಂದು ಸಿನಿಮಾಗಳು ಸಾಕಷ್ಟು ರೋಚಕ ತಿರುವುಗಳನ್ನು ಹೊಂದಿರುತ್ತವೆ. ಇಂತಹ ಸಿನಿಮಾಗಳನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನ್ನಿಸುತ್ತದೆ. ನೀವು ಸಸ್ಪೆನ್ಸ್ ಸಿನಿಮಾ ಪ್ರೇಮಿಯಾಗಿದ್ದರೆ ದಕ್ಷಿಣ ಭಾರತದ 10 ಪ್ರಸಿದ್ಧ ಸಸ್ಪೆನ್ ಥ್ರಿಲ್ಲರ್ ಸಿನಿಮಾಗಳನ್ನು ನೋಡಬೇಕು. ಸಿನಿಮಾದ ಹೆಸರು, ಯಾವ ಭಾಷೆಯ ಸಿನಿಮಾ, ಯಾವ ಒಟಿಟಿ ವೇದಿಕೆಯಲ್ಲಿ ನೋಡಬಹುದು ಎಂಬಿತ್ಯಾದಿ ವಿವರ ಇಲ್ಲಿದೆ.
ರತ್ಸಾಸನ್
ಶಾಲಾ ಬಾಲಕಿಯರನ್ನು ಗುರಿಯಾಗಿ ಇಟ್ಟುಕೊಂಡು ಮನೋವಿಕೃತಿ ಮೆರೆಯುವ ವ್ಯಕ್ತಿಯನ್ನು ಹಿಡಿಯುವ ಪೊಲೀಸ್ ಅಧಿಕಾರಯೊಬ್ಬನ ಕಥೆ ಹೊಂದಿರುವ ಸಿನಿಮಾವಿದು. ತಮಿಳು ಭಾಷೆಯ ಈ ಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. 2018ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ರಾಮ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ವಿಷ್ಣು ವಿಶಾಲ್, ಅಮಲಾ ಪೌಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ ಇದಾಗಿದೆ.
ವಿಕ್ರಂ ವೇದ
2017ರಲ್ಲಿ ಬಿಡುಗಡೆಯಾದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು ಆರ್. ಮಾಧವನ್ ಹಾಗೂ ವಿಜಯ್ ಸೇತುಪತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದು ಕೂಡ ತಮಿಳು ಭಾಷೆಯ ಸಿನಿಮಾವಾಗಿದೆ. ಇದನ್ನು ಪ್ರೈಮ್ ವಿಡಿಯೊದಲ್ಲಿ ವೀಕ್ಷಿಸಬಹುದು.
ದೃಶ್ಯಂ
ಇದು 2013ರಲ್ಲಿ ಬಿಡುಗಡೆಯಾದ ಮಲೆಯಾಳಂ ಚಿತ್ರ. ಇದು ಕನ್ನಡವೂ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳಿಗೆ ರಿಮೇಕ್ ಆಗಿದೆ. ಮಲಯಾಳಂನಲ್ಲಿ ಮೋಹನ್‌ಲಾಲ್ ನಾಯಕನಾಗಿ ನಟಿಸಿರುವ ಈ ಚಿತ್ರದ ಕನ್ನಡ ರಿಮೇಕ್‌ನಲ್ಲಿ ರವಿಚಂದ್ರನ್ ನಟಿಸಿದ್ದಾರೆ. ಇದನ್ನು ಜಿಯೊಹಾಟ್‌ಸ್ಟಾರ್, ಯುಟ್ಯೂಬ್, ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.
ಥನಿ ಒರುವನ್
ಇದು ತಮಿಳಿನ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಇದು ಪ್ರಭಾವಿ ಅಪರಾಧಿಯೊಬ್ಬನ ವಿರುದ್ಧ ಸೇಡು ತೀರಿಸಿಕೊಳ್ಳುವ ವ್ಯಕ್ತಿಯ ಕಥೆಯನ್ನು ಹೊಂದಿದೆ. 2015ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಮೋಹನ್ ರಾಜ ನಿರ್ದೇಶನ ಮಾಡಿದ್ದಾರೆ. ರವಿ ಮೋಹನ್ ಮತ್ತು ಅರವಿಂದ ಸ್ವಾಮಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಸನ್ ನೆಕ್ಸ್ಟ್‌ನಲ್ಲಿ ನೋಡಬಹುದು.
ಸೀತಾರಾಮ್ ಬೆನೋಯ್ ಕೇಸ್ ನಂ.18
ಇದು ಕನ್ನಡ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದನ್ನು ಎಂಎಕ್ಸ್ ಪ್ಲೇಯರ್‌ನಲ್ಲಿ ವೀಕ್ಷಿಸಬಹುದು.
ಪಾಥಂ ಒಲವು
ಇದು ಮಲಯಾಳಂನ ಥ್ರಿಲ್ಲರ್ ಸಿನಿಮಾ. ಇದು ಒಬ್ಬ ಪೊಲೀಸ್ ಅಧಿಕಾರಿಯ ಅಪರಾಧಿಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಅನಿರೀಕ್ಷಿತ ತಿರುವು ಪಡೆಯುವ ಕಥೆಯನ್ನು ಹೊಂದಿದೆ. 2022ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಎಂ. ಪದ್ಮ ಕುಮಾರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಪ್ರೈಮ್ ವಿಡಿಯೊ ಹಾಗೂ ಮನೋರಮಾ ಮ್ಯಾಕ್ಸ್ ಒಟಿಟಿ ವೇದಿಕೆಯಲ್ಲಿ ವೀಕ್ಷಿಸಿಸಬಹುದು.
ಧುರುವಂಗಲ್ ಪತಿನಾರು
ಇದು 2016ರಲ್ಲಿ ಬಿಡುಗಡೆಯಾದ ತಮಿಳು ಸಿನಿಮಾ. ಕಾರ್ತಿಕ್ ನರೇನ್ ಚಿತ್ರಕಥೆ ಬರೆದು, ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಶಿನ್ ರೆಹಮಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಆಹಾ ಒಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದು.
ಲೂಸಿಯಾ
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಈ ಚಿತ್ರವು ಕನ್ನಡ ಭಾಷೆಯಾದ್ದಾಗಿದೆ. 2013ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಪವನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸತೀಶ್ ನಿನಾಸಂ ನಟನೆಯ ಈ ಸಿನಿಮಾವನ್ನು ನೀವು ಸನ್ ನೆಕ್ಸ್ಟ್‌ನಲ್ಲಿ ವೀಕ್ಷಿಸಬಹುದು.
ಮೆಮೊರಿಸ್
ಪ್ರಥ್ವಿರಾಜ್ ಸುಕುಮಾರನ್ ನಟನೆಯ ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಮಲಯಾಳಂ ಭಾಷೆಯಲ್ಲಿದೆ. ಜೀತು ಜೋಸೆಪ್ ಈ ಸಿನಿಮಾಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 2013 ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
2018
ಕೇರಳದಲ್ಲಿ ಉಂಟಾದ ಪ್ರವಾಹವನ್ನು ಆಧರಿಸಿದ ಸಿನಿಮಾ ಇದಾಗಿದೆ. 2023ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಜುಡೆ ಅಂಥೊನಿ ಜೋಸೆಫ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಸೋನಿಲಿವ್‌ನಲ್ಲಿ ವೀಕ್ಷಿಸಬಹುದು.
ವಿಭಾಗ