ಚಂದನವನದ ಸಿನಿಮಾ ಸಾಧಕರಿಗೆ ರಾಘವೇಂದ್ರ ಚಿತ್ರವಾಣಿ ವಾರ್ಷಿಕ ಪ್ರಶಸ್ತಿ ಪ್ರದಾನ
Raghavendra Chitravani Annual Awards 2025: ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಹತ್ತಾರು ಗಣ್ಯರ ಸಮ್ಮುಖದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಲಾಯ್ತು.

Raghavendra chitravani Awards 2025: ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಡಿ.ವಿ. ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ಸುಸಂದರ್ಭದಲ್ಲಿ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಈಗ ಪ್ರಶಸ್ತಿಗಳ ಸಂಖ್ಯೆ10ಕ್ಕೇರಿದೆ. ಸಂಸ್ಥೆಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಹತ್ತಾರು ಗಣ್ಯರ ಸಮ್ಮುಖದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಲಾಯ್ತು.
"ಸೊಸೆ ತಂದ ಸೌಭಾಗ್ಯ" ಸಿನಿಮಾದಿಂದ ಪಿಆರ್‌ಒ ಕ್ಷೇತ್ರಕ್ಕೆ ಆಗಮಿಸಿದ ರಾಘವೇಂದ್ರ ಚಿತ್ರವಾಣಿ, ಈಗ ಕನ್ನಡ ಚಿತ್ರರಂಗದ ಸೌಭಾಗ್ಯ ಆಗಿದೆ ಎಂದು ಮಾತು ಆರಂಭಿಸಿದ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಸಿನಿಮಾ ಪಿಆರ್‌ಒಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿರ್ದೇಶಕರನ್ನಾಗಿಸಲು ಮತ್ತು ಸರ್ಕಾರದ ಸಿನಿಮಾ ಪ್ರಶಸ್ತಿಗೆ ಪರಿಗಣಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಮುಂದಿನ ವರ್ಷ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 50ನೇ ವರ್ಷ. ಈ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಿ. ನಿಮ್ಮ ಜೊತೆಗೆ ನಾವು ಇರತ್ತೇವೆ ಎಂದು ತಿಳಿಸಿದರು. ಈ ವಾರ ಸಿನಿಮಾ ಜಗತ್ತಿಗೆ ಸಂಭ್ರಮದ ವಾರ. 2019 ನೇ ಸಾಲಿನ ರಾಜ್ಯ ಸಿನಿಮಾ ಪ್ರಶಸ್ತಿಗಳು ಪ್ರಕಟವಾಗಿದೆ. ನಿನ್ನೆ ಅನಂತನಾಗ್ ಹಾಗೂ ಹಾಸನ ರಘು ಅವರಿಗೆ ಪದ್ಮ ಪ್ರಶಸ್ತಿಗಳು ಲಭಿಸಿವೆ. ಶಿವಣ್ಣ ಅವರು ಗುಣಮುಖರಾಗಿ ತಾಯಿನಾಡಿಗೆ ಮರಳಿ ಬಂದಿದ್ದಾರೆ. ಇದು ಸಂಭ್ರಮದ ವಾರ ಎಂದರು.
ಯಾರಿಗೆ ಯಾವ ಪ್ರಶಸ್ತಿ
- ಹಿರಿಯ ಚಲನಚಿತ್ರ ನಿರ್ಮಾಪಕಿ ಮೀನಾಕ್ಷಿ ಕೆ.ವಿ. ಜಯರಾಂಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ,
- ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ಅವರಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ,
- ಕುಮಾರಿ ಅನುರಾಧಾ ಭಟ್ (ಗಾಯಕಿ) (ಅತ್ತ್ಯುತ್ತಮ ಹಿನ್ನೆಲೆ ಗಾಯಕಿ) ಅವರಿಗೆ ಡಾ. ರಾಜಕುಮಾರ್ ಪ್ರಶಸ್ತಿ,
- ಪಾರ್ವತಮ್ಮ ರಾಜಕುಮಾರ್ ಕುಟುಂಬದವರಿಂದ, ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ಅವರಿಗೆ ಯಜಮಾನ ಚಿತ್ರದ ಖ್ಯಾತಿಯ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ
- ಭಾರತಿ ವಿಷ್ಣುವರ್ಧನ ಅವರಿಂದ, ಹಿರಿಯ ನಟಿ ರೇಖಾರಾವ್‌ಗೆ ನಟಿ ಡಾ ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ,
- ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಪ್ರೈ ಲಿ ಪ್ರಶಸ್ತಿ (ಅತ್ಯುತ್ತಮ ಸಂಗೀತ ನಿರ್ದೇಶನ, ‘ಕೃಷ್ಣಂ ಪ್ರಣಯ ಸಖಿ’)
- ಶಿವಮ್ಮ ಚಿತ್ರದ ಉತ್ತಮ ಕಥಾಲೇಖನಕ್ಕಾಗಿ ಜೈಶಂಕರ್ ಆರ್ಯರ್‌ಗೆ ಖ್ಯಾತ ನಿರ್ದೇಶಕ-ನಿರ್ಮಾಪಕ ಕೆ.ವಿ. ಜಯರಾಂ ಪ್ರಶಸ್ತಿ,
- ಮೀನಾಕ್ಷಿ ಜಯರಾಂ ಅವರಿಂದ, "ಇಬ್ಬನಿ ತಬ್ಬಿದ ಇಳೆಯಲಿ" ಚಿತ್ರದ ಸಂಭಾಷಣೆಗಾಗಿ ಚಂದ್ರಜಿತ್ ಬೆಳ್ಳಿಯಪ್ಪ ಅವರಿಗೆ ಖ್ಯಾತ ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ,
- ಡಾ.ಎಸ್.ಕೆ. ನರಹರಿ ಅವರಿಂದ "ಫೋಟೊ" ಚಿತ್ರದ ಚೊಚ್ಚಲ ನಿರ್ದೇಶನಕ್ಕಾಗಿ ಉತ್ಸವ್ ಗೋನ್ವಾರ್ ಅವರಿಗೆ ಬಿ. ಸುರೇಶ ಅವರು ನೀಡುವ ಪ್ರಶಸ್ತಿ
- "ಕೃಷ್ಣಂ ಪ್ರಣಯ ಸಖಿ" ಚಿತ್ರದ "ದ್ವಾಪರ" ಹಾಡಿನ ಗೀತರಚನೆಗಾಗಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರಿಗೆ ಹಿರಿಯ ಪತ್ರಕರ್ತರಾದ ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ ಪತ್ರಕರ್ತ ವಿನಾಯಕರಾಮ್ ಅವರು ನೀಡುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
- ಸಮರ್ಜಿತ್ ಲಂಕೇಶ್ ಅವರು "ಗೌರಿ" ಚಿತ್ರದ ಅಭಿನಯಕ್ಕಾಗಿ ಶ್ರೀರಾಘವೇಂದ್ರ ಚಿತ್ರವಾಣಿಯ ವಿಶೇಷ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: ಇಂದಿನಿಂದ ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಅಚ್ಚರಿಯ ಬದಲಾವಣೆಗಳು; ಸೀತಾ ರಾಮ ಸೀರಿಯಲ್‌ಗೆ ಅಗ್ನಿಪರೀಕ್ಷೆ
ಅದ್ಧೂರಿ ಕಾರ್ಯಕ್ರಮದಲ್ಲಿ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ ನರಸಿಂಹಲು, ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ಪತ್ರಕರ್ತೆ ವಿಜಯಮ್ಮ, ಇಂದ್ರಜಿತ್ ಲಂಕೇಶ್, ಪತ್ರಕರ್ತ ಸದಾಶಿವ ಶೆಣೈ, ನಟಿ ರಾಗಿಣಿ ದ್ವಿವೇದಿ ಹಾಗೂ ರಾಜಕೀಯ ಮುಖಂಡರಾದ ಸಂಜಯ್ ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಂದಿನ ವರ್ಷ ದಿ.ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿತವಾದ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ಆರಂಭವಾಗಿ 50ವರ್ಷಗಳಾಗಲಿದೆ.
