Star Suvarna: ಸ್ಟಾರ್ ಸುವರ್ಣದಲ್ಲಿ ಬರಲಿದೆ ಹೊಸ ಧಾರಾವಾಹಿ ‘ಶಾರದೆ’ ಇದು ಅಮ್ಮ ಮಗಳ ಕಥೆ
Star Suvarna: ಸ್ಟಾರ್ ಸುವರ್ಣ ಕನ್ನಡ ವಾಹಿನಿಯು ಹೊಸ ಧಾರಾವಾಹಿಯೊಂದನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಶೀಘ್ರದಲ್ಲೇ ಧಾರಾವಾಹಿ ನಿಮ್ಮೆದುರು ಬರಲಿದೆ.

ಸ್ಟಾರ್ ಸುವರ್ಣ ವಾಹಿನಿಯು ಹೊಸ ಧಾರಾವಾಹಿಯೊಂದಿಗೆ ನಿಮ್ಮ ಮುಂದೆ ಬರಲಿದೆ. ಶಾರದೆ ಎಂಬ ಹೊಸ ಧಾರಾವಾಹಿಯ ಪ್ರೋವೋವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಆದರೆ, ಈ ಧಾರಾವಾಹಿ ಯಾವಾಗಿನಿಂದ ಆರಂಭವಾಗುತ್ತದೆ ಎಂಬುದು ತಿಳಿದು ಬಂದಿಲ್ಲ. ಧಾರಾವಾಹಿಯ ಪ್ರೋಮೋ ಅಂದವಾಗಿ ಮೂಡಿ ಬಂದಿದ್ದು, ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಚುಕ್ಕಿತಾರೆ' ಧಾರಾವಾಹಿಯ ಪುಟಾಣಿ ಇಬ್ಬನಿ ಈ ಧಾರಾವಾಹಿಯಲ್ಲೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಪ್ರೋಮೋದಲ್ಲಿ ಇಬ್ಬನಿಯನ್ನು ಕಂಡು ಖುಷಿಯಾಯ್ತು ಎಂದು ಕಾಮೆಂಟ್ ಮಾಡಿದವರೂ ಇದ್ದಾರೆ.
ಶಾರದೆ ಧಾರಾವಾಹಿ
ಈ ಧಾರಾವಾಹಿ ಡಬ್ಬಿಂಗ್ ಮಾಡಿದ ಧಾರಾವಾಹಿ ಎಂದು ಸಾಕಷ್ಟು ಜನ ಹೇಳುತ್ತಿದ್ದು, ನೋಡಿದ ಧಾರಾವಾಹಿಯನ್ನೇ ಎಷ್ಟು ಸಲ ನೋಡಲು ಸಾಧ್ಯ ಎನ್ನುತ್ತಿದ್ದಾರೆ. ಚೆಲ್ಲಮ್ಮ ತಮಿಳು ಧಾರಾವಾಹಿಯ ರೀಮೆಕ್ ಮಾಡಿದ ಧಾರಾವಾಹಿ ‘ಶಾರದೆ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇದು ಕಾರ್ತಿಕದೀಪಮ್ ರಿಮೇಕ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡದಲ್ಲಿ ಹೊಸ ಧಾರಾವಾಹಿಗಳು ಬರುತ್ತವೆ ಎಂದು ಕಾಯುವ ಪ್ರೇಕ್ಷಕರಿಗೆ ನೀವು ಯಾವಾಗಲೂ ನಿರಾಸೆಯನ್ನೇ ಮಾಡೋದು ಎಂದೂ ಸಹ ಹೇಳುತ್ತಿದ್ದಾರೆ. ಹೀಗೆ ನಾನಾ ರೀತಿಯ ಅಭಿಪ್ರಾಯಗಳನ್ನು ವೀಕ್ಷಕರು ಹಂಚಿಕೊಳ್ಳುತ್ತಿದ್ದಾರೆ.
ಧಾರಾವಾಹಿ ಕಥೆ ಏನು?
ಧಾರಾವಾಹಿಯ ಕಥೆ ಅಮ್ಮ, ಮಗಳ ಬದುಕಿನ ಬಗ್ಗೆ ಇರುವ ಕಥೆಯಾಗಿದ್ದು, ತಾಯೊಬ್ಬಳೇ ತನ್ನ ಮಗಳನ್ನು ಯಾವ ರೀತಿ ಸಾಕಿ ಸಲಹುತ್ತಾಳೆ ಎಂಬ ಕಥಾ ಹಂದರವನ್ನು ಹೊಂದಿದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಮೋಸ ಮಾಡಿದ ಗಂಡನನ್ನು ಬಿಟ್ಟು ತಾನೊಬ್ಬಳೇ ಮಗಳ ಜವಾಬ್ಧಾರಿಯನ್ನು ಹೊತ್ತ ತಾಯಿಯ ಕಥೆ ಇದಾಗಿದೆ.
ಪ್ರೋಮೋದಲ್ಲೇನಿದೆ?
'ಶಾರದೆ' ಧಾರಾವಾಹಿಯ ಪ್ರಸಾರ ದಿನಾಂಕವನ್ನು ವಾಹಿನಿ ಇನ್ನೂ ತಿಳಿಸಿಲ್ಲ. ಆದರೆ, ಪ್ರೋಮೋ ಮಾತ್ರ ತುಂಬಾ ಅಂದವಾಗಿ ಮೂಡಿ ಬಂದಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಈ ಪ್ರೋಮೋದಲ್ಲಿ ಅಮ್ಮ, ಮಗಳು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಾ ಇರುತ್ತಾರೆ. ಆಗ ಮಗಳ ಹತ್ತಿರ ನಿನ್ನ ಹೆಸರು ಏನು? ಎಂದು ಅಲ್ಲಿನ ಪ್ರಯಾಣಿಕರು ಪ್ರಶ್ನೆ ಮಾಡುತ್ತಾರೆ. ಆಗ ಮುದ್ದು, ಮುದ್ದಾಗಿ ಹಾಡು ಹೇಳುತ್ತಾ ಮಗಳು ತನ್ನ ಪರಿಚಯ ಮಾಡಿಕೊಳ್ಳುತ್ತಾಳೆ. ಬಸ್ ಇಳಿದ ನಂತರ ಅಮ್ಮ, ತನ್ನ ಗಂಡನನ್ನು ಹುಡುಕಿಕೊಂಡು ಹೋಗುತ್ತಾಳೆ. ಆದರೆ ಅವನು ಇನ್ನೊಂದು ಮದುವೆಯಾಗಿರುತ್ತಾನೆ. “ನನಗೆ ನೀನು ಬೇಡ” ಎಂದು ಹೇಳಿ ಬಾಗಿಲು ಹಾಕಿ ಅವಳನ್ನು ಕಳಿಸುತ್ತಾನೆ. ನಂತರ ಮಗಳ ಬಳಿ ಬಂದ ತಾಯಿಯ ಹತ್ತಿರ ಮಗಳು “ಅಮ್ಮ, ಅಪ್ಪ ಎಲ್ಲಿ? ಹಿಂದಿನಿಂದ ಬರ್ತಾ ಇದ್ದಾರಾ?” ಎಂದು ಕೇಳುತ್ತಾ “ಅಪ್ಪಾ, ಅಪ್ಪಾ,,,,” ಎಂದು ಕೂಗುತ್ತಾಳೆ. ಆದರೆ ಅಪ್ಪ ಮಾತ್ರ ಇರೋದಿಲ್ಲ. “ಇನ್ನು ಮುಂದೆ ಅಮ್ಮ, ಅಪ್ಪ ಎಲ್ಲ ನಾನೇ” ಎನ್ನುತ್ತಾ ಸಾಗುತ್ತಾಳೆ ತಾಯಿ.. ಈ ರೀತಿ ಪ್ರೋಮೋ ಕಥೆ ಇದೆ.
