ಪ್ಯಾನ್‌ ಇಂಡಿಯಾ ಪರಿಕಲ್ಪನೆ ಹಿಂದೆ ಓಡೋದು ಬಿಡಿ, ಪ್ಲಾನ್‌ ಹಾಕಿ ಸಿನಿಮಾ ಮಾಡಿ; ನಟ ಶಶಿಕುಮಾರ್‌
ಕನ್ನಡ ಸುದ್ದಿ  /  ಮನರಂಜನೆ  /  ಪ್ಯಾನ್‌ ಇಂಡಿಯಾ ಪರಿಕಲ್ಪನೆ ಹಿಂದೆ ಓಡೋದು ಬಿಡಿ, ಪ್ಲಾನ್‌ ಹಾಕಿ ಸಿನಿಮಾ ಮಾಡಿ; ನಟ ಶಶಿಕುಮಾರ್‌

ಪ್ಯಾನ್‌ ಇಂಡಿಯಾ ಪರಿಕಲ್ಪನೆ ಹಿಂದೆ ಓಡೋದು ಬಿಡಿ, ಪ್ಲಾನ್‌ ಹಾಕಿ ಸಿನಿಮಾ ಮಾಡಿ; ನಟ ಶಶಿಕುಮಾರ್‌

ಸ್ಯಾಂಡಲ್‌ವುಡ್‌ನ ಹಿರಿಯ ನಟ ಶಶಿಕುಮಾರ್‌ ಪ್ಯಾನ್‌ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲರೂ ಪ್ಯಾನ್‌ ಇಂಡಿಯಾ ಚಿತ್ರಗಳ ಹಿಂದೆ ಓಡುವುದನ್ನು ಬಿಟ್ಟು, ಕಂಟೆಂಟ್‌ ಇರುವಂಥ ಸಿನಿಮಾಗಳನ್ನು ಕೊಡಿ ಎಂದಿದ್ದಾರೆ.

ಪ್ಯಾನ್‌ ಇಂಡಿಯಾ ಪರಿಕಲ್ಪನೆ ಹಿಂದೆ ಓಡೋದು ಬಿಡಿ, ಪ್ಲಾನ್‌ ಹಾಕಿ ಸಿನಿಮಾ ಮಾಡಿ; ನಟ ಶಶಿಕುಮಾರ್‌
ಪ್ಯಾನ್‌ ಇಂಡಿಯಾ ಪರಿಕಲ್ಪನೆ ಹಿಂದೆ ಓಡೋದು ಬಿಡಿ, ಪ್ಲಾನ್‌ ಹಾಕಿ ಸಿನಿಮಾ ಮಾಡಿ; ನಟ ಶಶಿಕುಮಾರ್‌

Actor Shashikumar about Pan india: ಸ್ಯಾಂಡಲ್‌ವುಡ್‌ನ ಹಿರಿಯ ನಟ ಸುಪ್ರಿಂ ಹೀರೋ ಶಶಿಕುಮಾರ್‌, ಸದ್ಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆ ಪೈಕಿ ಆ ಲಿಸ್ಟ್‌ಗೆ ಹೊಸ ಸೇರ್ಪಡೆ, "Congratulations ಬ್ರದರ್". ಬಹುತೇಕ ಶೂಟಿಂಗ್‌ ಮುಗಿಸಿಕೊಂಡಿರುವ ಈ ಸಿನಿಮಾದಲ್ಲಿ ನಾಯಕನ ತಂದೆಯಾಗಿ ಶಶಿಕುಮಾರ್‌ ನಟಿಸಿದ್ದಾರೆ. ಈ ಸಿನಿಮಾತಂಡ ಚಿತ್ರೀಕರಣ ಮುಗಿದ ಬಗ್ಗೆ ಮಾಧ್ಯಮಗಳ ಜತೆಗೆ ಮಾಹಿತಿ ಹಂಚಿಕೊಂಡಿತು. ಈ ವೇಳೆ, ಪ್ಯಾನ್‌ ಇಂಡಿಯಾ ಪರಿಕಲ್ಪನೆ ಸೇರಿ ಹಲವು ವಿಚಾರಗಳ ಬಗ್ಗೆ ಶಶಿಕುಮಾರ್‌ ಮಾತನಾಡಿದ್ದಾರೆ.

ಶಶಿಕುಮಾರ್‌ ಹೇಳಿದ್ದೇನು?

"ಈಗಿನವರು ಎಲ್ಲರೂ ಪ್ಯಾನ್‌ ಇಂಡಿಯಾ.. ಪ್ಯಾನ್‌ ಇಂಡಿಯಾ ಅಂತ ಅದರ ಹಿಂದೆಯೇ ಹೋಗ್ತಿದ್ದಾರೆ. ಮೊದಲು ಅದರ ಹಿಂದೆ ಓಡುವುದನ್ನು ನಿಲ್ಲಿಸಿ. ಪ್ಯಾನ್‌ ಇಂಡಿಯಾ ಅಂತ ಮಾಡಿದ ಬೇಜಾನ್‌ ಸಿನಿಮಾಗಳು ಪ್ಲಾಪ್‌ ಆದ ಉದಾಹರಣೆ ಇದೆ. ಪ್ಯಾನ್‌ ಇಂಡಿಯಾ ಮಾಡಿದ ಸಿನಿಮಾಗಳೆಲ್ಲವೂ ಸಕ್ಸಸ್‌ ಆಗಿದ್ದಾವಾ? ಬೆರಳೆಣಿಕೆಯಲ್ಲಿ ಮಾತ್ರ ಆ ಸಕ್ಸಸ್‌ ಕಾಣಿಸುತ್ತೆ. ಸಿನಿಮಾ ಸ್ಕ್ರಿಪ್ಟ್‌ ಸಲುವಾಗಿ ನೀವು ಒಂದು ತಿಂಗಳು ಬೇಕಂದ್ರೆ ವೇಟ್‌ ಮಾಡಿ. ಈಗಿನವರಿಗೆ ಅರ್ಜೆನ್ಸಿ ಜಾಸ್ತಿ ಆಗಿದೆ. ಚಿಟಿಕೆ ಹೊಡೆಯುವುದರಲ್ಲಿಯೇ ಎಲ್ಲವೂ ತಯಾರಾಗಬೇಕು. ಇದೆಲ್ಲದರ ಜತೆಗೆ ಪ್ಲಾನಿಂಗ್‌ ತುಂಬ ಮುಖ್ಯ" ಎಂದಿದ್ದಾರೆ ಶಶಿಕುಮಾರ್.‌

"ಚಿತ್ರ ಮಾಡುವಾಗ ಪಕ್ಕಾ ಯೋಜನೆ ಹಾಕಿಕೊಳ್ಳುವುದು ಮುಖ್ಯ. ಅಂದುಕೊಂಡ ದಿನದಲ್ಲಿ ಹೆಚ್ಚು ಕಡಿಮೆ ಮುಗಿಸಿದರೆ ನಿರ್ಮಾಪಕರಿಗೂ ಅನುಕೂಲವಾಗಲಿದೆ. ನಾವೆಲ್ಲಾ ಚಿತ್ರರಂಗಕ್ಕೆ ಬಂದಾಗ ಪಕ್ಕಾ ಪ್ಲಾನಿಂಗ್ ಮಾಡಿಕೊಂಡು ಕೆಲಸ ಮಾಡುತ್ತಿದ್ದೆವು. ಅಂತಹುದೇ ವಾತಾವರಣ ಚಿತ್ರರಂಗದಲ್ಲಿ ಬರಬೇಕು. ಈ ಚಿತ್ರದಲ್ಲಿ ನಾನು ನಾಯಕನ ತಂದೆಯ ಪಾತ್ರ ಮಾಡಿದ್ದೇನೆ. ಹರಿ ಸಂತೋಷ್ ನನಗೆ ಕಥೆ ಹೇಳಿದರು. ಕಥೆ ಚೆನ್ನಾಗಿದೆ. ಚಿತ್ರ ಕೂಡ ಎಲ್ಲರಿಗೂ ಪ್ರಿಯವಾಗಲಿದೆ ಎಂದರು ಶಶಿಕುಮಾರ್.

ದುಬೈನಲ್ಲಿ ಹಾಡು ಬಿಡುಗಡೆ

ಕಲ್ಲೂರ್ ಸಿನಿಮಾಸ್ & ಪೆನ್ ಅಂಡ್ ಪೇಪರ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಪ್ರಶಾಂತ್ ಕಲ್ಲೂರ್ ನಿರ್ಮಿಸಿರುವ ಸಿನಿಮಾ ಕಂಗ್ರಾಜುಲೇಷನ್ಸ್‌ ಬ್ರದರ್. ಈ ಚಿತ್ರವನ್ನು ಪ್ರತಾಪ್ ಗಂಧರ್ವ ನಿರ್ದೇಶಿಸಿದ್ದು, ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಇದೇ ಹೆಸರಿನಲ್ಲಿ ಚಿತ್ರ ಆರಂಭವಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಈಗ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ನಿಗದಿಯಂತೆ ಪೂರ್ಣವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ.‌ ಮುಂದಿನ ತಿಂಗಳು ಚಿತ್ರದ ಮೊದಲ ಹಾಡು ದುಬೈನಲ್ಲಿ ಬಿಡುಗಡೆಯಾಗಲಿದೆ.

ಯುವ ನಟ ರಕ್ಷಿತ್ ನಾಗ್ ನಾಯಕನಾಗಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ನಾಯಕ ಸೇರಿ ಬಹುತೇಕ ಹೊಸ ಪ್ರತಿಭೆಗಳೇ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹೊಸಬರ ಜತೆಗೆ ನಟ ಶಶಿಕುಮಾರ್ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ. ನಾಯಕಿಯರಾಗಿ ಸಂಜನಾ ದಾಸ್ ಮತ್ತು ಅನುಶಾ ನಟಿಸಿದರೆ, ಹರೀಶ್ ರೆಡ್ಡಿ ಸಹ ನಿರ್ಮಾಪಕರಾಗಿ ಹಾಗೂ ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಏನಿದು ಸಿನಿಮಾ ಕಥೆ?

ಚಿತ್ರಕ್ಕೆ ಕಥೆ ಬರೆದಿರುವ ನಿರ್ದೇಶಕ ಹರಿ ಸಂತೋಷ್, ಹುಡುಗರಿಗೆ ಹುಡುಗಿಯರು ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಒಬ್ಬ ಹುಡುಗನಿಗೆ ಇಬ್ಬರು ಹುಡುಗಿಯರು ಸಿಕ್ಕಾಗ ಎಲ್ಲರೂ "Congratulations ಬ್ರದರ್" ಎಂದು ಹೇಳುತ್ತಾರೆ. ಅಂತಹುದೇ ಕಥೆ ಚಿತ್ರದಲ್ಲಿದೆ. ನಮ್ಮ ಪೆನ್ ಎನ್ ಪೇಪರ್ ಸ್ಟುಡಿಯೋಸ್ ಸಂಸ್ಥೆಯ ಅನೇಕ ಸದಸ್ಯರು ಬರವಣಿಗೆಯಲ್ಲಿ ಸಾಥ್ ನೀಡಿದ್ದಾರೆ. ಕಾರವಾರ, ಬೆಂಗಳೂರು ಸೇರಿದಂತೆ ಅನೇಕ ಕಡೆ 45 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಮುಂದಿನ ತಿಂಗಳು ದುಬೈನಲ್ಲಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಆಗಲಿದೆ ಎಂದರು.

ನಿರ್ದೇಶಕ ಪ್ರತಾಪ್ ಗಂಧರ್ವ ಮಾತನಾಡಿ, ಹರಿ ಸಂತೋಷ್ ಕಥೆ ಬರೆದು ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡಿದ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ಚಿತ್ರವನ್ನು ಪೂರ್ಣಗೊಳಿಸಲು ಸಹಕಾರಿಯಾಗಿದೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಚಿತ್ರೀಕರಣ ಮುಕ್ತಾಯವಾಗಿದ್ದು, ಸಂಕಲನ ಕಾರ್ಯ ನಡೆಯುತ್ತಿದೆ. ಅಂದುಕೊಂಡ ಹಾಗೆ ಆದರೆ ಜೂನ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು.

ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೆ. ನಾಯಕನಾಗಿ ಇದು ಮೊದಲ ಸಿನಿಮಾ. ಹರಿ ಸಂತೋಷ್ ಅವರ ಬರವಣಿಗೆ ತಂಡದಲ್ಲೂ ಕಾರ್ಯ ನಿರ್ವಹಿಸಿದ್ದೇನೆ. ಒಬ್ಬ ಹುಡುಗನ ಜೀವನದಲ್ಲಿ ಇಬ್ಬರು ಹುಡುಗಿಯರು ಬಂದಾಗ ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ತಿರುಳು ಎಂದರು ನಾಯಕ ರಕ್ಷಿತ್ ನಾಗ್. ನಾಯಕಿ ಸಂಜನಾ ದಾಸ್ ಮಾತನಾಡಿ, ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ, ಬೋಲ್ಡ್ ಮತ್ತ ಇಂಡಿಪೆಂಡೆಂಟ್ ಹುಡುಗಿ ಪಾತ್ರ ಎಂದರು. ಇದು ನನ್ನ ಮೊದಲ ಚಿತ್ರ, ಆಡಿಷನ್ ಮೂಲಕ ಚಿತ್ರಕ್ಕೆ ಆಯ್ಕೆಯಾದೆ. ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಇದು. ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು ಮತ್ತೊಬ್ಬ‌ ನಾಯಕಿ ಅನುಶಾ. ರಕ್ಷಿತ್ ಕಾಪು, ಸುದರ್ಶನ್, ಚೇತನ್ ದುರ್ಗ ಪಾತ್ರವರ್ಗದಲ್ಲಿದ್ದಾರೆ. ಗುರು ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ಚಿತ್ರಕ್ಕಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner