ಕನ್ನಡ ಸುದ್ದಿ  /  Entertainment  /  Stuntman Death On Tamil Movie Shooting Set

Stuntman Death On Shooting Set: ಖ್ಯಾತ ನಟನ ಸಿನಿಮಾ ಸೆಟ್‌ನಲ್ಲಿ ದುರಂತ...ಹಗ್ಗ ತುಂಡಾಗಿ ಸ್ಟಂಟ್‌ಮ್ಯಾನ್‌ ಸಾವು..!

ಸುಮಾರು 20 ಅಡಿ ಎತ್ತರದಿಂದ ಸುರೇಶ್‌ ಎಂಬ ಸ್ಟಂಟ್‌ಮ್ಯಾನ್‌ ಒಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಚೆನ್ನೈನ ಕೇಲಂಬಕ್ಕಂ ಬಳಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರೈಲು ಹಳಿ ಹಾಗೂ ರೈಲ್ವೆ ಸ್ಟೇಷನ್‌ ಸೆಟ್‌ ಹಾಕಲಾಗಿತ್ತು.

ಸಿನಿಮಾ ಚಿತ್ರೀರಕಣದ ವೇಳೆ ಸ್ಟಂಟ್‌ಮ್ಯಾನ್‌ ಸಾವು
ಸಿನಿಮಾ ಚಿತ್ರೀರಕಣದ ವೇಳೆ ಸ್ಟಂಟ್‌ಮ್ಯಾನ್‌ ಸಾವು (PC: Pixaby)

ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಅವಘಡಗಳು ಸಂಭವಿಸುವುದು ಇಂದು ನಿನ್ನೆಯದಲ್ಲ. ಕೆಲವೊಮ್ಮೆ ಇದು ಆಕಸ್ಮಿಕವಾಗಿ ಸಂಭವಿಸಿದರೂ, ಕೆಲವೊಮ್ಮೆ ನಿರ್ಲಕ್ಷ್ಯದಿಂದ ಸಂಭವಿಸುತ್ತವೆ. ಕನ್ನಡ ಚಿತ್ರರಂಗ, ಟಾಲಿವುಡ್‌, ಕಾಲಿವುಡ್‌ ಸೇರಿದಂತೆ ಬಹುತೇಕ ಎಲ್ಲಾ ಕಡೆ ಇಂತಹ ದುರ್ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಇದೀಗ ಇಂತಹ ಮತ್ತೊಂದು ಘಟನೆ ಕಾಲಿವುಡ್‌ನಲ್ಲಿ ನಡೆದಿದೆ.

ಖ್ಯಾತ ನಟ ವಿಜಯ್‌ ಸೇತುಪತಿ ಹಾಗೂ ಸೂರಿ ಅಭಿನಯದ 'ವಿಡುದಲೈ' ಸಿನಿಮಾ, ಸಾಹಸ ಸನ್ನಿವೇಶದ ಚಿತ್ರೀಕರಣದ ವೇಳೆ ದುರಂತ ಸಂಭವಿಸಿದೆ. ಸುಮಾರು 20 ಅಡಿ ಎತ್ತರದಿಂದ ಸುರೇಶ್‌ ಎಂಬ ಸ್ಟಂಟ್‌ಮ್ಯಾನ್‌ ಒಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಚೆನ್ನೈನ ಕೇಲಂಬಕ್ಕಂ ಬಳಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರೈಲು ಹಳಿ ಹಾಗೂ ರೈಲ್ವೆ ಸ್ಟೇಷನ್‌ ಸೆಟ್‌ ಹಾಕಲಾಗಿತ್ತು. ರೈಲ್ವೆ ಅಪಘಾತದ ದೃಶ್ಯಕ್ಕಾಗಿ ಹಾಕಲಾಗಿದ್ದ ಸೆಟ್‌ನಲ್ಲಿ ಸ್ಟಂಟ್‌ಮ್ಯಾನ್‌ ಸುರೇಶ್‌ ಹಾಗೂ ಇನ್ನಿತರರನ್ನು ಕ್ರೇನ್‌ಗೆ ಹಗ್ಗ ಕಟ್ಟಿ 20 ಅಡಿ ಎತ್ತರದಲ್ಲಿ ನೇತು ಹಾಕಲಾಗಿತ್ತು. ಆದರೆ ದುರದೃಷ್ಟವಶಾತ್‌ ಹಗ್ಗ ತುಂಡಾಗಿ ಸುರೇಶ್‌ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸುರೇಶ್‌ ಸಾವಿನ ಸುದ್ದಿ ತಿಳಿದು ಚಿತ್ರರಂಗ ಆಘಾತ ವ್ಯಕ್ತಪಡಿಸಿದೆ. ಆದರೆ ಸಿನಿಪ್ರಿಯರು ಮಾತ್ರ ಸಿನಿಮಾ ತಂಡ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಟಂಟ್‌ ಮ್ಯಾನ್‌ ಸಾವಿಗೆ ಚಿತ್ರತಂಡವೇ ಕಾರಣ, ಚಿತ್ರೀಕರಣದ ಪ್ರತಿ ಹಂತದಲ್ಲೂ ಬಹಳ ಮುನ್ನೆಚರಿಕೆ ವಹಿಸಬೇಕು. ಇಲ್ಲವಾದರೆ ಇಂತಹ ಅನಾಹುತಗಳು ಜರುಗುತ್ತಲೇ ಇರುತ್ತವೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 'ವಿಡುದಲೈ' ಚಿತ್ರವನ್ನು ಎಲ್‌ ಕುಮಾರ್‌ ನಿರ್ಮಾಣದಲ್ಲಿ ವೆಟ್ರಿಮಾರನ್‌ ನಿರ್ದೇಶಿಸುತ್ತಿದ್ದಾರೆ. ಹಾಸ್ಯ ನಟನಾಗಿ ಹೆಸರು ಮಾಡಿದ್ದ ಸೂರಿ, ಈ ಚಿತ್ರದಲ್ಲಿ ನಾಯಕನಾಗಿ, ವಿಜಯ್‌ ಸೇತುಪತಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ರಾಜಿವ್ ಮೆನನ್, ಚೇತನ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ.

'ಲವ್‌ ಯೂ ರಚ್ಚು' ಚಿತ್ರೀಕರಣದ ವೇಳೆ ದುರಂತ

ಕಳೆದ ವರ್ಷ ಬಿಡದಿ ಬಳಿಯ ಜೋಗಿಪಾಳ್ಯ ಬಳಿ ಅಜಯ್‌ ರಾವ್‌ ಹಾಗೂ ರಚಿತಾ ರಾಮ್‌ ಅಭಿನಯದ ಲವ್‌ ಯು ರಚ್ಚು ಸಿನಿಮಾ ಚಿತ್ರೀಕರಣದ ಸಮಯದಯಲ್ಲಿ ಇದೇ ರೀತಿ ದುರಂತ ನಡೆದಿತ್ತು. ವಿದ್ಯುತ್‌ ಅವಘಡ ಸಂಭವಿಸಿ ವಿವೇಕ್‌ ಎಂಬ ಫೈಟರ್‌ ಸಾವನ್ನಪ್ಪಿದ್ದರು. ಈ ವೇಳೆ ಚಿತ್ರದ ನಿರ್ದೇಶಕ ಶಂಕರ್‌, ನಿರ್ಮಾಪಕ ಗುರು ದೇಶಪಾಂಡೆ, ಕ್ರೇನ್‌ ಚಾಲಕ, ಫೈಟ್‌ ಮಾಸ್ಟರ್‌ ವಿನೋದ್‌ ಎಂಬುವರ ಮೇಲೆ ಪೊಲೀಸರು ಕೇಸ್‌ ದಾಖಲಿಸಿದ್ದರು. ಈ ಸಮಯದಲ್ಲಿ ನಿರ್ಮಾಪಕ ಗುರು ದೇಶಪಾಂಡೆ ಕೆಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದರು. ನಂತರ ನಿರ್ಮಾಪಕ ಗುರು ದೇಶಪಾಂಡೆ ಮೃತ ವಿವೇಕ್‌ ಕುಟುಂಬಕ್ಕೆ 10 ಲಕ್ಷ ರೂಪಾಯಿ ಚೆಕ್‌ ನೀಡಿದ್ದರು.

'ಮಾಸ್ತಿಗುಡಿ' ಚಿತ್ರೀಕರಣದ ವೇಳೆ ಅವಘಡ

ದುನಿಯಾ ವಿಜಯ್‌ ಅಭಿನಯದ 'ಮಾಸ್ತಿಗುಡಿ' ಸಿನಿಮಾ ಕ್ಲೈಮಾಕ್ಸ್‌ ದೃಶ್ಯಕ್ಕಾಗಿ ಬೆಂಗಳೂರಿನ ತಿಪ್ಪಗೊಂಡನಹಳ್ಳಿ ಕೆರೆ ಬಳಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಹೆಲಿಕಾಪ್ಟರ್‌ನಿಂದ ಕೆಳಗೆ ಹಾರುವ ವಿಲನ್‌ಗಳನ್ನು ನಾಯಕ ಬೆನ್ನಟ್ಟುವ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ದುರದೃಷ್ಟವಶಾತ್‌, ಹೆಲಿಕಾಪ್ಟರ್‌ ಮೇಲಿಂದ ಕೆರೆಗೆ ಬಿದ್ದ ಖಳನಟರಾದ ಅನಿಲ್‌ ಹಾಗೂ ಉದಯ್‌ ಮತ್ತೆ ಮೇಲೆ ಬರಲೇ ಇಲ್ಲ. ಈ ಘಟನೆ ನಡೆದು 6 ವರ್ಷಗಳಾಗಿವೆ. ಅನಿಲ್‌ ಹಾಗು ಉದಯ್‌ ಕುಟುಂಬ ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಲೇ ಇದೆ.

ತಮಿಳಿನ 'ಇಂಡಿಯನ್‌-2' ಚಿತ್ರೀರಕಣದ ಸೆಟ್‌ನಲ್ಲೂ ಕ್ರೇನ್‌ ಉರುಳಿಬಿದ್ದು ಮೂವರು ಸಾವನ್ನಪ್ಪಿದ್ದರು. ಈ ರೀತಿ ಆಗಿದ್ದಾಂಗ್ಗೆ ನಡೆಯುತ್ತಿದ್ದರೂ, ಚಿತ್ರೀಕರಣದ ಸಮಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ನಿಜಕ್ಕೂ ಬೇಸರದ ವಿಚಾರ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ