ಕನ್ನಡ ಸುದ್ದಿ  /  Entertainment  /  Sudarshan Sanchari, A Young Man From Chitradurga, Rode A Bicycle To Travel Around The Country

Sudarshan Sanchari: ದೇಶ ದರ್ಶನಕ್ಕೆ ಹೊರಟ ಸುದರ್ಶನ; 7 ರಾಜ್ಯಗಳಲ್ಲಿ 18 ಸಾವಿರ ಕಿಮೀ ಸುತ್ತಿದ ದುರ್ಗದ ಹುಡುಗ...

ದಕ್ಷಿಣ ಭಾರತದ ಬಹುತೇಕ ಎಲ್ಲ ರಾಜ್ಯಗಳ ಜಿಲ್ಲೆಗಳನ್ನು ಮುಟ್ಟಿ, ಉತ್ತರ ಭಾರತದ ಕಡೆ ಆತನ ಸೈಕಲ್‌ ಸ್ಟಿಯರಿಂಗ್‌ ಹೊರಳಿದೆ. ಈವರೆಗೂ ಏಳು ರಾಜ್ಯಗಳಲ್ಲಿ 18 ಸಾವಿರ ಕಿಲೋ ಮೀಟರ್‌ ಸುತ್ತಿ, 2024ರ ಜನವರಿ ಒಳಗೆ ಸೈಕಲ್‌ನಲ್ಲಿಯೇ ದೇಶ ಸುತ್ತುವ ಯೋಜನೆ ರೂಪಿಸಿಕೊಂಡಿದ್ದಾನೆ.

ದೇಶ ದರ್ಶನಕ್ಕೆ ಹೊರಟ ಸುದರ್ಶನ; 7 ರಾಜ್ಯಗಳಲ್ಲಿ 18 ಸಾವಿರ ಕಿಮೀ ಸುತ್ತಿದ ದುರ್ಗದ ಹುಡುಗ...
ದೇಶ ದರ್ಶನಕ್ಕೆ ಹೊರಟ ಸುದರ್ಶನ; 7 ರಾಜ್ಯಗಳಲ್ಲಿ 18 ಸಾವಿರ ಕಿಮೀ ಸುತ್ತಿದ ದುರ್ಗದ ಹುಡುಗ... (Facebook/ Sudarshan Sanchari)

ಕಷ್ಟಪಟ್ಟು ದುಡಿದ ದುಡ್ಡನ್ನು ಏಕೆ ಬಿಡಬೇಕೆಂದು ಬೆಂಗಳೂರಿನಿಂದ ದೂರದ ಹೈದರಾಬಾದ್‌ಗೆ ಸೈಕಲ್‌ ಮೇಲೆ ಪ್ರಯಾಣ ಬೆಳೆಸಿದ ಯುವಕ, ಆ ಪ್ರಯಾಣ ಮುಗಿಸಿ ಬರೋವಷ್ಟರಲ್ಲಿ ದೇಶ ಸುತ್ತುವ ಆಸೆ ಆತನಲ್ಲಿ ಮೊಳೆಕೆಯೊಡೆದಿತ್ತು. ಅದರಂತೆ ಇದೀಗ ದಕ್ಷಿಣ ಭಾರತದ ಬಹುತೇಕ ಎಲ್ಲ ರಾಜ್ಯಗಳ ಜಿಲ್ಲೆಗಳನ್ನು ಮುಟ್ಟಿ, ಉತ್ತರ ಭಾರತದ ಕಡೆ ಆತನ ಸೈಕಲ್‌ ಸ್ಟಿಯರಿಂಗ್‌ ಹೊರಳಿದೆ. ಈವರೆಗೂ ಏಳು ರಾಜ್ಯಗಳಲ್ಲಿ 18 ಸಾವಿರ ಕಿಲೋ ಮೀಟರ್‌ ಸುತ್ತಿ, 2024ರ ಜನವರಿ ಒಳಗೆ ಸೈಕಲ್‌ನಲ್ಲಿಯೇ ದೇಶ ಸುತ್ತುವ ಯೋಜನೆ ರೂಪಿಸಿಕೊಂಡಿದ್ದಾನೆ. ಆತನ ಹೆಸರು ಸುದರ್ಶನ. ಫೇಸ್‌ಬುಕ್‌ನಲ್ಲಿ ಸುದರ್ಶನ್‌ ಸಂಚಾರಿ (Sudarshan Sanchari) ಎಂದಿದೆ. ಈ ಯುವಕನ ಈ ಪ್ರಯಾಣದ ಕಿರು ವಿವರ Hindustan Times Kannada ನಿಮ್ಮ ಮುಂದಿಟ್ಟಿದೆ.

ಯಾರು ಈ ಸುದರ್ಶನ ಸಂಚಾರಿ..?

"ನನ್ನ ಹೆಸರು ಸುದರ್ಶನ್‌ ಡಿ.ಟಿ. ( Sudharshana D T ) ಚಿತ್ರದುರ್ಗದ ಬಳಿಯ ಹನುಮನಹಳ್ಳಿ ನಮ್ಮೂರು. ನನ್ನ ವಯಸ್ಸು 23. ನಮ್ಮದು ರೈತ ಕುಟುಂಬ. ಎರಡು ಎಕರೆ ಜಮೀನು ನಮಗೆ ಆಸರೆ. ಹಣಕಾಸಿನ ಕೊರತೆಯಿಂದ ಡಿಗ್ರಿ ಫೈನಲ್‌ ಇಯರ್ ಕಂಪ್ಲೀಟ್‌ ಆಗಿಲ್ಲ. ಸಿಕ್ಕ ಸಿಕ್ಕ ಕೆಲಸ ಮಾಡ್ತಾ ಬಂದಿದ್ದೇನೆ. ಸ್ವಿಗ್ಗಿ, ಜೊಮೆಟೋ ಯಾವ ಕೆಲಸವನ್ನೂ ಉಳಿಸಿಲ್ಲ. ಬುದ್ದಿ ಬಂದ ಮೇಲಿಂದ ಮನೆಯಿಂದ ಒಂದು ರೂಪಾಯಿಯನ್ನೂ ಕೇಳಿಲ್ಲ."

ಸಂಬಳವೇ ಸೈಕಲ್‌ ಹತ್ತಲು ಟ್ರಿಗರ್‌ ಮಾಡಿದ್ದು...

“ಹೈದರಾಬಾದ್‌ ಮೂಲದ ಕಂಪನಿಯಲ್ಲಿ ನಾನು ಕೆಲಸ ಮಾಡ್ತಿದ್ದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿನ ಅದರ ಸೇಲ್ಸ್‌ ಕ್ಲೋಸ್‌ ಮಾಡಿದ್ರು. ಆದರೆ, ಒಂದು ತಿಂಗಳ ಸಂಬಳ, ಟಿಎ, ಡಿಎ ಏನೂ ಕೊಟ್ಟಿರಲಿಲ್ಲ. ದುಡಿದ ದುಡ್ಡು ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದೆ. ಕೊಡಲ್ಲ ಎಂದು ನಮಗೆ ಆವಾಜ್‌ ಆಗಿದ್ದರು. ಲೇಬರ್‌ ಡಿಪಾರ್ಟ್‌ಮೆಂಟ್‌ಗೂ ದೂರು ಕೊಟ್ಟಿದ್ದೆ. ಅದಾದ ಮೇಲೆ ನೇರವಾಗಿ ಕಂಪನಿಯ ಕೇಂದ್ರ ಕಚೇರಿಗೆ ಸೈಕಲ್‌ ಏರಿ ಹೊರಟೆ. ನಿಯತ್ತಿನಿಂದ ದುಡಿದ ದುಡ್ಡು ಗುರೂ, ಸುಮ್ನೆ ಬಿಡ್ತಿವಾ.. ಈ ಹಾದಿಯಲ್ಲಿ ನನಗೆ ಸಾಕಷ್ಟು ಮಂದಿ ಸಹಾಯ ಮಾಡಿದ್ರು. ಊಟ ಕೊಟ್ರು. ಆಂಧ್ರ ಗಡಿಯ ಹಿಂದೂಪುರಕ್ಕೆ ಬರುತ್ತಿದ್ದಂತೆ, ನನ್ನ ವಿಚಾರ ಅಲ್ಲಿನ ಮಾಧ್ಯಮದಲ್ಲಿ ಬಂತು. ಆಗ ಲೇಬರ್‌ ಡಿಪಾರ್ಟ್‌ಮೆಂಟ್‌ ಕಂಪನಿಯವರಿಗೆ ತರಾಟೆ ತೆಗೆದುಕೊಂಡಿತು. ಆಮೇಲೆ ನನಗೆ ಬರಬೇಕಾದ ಹಣ ಬಂತು. ಆವತ್ತಿನ ಆ ಪ್ರಯಾಣ ಏನಿತ್ತೋ ಅದೇ ನನ್ನನ್ನು ದೇಶ ಸುತ್ತುವಂತೆ ಮಾಡಿದ್ದು..”

2021ರ ಆಗಸ್ಟ್‌ 18ರಿಂದ ಜರ್ನಿ ಶುರು...

ಎಲ್ಲರೂ ಕನ್ಯಾಕುಮಾರಿಯಿಂದ ಕಾಶ್ಮೀರ ಸುತ್ತಾಡುತ್ತಾರೆ. ಅದರಲ್ಲೇನಿದೆ ಮಜ. ಸ್ಟ್ರೇಟ್‌ ಹೈವೇಯಲ್ಲಿ ಬೈಕ್‌ನಲ್ಲಿ ಬಂದರೆ ಅದಕ್ಕೆ ದೇಶ ಸುತ್ತುವುದು ಅಂತಾರಾ? ಆದರೆ, ನಾನು ಮಾತ್ರ ಬೇರೆ ರೀತಿಯಲ್ಲಿಯೇ ಸಂಚಾರ ಆರಂಭಿಸಿದೆ. ಅದು ಆಗಸ್ಟ್‌ 18ರ 2021. ಆಗ ತಾನೇ ಕೋವಿಡ್‌ ಇಳಿಮುಖವಾಗಿತ್ತು. ಜೇಬಿನಲ್ಲಿ ಕೇವಲ 2000 ಸಾವಿರ ಇಟ್ಟುಕೊಂಡು ಸೈಕಲ್‌ ಪೆಡಲ್‌ ಮೇಲೆ ಕಾಲಿಟ್ಟೆ. ಎಲ್ಲಿ ಹೋಗಬೇಕು? ಏನು ಮಾಡಬೇಕು ಒಂದೇ ಪ್ಲಾನ್‌ ಇರಲಿಲ್ಲ. ಮೊದಲಿಗೆ ತಮಿಳುನಾಡಿಗೆ ಹೋದೆ. ಅಲ್ಲಿನ ಜನ ಅಪಾರ ಪ್ರೀತಿ ಕೊಟ್ಟರು. ಅಲ್ಲಿಂದ ನಿಧಾನಕ್ಕೆ ನನಗನಿಸಿದ್ದು, ಸೈಕಲ್‌ನಲ್ಲಿಯೇ ಇಡೀ ದೇಶ ಸುತ್ತಬೇಕು ಎಂಬುದು. ದೇಶದ ಎಲ್ಲ ಜಿಲ್ಲೆಗಳನ್ನು ಮುಟ್ಟಬೇಕು ಎಂಬುದು.."

18 ಸಾವಿರ ಕಿಮೀ ಪ್ರಯಾಣ/ 1200 ಪಟ್ಟಣಗಳಿಗೆ ಭೇಟಿ..

“2021ರ ಆಗಸ್ಟ್‌ 18ರಿಂದ ಶುರುವಾದ ನನ್ನ ಈ ಪ್ರಯಾಣ ಇದೀಗ 1200 ಪಟ್ಟಣಗಳನ್ನು ಮುಟ್ಟಿದೆ. ತಮಿಳುನಾಡು, ಛತ್ತೀಸಗಡ, ಕೇರಳ, ಕರ್ನಾಟಕ, ಗೋವಾ, ತೆಲಂಗಾಣ ಮತ್ತು ಪಾಂಡಿಚೇರಿಯ ಬಹುತೇಕ ಎಲ್ಲ ಭಾಗ ಸುತ್ತಾಡಿದ್ದೇನೆ. ಮಹಾರಾಷ್ಟ್ರದ ಶೇ. 60 ಭಾಗ ಮುಗಿದಿದೆ. ಇದು ಮುಗಿಯುತ್ತಿದ್ದಂತೆ ಗುಜರಾತ್‌ ಕಡೆ ಪ್ರಯಾಣ ಮುಂದುವರಿಯಲಿದೆ. ಅದೆಲ್ಲದರ ರೂಟ್‌ ಮ್ಯಾಪ್‌ ನನ್ನ ಬಳಿ ಇದೆ. ನಾನು ಸುತ್ತಾಡಿದ ಇಂಚಿಂಚೂ ಮಾಹಿತಿಯೂ ನನ್ನ ಫೇಸ್‌ಬುಕ್‌ನಲ್ಲಿ ಸಿಗುತ್ತದೆ. ಕಿಲೋ ಮೀಟರ್‌ ಲೆಕ್ಕದಲ್ಲಿ ಹೇಳುವುದಾದರೆ, ಇಲ್ಲಿಯವರೆಗೂ 18,000 ಸಾವಿರ ಕಿಮೀ ಸೈಕಲ್‌ನಲ್ಲಿ ಕ್ರಮಿಸಿದ್ದೇನೆ. ಹಾಗೆ ಸೈಕಲ್‌ ಹೊಡೆಯುವಾಗ ಅಪಘಾತವೂ ಆಗಿತ್ತು. ಆಗ 20 ದಿನ ರೆಸ್ಟ್‌ ಮಾಡಿದ್ದೆ. ಅದನ್ನು ಬಿಟ್ಟರೆ, ಸೈಕಲ್‌ ಎಲ್ಲಿಯೂ ನಿಂತಿಲ್ಲ. ನಿತ್ಯ 100 ಕಿಮೀ ಓಡಿಸಲೇಬೇಕು ಎಂದು ಟಾರ್ಗೆಟ್‌ ಹಾಕಿದ್ದೆ. ಆದರೆ, ಅದು ಆಗ್ತಿಲ್ಲ. ಜನ ಸಿಕ್ಕರೆ ಬಿಡಲ್ಲ. ಮಾತಿಗೆ ಕೂರ್ತಾರೆ. ನಾನೂ ಸಹ ಅವರೊಂದಿಗೆ ಕಾಲ ಕಳೆಯುತ್ತೇನೆ. ಸದ್ಯ ಭೂತಾನ್‌, ನೇಪಾಳ ಗಡಿಯಲ್ಲಿದ್ದೇನೆ..”

ಸಸ್ಯಾಹಾರಿಯಾದ ನಾನು ಮಟನ್‌ ಸಾರು, ತಂಗಳನ್ನ ತಿನ್ನಬೇಕಾಯ್ತು..

“ಈ ಪ್ರಯಾಣದಲ್ಲಿ ಇಂಥದ್ದೇ ಪರಿಸ್ಥಿತಿ ಎದುರಾಗುತ್ತದೆ ಎಂದು ಊಹೆ ಮಾಡೋಕೂ ಆಗಲ್ಲ. ಏಕೆಂದರೆ, ಅಂಥ ಅನುಭವಗಳು ನನಗಾಗಿವೆ. ನಾನು ಶುದ್ಧ ಸಸ್ಯಾಹಾರಿ. ಆದರೆ, ತಂಗಳನ್ನ ಮಟನ್‌ ಸಾರು ತಿಂದಿದ್ದೇನೆ. ತಮಿಳುನಾಡಿನಲ್ಲಿ ಎಣ್ಣೆ ಹೊಡೆದ ವ್ಯಕ್ತಿಯೊಬ್ಬ ನನ್ನನ್ನು ಅವರ ಮನೆಗೆ ಕರೆದೊಯ್ದು ಊಟ ಹಾಕಿಸಿದ್ದ. ಹೀಗೆ ಬಗೆಬಗೆ ಆತಿಥ್ಯ ಸಿಕಿದ್ದುಂಟು. ಅದನ್ನು ಬಿಟ್ಟರೆ, ನನ್ನ ಬಹುತೇಕ ಊಟ ಹೊರಗಡೆ..”

ಹಣ ಖಾಲಿ ಆದ್ರೆ, ಕೂಲಿ...

ಮೊದಲೇ ಹೇಳಿದಂತೆ ಹಣ ಇಟ್ಟುಕೊಂಡು ನಾನು ಈ ಪ್ರಯಾಣ ಆರಂಭಿಸಿಲ್ಲ. ದುಡ್ಡು ಖಾಲಿಯಾದ್ರೆ, ಆಯಾ ಸ್ಥಳದಲ್ಲಿಯೇ ದಿನಗೂಲಿಯಂತೆ ಸಿಕ್ಕ ಸಿಕ್ಕ ಕೆಲಸ ಮಾಡುತ್ತೇನೆ. ತೆಲಂಗಾಣದಲ್ಲಿ ಗಣಿಗಾರಿಕೆಯಲ್ಲಿ ಒಂದಷ್ಟು ದಿನ ಕೆಲಸ ಮಾಡಿದ್ದೆ. ಮಾಸ್ಕ್‌ ಮಾರಿದ್ದೆ. ಏಕೆಂದರೆ, ಮನೆಗೆ ಫೋನ್‌ ಮಾಡಿ ದುಡ್ಡು ಹಾಕಿಸಿಕೊಳ್ಳುವಷ್ಟು ಶ್ರೀಮಂತರು ನಾವಲ್ಲ. ಲೋವರ್‌ ಮಿಡಲ್‌ ಕ್ಲಾಸ್‌ ಕುಟುಂಬ ನಮ್ಮದು. ಮನೆಯಲ್ಲಿ ಅಪ್ಪನಿಗೆ ಒಂದಷ್ಟು ಕುರಿ ಕೊಡಿಸಿದ್ದೇನೆ. ಅದರಿಂದ ಮನೆ ನಡೆಯುತ್ತಿದೆ. ನಾನಿಲ್ಲಿ ಈ ಥರ ಮಾಡ್ತಾ ದೇಶ ಸುತ್ತಿದ್ದೇನೆ.."

2024ರ ಜನವರಿಗೆ ದೇಶ ಕಂಪ್ಲೀಟ್‌ ಆಗಲಿದೆ..

ನನ್ನ ಈ ಪ್ರಯಾಣದಲ್ಲಿ ನನ್ನ ಬಳಿ ಐದು ಜತೆ ಬಟ್ಟೆ, ಟೆಂಟ್‌, ಸ್ಲೀಪಿಂಗ್‌ ಬ್ಯಾಗ್‌, ಫೋರ್ಟಬಲ್‌ ಚೇರ್ ಇವಿಷ್ಟಿವೆ. ಎಲ್ಲ ಸೇರಿದ್ರೆ 40 ಕೆಜಿ ಆಗುತ್ತೆ. ನನ್ನದು ಮಾಂಟ್ರಾ ರಾಕ್‌ 2.1 2019 ಮಾಡೆಲ್‌ MTB ಸೈಕಲ್‌. 2020ರಲ್ಲಿ 25 ಸಾವಿರಕ್ಕೆ ಖರೀದಿಸಿದ್ದೆ. ರಾತ್ರಿ ವೇಳೆ ಮಲುಗುವ ವಿಚಾರಕ್ಕೆ ಬಂದರೆ ಶೇ. 100 ರಷ್ಟು ನಾನು ನನ್ನ ಟೆಂಟ್‌ನಲ್ಲಿಯೇ ಮಲುಗುತ್ತೇನೆ. ಲಾಡ್ಜ್‌ನಲ್ಲಿ ಉಳಿದುಕೊಳ್ಳುವಷ್ಟು ಹಣ ನನ್ನಲ್ಲಿಲ್ಲ. ಪೆಟ್ರೋಲ್‌ ಬಂಕ್‌ಗಳೇ ನನಗೆ ಅರಮನೆ ಇದ್ದಂತೆ. ಸೈಕ್ಲಿಂಗ್‌ ಮಾಡಲು ಇಂಥದ್ದೆ ಸಮಯ ಅಂತ ನಾನು ಫಿಕ್ಸ್‌ ಆಗಿಲ್ಲ. ಮಳೆ ಇರಲಿ ಚಳಿ ಇರಲಿ ಸುಮ್ನೆ ಹೋಗ್ತಾ ಇರೋದೆ. ಏನೇ ಆಗಲಿ 2024ರ ಜನವರಿಗೆ ಇಡೀ ದೇಶದ ಬಹುತೇಕ ಎಲ್ಲ ಜಿಲ್ಲೆಗಳನ್ನು, ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಮುಟ್ಟುವ ಉದ್ದೇಶ ನನ್ನದು.." ಎಂಬುದು ಸುದರ್ಶನ್‌ ಅವರ ಮಾತು.

IPL_Entry_Point