‘ಕನ್ನಡದಲ್ಲಿ ಕ್ಲಾಸಿಗೆ ಫಸ್ಟ್ ಇದ್ದೆ, ಇಂಗ್ಲಿಷ್ ಮೀಡಿಯಂಗೆ ಸೇರಿ ಫೇಲ್ ಆದೆ’; ಅಚ್ಚ ಕನ್ನಡದಲ್ಲಿಯೇ ಶಾಲಾ ದಿನಗಳ ನೆನೆದ ರಜನಿಕಾಂತ್
Rajinikanth: ಬೆಂಗಳೂರಿನ ಎಪಿಎಸ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಸೂಪರ್‌ಸ್ಟಾರ್ ರಜನಿಕಾಂತ್, ಇದೀಗ ಆ ಶಾಲೆ ಮತ್ತು ಕಾಲೇಜಿನಲ್ಲಿ ಕಲಿತ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಎಪಿಎಸ್ ಸಂಸ್ಥೆಯ ವಿಶೇಷ ಅಲುಮಿನಿ ಕಾರ್ಯಕ್ರಮದ ಪ್ರಯುಕ್ತ ಕನ್ನಡದಲ್ಲಿಯೇ ಸುದೀರ್ಘವಾಗಿ ಮಾತನಾಡಿದ್ದಾರೆ.

Rajinikanth about APS School: ನಟ ರಜನಿಕಾಂತ್ ವಯಸ್ಸು 70 ಪ್ಲಸ್ ಆಗಿದ್ದರೂ ಇಂದಿಗೂ ಅವರು ಅಭಿಮಾನಿಗಳ ಪಾಲಿನ ಸೂಪರ್‌ಸ್ಟಾರ್. ಈ ವಯಸ್ಸಿನಲ್ಲಿಯೂ ಆಕ್ಷನ್ ಸಿನಿಮಾಗಳ ಮೂಲಕವೇ ಅಬ್ಬರಿಸುತ್ತಿದ್ದಾರೆ. ಹೀರೋ ಆಗಿಯೇ ಎಲ್ಲರನ್ನು ರಂಜಿಸುತ್ತಿದ್ದಾರೆ. ಕಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡರೂ, ಕರುನಾಡ ಜತೆಗಿನ ಅವರ ನಂಟು ಅದಕ್ಕಿಂತ ಮಿಗಿಲಾದ್ದದ್ದು. ಶಿವಾಜಿ ರಾವ್ ಗಾಯಕ್ವಾಡ್ ಆಗಿದ್ದ ರಜನಿಕಾಂತ್ ಹುಟ್ಟಿದ್ದು ಬೆಂಗಳೂರಿನಲ್ಲಿ. ಬಾಲ್ಯದ ವಿದ್ಯಾಭ್ಯಾಸವೂ ಅಚ್ಚ ಕನ್ನಡ ಮಾಧ್ಯಮದಲ್ಲಿಯೇ ಬೆಂಗಳೂರಿನಲ್ಲಿಯೇ ಮುಗಿಸಿದ್ದಾರೆ. ಇಂತಿಪ್ಪ ರಜನಿಕಾಂತ್ ಇದೀಗ, ತಮ್ಮ ಶಾಲಾ ದಿನಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಅದೂ ಕನ್ನಡದಲ್ಲಿ!
ಬೆಂಗಳೂರಿನ ಎಪಿಎಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿರುವ ರಜನಿಕಾಂತ್, ಇದೀಗ ಆ ಶಾಲೆಯಲ್ಲಿ ಕಲಿತ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಎಪಿಎಸ್ ಸಂಸ್ಥೆಯ ವಿಶೇಷ ಅಲುಮಿನಿ ಕಾರ್ಯಕ್ರಮದ ಪ್ರಯುಕ್ತ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. "ನಿನ್ನ ಜತೆಗೆ ನಾನು ಇರಬೇಕಿತ್ತು. ಆದರೆ ಬ್ಯಾಂಕಾಕ್‌ನಲ್ಲಿ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೇನೆ. ಎಪಿಎಸ್ ಶಾಲೆ ಮತ್ತು ಕಾಲೇಜಿನಲ್ಲಿ ಓದಿದ್ದೇನೆ ಎಂಬುದು ನನ್ನ ಪಾಲಿಗೆ ಗರ್ವ ಇದ್ದಂತೆ. ಮೊದಲು ಮಿಡಲ್ ಸ್ಕೂಲ್ ಬಂದು ಗವಿಪುರದಲ್ಲಿ ಇತ್ತು. ಕನ್ನಡ ಮಾಧ್ಯಮದಲ್ಲಿಯೇ ನಾನು ಓದಿದ್ದು. ಆಗ ನಾನೇ ಕ್ಲಾಸಿಗೆ ಫಸ್ಟ್. ತುಂಬ ಚೆನ್ನಾಗಿ ಓದ್ತಿದ್ದೆ. ನಾನೇ ತರಗತಿಯ ಪ್ರತಿನಿಧಿಯಾಗಿದ್ದೆ. 98 ಮಾರ್ಕ್ಸ್ ತೆಗೆದಿದ್ದೆ"
ಇಂಗ್ಲಿಷ್ ಮೀಡಿಯಂಗೆ ಬಂದು ಫೇಲ್ ಆದೆ..
“ಒಳ್ಳೆಯ ಅಂಕ ತೆಗೆದಿದ್ದೇನೆ ಎಂದು ನಮ್ಮ ಅಣ್ಣ ಎಪಿಎಸ್ ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿಸಿದ್ರು. ಫುಲ್ ಕನ್ನಡ ಮೀಡಿಯಂನಲ್ಲಿ ಇದ್ದವನನ್ನು ರಪ್ ಅಂತ ಇಂಗ್ಲಿಷ್ ಮೀಡಿಯಂಗೆ ಹಾಕುತ್ತಿದ್ದಂತೆ, ಫಸ್ಟ್ ಬೆಂಚಿನ ಸ್ಟುಡೆಂಟ್ ಲಾಸ್ಟ್ ಬೆಂಚಿಗೆ ಬಂದುಬಿಟ್ಟೆ. ಡಿಪ್ರೆಷನ್‌ಗೆ ಹೋದೆ. ಎಪಿಎಸ್ ಹೈಸ್ಕೂಲ್‌ನ ಎಲ್ಲ ಶಿಕ್ಷಕರು, ನನ್ನ ಕಷ್ಟ ಅರ್ಥ ಮಾಡಿಕೊಂಡು, ನನಗೆ ಪಾಠ ಹೇಳಿಕೊಟ್ಟರು. ಎಂಟು ಒಂಭತ್ತು ಪಾಸ್ ಮಾಡಿದೆ. ಆದರೆ 10ನೇ ತರಗತಿ ಪಬ್ಲಿಕ್ ಪರೀಕ್ಷೆ. ಅದರಲ್ಲಿ ನಾನು ಪಿಸಿಎಂನಲ್ಲಿ ಫೇಲ್ ಆದೆ. ಮನೆಗೆ ಬಂದು ಫ್ರಿಯಾಗಿ ಟೀಚರ್‌ವೊಬ್ಬರು ವಿಶೇಷ ಆಸಕ್ತಿ ವಹಿಸಿ ಟ್ಯೂಷನ್ ಹೇಳಿಕೊಟ್ರು. ಅದಾದ ಮೇಲೆ ನಾನು ಪರೀಕ್ಷೆ ಫೇಸ್ ಮಾಡಿ ಪಾಸ್ ಮಾಡಿದೆ”
ಶಾಲಾ ದಿನಗಳಲ್ಲಿಯೇ ನಾಟಕದ ಅಭಿರುಚಿ
“ಮಾರ್ಕ್ಸ್ ಕಡಿಮೆ ಇದ್ದರೂ ಕೂಡ ಎಪಿಎಸ್ ಸ್ಕೂಲ್‌ನಿಂದ ಕಾಲೇಜು ಸೇರಿಕೊಂಡೆ. ಕಾರಣಾಂತರಗಳಿಂದ ಕಾಲೇಜನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಶಾಲಾ ದಿನಗಳಲ್ಲಿ ಇಂಟರ್ ಸ್ಕೂಲ್ ಕಾಂಪಿಟೇಷನ್‌ಗಳಲ್ಲಿ ನಾನು ಭಾಗವಹಿಸುತ್ತಿದ್ದೆ. ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೂ ಮೊದಲು, ನಾನು ಕ್ಲಾಸ್‌ನಲ್ಲಿ ಬಗೆಬಗೆ ಕಥೆ ಹೇಳುತ್ತಿದ್ದೆ. ನೋಡಿದ ಸಿನಿಮಾಗಳನ್ನು ಗೆಳೆಯರ ಮುಂದೆ ನಟಿಸಿ ತೋರಿಸುತ್ತಿದ್ದೆ. ಅದು ನಮ್ಮ ಶಿಕ್ಷಕರಿಗೂ ಗೊತ್ತಾಗಿತ್ತು. ಆಗ ಸ್ಪರ್ಧೆಗಳಲ್ಲಿ ಅದರಲ್ಲೂ ನಾಟಕದಲ್ಲಿ ಭಾಗವಹಿಸಲು ಅವಕಾಶ ಕೊಟ್ಟರು. ಆದಿ ಶಂಕರ ಚಂಡಾಲ ನಾಟಕದಲ್ಲಿ ಚಂಡಾಲನ ಪಾತ್ರ ಮಾಡಿದೆ”
ಎಪಿಎಸ್ ಶಾಲೆ ವಿದ್ಯಾರ್ಥಿಯಾಗಿದ್ದಕ್ಕೆ ಹೆಮ್ಮೆ ಇದೆ..
“ಆ ನಮ್ಮ ಡ್ರಾಮಾಕ್ಕೆ ಪ್ರೈಸ್ ಬಂತು. ಶಿಲ್ಡ್ ನಾವೇ ಗೆದ್ವಿ. ನನಗೆ ಆವತ್ತು ದಿ ಬೆಸ್ಟ್ ಆಕ್ಟರ್ ಅವಾರ್ಡ್ ಕೂಡ ಸಿಕ್ತು. ಅದೇ ಈಗ ಫ್ರೊಫೆಷನಲ್ ಆಗಿದೆ. ಈಗ ನನಗೆಷ್ಟು ಸಾಧ್ಯವೋ ಅಷ್ಟು ಮಕ್ಕಳನ್ನು ರಂಜಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದೆಲ್ಲದಕ್ಕೂ ಕಾರಣ ಎಪಿಎಸ್ ಶಾಲೆ ಮತ್ತು ಕಾಲೇಜು. ಅದು ಹೆಮ್ಮೆ. ಎಪಿಎಸ್ ಕಟ್ಟಡ, ಮೈದಾನ, ಅಲ್ಲಿ ನಾವು ಕಳೆದ ದಿನಗಳು, ಆಡಿದ ಆಟಗಳು, ಅದ್ಯಾವುದನ್ನೂ ಮರೆಯಲು ಸಾಧ್ಯವಿಲ್ಲ. ಆ ಶಾಲೆಗೆ ಹೋಗುವಾಗ ನನ್ನ ಮನೆ ಹನುಮಂತ ನಗರದಲ್ಲಿತ್ತು. ದೊಡ್ಡ ಗಣೇಶ ಟೆಂಪಲ್. ಒಂದು ಹೆಮ್ಮೆಯ ಕ್ಷಣ” ಎಂದು ರಜನಿಕಾಂತ್ ಕನ್ನಡದಲ್ಲಿಯೇ ಅಂದಿನ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
